20 ವರ್ಷಗಳ ದಾಂಪತ್ಯದ ನಂತರ ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ಬೇರ್ಪಟ್ಟಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಇಬ್ಬರೂ ಬೇರೆಯಾಗಿ ವಾಸಿಸುತ್ತಿದ್ದಾರೆ ಮತ್ತು ವಿಚ್ಛೇದನದ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿ (ಜ.23): ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಜೀವನದಲ್ಲೂ ವಿಚ್ಚೇದನ ಬಿರುಗಾಳಿ ಆವರಿಸಿದೆ. 20 ವರ್ಷಗಳ ದಾಂಪತ್ಯದ ಬಳಿಕ ಅವರು ತಮ್ಮ ಪತ್ನಿ ಆರತಿ ಅಹ್ಲಾವತ್‌ಗೆ ವಿಚ್ಛೇದನ ನೀಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. 2004ರಲ್ಲಿ ವಿವಾಹವಾಗಿದ್ದ ಜೋಡಿ ಇನ್ಸ್‌ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಈಗಾಗಲೇ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇದರೊಂದಿಗೆ ಇವರಿಬ್ಬರ ರಿಲೇಷನ್‌ಷಿಪ್ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಇನ್ನು ಇವರ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಹಲವು ತಿಂಗಳುಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಇಬ್ಬರ ವಿಚ್ಛೇದನ ಖಚಿತವಾಗಬಹುದು ಎನ್ನಲಾಗಿದೆ. ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದಾಗಿಯೇ ಕ್ರಿಕೆಟ್ ವಲಯದಲ್ಲಿ ದೊಡ್ಡ ಹೆಸರು ಮಾಡಿದ್ದ ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಹಿರಿಯ ಪುತ್ರ ಆರ್ಯವೀರ್ ಜನಿಸಿದ್ದರೆ, 2010ರಲ್ಲಿ 2ನೇ ಪುತ್ರ ವೇದಾಂತ್ ಜನಿಸಿದ್ದ. ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ, ಇತ್ತೀಚಿನ ಬೆಳವಣಿಗಳು ಇವರಿಬ್ಬರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಇದು ಟೀಮ್ ಇಂಡಿಯಾದ ಡಿವೋರ್ಸ್ XI; ಮನೀಷ್ ಪಾಂಡೆ, ಚಾಹಲ್ ಹೊಸ ಎಂಟ್ರಿ!
ಕಳೆದ ವರ್ಷದ ದೀಪಾವಳಿ ಸಂಭ್ರಮದಲ್ಲೂ ವೀರೇಂದ್ರ ಸೆಹ್ವಾಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ ಇಬ್ಬರೂ ಪುತ್ರರು ಹಾಗೂ ಸೆಹ್ವಾಗ್ ಅವರ ತಾಯಿ ಇದ್ದರು. ಆದರೆ, ಯಾವ ಫೋಟೋದಲ್ಲೂ ಅವರ ಪತ್ನಿ ಆರತಿ ಕಾಣಿಸಿಕೊಂಡಿರಲಿಲ್ಲ. ಅದಲ್ಲದೆ, ವೀರೇಂದ್ರ ಸೆಹ್ವಾಗ್, ಆರತಿ ಹೆಸರಲ್ಲೂ ಕೂಡ ಎಲ್ಲೂ ಹಾಕಿರಲಿಲ್ಲ. ಸೆಹ್ವಾಗ್ ಅವರ ಮೌನವೇ ಇಬ್ಬರ ನಡುವೆ ವಿಚ್ಚೇದನವಾಗುತ್ತಿದೆ ಎನ್ನುವ ರೂಮರ್‌ಗೆ ಹೆಚ್ಚಿನ ಬಲ ನೀಡಿದೆ.
ಎರಡು ವಾರದ ಹಿಂದೆ ವೀರೇಂದ್ರ ಸೆಹ್ವಾಗ್ ಪಾಲಕ್ಕಾಡ್‌ನ ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಟ್ರಿಪ್‌ನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಲ್ಲೂ ಕೂಡ ಎಲ್ಲಿಯೂ ಪತ್ನಿ ಆರತಿ ಅವರನ್ನು ಉಲ್ಲೇಖ ಮಾಡಿರಲಿಲ್ಲ. ಇದರ ಬೆನ್ನಲ್ಲಿಯೇ ಪತ್ನಿಯ ಜೊತೆಗಿನ ಇವರ ಸಂಬಂಧ ಹೆಚ್ಚೂಕಡಿಮೆ ಅಂತ್ಯವಾಗಿರಬಹುದು ಎಂದು ವರದಿ ಆಗಿದೆ. ಈ ಬಗ್ಗೆ ವೀರೇಂದ್ರ ಸೆಹ್ವಾಗ್ ಅಧಿಕೃತವಾಗಿ ಹೇಳಿಕೆ ನೀಡಬೇಕಿದ್ದರೂ, ಸಾರ್ವಜನಿಕವಾಗಿ ಇಬ್ಬರೂ ದೀರ್ಘಕಾಲದಿಂದ ಒಟ್ಟಿಗೆ ಕಾಣಿಸಿಕೊಳ್ಳದೇ ಇರುವುದು ಅವರ ಅಭಿಮಾನಿಗಳ ನಡುವಲ್ಲಿಯೇ ಚರ್ಚೆಗೆ ಕಾರಣವಾಗಿದೆ.
ದೆಹಲಿ ಮೂಲದ ಆರತಿ ಅಹ್ಲಾವತ್, ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ಸೋಶಿಯಲ್ ಮೀಡಿಯಾದಿಂದಲೂ ದೂರವಿದ್ದರು. 1980 ಡಿಸೆಂಬರ್ 16 ರಂದು ಜನಿಸಿದ್ದ ಆರತಿ ಅಹ್ಲಾವತ್, ಲೇಡಿ ಇರ್ವಿನ್ ಸೆಕೆಂಡರಿ ಸ್ಕೂಲ್, ಭಾರತೀಯ ವಿದ್ಯಾಭವನದಲ್ಲಿ ತಮ್ಮ ಶಿಕ್ಷಣ ಪಡೆದುಕೊಂಡಿದ್ದರು. ಆ ಬಳಿಕ ದೆಹಲಿ ವಿವಿಯ ಮೈತ್ರೇಯಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದರು.
ಈ ಜೋಡಿಯ ಪ್ರೇಮಕಥೆಯು 2000ದ ದಶಕದ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು 2004 ರಲ್ಲಿ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ನಡೆದ ಅದ್ಧೂರಿ ವಿವಾಹದರೊಂದಿಗೆ ಲವ್‌ಸ್ಟೋರಿಗೆ ಮದುವೆಯ ಮುದ್ರೆ ಹಾಕಿದ್ದರು. ನಂತರದ ವರ್ಷಗಳಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ಅಹ್ಲಾವತ್ ಅವರು ಪರ್ಫೆಕ್ಟ್ ಜೋಡಿ ಎಂದೇ ನೋಡಲಾಗುತ್ತಿತ್ತು. ವೀರೇಂದ್ರ ಸೆಹ್ವಾಗ್ ಕ್ರಿಕೆಟ್‌ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದರೆ, ಆರತಿ ಕುಟುಂಬ ಜೀವನವನ್ನು ಸಮತೋಲನಗೊಳಿಸಿದ್ದರು. ಆದರ,ಈಗ ಅವರ ಸಂಬಂಧವು ಸ್ವಲ್ಪ ಸಮಯದಿಂದ ಬಿರುಕು ಬಿಟ್ಟಿದ್ದು, ಇದು ಬೇರೆಯಾಗುವ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
2015ರಲ್ಲಿ ಸೆಹ್ವಾಗ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಕ್ರಿಕೆಟ್ ಸಂಬಂಧಿತ ಹಲವು ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ನಾಡಾದ ಆಂಟಿ ಡೋಪಿಂಗ್ ಅಪೀಲ್ ಪ್ಯಾನೆಲ್‌ನ ಸದಸ್ಯರಾಗಿಯೂ ಸೆಹ್ವಾಗ್ ಕೆಲಸ ಮಾಡಿದ್ದರು. ಸೆಹ್ವಾಗ್ ಅವರ ವೈಯಕ್ತಿಕ ಜೀವನ ಎಂದೂ ಸಾಮಾಜಿಕವಾಗಿ ಚರ್ಚೆ ಆಗಿದ್ದಿಲ್ಲ. ಆದರೆ, ಡಿವೋರ್ಸ್ ವರದಿಗಳ ನಡುವೆ ಇದು ಸುದ್ದಿಯಾಗಿದೆ. ವೀರೇಂದ್ರ ಅಥವಾ ಆರತಿ ಇಬ್ಬರೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಅವರ ಬೇರ್ಪಡುವಿಕೆಯ ಲಕ್ಷಣಗಳು ಹೆಚ್ಚು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ.
