ಪೊಲೀಸ್ ಇಲಾಖೆಗೆ ಆಯ್ಕೆಯಾದ ಯುವತಿಯೊಬ್ಬಳು ತನ್ನ ಯಶಸ್ಸಿನ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದ್ದಾಳೆ. ತನ್ನ ಕನಸಿಗೆ ಬೆನ್ನೆಲುಬಾಗಿ ನಿಂತ ತಂದೆಯನ್ನೇ ಹೆಗಲ ಮೇಲೆ ಹೊತ್ತು ಕುಣಿದು ಸಂಭ್ರಮಿಸಿದ್ದು, ಈ ತಂದೆ-ಮಗಳ ಬಾಂಧವ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಗೆದ್ದಿದೆ.
ತನ್ನ ಕನಸಿಗೆ ರೆಕ್ಕೆ ನೀಡಿದ ಅಪ್ಪನ ಹೆಗಲ ಮೇಲಿರಿಸಿ ಕುಣಿದ ಮಗಳು
ಮಕ್ಕಳ ಯಶಸ್ಸಿನ ಹಿಂದೆ ಪೋಷಕರ ದೊಡ್ಡ ತ್ಯಾಗವಿರುತ್ತದೆ. ಅನೇಕ ಪೋಷಕರು ತಮ್ಮೆಲ್ಲಾ ಕನಸುಗಳನ್ನು ಬಲಿಕೊಟ್ಟು ತಮ್ಮ ಮಕ್ಕಳ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತಾರೆ. ತಾವು ಮಾಡಲಾಗದ್ದನ್ನು ತಮ್ಮ ಮಕ್ಕಳ ಮೂಲಕ ಮಾಡುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಇದರಲ್ಲಿ ಮಕ್ಕಳು ಯಶಸ್ವಿಯಾದಾಗ ಪೋಷಕರಷ್ಟು ಖುಷಿಪಡುವ ವ್ಯಕ್ತಿ ಮತ್ತೊಬ್ಬರಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬರು ತಾವು ಪೊಲೀಸ್ ಇಲಾಖೆಗೆ ಆಯ್ಕೆಯಾದ ಬಳಿಕ ತಮ್ಮ ಕನಸಿಗೆ ನೀರೆರೆದು ಪ್ರೋತ್ಸಾಹಿಸಿದ ತಂದೆಯನ್ನು ಹೆಗಲ ಮೇಲೆ ಕೂರಿಸಿಕೊಂಡು ಡಾನ್ಸ್ ಮಾಡಿದ್ದು, ಈ ಸಂಭ್ರಮದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಇಲಾಖೆಗೆ ಆಯ್ಕೆಯಾದ ಸಂಭ್ರಮದಲ್ಲಿ ಅಪ್ಪನನ್ನೇ ಹೊತ್ತು ಕುಣಿದ ಸುಮೇಧಾ!
ಹೌದು ಮಕ್ಕಳು ಸಣ್ಣವರಿದ್ದಾಗ ತಂದೆ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸಾಗುವ ಮೂಲಕ ಮಕ್ಕಳಿಗೆ ಅಂಬಾರಿ ತೋರಿಸುತ್ತಾರೆ. ಹಾಗೆಯೇ ಮಕ್ಕಳ ಕನಸಿಗೆ ರೆಕ್ಕೆ ಕಟ್ಟಿ ಹಾರುವುದಕ್ಕೆ ಸಿದ್ಧಪಡಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಇಲ್ಲಿ ಮಗಳು ತನ್ನ ಕನಸಿಗೆ ರೆಕ್ಕೆಪುಕ್ಕ ಕಟ್ಟಿ ಹಾರಲು ಬಿಟ್ಟ ತಂದೆಯನ್ನು ಈಗ ತಾನು ಯಶಸ್ವಿಯಾದ ನಂತರ ಅವರಂತೆ ಹೆಗಲ ಮೇಲೆ ಅಪ್ಪನನ್ನು ಕೂರಿಸಿಕೊಂಡು ಸಂಭ್ರಮಿಸಿದ್ದಾಳೆ.
ಪೊಲೀಸ್ ಮಗಳ ಹೆಗಲೇರಿದ ತಂದೆ:
ವರದಿಗಳ ಪ್ರಕಾರ ಇದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಪ್ಪ ಮಗಳ ವೀಡಿಯೋ ಆಗಿದೆ. ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಆಯ್ಕೆಯಾದ ಮಗಳು ಸುಮೇಧಾ ಶೇಕ್ ತನ್ನ ಅಪ್ಪನನ್ನು ತನ್ನ ಹೆಗಲಮೇಲೆ ಕೂರಿಸಿಕೊಂಡು ಡಾನ್ಸ್ ಮಾಡುವ ಮೂಲಕ ಈ ಖುಷಿಯನ್ನು ಸಂಭ್ರಮಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಮಗಳೊಬ್ಬಳ ಖುಷಿಗೆ ಕೇವಲ ಅಪ್ಪ ಮಾತ್ರ ಇಲ್ಲಿ ಸಂಭ್ರಮಿಸುತ್ತಿಲ್ಲ. ವೀಡಿಯೋ ನೋಡಿದ ಪ್ರತಿಯೊಬ್ಬರೂ ಈ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ವೀಡಿಯೋದಲ್ಲಿ ಮಾಹಾರಾಷ್ಟ್ರ ಪೇಟ ತೊಟ್ಟಿರುವ ಮಗಳು ಅಪ್ಪನನ್ನು ಹೆಗಲ ಮೇಲೆ ಕೂರಿಸಿ ಸಂಭ್ರಮಿಸುತ್ತಿದ್ದರೆ ಇತ್ತ ಅಪ್ಪ ಗಟ್ಟಿಯಾಗಿ ಮಗಳ ತಲೆ ಹಾಗೂ ಹೆಗಲನ್ನು ಹಿಡಿದುಕೊಂಡಿದ್ದು, ಅವರ ಮೊಗ ಹೆಮ್ಮೆಯಿಂದ ಬೀಗಿರುವುದನ್ನು ಕಾಣಬಹುದಾಗಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಈ ಅಪ್ಪ-ಮಗಳ ಸಂಭ್ರಮಕ್ಕೆ ನೆಟ್ಟಿಗರು ಫಿದಾ!
ವೀಡಿಯೋ ನೋಡಿದ ಪ್ರತಿಯೊಬ್ಬರೂ ಈ ತಂದೆ ಮಗಳಿಗೆ ಶುಭಾಶಯಗಳನ್ನು ಸೂಚಿಸಿದ್ದು, ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ. ನೀವು ನಿಮ್ಮ ಅಪ್ಪ ಹೆಮ್ಮೆಯಿಂದ ನಡೆದಾಡುವಂತೆ ಮಾಡಿದಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ.


