Relation Tips: ಸಂಬಂಧದಲ್ಲಿ ಯಾವುದೆಲ್ಲ ಇರ್ಲೇಬಾರ್ದು?
ಸಂಬಂಧಗಳು ಸೂಕ್ಷ್ಮ. ಪತಿ-ಪತ್ನಿ ಸಂಬಂಧವಂತೂ ಇನ್ನೂ ನಾಜೂಕು. ಆ ಸಂಬಂಧ ಸುಭದ್ರವಾದ ವಿಶ್ವಾಸ, ಅಗಾಧ ಪ್ರೀತಿ, ಪರಸ್ಪರ ಗೌರವದ ತಳಹದಿಯ ಮೇಲೆ ರೂಪುಗೊಳ್ಳಬೇಕು. ಆದರೆ, ಕೆಲವು ಅತಿರೇಕದ ವರ್ತನೆಗಳು ನಿಮ್ಮ ಸಂಗಾತಿಯಲ್ಲಿದ್ದರೆ ಅವುಗಳನ್ನು ಸಹಿಸಿಕೊಳ್ಳಬೇಡಿ.
ಸಂಬಂಧದಲ್ಲಿ (Relation) ಇರಿಸುಮುರಿಸು ಸಹಜ. ಎಷ್ಟೇ ಹತ್ತಿರದ ಬಂಧುವಾಗಿದ್ದರೂ ಮನುಷ್ಯರೆಂದ ಮೇಲೆ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ ಹಾಗೂ ಈ ವಿಚಾರವಾಗಿಯೇ ಎಷ್ಟೋ ಬಾರಿ ಮನಸ್ತಾಪಗಳೂ ಆಗುತ್ತವೆ. ಆಗೆಲ್ಲ ನಾವೇ ಸುಧಾರಿಸಿಕೊಂಡು ಮತ್ತೆ ಸಂಬಂಧವನ್ನು ಬೆಸೆದುಕೊಳ್ಳುತ್ತೇವೆ. ಯಾವುದೇ ಸಂಬಂಧವನ್ನು ಶಾಶ್ವತವಾಗಿ ಮುರಿದುಕೊಳ್ಳುವುದು ಉತ್ತಮ ಅಭ್ಯಾಸವಲ್ಲ. ಹಾಗೆ ಮಾಡುತ್ತ ಹೋದರೆ ನಾವೆಲ್ಲ ಒಂಟಿಯಾಗಬೇಕಾದೀತು. ಆದರೆ, ಸಂಬಂಧದಲ್ಲಿ ಕೆಲವು ನಡತೆ (Behaviour) ಹಾಗೂ ವರ್ತನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಪತಿ-ಪತ್ನಿ (Husband and Wife) ಸಂಬಂಧದಲ್ಲಿಯೂ ಕೆಲವು ವರ್ತನೆಗಳು ಅಪೇಕ್ಷಿತವಲ್ಲ. ಅವುಗಳನ್ನು ಸಹಿಸಿಕೊಳ್ಳುವುದು ಅಪರಾಧವಾಗುತ್ತದೆ. ಅಂತಹ ವರ್ತನೆಗಳು ಯಾವುವು ಎಂದು ನೋಡಿಕೊಳ್ಳಿ. ಅಂತಹ ವರ್ತನೆ ನಿಮ್ಮದೂ ಆಗಿದ್ದರೆ ನಿಜವಾಗಿಯೂ ಸುಧಾರಿಸಿಕೊಳ್ಳಿ ಹಾಗೂ ಕೆಲವು ಸಮಸ್ಯೆಗಳಿಗೆ ವೈದ್ಯರನ್ನು ಕಾಣಿ.
• ಡಾಮಿನೇಟ್ (Dominate) ಮಾಡುವುದು
ಪತ್ನಿಗಿಂತ ತಾನು ಮೇಲು ಎನ್ನುವ ಪತಿರಾಯರು ನೀವಾಗಿದ್ದರೆ ವಿಮರ್ಶೆ ಮಾಡಿಕೊಳ್ಳಿ. ಸಂಗಾತಿಗಿಂತ ತಾನೇ ಮೇಲು ಎನ್ನುವ ಭಾವನೆ ನಿಮಗಿದ್ದರೆ ನೀವು ಅವರ ಆತ್ಮವಿಶ್ವಾಸಕ್ಕೆ (Self Confidence) ದಿನವೂ ಧಕ್ಕೆ ತರುತ್ತೀರಿ ಎಂದು ಅರ್ಥ. ಕೇವಲ ತಮ್ಮ ಇಷ್ಟಾನಿಷ್ಟಗಳಿಗೆ ಅನುಸಾರವಾಗಿ ಕುಟುಂಬದಲ್ಲಿ ನಡೆದುಕೊಳ್ಳುವ ವ್ಯಕ್ತಿಯಿಂದ ಇತರರಿಗೆ ಹಾನಿಯಾಗುತ್ತಿರುತ್ತದೆ. ಅಂಥವರಿಗೆ ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಸಂಗಾತಿ ನಡೆದುಕೊಳ್ಳಬಾರದು. ತಮಗೇನು ಇಷ್ಟವೋ ಅದನ್ನೇ ಮಾಡಬೇಕು. ಊಟ-ತಿಂಡಿ ಸೇರಿದಂತೆ ಮನೆಯ ಪ್ರತಿಯೊಂದು ವ್ಯವಹಾರವೂ ಅವರ ಇಷ್ಟಕ್ಕೆ ಅನುಗುಣವಾಗಿಯೇ ನಡೆಯಬೇಕು. ಪತಿ-ಪತ್ನಿ ಸಂಬಂಧ ಹೀಗಿದ್ದರಂತೂ ಸಹಿಸಿಕೊಳ್ಳಲು ಅಸಾಧ್ಯ. ಡಾಮಿನೇಟ್ ಮಾಡುವ ಗುಣವುಳ್ಳವರು ನಿಮ್ಮ ದೌರ್ಬಲ್ಯಗಳನ್ನು ಎತ್ತಿ ಆಡುತ್ತಾರೆ. ಅದನ್ನೇ ದೊಡ್ಡದು ಮಾಡಿ ನಿಮ್ಮ ಗುಣವೆಂಬಂತೆ ಬಿಂಬಿಸುತ್ತಾರೆ. ನಿಮಗೆ ಅಗೌರವ ತೋರುತ್ತಾರೆ.
• ನಿರ್ಲಕ್ಷ್ಯ (Ignore) ಮಾಡುವುದು
ನಿಮ್ಮ ಸಂಗಾತಿ ನಿಮ್ಮನ್ನು ಸತತವಾಗಿ ನಿರ್ಲಕ್ಷಿಸುವುದು ಸರಿಯಲ್ಲ. ಯಾವಾಗಲೋ ಒಮ್ಮೆ ಸಂದರ್ಭಕ್ಕೆ ಅನುಗುಣವಾಗಿ ಅವಾಯ್ಡ್ ಮಾಡಿದರೆ ಹೇಗೋ ಸಹಿಸಿಕೊಳ್ಳಬಹುದು. ಆದರೆ, ನಿರಂತರವಾಗಿ ನೀವು ಹೇಳಿದ್ದನ್ನೆಲ್ಲ ಅಲಕ್ಷಿಸಿ, ನಿಮ್ಮ ನಿಲುವನ್ನು ಉದ್ದೇಶಪೂರ್ವಕವಾಗಿ ಪ್ರಶ್ನಿಸುತ್ತಿದ್ದರೆ ಸಹಿಸಿಕೊಳ್ಳುವುದು ಕಷ್ಟ. ಆಗಲೂ ನಿಮ್ಮ ಆತ್ಮವಿಶ್ವಾಸಕ್ಕೆ ಘಾಸಿಯಾಗುತ್ತದೆ.
ಇದನ್ನೂ ಓದಿ: ಕೋಪಗೊಂಡ ಗರ್ಲ್ ಫ್ರೆಂಡ್ ಮುಂದೆ ಈ ಮಾತನಾಡಬೇಡಿ
• ಭಾವನಾತ್ಮಕವಾಗಿ ಹಿಂಸಿಸುವುದು, ಬೈಯ್ಯುವುದು (Abuse)
ನಿಮ್ಮನ್ನು ಭಯಪಡಿಸುವುದು, ನಿಯಂತ್ರಿಸುವುದು, ಭಾವನಾತ್ಮಕವಾಗಿ ಒಬ್ಬಂಟಿಯಾಗಿಸುವ ಪ್ರಯತ್ನವನ್ನು ನಿಮ್ಮ ಸಂಗಾತಿ (Partner) ಮಾಡುತ್ತಿದ್ದರೆ ಎಚ್ಚರಿಕೆ ವಹಿಸಿ. ಬೆದರಿಕೆ ಒಡ್ಡುವುದು, ನಿಮಗೆ ಸಂಬಂಧ ಪಟ್ಟವರನ್ನು ಬೈಯ್ಯುವುದು ಮಾನಸಿಕ ಸಮಸ್ಯೆ ಉಳ್ಳವರ ಲಕ್ಷಣ. ನಿಮ್ಮನ್ನು ನೋಯಿಸಲೆಂದೇ ಅವರು ಕೆಲವು ವರ್ತನೆಗಳನ್ನು ಮಾಡುತ್ತಾರೆ.
• ನಿಮ್ಮ ಸಂಬಂಧಗಳಿಗೆ ಬೆಲೆ (Disrespect) ನೀಡದಿರುವುದು
ನಿಮ್ಮ ಅಪ್ಪ-ಅಮ್ಮ, ನಿಮ್ಮ ಒಡಹುಟ್ಟಿದವರ ಬಗ್ಗೆ ಅವಹೇಳನ ಮಾಡುವುದು, ನಿಮ್ಮ-ಅವರ ಬಾಂಧವ್ಯಕ್ಕೆ ಬೆಲೆ ನೀಡದಿರುವ ಗುಣ ಸಂಗಾತಿಯಲ್ಲಿದ್ದರೆ ಕೇವಲ ಬೇಸರ ಮಾಡಿಕೊಳ್ಳುತ್ತಿರುವುದರಿಂದ ಪ್ರಯೋಜನವಿಲ್ಲ. ಏಕೆಂದರೆ, ಇದೂ ಸಹ ಮಾನಸಿಕ ಸಮಸ್ಯೆ (Mental Problem) ಉಳ್ಳವರ ಲಕ್ಷಣಗಳಲ್ಲಿ ಒಂದು. ನಿಮ್ಮನ್ನು ಅವರು ಎಲ್ಲರೆದುರು ಅವಮಾನ ಮಾಡಲು ಯತ್ನಿಸಬಹುದು.
ಇದನ್ನೂ ಓದಿ: ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಮ್ಮಿ ಆಗ್ತಿದ್ಯಾ? ಹೀಗ್ ತಿಳಿಯಿರಿ
• ನಿಮ್ಮನ್ನು ಒಬ್ಬಂಟಿ (Isolate)ಯಾಗಿಸಿದ್ದಾರಾ?
ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಕಚೇರಿಗೆ ಹೋಗುವ ಪತಿಯಂದಿರು ಇದ್ದಾರೆ. ಅವರಿಗೆ ಪತ್ನಿಯ ಮೇಲೆ ಅನುಮಾನ. ನಿಮ್ಮ ಸಂಗಾತಿಗೂ ಈ ಗುಣವಿದೆಯೇ? ಚೆಕ್ ಮಾಡಿ. ಈ ಗುಣವಿದ್ದರೆ ನಿಮ್ಮನ್ನು ನಿಮಗೆ ಬೇಕಾದವರಿಂದ, ಮನೆಯವರು, ಸ್ನೇಹಿತರು ಎಲ್ಲರಿಂದ ದೂರವಿಡುತ್ತಾರೆ. ನೀವು ಬೇರೆಯವರೊಂದಿಗೆ ಬೆರೆಯುವುದು ಅವರಿಗೆ ಇಷ್ಟವಾಗುವುದಿಲ್ಲ. ಎಲ್ಲ ಕಡೆಯೂ ನಿಮ್ಮ ಬೆನ್ನ ಬರುತ್ತಾರೆ. ತಾಳ್ಮೆ ವಹಿಸಿ ಸುಮ್ಮನಿರುವುದು ಇದಕ್ಕೆ ಪರಿಹಾರವಲ್ಲ. ಇಂತಹ ವರ್ತನೆಗಳು ಹಿಂಸಾತ್ಮಕ (Violent) ಎನಿಸುತ್ತವೆ. ಹಿಂಸಾತ್ಮಕ ವರ್ತನೆಗಳು ಸಂಬಂಧದಲ್ಲಿ ಸರ್ವಥಾ ಸಹನೀಯವಲ್ಲ. ಪತಿ-ಪತ್ನಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂಬಂಧವನ್ನು ಉತ್ತಮಪಡಿಸಿಕೊಳ್ಳಬೇಕೇ ಹೊರತು ಹಿಂಸೆ, ಅನುಮಾನದ ವರ್ತನೆಗಳು ಸಲ್ಲದು.