ಪ್ರೀತಿಸಿದ ವ್ಯಕ್ತಿಯೊಬ್ಬ ತನ್ನ ಪ್ರೀತಿ ಪಡೆಯಲು ನಿರಂತರ ಪ್ರಯತ್ನ ಮಾಡಿದ್ದಾನೆ. ಸತತ 43 ಬಾರಿ ಸ್ನೇಹಿತೆಗೆ ಮದುವೆ ಪ್ರಪೋಸ್ ಮಾಡಿದ್ದಾನೆ. ಕೊನೆಗೂ ಆತನಿಗೆ ಜಯ ಸಿಕ್ಕಿದೆ.
ಮನಸ್ಸಿನಲ್ಲಿ ನಿಜವಾದ ಪ್ರೀತಿ (love) ಇದ್ರೆ ಗೆಲುವು ನಿಶ್ಚಿತ. ಹುಡುಗಿಗೆ ಒಂದೋ ಎರಡೋ ಬಾರಿ ಹುಡುಗ ಪ್ರಪೋಸ್ (proposal) ಮಾಡ್ತಾನೆ. ಹುಡುಗಿ ಓಕೆ ಅಂದ್ರೆ ಸರಿ. ನೋ ಎನ್ನುವ ಉತ್ತರ ಬರ್ತಿದ್ದಂತೆ ಕೆಲವರು ಉರಿದು ಬೀಳ್ತಾರೆ. ಆಕೆ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನವನ್ನು ಕೆಲವರು ಮಾಡಿದ್ರೆ ಮತ್ತೆ ಕೆಲವರು ಹೋಗ್ಲಿ ಇನ್ನೊಂದಕ್ಕೆ ಟ್ರೈ ಮಾಡೋಣ ಅಂತ ಈಕೆಯನ್ನು ಬಿಡ್ತಾರೆ. ಆದ್ರೆ ಈತ ಅದ್ಯಾವುದನ್ನೂ ಮಾಡ್ಲಿಲ್ಲ. ಶುದ್ಧ, ನಿರ್ಮಲ ಪ್ರೀತಿಯ ಹುಡುಗ ತನ್ನ ಹುಡುಗಿ ಪಡೆಯಲು ಒಂದಲ್ಲ ಎರಡಲ್ಲ ಏಳು ವರ್ಷ ಕಾದಿದ್ದಾನೆ. ಏಳು ವರ್ಷ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪದೇ ಪದೇ ಹುಡುಗಿಗೆ ಪ್ರಪೋಸ್ ಮಾಡಿದ್ದಾನೆ. ಏಳು ವರ್ಷದಲ್ಲಿ ಹುಡುಗ ಬರೋಬ್ಬರಿ 43 ಬಾರಿ ಹುಡುಗಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಕೊನೆಗೂ ಆತನ ಪ್ರೀತಿಗೆ ಜಯ ಸಿಕ್ಕಿದೆ.
ಲ್ಯೂಕ್- ಸಾರಾ ಪ್ರೇಮ ಕಥೆ (love story) : ಇದು ಲ್ಯೂಕ್ ಮತ್ತು ಸಾರಾಳ ವಿಶಿಷ್ಟ ಪ್ರೇಮಕಥೆ. ಲ್ಯೂಕ್ ಗೆ ಪ್ರೀತಿಯ ಮೇಲಿದ್ದ ಅಚಲ ನಂಬಿಕೆಯೇ ಅವನ ಗೆಲುವಿಗೆ ಕಾರಣವಾಗಿದೆ. 36 ವರ್ಷದ ಲ್ಯೂಕ್ ವಿಂಟ್ರಿಪ್, 38 ವರ್ಷದ ಸಾರಾಳನ್ನು ಮದುವೆಯಾಗಲು ಬಯಸಿದ್ದ. 2018 ರಿಂದಲೇ ಪ್ರೇಮ ನಿವೇದನೆ ಶುರು ಮಾಡಿದ್ದ. ಆದರೆ ಲ್ಯೂಕ್ ಪದೇ ಪದೇ ಪ್ರಪೋಸ್ ಮಾಡ್ತಾ ಇದ್ರೂ ಸಾರಾ ಇದನ್ನು ತಿರಸ್ಕರಿಸುತ್ತ ಬಂದಿದ್ದಳು. ಮುಂದೊಂದು ದಿನ ಪಶ್ಚಾತಾಪಪಡುವಂತಹ ಕೆಲ್ಸಕ್ಕೆ ನಾನು ಒಪ್ಪಿಗೆ ನೀಡುವುದಿಲ್ಲ ಅಂತ ಸಾರಾ ಹೇಳುತ್ತಲೇ ಬಂದಿದ್ಲು.
ಎಲ್ಲೆಲ್ಲಿ, ಹೇಗೆ ಪ್ರಪೋಸ್ ಮಾಡಿದ್ದ ಲ್ಯೂಕ್ : ಸಾರಾ ಒಂದು ಬಾರಿ ಮದುವೆ ಪ್ರಸ್ತಾಪ ತಿರಸ್ಕರಿಸಿದ್ಲು ಅಂತ ಲ್ಯೂಕ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪ್ರೇಗ್ನಲ್ಲಿ ಕೋಟೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಮದುವೆ ಆಗುವಂತೆ ಹೇಳಿದ್ದ, ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜನೆ ಮಾಡಿದ್ದ,ಜಮೈಕಾದ ಕಡಲತೀರದಲ್ಲಿ ಕುದುರೆ ಸವಾರಿಯಂತಹ ರೋಮ್ಯಾಂಟಿಕ್ ಪ್ರವಾಸವನ್ನು ಆಯೋಜಿಸಿದ್ದ. ಸಾಕಷ್ಟು ವಿಭಿನ್ನವಾಗಿ, ವಿಶಿಷ್ಠವಾಗಿ ಪ್ರಪೋಸ್ ಮಾಡೋದನ್ನು ಲ್ಯೂಕ್ ಮುಂದುವರೆಸಿದ್ದ.
ಮಾರ್ಕೆಟಿಂಗ್ ಸಿಇಒ ಆಗಿರುವ ಸಾರಾ, ಲ್ಯೂಕ್ ಜೊತೆ ಆರು ತಿಂಗಳು ಒಟ್ಟಿಗೆ ಇದ್ಲು. ಈ ಸಮಯದಲ್ಲಿ ಲ್ಯೂಕ್ ಮದುವೆ ಪ್ರಸ್ತಾಪವನ್ನು ಮೊದಲ ಬಾರಿ ಇಟ್ಟಿದ್ದ. ಆರು ತಿಂಗಳಿನಿಂದ ಮಾತ್ರ ಒಟ್ಟಿಗಿದ್ದೇವೆ ಎನ್ನುತ್ತ ಮೊದಲ ಪ್ರಪೋಸ್ ತಿರಸ್ಕರಿಸಿದ್ದಳು ಸಾರಾ. ವಾಸ್ತವವಾಗಿ ಸಾರಾ, ಲ್ಯೂಕ್ ಪ್ರೀತಿ ಮಾಡ್ತಿದ್ದಳು. ಆದ್ರೆ ಮುಂದೊಂದು ದಿನ ಅವನನ್ನು ಬಿಡುವ ಪ್ರಸಂಗ ಬರಬಹುದು ಎನ್ನುವ ಕಾರಣಕ್ಕೆ ಅವನ ಮದುವೆ ಪ್ರಪೋಸ್ ನಿರಾಕರಿಸಿದ್ದಳು.
42ನೇ ಪ್ರಪೋಸ್ ನಲ್ಲಿ ಸಿಕ್ಕಿತ್ತು ಭರವಸೆ : ಲ್ಯೂಕ್, ಸಾರಾಗೆ 42ನೇ ಬಾರಿ ಪ್ರಪೋಸ್ ಮಾಡಿದಾಗ, ಸಾರಾ ಮುಂದಿನ ಬಾರಿ ಪ್ರಪೋಸ್ ಮಾಡಿದಾಗ ನಾನು ಒಪ್ಪಿಕೊಳ್ತೇನೆ ಎಂದಿದ್ದಳು. ಆದ್ರೆ ಅದಕ್ಕೆ ಸ್ವಲ್ಪ ಸಮುಯ ಕಾಯಬೇಕು ಎಂದಿದ್ದಳು. ಮಾತಿನಂತೆ ಒಂದು ವರ್ಷದ ನಂತ್ರ ಲ್ಯೂಕ್, ಆಗ್ನೇಯ ಲಂಡನ್ನ ಗ್ರೀನ್ವಿಚ್ ಗೆ ಕರೆದೊಯ್ದು ಅಲ್ಲಿ 43ನೇ ಬಾರಿ ಪ್ರಪೋಸ್ ಮಾಡಿದ್ದರು. ಗ್ರೀನ್ ವಿಚ್ ವಿಶ್ವದ ಕೇಂದ್ರ, ನೀನು ನನ್ನ ಪ್ರಪಂಚ ಎಂದಿದ್ದ. ಸಾರಾ ಕೊನೆಗೂ ಮದುವೆಗೆ ಒಪ್ಪಿಕೊಂಡಿದ್ದಳು. ಈ ವರ್ಷ ಮೇ ತಿಂಗಳಿನಲ್ಲಿ ಜಮೈಕಾದಲ್ಲಿ ನಡೆದ ಡೆಸ್ಟಿನೇಶನ್ ವೆಡ್ಡಿಂಗ್ ನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಆಗ್ಬಹುದು ಎನ್ನುತ್ತಿದ್ದಾಳೆ ಸಾರಾ.
