ಜಮೀನಿಗೆ ಕೂಲಿ ಕೆಲಸಕ್ಕೆ ಬಂದ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ಹರಪನಹಳ್ಳಿ ರೈತ!
ವಿಜಯನಗರ ಜಿಲ್ಲೆಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಗೋವಾಕ್ಕೆ ವಿಮಾನ ಪ್ರಯಾಣದ ಉಡುಗೊರೆ ನೀಡಿದ್ದಾರೆ. ಕೃಷಿ ಕಾರ್ಮಿಕರ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಈ ರೈತನ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ದಾವಣಗೆರೆ/ವಿಜಯನಗರ (ಪೆ.18): ಇತ್ತೀಚಿನ ದಿನಗಳಲ್ಲಿ ಜಮೀನಿನಲ್ಲಿ ಕೃಷಿ ಕೂಲಿ ಕೆಲಸ ಮಾಡುವುದಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ ಎಂದು ಜಮೀನುದಾರರು, ರೈತರು ಗೋಳು ತೋಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಬ್ಬ ಕೃಷಿಕ ತನ್ನ ಜಮೀನಿಗೆ ಕೃಷಿ ಕೆಲಸ ಮಾಡುವುದಕ್ಕೆ ಬರುತ್ತಿದ್ದ ಮಹಿಳಾ ಕಾರ್ಮಿಕರನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ಮೂಲಕ ಸ್ಥಳೀಯ ಜನರಿಂದ ಭಾರೀ ಮೆಚ್ಚುಗೆ ಪಡೆದಿದ್ದಾನೆ.
ಹೌದು, ನಮ್ಮ ಕರ್ನಾಟಕ ರಾಜ್ಯ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಳಲು ಕೇಳಿಬರುತ್ತಿದೆ. ಹೀಗಾಗಿ, ಬಹುತೇಕ ಜಮೀನುದಾರರು, ರೈತರು ಕೃಷಿ ಯಂತ್ರೋಪಕರಣ ಮೊರೆ ಹೋಗಿದ್ದಾರೆ. ಆದರೂ, ಕೆಲವು ಕೆಲಸಗಳನ್ನು ಕಾರ್ಮಿಕರೇ ಮಾಡಬೇಕಾದ್ದರಿಂದ ಇದಕ್ಕೆ ಪರ್ಯಾಯ ಇಲ್ಲದಂತಾಗಿದೆ. ಆದ್ದರಿಂದ ಜಮೀನು ಹೊಂದಿರುವ ರೈತರು ಕೃಷಿ ಕಾರ್ಮಿಕರ ಮನೆಗೆ ಹೋಗಿ ಅವರ ಮನವೊಲಿಸಿ ಜಮೀನಿಗೆ ಕರೆದೊಯ್ದು ಕೆಲಸ ಮಾಡಿಸುತ್ತಾರೆ.
ಆದರೆ, ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತ ತಮ್ಮ ಜಮೀನಿಗೆ ಖಾಯಂ ಆಗಿ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳಾ ಕಾರ್ಮಿಕರಿಗೆ ಏನಾದರೂ ಒಂದು ಜೀವನಪೂರ್ತಿ ಮರೆಯಲಾಗದ ಉಡುಗೊರೆ ಕೊಡಬೇಕು ಎಂದುಕೊಂಡಿದ್ದಾನೆ. ಇನ್ನು ತೋಟದಲ್ಲಿ ಕೆಲಸ ಮಾಡುವಾಗ ಯಾವುದಾದರೂ ವಿಮಾನ ಬುರ್ರೆಂದು ಶಬ್ದ ಮಾಡಿಕೊಂಡು ಮೇಲೆ ಹೋಗುತ್ತಿದ್ದರೆ, ಎಲ್ಲರೂ ಕೆಲಸ ಬಿಟ್ಟು ಕೆಲ ಕ್ಷಣ ಆಕಾಶದತ್ತ ಕಣ್ಣು ಹಾಯಿಸಿ ವಿಮಾನ ಹೋಗುವುದನ್ನು ನೋಡಿ ಖುಷಿ ಪಡುತ್ತಿದ್ದರು. ಆಗ ರೈತನಿಗೆ ಹೊಳೆದಿದ್ದೇ ಎಲ್ಲ ಕಾರ್ಮಿಕರಿಗೆ ವಿಮಾನದಲ್ಲಿ ಪ್ರಯಾಣ ಮಾಡಿಸಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ: ಬಂಗಾರದ ಬೆಲೆ ಕುಸಿತ ಗ್ಯಾರಂಟಿ: ಭಾರತದಲ್ಲಿ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆಗೆ ಆಂಧ್ರದಲ್ಲಿ ಆರಂಭ!
ತಾನು ಯೋಜನೆ ರೂಪಿಸಿದಂತೆ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಬರುತ್ತಿದ್ದ 10 ಮಹಿಳಾ ಕಾರ್ಮಿಕರಿಗೆ ಹಾಗೂ ತಮ್ಮನ್ನು ಸೇರಿದಂತೆ 11 ಜನರಿಗೆ ವಿಮಾನದಲ್ಲಿ ಗೋವಾಗೆ ಹೋಗಲು ಟಿಕೆಟ್ ಬುಕಿಂಗ್ ಮಾಡಿದ್ದಾರೆ. ನಂತರ, ಎಲ್ಲ ಕಾರ್ಮಿಕರನ್ನು ತನ್ನೊಂದಿಗೆ ಹತ್ತಿದ ವಿಮಾನ ನಿಲ್ದಾಣವಾದ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಸೀದಾ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ತಾವು ಪ್ರತಿದಿನ ಹೊಲದಲ್ಲಿ ಕೆಲಸ ಮಾಡುವಾಗ ತಲೆ ಎತ್ತಿ ಆಕಾಶದಲ್ಲಿ ನೋಡುತ್ತಿದ್ದ ವಿಮಾನದಲ್ಲಿ ನಾವೇ ಪ್ರಯಾಣ ಮಾಡುತ್ತಿದ್ದೇವೆ ಎಂಬ ಸಂತಸ ಮಹಿಳಾ ಕಾರ್ಮಿಕರಲ್ಲಿ ಮೂಡಿತ್ತು.
ಈ ಎಲ್ಲದಕ್ಕೆ ಸಾಕ್ಷಿಯಾದ ಆಧುನಿಕ ರೈತ ವಿಶ್ವನಾಥ್. ಈತನ ಜಮೀನಿನಲ್ಲಿ ಯಾವುದೇ ಕೆಲಸ ಇದ್ದರೂ ಈ ಮಹಿಳೆಯರು ಇಲ್ಲ ಎನ್ನದೇ ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ, ಜಮೀನಿನ ಮಾಲೀಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಕೂಲಿ ಕಾರ್ಮಿಕರ ಆಸೆಯನ್ನು ಈ ರೈತ ಈಡೇರಿಸಿದ್ದಾನೆ. ಎಲ್ಲ ಮಹಿಳೆಯರೂ ಒಂದೇ ತರಹದ ಸೀರೆ ಧರಿಸಿದ್ದರು. ಅವರ ಕಾರ್ಯಕ್ಕೆ ಸ್ಥಳೀಯ ಜನರು ಹಾಗೂ ಮಹಿಳಾ ಕಾರ್ಮಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮಗಳ ಪ್ರೀತಿ ಮೆಚ್ಚಿ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ