ಮೊಬೈಲ್‌ನಲ್ಲಿ ಮಾತನಾಡುತ್ತಾ ತಾಯಿಯೊಬ್ಬಳು ಮಗುವನ್ನು ಆಟೋದಲ್ಲಿಯೇ ಬಿಟ್ಟು ಹೋದ ಘಟನೆ ನಡೆದಿದೆ. ಆಟೋ ಚಾಲಕ ಮಗುವನ್ನು ಹಿಂಬಾಲಿಸಿ ತಾಯಿಗೆ ನೀಡಿದ್ದು, ತಾಯಿಯ ಬೇಜವಾಬ್ದಾರಿತನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಎಂತಹ ಮಾಯೆ ಎಂದರೆ ಮೊಬೈಲ್‌ನಲ್ಲಿ ಮಗ್ನರಾಗಿದ್ದಾಗ ಕಣ್ಣೆದುರೇ ದರೋಡೆ ಮಾಡಿದರು ತಿಳಿಯೋದಿಲ್ವೆನೋ, ಅಷ್ಟರ ಮಟ್ಟಿಗೆ ಕೆಲವರು ಮೊಬೈಲ್‌ನೊಳಗೆ ಮುಳುಗಿ ಹೋಗಿರುತ್ತಾರೆ. ಇಹವನ್ನು ಮರೆತು ಮೊಬೈಲ್ ಫೋನ್‌ನಲ್ಲೇ ಜೀವಿಸುತ್ತಿರುತ್ತಾರೆ. ಆದರೆ ಮೊಬೈಲ್ ಒಳಗೆ ಇರೋದೇ ಬೇರೆ ವಾಸ್ತವವೇ ಬೇರೆ ಹೀಗಿರುವಾಗ ತಾಯಿಯೊಬ್ಬಳು ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗುವನ್ನು ಆಟೋದಲ್ಲೇ ಬಿಟ್ಟು ಹೋದಂತಹ ಅಚ್ಚರಿಯ ಜೊತೆ ವಿಚಿತ್ರವೆನಿಸುವ ಘಟನೆ ನಡೆದಿದ್ದು, ಜನರು ಈ ತಾಯಿಯ ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಗುವನ್ನು ಆಟೋದಲ್ಲೇ ಬಿಟ್ಟು ಹೋದ ತಾಯಿ!
ಸಾಮಾನ್ಯವಾಗಿ ತಾಯಿ ಎಂದ ಮೇಲೆ ಆಕೆ ತನ್ನ ಕರುಳ ಕುಡಿಯ ಬಗ್ಗೆ ಬಹಳ ಜಾಗೃತಳಾಗಿರುತ್ತಾಳೆ. ತನಗೇನಾದರೂ ಸಹಿಸುವ ತಾಯಿ ಮಕ್ಕಳಿಗೇನಾದರೂ ಆದರೆ ಸಹಿಸುವುದು ಕಷ್ಟ ಹೀಗಿರುವಾಗ ಇಲ್ಲೊಬ್ಬಳು ತಾಯಿ ಫೋನ್‌ನಲ್ಲಿ ಮಾತನಾಡುತ್ತಾ ಮಗವನ್ನು ಆಟೋದಲ್ಲೇ ಬಿಟ್ಟು ಹೋಗಿದ್ದಾಳೆ. ಇತ್ತ ಆಟೋದಲ್ಲಿ ತಾಯಿ ಮಗುವನ್ನು ಬಿಟ್ಟು ಹೋಗಿದ್ದನ್ನು ನೋಡಿದ ಆಟೋ ಚಾಲಕ ಮಗುವನ್ನು ಎತ್ತಿಕೊಂಡು ಆ ತಾಯಿಯನ್ನು ಹಿಂಬಾಲಿಸಿ ಹೋಗಿ ಆ ಮಹಾತಾಯಿಗೆ ಮಗುವನ್ನು ನೀಡುತ್ತಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿಯ ಈ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
IIT, IIM, UPSC ಗೆ ಸುಲಭವಾಗಿ ಪಾಸಾದೆ ಆದರೆ... ತಾಯ್ತನದ ಸವಾಲಿನ ಬಗ್ಗೆ ಐಎಎಸ್ ಅಧಿಕಾರಿ ಮಾತು
ವೈರಲ್ ಆದ ವೀಡಿಯೋದಲ್ಲೇನಿದೆ?
ಮಹಿಳೆಯೊಬ್ಬಳು ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದರೆ ಇತ್ತ ವ್ಯಕ್ತಿಯೊಬ್ಬರು ಮಗುವನ್ನು ಎತ್ತಿಕೊಂಡು ಆಕೆಯ ಹಿಂದೆ ಓಡುತ್ತಾ ಹಿಂಬಾಲಿಸುತ್ತಿದ್ದಾರೆ. ಅಲ್ಲದೇ ಈ ಫೋನ್‌ನಲ್ಲಿ ಮಾತನಾಡುತ್ತಾ ಸಾಗುತ್ತಿರುವ ಮಹಿಳೆಯನ್ನು ಅವರು ಬೊಬ್ಬೆ ಹೊಡೆದು ಕರೆಯುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಇತ್ತ ವ್ಯಕ್ತಿಯ ಕರೆಗೆ ಮಹಿಳೆ ತಿರುಗಿ ನೋಡಿದ್ದಾಳೆ. ಕೂಡಲೇ ಓಡಿ ಬಂದು ಮಗುವನ್ನು ವ್ಯಕ್ತಿಯ ಕೈಯಿಂದ ತೆಗೆದುಕೊಂಡಿದ್ದಾಳೆ. ಬರೀ ಅಷ್ಟೇ ಅಲ್ಲ ಬಹಳ ಪ್ರೀತಿಯಿಂದ ಮಗುವನ್ನು ತಬ್ಬಿಕೊಂಡು ಮುದ್ದಾಡಿದ್ದಾಳೆ. ಇದರ ನಂತರ ಸಣ್ಣ ಮಾತುಕತೆಯ ನಂತರ ವ್ಯಕ್ತಿ ಆ ಮಹಿಳೆಗೆ ಕೈ ಮುಗಿದು ಹೊರಟು ಹೋಗಿದ್ದಾನೆ ಇಲ್ಲಿಗೆ ವೀಡಿಯೋ ಅಂತ್ಯಗೊಂಡಿದೆ.
ವೀಡಿಯೋ ಶೂಟ್ ಎಂದ ನೆಟ್ಟಿಗರು
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಹಾಗೂ ಈ ಘಟನೆಯ ಸತ್ಯಾಸತ್ಯತೆಯ ಬಗ್ಗೆಯೂ ಮಾಹಿತಿ ಇಲ್ಲ, ಆದರೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಸೃಷ್ಟಿಸಿದೆ. ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ. ಟ್ವಿಟ್ಟರ್‌ನಲ್ಲಿ ಮಮ್ತಾ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ. ಈ ಮಹಿಳೆ ಆಟೋದಿಂದ ಇಳಿಯುವಾಗ ತನ್ನ ಫೋನ್ ಮರೆಯಲಿಲ್ಲ ಆದರೆ ತನ್ನ ಮಗುವನ್ನು ಮರೆತಳು ಎಂದು ಬರೆದಿದ್ದಾರೆ.
ಕಣ್ಣೀರು ತರಿಸುವಂತಿದೆ ಪ್ರಸೂತಿ ವೈದ್ಯೆಯೊಬ್ಬರು ಹಂಚಿಕೊಂಡ ತಾಯಿಯೊಬ್ಬಳ ನೋವಿನ ಕತೆ
ವೀಡಿಯೋ ನೋಡಿದ ಕೆಲವರು ಈಕೆ ಉದ್ದೇಶಪೂರ್ವಕವಾಗಿ ಮಾಡಿದ್ದಾಳೆ ಎಂದು ದೂರಿದ್ದಾರೆ. ಆದರೆ ಆಟೋ ಚಾಲಕ ಈಕೆಯ ಯೋಜನೆಯನ್ನು ಹಾಳು ಮಾಡಿದರು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ಇದು ವೀಡಿಯೋ ಶೂಟ್ ಎಂದು ಹೇಳಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
