ಮದುವೆಗೂ ಮೊದಲು ಯುವತಿಯೊಬ್ಬಳು ಗರ್ಭಿಣಿಯಾದರೆ ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡುವವರೆ ಹೆಚ್ಚು, ಜಾರಿಣಿ, ಮಾನಗೆಟ್ಟವಳು ಎಂದೆಲ್ಲಾ ನಮ್ಮ ನಾಗರಿಕ ಸಮಾಜದ ಜನ ದೂರುತ್ತಾರೆ. ಆದರೆ ಇಲ್ಲೊಂದು ಬುಡಕಟ್ಟು ಸಮುದಾಯದಲ್ಲಿ ಹೆಣ್ಣು ಮದುವೆಗೂ ಮೊದಲೇ ಗರ್ಭಿಣಿಯಾದರಷ್ಟೇ ಆಕೆಗೆ ಮಾನ ಸಮ್ಮಾನ…

ಭಾರತದಲ್ಲಿ ಅಧಿಕೃತವಾಗಿ ದಾಖಲಾದ 750ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿವೆ. ಒಂದೊಂದು ಸಮುದಾಯದ ಆಚರಣೆ ಒಂದೊಂದು ರೀತಿ ಇದೆ. ನಾಗರಿಕ ಸಮಾಜದ ಈ ಆಚರಣೆಗಳಿಗೂ ಬುಡಕಟ್ಟು ಸಮುದಾಯದ ಆಚರಣೆಗಳಿಗೂ ಅಗಜಾಂತರ ವ್ಯತ್ಯಾಸವಿದೆ. ಹಲವು ಬುಡಕಟ್ಟು ಸಮುದಾಯಗಳ ವಿಭಿನ್ನ ಆಚರಣೆಗಳನ್ನು ನೀವು ಈಗಾಗಲೇ ಕೇಳಿರಬಹುದು. ಬುಡಕಟ್ಟು ಸಮುದಾಯಗಳಲ್ಲಿ ಮದುವೆ, ಸಂಬಂಧ, ಕುಟುಂಬ ವ್ಯವಸ್ಥೆ ಮಗುವಿನ ಜನನ, ಕುಟುಂಬ ಸದಸ್ಯನ ಸಾವಿನ ನಂತರ ಕೈಗೊಳ್ಳುವ ಆಚರಣೆಗಳು ಬೇರೆ ಇತರ ಸಮುದಾಯಗಳಿಗಿಂತ ತುಂಬಾ ವಿಭಿನ್ನವಾಗಿರುತ್ತದೆ. ಹಾಗೆಯೇ ಕೇಳುವುದಕ್ಕೆ ವಿಶೇಷವಾಗಿರುವ ಜೊತೆಗೆ ಅಚ್ಚರಿ ಎನಿಸುವ ಬುಡಕಟ್ಟು ಸಮುದಾಯದ ಆಚರಣೆಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಮದುವೆಗೆ ಮೊದಲು ಯುವತಿ ಗರ್ಭಿಣಿಯಾಗಲೇಬೇಕು:

ಸಾಮಾನ್ಯವಾಗಿ ಮದುವೆಗೂ ಮೊದಲು ಯುವತಿಯೊಬ್ಬಳು ಗರ್ಭಿಣಿಯಾದರೆ ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡುವವರೆ ಹೆಚ್ಚು, ಜಾರಿಣಿ, ಮಾನಗೆಟ್ಟವಳು ಎಂದೆಲ್ಲಾ ನಮ್ಮ ನಾಗರಿಕ ಸಮಾಜದ ಜನ ದೂರುತ್ತಾರೆ. ಆದರೆ ಇಲ್ಲೊಂದು ಬುಡಕಟ್ಟು ಸಮುದಾಯದಲ್ಲಿ ಹೆಣ್ಣು ಮದುವೆಗೂ ಮೊದಲೇ ಗರ್ಭಿಣಿಯಾದರಷ್ಟೇ ಆಕೆಗೆ ಮಾನ ಸಮ್ಮಾನ ಮದುವೆ ಇತ್ಯಾದಿ. ಹೌದು ಅಚ್ಚರಿ ಎನಿಸಿದರು ಇದು ಸತ್ಯ. ಇದು ವಾಂಚೋ ಎಂಬ ಬುಡಕಟ್ಟು ಸಮುದಾಯದಲ್ಲಿರುವ ವಿಭಿನ್ನ ಸಂಪ್ರದಾಯವಾಗಿದೆ. ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಎಂಬ ಪ್ರದೇಶದ ಬುಡಕಟ್ಟು ಸಮುದಾಯ ಇದಾಗಿದೆ. ಈ ಸಮುದಾಯದ ಹಲವು ಆಚರಣೆಗಳು ಕೇಳುವುದಕ್ಕೆ ಅಚ್ಚರಿ ಮೂಡಿಸುತ್ತವೆ. ಈ ಸಮುದಾಯವು ಸುಮಾರು 40 ಸಾವಿರ ಜನಸಂಖ್ಯೆಯನ್ನು ಹೊಂದಿದೆ.

ಬಹುತೇಕ ವಿವಾಹಗಳು ಪ್ರೇಮ ವಿವಾಹಗಳು:

ಇಲ್ಲಿ ನಡೆಯುವ ಬಹುತೇಕ ವಿವಾಹಗಳು ಪ್ರೇಮ ವಿವಾಹಗಳಾಗಿವೆ. ಒಬ್ಬ ಹುಡುಗಿ ಹುಡುಗನನ್ನು ಇಷ್ಟಪಟ್ಟಾಗ, ಅವಳು ಅವನಿಗೆ ಮೇಪೋ ಎಂಬ ಕಿವಿಯೋಲೆಯನ್ನು ನೀಡುತ್ತಾಳೆ. ಇದನ್ನು ಮದುವೆ ಪ್ರಸ್ತಾಪವೆಂದು ಪರಿಗಣಿಸಲಾಗುತ್ತದೆ. ಇದರ ನಂತರ, ಹುಡುಗನ ಕುಟುಂಬದವರು ಹುಡುಗಿಯ ಮನೆಗೆ ಭೇಟಿ ನೀಡಿ ವೀಳ್ಯದ ಎಲೆ, ತಂಬಾಕು ಮತ್ತು ಪೆಂಖೋನ್ ಮತ್ತು ಕೆಖೋನ್ ಎಂದು ಕರೆಯಲ್ಪಡುವ ಸ್ಥಳೀಯ ಮರಗಳ ತೊಗಟೆಯನ್ನು ಅರ್ಪಿಸುತ್ತಾರೆ. ನಂತರ ಹುಡುಗ ಮತ್ತು ಹುಡುಗಿ ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಆಚರಣೆಯನ್ನು ಹಿಂಘೋ ಎಲೈ ಎಂದು ಕರೆಯಲಾಗುತ್ತದೆ.

ಹುಡುಗಿಯ ತಾಯಿಯನ್ನು ಆಹ್ವಾನಿಸಿ ವಿಶೇಷ ಅತಿಥ್ಯ

ಕೆಲವು ದಿನಗಳ ನಂತರ ಹುಡುಗನ ಕುಟುಂಬವು ಹುಡುಗಿಯ ತಾಯಿಯನ್ನು ತಮ್ಮ ಮನೆಗೆ ಆಹ್ವಾನಿಸಿ ವಿಶೇಷ ಆತಿಥ್ಯ ನೀಡುತ್ತದೆ. ಜು ಎಂದು ಕರೆಯಲ್ಪಡುವ ವಿಶೇಷ ಮದ್ಯವನ್ನು ವಿವಿಧ ಪ್ರಾಣಿಗಳ ಮಾಂಸ ಮೀನಿನೊಂದಿಗೆ ಬಡಿಸಲಾಗುತ್ತದೆ. ನಂತರ ಹುಡುಗಿಯ ತಾಯಿ ಮನೆಗೆ ಹಿಂತಿರುಗಿ ಔಪಚಾರಿಕವಾಗಿ ಮದುವೆಯನ್ನು ಘೋಷಿಸುತ್ತಾರೆ. ನಂತರ ಹುಡುಗಿಯ ಕುಟುಂಬವು ಹುಡುಗನ ತಾಯಿಯನ್ನು ಆಹ್ವಾನಿಸಿ ಅದೇ ಆಚರಣೆಯನ್ನು ಮಾಡುತ್ತದೆ.

ಸಂಬಂಧವು ಔಪಚಾರಿಕವಾದ ನಂತರ ಹುಡುಗ ಹುಡುಗಿ ಮುಕ್ತವಾಗಿ ಭೇಟಿಯಾಗುತ್ತಾರೆ. ಎರಡೂ ಕುಟುಂಬಗಳು ಸಂಬಂಧವನ್ನು ಘೋಷಿಸಿದ ನಂತರ, ತೋಯ್ಕಾಟ್ ಎಂಬ ಸಂಪ್ರದಾಯ ನಡೆಯುತ್ತದೆ. ಇದರಲ್ಲಿ ಹುಡುಗನ ಕುಟುಂಬವು ಹುಡುಗಿ ಮತ್ತು ಅವಳ ಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸುತ್ತದೆ. ಹುಡುಗ ಅವರನ್ನು ತನ್ನ ಹೊಲಗಳನ್ನು ನೋಡಲು ಕರೆದೊಯ್ಯುತ್ತಾನೆ ಮತ್ತು ಅಲ್ಲಿ ಹಾಡುಗಾರಿಕೆ ಮತ್ತು ನೃತ್ಯ ಇರುತ್ತದೆ. ನಂತರ ಹುಡುಗ ಹುಡುಗಿ ಹಾಗೂ ಆಕೆಯ ಸ್ನೇಹಿತರಿಗೆ ಉಡುಗೊರೆಯಾಗಿ ಬಟ್ಟೆ ಮತ್ತು ಆಭರಣಗಳನ್ನು ನೀಡುತ್ತಾನೆ.

ಇದನ್ನೂ ಓದಿ: ಡಿವೋರ್ಸ್ ನಂತರವೂ ಹಾರ್ದಿಕ್ ಪಾಂಡ್ಯ ಅಮ್ಮ ಅಜ್ಜಿಯನ್ನು ಭೇಟಿ ಮಾಡಿ ಕ್ಷೇಮ ವಿಚಾರಿಸಿದ ನತಾಶಾ

ಇದರ ನಂತರವೇ ಹುಡುಗ ಮತ್ತು ಹುಡುಗಿ ಯಾವಾಗ ಬೇಕಾದರೂ ಭೇಟಿಯಾಗಲು ಮುಕ್ತರಾಗಿರುತ್ತಾರೆ. ಅವರು ಪರಸ್ಪರರ ಮನೆಗಳಿಗೆ ಭೇಟಿ ನೀಡಬಹುದು, ಅಥವಾ, ಅವರು ಬಯಸಿದರೆ,'ಜಿಪ್ಸಮ್ ನೈಲೋ ಎಂದು ಕರೆಯಲ್ಪಡುವ ವಸಾಹತುವಿನ ಸಮುದಾಯ ಭವನಕ್ಕೆ ಹೋಗಬಹುದು. ದಂಪತಿಗಳು ಯಾವುದೇ ಸಮಯದಲ್ಲಿ ಇಲ್ಲಿಗೆ ಬರಬಹುದಾಗಿದೆ ಹಾಗೂ ಅವರು ದೈಹಿಕ ಸಂಬಂಧವನ್ನೂ ಬೆಳೆಸಿಕೊಳ್ಳಬಹುದಾಗಿದೆ.

ಗರ್ಭಧಾರಣೆಯ ನಂತರವೇ ಸೊಸೆಯ ಸ್ಥಾನಮಾನ:

ಹುಡುಗಿ ಗರ್ಭಿಣಿಯಾದ ನಂತರವೇ ಹುಡುಗಿಗೆ ಮದುವೆ ಅಥವಾ ಸೊಸೆಯ ಸ್ಥಾನಮಾನವನ್ನು ನೀಡಲಾಗುತ್ತದೆ. ಮೂರನೇ ತಿಂಗಳಲ್ಲಿ ಅವಳು ಹುಡುಗನ ಮನೆಗೆ ಹೋಗುತ್ತಾಳೆ. ಈ ಹಂತದಲ್ಲಿ, 'ಖೋಕಂ' ಎಂಬ ಆಚರಣೆ ನಡೆಯುತ್ತದೆ. ಇದರ ಭಾಗವಾಗಿ, ಹುಡುಗಿಯ ಎದೆಯ ಮಧ್ಯದಲ್ಲಿ ಖಾಹು ಎಂಬ ಹಚ್ಚೆಯನ್ನು ಹಾಕಲಾಗುತ್ತದೆ. ಜೊತೆಗೆ ಪೂಜೆಯನ್ನು ನಡೆಸಲಾಗುತ್ತದೆ. ಈ ಆಚರಣೆಯ ನಂತರವೇ ಈ ಹುಡುಗಿ ಹುಡುಗನ ಕುಟುಂಬದ ಸದಸ್ಯೆ ಎಂದು ಕುಟುಂಬದ ಪುರರೋಹಿತರು ಘೋಷಿಸುತ್ತಾರೆ. ಹೀಗೆ ಈ ಬುಡಕಟ್ಟು ಸಮುದಾಯದಲ್ಲಿ ಮದುವೆ ನಡೆಯುತ್ತದೆ.

ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿತಾರೆ: ಸಿದ್ದು ಪರ ಪರಮೇಶ್ವರ್ ಬ್ಯಾಟಿಂಗ್

ಈ ಸಂಪ್ರದಾಯಗಳು ನಡೆದ ನಂತರ ಮದುವೆಯನ್ನು ಮುರಿಯುವುದು ಸುಲಭವಲ್ಲ, ಒಂದು ವೇಳೆ ಇಬ್ಬರು ಬೇರ್ಪಡಲು ಬಯಸಿದರೆ ಅದಕ್ಕೆ ತಕ್ಕ ಬೆಲೆ ತೇರಬೇಕಾಗುತ್ತದೆ. ಆಸ್ತಿಯನ್ನು ಅಥವಾ ಪ್ರಾಣಿಗಳನ್ನು ವರ್ಗಾವಣೆ ಮಾಡುವ ಮೂಲಕ ಈ ಮದುವೆಯ ಒಪ್ಪಂದವನ್ನು ಮುರಿಯಲಾಗುತ್ತದೆ.