ಎಪ್ಪತ್ತಾರು ವರ್ಷಗಳ ಹಿಂದೆ ಪ್ರಕಟಗೊಂಡ ‘ಮೈಸೂರು ಮಲ್ಲಿಗೆ’ ಕವನ ಸಂಕಲನದ ಪದ್ಯವಿದು. ಹಿರಿಯರ ದೂರದೃಷ್ಟಿ ಅದೆಂತಹದ್ದು ನೋಡಿ. ಮುಂದಿನ ದಿನಗಳಲ್ಲಿ ಪ್ರೇಮ ಎನ್ನುವುದು ಹಾಸ್ಯದ ವಸ್ತುವಾಗಬಹುದೆಂದು ಕೆ. ಎಸ್.ಎನ್ ಅಂದೇ ಕಂಡಿದ್ದರೇನೊ! ಪ್ರೇಮ ಸಾರ್ವಕಾಲಿಕವಾದದ್ದು.

ಅದರಲ್ಲೂ ದಾಂಪತ್ಯದಲ್ಲಿ ಪ್ರೇಮವು ಹಾಸು ಹೊಕ್ಕಂತಿರಬೇಕೆಂದು ಎಲ್ಲ ಹೃದಯಗಳು ಬಯಸುವುದು ಸಹಜ. ಋತುಗಳು ಮಗ್ಗುಲು ಬದಲಾಯಿಸುವ ಹಾಗೆ ಪ್ರೇಮದ ಹೊನಲೂ ಕೂಡ ಮನಸ್ಸು ಭಾವನೆಗಳ ಜೊತೆಗೂಡಿ ಹೊರಳುತ್ತಿರಬೇಕು. ಹಾಗೆ ಹೊರಳಿಕೊಳ್ಳುತ್ತಲಿರುವಾಗಲೆಲ್ಲಾ ಜೊತೆಯಾದ ಪ್ರೇಮವು ಎತ್ತಲೆಲ್ಲಾ ಚಾಚಿಕೊಂಡಿದೆ ಎನ್ನುವ ಸೋಜಿಗ ಎಲ್ಲರದ್ದು. ಜೀವನ ಪ್ರೀತಿ, ಮುಗ್ಧತೆ, ಒಂದೇ ಎಂಬ ಭಾವ, ಪರಸ್ಪರ ತಿಳುವಳಿಕೆಗಳು ಪ್ರೇಮದ ಕಾಂತಿಯನ್ನು ಒಂದೊಮ್ಮೆ ಹಿಗ್ಗಿಸಿದ್ದವು.

ಒಲುಮೆಯು ಕೋಡಿ ಏರಿ ಹರಿಯುತ್ತಿತ್ತು. ಹಾಗಾಗಿ ಅಂದು ಹರಿದ ಪ್ರೇಮದಲ್ಲಿ ಸೊಗಸಿತ್ತು, ಮುದವಿತ್ತು, ಕಾರುಣ್ಯದ ಚಿಲುಮೆಯಿತ್ತು. ಈ ಪ್ರೇಮ ಎನ್ನುವುದು ಕರೆಯದೆ ಬರುವ, ಅರಿಯದೆ ಹುಟ್ಟುವ ಭಾವ ಕಣ್ರೀ. ಬರ ಬರುತ್ತಾ ಕಾಲದ ಮಹಿಮೆಗೆ ಪ್ರೇಮವು ಶರಣಾಯಿತು. ಕಾಲೆಳೆಯುವ ಕಾಲವು ಪ್ರೇಮವನ್ನೂ ಬಿಟ್ಟಿಲ್ಲ ನೋಡ್ರಿ..! ತನ್ನದೇ ಭಾವಲಯದಲ್ಲಿ ಹರಿಯುತ್ತಿದ್ದ ಪ್ರೇಮನದಿಗೆ ಅದೆಷ್ಟೋ ಇತರೆಗಳು ಸೇರಿಕೊಂಡು ತಿಳಿಯಾದ ಪ್ರೇಮವನ್ನು ಕಲಕಿ ಅದರ ಓಘವನ್ನು ಬದಲಾಯಿಸಿ ಪಥವನ್ನೇ ತಿರುಗಿಸಿಬಿಟ್ಟವು. ಪರಿಣಾಮ ಪ್ರೇಮವು ಕಾಂತಿಹೀನವಾಯಿತು.

ಧನಾತ್ಮಕ ಯೋಚನೆ ಕಳಚಿಬಿದ್ದು ಋಣಾತ್ಮಕ ಚಿಂತನೆಗಳು ಎದ್ದು ಕುಳಿತವು. ಮುಗ್ಧತೆಯ ಭಾವದೊಳಗೆ ಹಸಿದ ಹೆಬ್ಬುಲಿಯು ಹೊಂಚು ಹಾಕತೊಡಗಿತು. ಜೀವನ ಪ್ರೀತಿಯನ್ನೇ ಕಾಣದ ಜೀವವು ಪ್ರೀತಿಗಾಗಿ ಕೈ ಚಾಚಿತು. ತಿಳುವಳಿಕೆಗಳಿಲ್ಲದ ಒಪ್ಪಂದ, ಒಂದೇ ಎಂಬ ಭಾವವೆಲ್ಲಾ ಮಾಯವಾಗಿ ನಾನು-ನನ್ನದೆಂಬ ಸ್ವ-ಪ್ರತಿಷ್ಠೆಯ ಹಮ್ಮು ಪ್ರೇಮವನ್ನು ಅಲಂಕರಿಸಿಕೊಂಡುಬಿಟ್ಟಿತು. ಪರಿಣಾಮ ಮೆಲ್ಲುಸಿರ ಪ್ರೇಮರಾಗವು ಅಲಂಕಾರಿತ ವರ್ತುಲಗಳನ್ನು ದಾಟಿ ಹೋಗದಂತಾಯಿತು. ಒಳ ಮನಸ್ಸಿನ ದನಿಯನ್ನು ಕೇಳುವ ಕಿವಿಗಳೇ ಇಲ್ಲ.

ನಿರಾಭರಣದಂತಿದ್ದ ಪ್ರೇಮವು ಆಡಂಭರದ ಸುಪ್ಪತ್ತಿಗೆಯೆದುರು ಮಕಾಡೆ ಮಲಗಿ ಬಿಟ್ಟಿತು. ಕಾಲ ಕೆಟ್ಟಿತೇ ಅಥವಾ ನಮ್ಮ ಯೋಚನಾ ವಿಧಾನವೇ ಕೆಟ್ಟು ಬದಲಾಯಿತೆ? ಮಾತು..! ಮಾತಿಗೊಂದು ಪ್ರತಿ ಮಾತು, ತರ್ಕಕ್ಕೆ ವಿತರ್ಕ, ವಾದ-ಪ್ರತಿವಾದ-ವಿತಂಡವಾದ, ಸೋಲೊಪ್ಪಿಕೊಳ್ಳದ ಮನಸ್ಥಿತಿ, ನಾನೇನು ಕಡಿಮೆಯೆಂಬ ಅಹಂ, ಹಣಿಯಲು, ಚುಚ್ಚಲು ಕಾಯುವ ಮನಸ್ಸು, ಅಡಿಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂಬ ಕುತರ್ಕ, ಹೀಗೆ ಹಲವು ಸಮರ್ಥನೆಗಳೆಂಬ
ಭಾವ ಜಗತ್ತಿನೊಳಗೆ ಜೀವನ ನಡೆಯುತ್ತಿರುತ್ತದೆ.

ಈ ಗಂಡು-ಹೆಣ್ಣು ಎನ್ನುವುದು ಕೇವಲ ದೇಹಗಳಷ್ಟೆ ಅಲ್ಲ. ಅವು ಪರಸ್ಪರ ಸಂಬಂಧಿಗಳು. ಇವು ಒಂದರೊಳಗೊಂದು ಬದುಕನ್ನು ಹುಡುಕುತ್ತಾ, ಕಟ್ಟುತ್ತಾ, ಕೆಡವುತ್ತಾ ಮತ್ತೆ ಕಟ್ಟುವ ಕಾಯಕದಲ್ಲಿ ನಿರತವಾಗಬೇಕು. ಆದರೆ ಪಡೆದೇ ತಿರಬೇಕೆಂಬ ಮಹಾದಾಸೆಯ ಧಾವಂತದಲ್ಲಿ ಹಠಕ್ಕೆ ಬಿದ್ದು ದಕ್ಕಿಸಿಕೊಳ್ಳಬಾರದು ಎನ್ನುವ ಕನಿಷ್ಟ ಪ್ರಜ್ಞೆಯನ್ನೂ ನಾವು ಕಳೆದುಕೊಂಡು ಬಿಡುತ್ತೇವೆ. ಪ್ರಾದೇಶಿಕತೆಯನ್ನು ತುಳಿದು ನಗರೀಕರಣ ಎದ್ದು ನಿಂತಿತು ನೋಡಿ ಆಗಲೇ
ಇವೆಲ್ಲವೂ ವಕ್ಕರಿಸಿಕೊಂಡುಬಿಟ್ಟವೇನೋ ಎಂದೆನಿಸುವುದಿದೆ.

ಯೋಚನೆ- ಚಿಂತನೆಗಳೆಲ್ಲಾ ಒಂದೊಮ್ಮೆ ಮಾತೃಭಾಷೆಯಲ್ಲಿ ನಡೆಯುತ್ತಿತ್ತು. ಹಾಗಾಗಿ ಒಂದಕ್ಕೊಂದು ಸಾಮ್ಯತೆಯುಳ್ಳ ಭಾವಲೋಕದ ನಿರ್ಮಾಣ ಕಾರ್ಯ ಪ್ರಾದೇಶಿಕ ಮನಸ್ಸುಗಳೊಳಗೆ ನಡೆಯುತ್ತಿತ್ತು. ಆ ಭಾವಲೋಕದಲ್ಲಿ ಈ ಮಣ್ಣಿನ ಗುಣ-ಸೊಗಡುಗಳೂ ಅಡಕವಾಗಿರುತ್ತಿದ್ದುವು. ವ್ಯತ್ಯಸ್ತ ಪ್ರಾದೇ ಶಿಕತೆಯ ಭಾವಲೋಕದಲ್ಲಿ ಉಪ್ಪು-ಹುಳಿ-ಖಾರ-ಬೆಲ್ಲದ ಪ್ರೇಮಖಾದ್ಯವು ಆಯಾ ಭಾವಲೋಕದ ರುಚಿ ಹಾಗೂ ವಿಸ್ತಾರಕ್ಕನುಗುಣವಾಗಿ ಸಿದ್ಧಗೊಳ್ಳುತ್ತಿತ್ತು. ಕ್ರಮೇಣ ಯೋಚಿಸುವ, ಚಿಂತಿಸುವ ರೀತಿ ಬದಲಾಯಿತು.

ಎಲ್ಲವನ್ನೂ ಎಲ್ಲರೂ ಚಿಂತಿಸುವ, ಆಡುವ ಭಾಷೆ ಒಂದೇ ಆಯಿತು. ಜೊತೆಗೆ ಪರಕೀಯ ಭಾವಗಳೂ ಬೆಸೆದುಕೊಂಡವು. ಪರಿಣಾಮ ನಾನು, ನನ್ನದು ಮಾತ್ರವೆಂಬ ಕರ್ಮಲೋಕದ ಸೃಷ್ಟಿ ಜೊತೆಗೆ ಕಟ್ಟಿಕೊಂಡ ಒಂಟಿ ಬಾಳು. ಪರಿಣಾಮ ಒಂಟಿ ಜೀವವು ಹೊದ್ದುಕೊಂಡದ್ದೇ ಭಾವವಾಗಿಬಿಡುವ ಬದುಕೊಂದು ಹುಟ್ಟಿಕೊಂಡಿತು. ಆರ್ಥಿಕವಾಗಿ, ಸಾಮಾಜಿಕವಾಗಿ ಸಮ ಸಮನಾಗಿ ಬಾಳುವ ಇಂದಿನ ಹೆಣ್ಣು-ಗಂಡು ಜೊತೆಯಿದ್ದೂ ಇಲ್ಲದೆ, ಜೊತೆಯಾಗಿ ಬಂದು ಬೇರೆಯಾಗುತ್ತಾ, ಬಯಸಿದಾಗಲೆಲ್ಲಾ ಬಯಸಿದವರ ಜೊತೆ ಸಲ್ಲಾಪಿಸುವ, ಬೇಕಾದದ್ದನ್ನು ಪಡೆಯುವ ಒಂಟಿ ಆತ್ಮದ ಪಾತ್ರಧಾರಿಗಳಾಗಿಬಿಟ್ಟರು.

ಜವಾಬ್ದಾರಿ ಹೊರಲು ಒಪ್ಪದ ಮನಸ್ಸು, ಸ್ವಂತ ದುಡಿಮೆಯ ಶಕ್ತಿಯ ಪ್ರದರ್ಶನಗಳ ನಡುವೆ ದಾಂಪತ್ಯದ ‘ದಂ’ ಅನ್ನು ಸೇದಲಾಗದೆ, ಸಹಿಸಲೂ ಆಗದೆ ಮೂಲೆ ಸೇರಿದ ಅಂಜಿದ ಮನಸ್ಸು. ಇಂತಹ ಸ್ಥಿತಿಯಲ್ಲಿ ಪ್ರೇಮ ಭಾವವು ವ್ಯತ್ಪತ್ತಿಯಾಗುವುದಾದರೂ ಹೇಗೆ ಹೇಳಿ ? ಹಾಗಾಗಿ ದಾಂಪತ್ಯ ಪ್ರೇಮವು ಪಥ್ಯವಾಗದೆ ಅಪಥ್ಯವಾಗಿಬಿಟ್ಟಿತು! ಈ ತೆರನಾದ ಯೋಚನೆಗಳು ಹಳೇ ಚಿಂತನಾ ಶಾಲೆಯ ವಿದ್ಯಾರ್ಥಿಯೆಂಬ ಹಣೆಪಟ್ಟಿಯನ್ನು ತಂದಿಕ್ಕುವುದಿದೆ.

ಹಣೆಪಟ್ಟಿಗಳಿಗೆ ಹೆದರಿ ಬದುಕ ಕಟ್ಟುವುದುಂಟೇ? ಪಟ್ಟಿಗಳು ಬದಲಾದರೂ ಭಾವ ಬದಲಾಗಬೇಕೆಂದೇನೂ ಇಲ್ಲವಲ್ಲ!? ಆದರೂ ಭಾವವನ್ನು ಬದಲಾಯಿಸುತ್ತಲಿರುತ್ತೇವೆ. ಭವ ಬಂಧನದ ಯಾವುದೇ ರಗಳೆಗಳು ಬೇಕಿಲ್ಲದ ಮನಸ್ಸುಗಳಿಗೆ ತಾನು ನಡೆದದ್ದೇ ದಾರಿ ಎಂಬ ಭಾವವು ಸೃಷ್ಟಿಸುವ ಈ ಕ್ಷಣದ ಪುಳಕದೊಳಗೆ ನಲಿಯುವ ಹುಮ್ಮಸ್ಸು. ಅದು ತಪ್ಪೇನಲ್ಲ. ಆದರೆ ನಲಿಯುವ ಖಯಾಲಿಯು ಚಟವಾದರೆ ಕಷ್ಟವಂತೂ ತಪ್ಪಿದ್ದಲ್ಲ.

ಖಿನ್ನತೆಯಾಳಕ್ಕೆ ತಳ್ಳುವುದು ಕೂಡ ಇದೇ ಪುಳಕ ಎಂಬುದರ ಅರಿವಿರಬೇಕು. ಮಕ್ಕಳನ್ನು ಹೆತ್ತ ತಪ್ಪಿಗೆ ಅನೇಕ ತರದ ಶಿಕ್ಷೆಗಳನ್ನು ಇಂದು ಅನುಭವಿಸುವ ಪೋಷಕರಿದ್ದಾರೆ. ಕೇವಲ ಹೆತ್ತ ಮಾತ್ರಕ್ಕೆ ದಕ್ಕುವ ನಿತ್ಯ ನೋವದು. ವಿಚ್ಛೇದಿತ ಅಪ್ಪ-ಅಮ್ಮಂದಿರ ಸಂಘ, ಮೊಮ್ಮಕ್ಕಳ ಪ್ರೀತಿಯನ್ನು ಗಳಿಸಲಿಚ್ಚಿಸುವ ಅಜ್ಜ-ಅಜ್ಜಿಯಂದಿರ ಸಂಘವೆಲ್ಲ ಏನನ್ನು ಹೇಳುತ್ತವೆ? ಒಮ್ಮೆ ಯೋಚಿಸಿ! ಶೀಘ್ರದಲ್ಲಿ ವಿಚ್ಛೇದಿತರ ಮಕ್ಕಳ ಸಂಘವೂ ಉದಯಿಸಬಹುದು ಅಥವಾ ಈಗಾಗಲೇ ಇದ್ದರೂ ಇರಬಹುದು. ಗೊತ್ತಿಲ್ಲ. ಕಟ್ಟಿದ ಮೂರು ಗಂಟನ್ನು ಕಡಿದು, ತುಳಿದ ಅಷ್ಟಪದಿಯನ್ನೂ ಅಳಿಸಿ, ಹಳೆಯ ಪ್ರೇಮವನ್ನರಸಿ ಹೊರಟಾಕೆಗೆ ಶಲ್ಯ-ಭೀಷ್ಮರಿಬ್ಬರೂ ದೊರಕದೆ ತಾನು ಅಂಬೆಯಾಗಬೇಕಾಗಿ ಬರುವ ಪರಿಸ್ಥಿತಿಯೊಂದಿಗೆ ಮನಸ್ಸು ಶಿಖಂಡಿಯ ಜನ್ಮಕ್ಕೆ ಹಪಹಪಿಸುತ್ತಿರುತ್ತದೆ.

ಅಲ್ಲಲ್ಲಿ ಹಿಡಿಂಬಿಯ ಪ್ರೇಮಾರಣ್ಯಖಾಂಡ, ಸುಭದ್ರೆಯ ಪ್ರೇಮದೋಟಗಳೂ ಕಾಣಿಸಿಕೊಳ್ಳುವುದುಂಟು. ಇಲ್ಲವೆಂದಿಲ್ಲ. ಕಾಲಾಂತರದಲ್ಲಿ ನಾನೇನು ಕಮ್ಮಿ ಎಂಬ ಭಾವವು ತಂದೊಡ್ಡುವ ಹಮ್ಮು ಮುಂದೆ ಬೆವರಿಳಿಸಲಿರುವ ಅರಿವು ನಮಗಿರುವುದಿಲ್ಲ.ಅಂದು ಬಯಸಿ ಬಯಸಿ ಕಟ್ಟಿಕೊಂಡ ಪ್ರೇಮಸೌಧವನ್ನು ಇಂದು ಕೆಡವಿ ಹೊಸ್ತಿಲು ದಾಟಿ ಹೋಗುವುದನ್ನು ನೋಡಿದರೆ ಪ್ರೇಮ ಎನ್ನುವುದು ನಿಜಕ್ಕೂ ತುಚ್ಛ ಹಾಸ್ಯದ ವಸ್ತುವಾಗಿದೆ ಎಂದೆನಿಸದಿರಲಾರದು. ಹುಟ್ಟಿದ ತಪ್ಪಿಗೆ ಅರ್ಥ ಬರೆಯಬೇಕಿದ್ದ ಜೀವಗಳು ಹೀಗೆಲ್ಲ ಅನರ್ಥವನ್ನು ಸೃಷ್ಟಿಸುವುದೂ ಇದೆ.

ಇನ್ನೊಬ್ಬರ ಬದುಕಿನ ಅನರ್ಥವನ್ನು ಕಂಡು ತಮ್ಮ ಬಾಳಿಗರ್ಥ ಬರೆಯುವ ಹಲವು ಮನಸ್ಸುಗಳೂ ಇವೆ. ತಮ್ಮ ಬಾಳು ಅನರ್ಥವಾಗಿದ್ದರೂ ಬಾಳಿಗೊಂದು ಅರ್ಥ ಹುಡುಕುವ ಹೃದಯವಂತರೂ ಇದ್ದಾರೆ. ನನ್ನ ಯೋಚನೆ ನನಗೆ ಸರಿ ಅವನದ್ದು / ಅವಳದ್ದು ಅವನಿ(ಳಿ)ಗೆ ಸರಿ. ನಾನಿರುವುದೇ ಹೀಗೆ. ಬೇಕಿದ್ದರೆ ಒಗ್ಗಿಕೊಳ್ಳಲಿ. ಇಲ್ಲ ಬಿದ್ದಿರಲಿ. ತಾನು ಯಾವುದರಲ್ಲಿ ಕಡಿಮೆ ಎಂಬ ಬಂಡಾಯ ಭಾವವು ಸೃಷ್ಟಿಸುವ ಗೋಜಲಿನ ಬಾಳು ಬೇಕೆ? ಅರ್ಥದ ನಡುವೆ ಸುಖಾಸುಮ್ಮನೆ, ಹೇಳದೆ ಕೇಳದೆ ಮೂಗು ತೂರಿಸುವ ‘ನ’ ವನ್ನು ದೀರ್ಘವಾಗಿ ಬಾಗಿಸಿ ಉಕಾರವನ್ನು ಕೊಟ್ಟು ‘ನಾನು’ ಎಂದು ಮಾಡಿಕೊಂಡು ಹಣೆ ಚಚ್ಚಿಕೊಳ್ಳುವಂತಾಗಬಾರದು ಬದುಕು.

ಒಂದಷ್ಟು ಬಾಗಬೇಕು ಆಗಲೇ ಒಬ್ಬರ ಬೆನ್ನು ಮತ್ತೊಬ್ಬರಿಗೆ ಕಾಣಲು, ಪರಸ್ಪರ ತುರಿಸಿಕೊಂಡು ಕೆರೆಸಿಕೊಳ್ಳಲು ಸಾಧ್ಯ. ಆಗ ಸಮರ್ಥ ಬದುಕಿನ ಅರ್ಥವು ತಾನಾಗಿಯೇ ಪ್ರಾಪ್ತಿಸುತ್ತದೆ. ಹಾಗಾಗಿ ಬಾಗುವಿಕೆಗಿಂತ ತಪವು ಇಲ್ಲ! ನೋಟವು ಮಾಸಿದರೆ ಮನಸೂ ಮಾಸುವುದಂತೆ. ಬದುಕಿನ ನೋಟವು ಮಾಸಬಾರದು. ಎಲ್ಲವನ್ನೂ ಗುರುತಿಸುವ, ಸೂಕ್ಷ್ಮವಾಗಿ ನೋಡುವ ಬಾಳ ಕಣ್ಣಿಗೆ ಕಾಡಿಗೆಯನ್ನು ತಿದ್ದಿ ತೀಡಿ ಹಚ್ಚಿ ಬಾಳ ಕಣ್ಣನ್ನು ವಿಶಾಲಗೊಳಿಸಬೇಕು. ತೀಡಿದ ಕಾಡಿಗೆಯು ಒಂದಿಷ್ಟು ಒನಪಿನ ಭಾವವನ್ನು ಸುರಿಸಿ ಬಾಳಿಗೆ ಅರ್ಥವನ್ನು ಬರೆಯಬೇಕು. ಸೃಷ್ಟಿ ಆರಂಭಗೊಂಡ ಜಾಗದಲ್ಲೇ ಲಯವೂ ಘಟಿಸುವುದು.

ಹೇಗೆ ಶೂನ್ಯವನ್ನು ಒಂದು ಬಿಂದುವಿನಿಂದ ಆರಂಭಿಸಿ ಪುನಃ ಅದೇ ಬಿಂದು ವಿನಲ್ಲಿ ತಂದು ನಿಲ್ಲಿಸುತ್ತೇವೋ ಹಾಗೆ. ಅದ್ವೈತವೆಂದರೆ ಅದೇ ಅಲ್ಲವೇ!? ಎಲ್ಲದಕ್ಕೂ ಸಮಯದೋಷವನ್ನು ಎಳೆದು ತರುವ ನಾವು ಯಾವ ಸಮಯವೂ ದೋಷದಿಂದ ಕೂಡಿರುವುದಿಲ್ಲ ಎಂಬುದನ್ನು ಅರಿಯದೆ ಹೋಗುತ್ತೇವೆ. ಒಳ್ಳೆಯ-ಕೆಟ್ಟ ಯೋಚನೆಗಳು ಸಮಯದ ಪರಿಧಿಯೊಳಗೆ ಇಳಿದಾಗ ಘಟಿಸುವ ಘಟನೆಯನ್ನು ಆಧರಿಸಿ ಒಳ್ಳೆಯ-ಕೆಟ್ಟ ಸಮಯಗಳು ನಿರ್ಧಾರವಾಗುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಟೈಮ್ ಜೋನ್ ಅಂತಿರುತ್ತದೆ. ಅಲ್ಲಿ ಅವರವರ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ.

ಒಬ್ಬ 56 ರಲ್ಲಿ ನಿವೃತ್ತಿಯಾದರೆ ಮತ್ತೊಬ್ಬ 70 ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾನೆ. 22 ವರ್ಷದಲ್ಲಿ ಪದವಿಯನ್ನು ಪಡೆದವನು 5 ವರ್ಷದ ಬಳಿಕ ಉದ್ಯೋಗವನ್ನು ಪಡೆಯುತ್ತಾನೆ. 25 ರ ಹರಯದಲ್ಲಿ ಸಿ.ಇ.ಓ ಆದವನು 50 ರ ಪ್ರಾಯದಲ್ಲಿ ಜಗತ್ತಿಗೇ ವಿದಾಯ ಹೇಳಿಬಿಡುತ್ತಾನೆ. 50 ರಲ್ಲಿ ಸಿ.ಇ.ಓ ಆದವನು 90 ರವರೆಗಿನ ದೀರ್ಘಾವಧಿಯನ್ನು ಸವೆಯುತ್ತಾನೆ. ಕೆಲವರಿಗೆ ಬೇಗ ಮದುವೆಯಾಗಿರುತ್ತದೆ ಇನ್ನೂ ಕೆಲವರು ಒಂಟಿಯಾಗಿಯೇ ಜಂಟಿಯಾಗುವ ಕನಸನ್ನು ಕಾಣುತ್ತಿರುತ್ತಾರೆ. ಸುತ್ತಲಿರುವ ಮಂದಿ ನಮ್ಮಿಂದ ಮುಂದೆ ಇದ್ದಾರೆಂದೂ ಮತ್ತಿತರರು ಹಿಂದಿದ್ದಾರೆಂದೂ ಅದರ ಅರ್ಥವಲ್ಲ.

ಪ್ರತಿಯೊಬ್ಬರೂ ಅವರದ್ದೇ ಕಾಲಮಿತಿಯಲ್ಲಿ ಅವರದ್ದೇ ಓಟವನ್ನು ಸ್ಪರ್ಧೆಯಂತೆ ಓಡುತ್ತಿರುತ್ತಾರೆ. ಅವರವರ ಕಾಲಮಿತಿಯಲ್ಲಿ ಅವರಿರುತ್ತಾರೆ. ಇನ್ನೊಬ್ಬರ ಸಮಯವನ್ನು ಕಂಡು ಹೊಟ್ಟೆ ಹಿಚುಕುವುದಾಗಲಿ, ಉರಿಸಿಕೊಳ್ಳುವುದಾಗಲಿ, ತೆಗಳುವುದಾಗಲಿ ಸಲ್ಲ. ಬೇಗವೂ ಅಲ್ಲದ ತಡವೂ ಅಲ್ಲದ ಸರಿಯಾದ ಸಮಯದಲ್ಲೇ ನಾವಿದ್ದೇವೆ ಅನ್ನುವುದು ಮಾತ್ರ ಸತ್ಯ. ಬದುಕೆನ್ನುವುದು ಸರಿಯಾದ ಸಮಯಕ್ಕೆ ಕಾಯುವ ಮತ್ತು ಆ ಸರಿಯಾದ ಘಳಿಗೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಒಂದು ಸುಂದರ ಕ್ರಿಯೆ.

- ಸಂತೋಷ ಅನಂತಪುರ