ಜಗತ್ಪ್ರಸಿದ್ಧ ಪ್ರೇಮಗ್ರಂಥ 'ಕಾಮಸೂತ್ರ'ವನ್ನು ರಚಿಸಿದ ಮಹರ್ಷಿ ವಾತ್ಸ್ಯಾಯನರು (Vatsyayana) ತಮ್ಮ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿದ್ದರು ಎಂಬುದು ಅಚ್ಚರಿಯ ಸಂಗತಿ. ಹಾಗಾದರೆ ಅವರು ಯಾವುದೇ ಅನುಭವ ಇಲ್ಲದೆ ಈ ಗ್ರಂಥವನ್ನು ರಚಿಸಿದ್ದು ಹೇಗೆ? 

ಇಂದು ಲವ್ ಗುರುಗಳು, ರಿಲೇಶನ್‌ಶಿಪ್ ಎಕ್ಸ್‌ಪರ್ಟ್‌ಗಳು ಅನ್ನೋ ಕಲ್ಪನೆ ಸಾಮಾನ್ಯ. ಆದರೆ ಇವೆಲ್ಲವೂ ಹುಟ್ಟುವುದಕ್ಕೂ ಶತಮಾನಗಳ ಮೊದಲೇ ಭಾರತಕ್ಕೆ ತನ್ನದೇ ಆದ ಮೊದಲ “ಲವ್ ಗುರು” ಇದ್ದರು. ಅವರೇ ಮಹರ್ಷಿ ವಾತ್ಸ್ಯಾಯನ. ಗಂಡು- ಹೆಣ್ಣಿನ ಪ್ರೀತಿ, ಸಂಬಂಧ, ಆಕರ್ಷಣೆ ಮತ್ತು ದೈಹಿಕ ಮಿಲನದ ಬಗ್ಗೆ ಅವರು ಬರೆದ ಅದ್ಭುತ ಗ್ರಂಥವನ್ನೇ ಇಂದು ಜಗತ್ತು ʼಕಾಮಸೂತ್ರʼ ಅನ್ನೋ ಹೆಸರಿನಿಂದ ಓದುತ್ತಿದೆ. ಆಶ್ಚರ್ಯದ ವಿಷಯ ಏನಂದ್ರೆ, ಇಷ್ಟೊಂದು ಪ್ರಸಿದ್ಧ ಪ್ರೇಮಗ್ರಂಥ ಬರೆದ ವಾತ್ಸ್ಯಾಯನರು ತಮ್ಮ ಜೀವನಪೂರ್ತಿ ಬ್ರಹ್ಮಚಾರಿಯಾಗಿಯೇ ಉಳಿದರು.

ಕಾಮಸೂತ್ರದ ಲೇಖಕರಾಗಿ ಮಹರ್ಷಿ ವಾತ್ಸ್ಯಾಯನರನ್ನು ಹಲವರು ಗುರುತಿಸುತ್ತಾರೆ. ಆದರೆ ಆ ವ್ಯಕ್ತಿ ಯಾರು, ಅವರು ಹೇಗಿದ್ದವರು ಅನ್ನೋದನ್ನು ನಿಜವಾಗಿಯೂ ತಿಳಿದವರು ತುಂಬಾ ಕಡಿಮೆ. ಮಹರ್ಷಿ ವಾತ್ಸ್ಯಾಯನರು ತಮ್ಮ ಜೀವನದ ಹೆಚ್ಚಿನ ಭಾಗವನ್ನು ಪವಿತ್ರ ನಗರವಾದ ಬನಾರಸ್ (ಇಂದಿನ ವಾರಣಾಸಿ) ನಲ್ಲಿ ಕಳೆದರು. ವೇದಗಳು ಮತ್ತು ತತ್ತ್ವಶಾಸ್ತ್ರದ ಗ್ರಂಥಗಳಲ್ಲಿ ಅವರಿಗೆ ಅಪಾರ ಪಾಂಡಿತ್ಯ ಇತ್ತು. ಧರ್ಮ, ನೈತಿಕತೆ ಮತ್ತು ಮಾನವ ಸಂಬಂಧಗಳ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದ ವ್ಯಕ್ತಿ. ಭಾರತೀಯ ಇತಿಹಾಸದಲ್ಲೇ ಗೌರವಪೂರ್ಣ ವ್ಯಕ್ತಿಯಾಗಿ ಗುರುತಿಸಲ್ಪಟ್ಟವರು.

ಕಾಲಕ್ಕಿಂತ ಮುಂಚೆ ಯೋಚಿಸಿದ ಕ್ರಾಂತಿಕಾರಿ ಚಿಂತಕ

ಮಾನವನ ದೈಹಿಕ ಆಕರ್ಷಣೆ, ಪ್ರೀತಿ ಮತ್ತು ಸಂಬಂಧಗಳನ್ನೇ ಒಂದು ವಿಜ್ಞಾನ ಅನ್ನೋ ರೀತಿಯಲ್ಲಿ ವ್ಯವಸ್ಥಿತವಾಗಿ ವಿವರಿಸಿದ ಮೊದಲ ವ್ಯಕ್ತಿಗಳಲ್ಲಿ ವಾತ್ಸ್ಯಾಯನರು ಪ್ರಮುಖ. ಜೀವನದ ಎಲ್ಲ ವಿಷಯಗಳಂತೆ ಲೈಂಗಿಕತೆ, ಪ್ರಣಯವನ್ನೂ ಮುಕ್ತವಾಗಿ, ಲಜ್ಜೆ ಇಲ್ಲದೆ ಚರ್ಚಿಸಬೇಕು ಅನ್ನೋದು ಅವರ ಗಟ್ಟಿ ನಂಬಿಕೆ.

ನಮಗಿಂತ ಸ್ವಲ್ಪ ಹಿಂದೆ, ಈ ವಿಷಯಗಳ ಬಗ್ಗೆ ಮಾತಾಡೋದೇ ತಪ್ಪು, ಪಾಪ ಅನ್ನೋ ಮನಸ್ಥಿತಿ ಇತ್ತು. ವಾತ್ಸ್ಯಾಯನರ ಕಾಲದಲ್ಲಿ ಇನ್ನು ಹೇಗಿತ್ತೋ ಗೊತ್ತಿಲ್ಲ. ವಾತ್ಸ್ಯಾಯನರು ಅದಕ್ಕೆ ವಿರುದ್ಧವಾಗಿ ಯೋಚಿಸಿದರು. ಮಿಲನದ ಬಗ್ಗೆ ಅರ್ಥಮಾಡಿಕೊಳ್ಳುವಿಕೆ, ಮುಕ್ತ ಮಾತುಕತಯೇ ಆರೋಗ್ಯಕರ ಸಮಾಜಕ್ಕೆ ಅಗತ್ಯ ಅನ್ನೋದನ್ನು ಅವರು ಒತ್ತಿ ಹೇಳಿದರು.

ಕಾಮಸೂತ್ರ ಕೇವಲ ದೈಹಿಕ ಸಂಬಂಧಗಳ ಪುಸ್ತಕ ಅಲ್ಲ. ಅದು ಬದುಕುವ ಕಲೆ, ಪ್ರೀತಿ, ಭಾವನಾತ್ಮಕ ಹೊಂದಾಣಿಕೆ ಮತ್ತು ಮಾನವ ಸಂಬಂಧಗಳ ಸಂಪೂರ್ಣ ಮಾರ್ಗದರ್ಶಿ. ಸುಖ, ಸ್ನೇಹ ಮತ್ತು ಮನಸ್ಸಿನ ಹೊಂದಾಣಿಕೆಯ ಮಹತ್ವವನ್ನು ಸಮಾಜಕ್ಕೆ ತಿಳಿಸೋದೇ ಅವರ ಉದ್ದೇಶವಾಗಿತ್ತು.

ಕೆಲವು ಐತಿಹಾಸಿಕ ದಾಖಲೆಗಳ ಪ್ರಕಾರ, ವಾತ್ಸ್ಯಾಯನರು ತಮ್ಮ ಅಧ್ಯಯನಕ್ಕಾಗಿ ವೇಶ್ಯಾಲಯಗಳಿಗೆ ಭೇಟಿ ನೀಡಿ, ಜನರ ವರ್ತನೆಯನ್ನು ಗಮನಿಸಿ, ವೇಶ್ಯೆಯರ ಜೊತೆ ಮಾತನಾಡುತ್ತಿದ್ದರು. ಆದರೂ ಅವರು ಸ್ವತಃ ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಅಂತ ಹೇಳಲಾಗುತ್ತದೆ. ಅವರ ಆಸಕ್ತಿ ಅನುಭವದಲ್ಲಲ್ಲ, ಅಧ್ಯಯನದಲ್ಲಿತ್ತು- ಆಸೆ, ಆಕರ್ಷಣೆ ಮತ್ತು ಪ್ರೀತಿಯ ಸೂಕ್ಷ್ಮ ಅಂಶಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿತ್ತು.

ಕಾಮಸೂತ್ರದ ಹೊರತಾಗಿ, ಮಹರ್ಷಿ ವಾತ್ಸ್ಯಾಯನರು ಶ್ರೇಷ್ಠ ತತ್ತ್ವಜ್ಞಾನಿಯೂ ಹೌದು. ಅವರು ನ್ಯಾಯ ಸೂತ್ರ ಎಂಬ ಗ್ರಂಥವನ್ನೂ ರಚಿಸಿದ್ದಾರಂತೆ. ಆದರೆ ಅದು ಲಭ್ಯವಿಲ್ಲ. ಈ ಕೃತಿ ತರ್ಕಶಾಸ್ತ್ರ, ತತ್ತ್ವಚಿಂತನೆ ಮತ್ತು ಮುಕ್ತಿಯ ಮಾರ್ಗದ ಬಗ್ಗೆ ಮಾತನಾಡುತ್ತದೆ ಎನ್ನಲಾಗುತ್ತದೆ.

ಇಂದಿಗೂ ಕಾಮಸೂತ್ರ ಜಗತ್ತಿನಾದ್ಯಂತ ಅಧ್ಯಯನಗೊಳ್ಳುವ ಗ್ರಂಥವಾಗಿದೆ. ದೈಹಿಕ ಆತ್ಮೀಯತೆ ಮಾತ್ರವಲ್ಲ, ಮಾನವ ಸಂಬಂಧಗಳು ಮತ್ತು ವರ್ತನೆಯ ಬಗ್ಗೆ ಅದರ ಆಳವಾದ ಅರಿವಿಗಾಗಿ ಅದನ್ನು ಓದುತ್ತಾರೆ. ವಾತ್ಸ್ಯಾಯನರ ಪ್ರಗತಿಪರ ಚಿಂತನೆ ಇಂದಿಗೂ ಪ್ರಸ್ತುತವಾಗಿರುವುದು, ಅವರು ತಮ್ಮ ಕಾಲಕ್ಕಿಂತ ಎಷ್ಟೋ ಮುಂದೆ ಯೋಚಿಸಿದ್ದರೆಂಬುದಕ್ಕೆ ಸಾಕ್ಷಿ.