ಪತಿ-ಪತ್ನಿ ನಡುವಿನ ಸಂಬಂಧ ಮಧುರವಾಗಿದ್ರೆ, ಆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ನೆಲೆಸಿರುತ್ತೆ. ಆದ್ರೆ ದಾಂಪತ್ಯ ಎನ್ನೋ ಸುದೀರ್ಘ ಯಾನದಲ್ಲಿ ಆಗಾಗ ಜಗಳ, ಹುಸಿಮುನಿಸು ಎಲ್ಲವೂ ಕಾಮನ್‌. ಆದ್ರೆ ಇವೆಲ್ಲವೂ ಮಿತಿಯೊಳಗಿದ್ರೆ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಆದ್ರೂ ಕೆಲವೊಮ್ಮೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಏನೋ ಕೊರತೆಯಿದೆ ಎಂಬ ಭಾವನೆ ಮೂಡಿ ಮನಸ್ಸಿನ ನೆಮ್ಮದಿ ಹಾಳಾಗಬಹುದು. ನಿಮ್ಗೂ ಅಂಥ ಭಾವನೆ ಮೂಡಿದ್ರೆ, ಚಿಂತಿತರಾಗಬೇಡಿ, ನಿಮ್ಮಿಬ್ಬರದ್ದೂ ಜೀವನಪರ್ಯಂತ ಜೊತೆಯಾಗಿರೋ ಸಂಬಂಧ ಎಂಬುದನ್ನು ದೃಢಪಡಿಸೋ ಕೆಲವು ಲಕ್ಷಣಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ. ಹೀಗಾಗಿ ನಿಮ್ಮ ವೈವಾಹಿಕ ಬದುಕು ಎಷ್ಟು ಸದೃಢವಾಗಿದೆ ಎನ್ನೋದನ್ನು ಪರೀಕ್ಷಿಸೋ ಇಚ್ಛೆಯಿದ್ರೆ ನಿಮ್ಮಿಬ್ಬರ ನಡುವೆ ಇಂಥ ಸಂಬಂಧವಿದೆಯೇ ಎಂಬುದನ್ನು ಚೆಕ್‌ ಮಾಡಿ.

ಮಕ್ಕಳು ನೋಡಬಾರದ ಪ್ರಾಯದಲ್ಲಿ ಪೋರ್ನ್ ನೋಡಿದ್ರೆ..?

ಪರಸ್ಪರ ಗೌರವ, ನಂಬಿಕೆ
ದಾಂಪತ್ಯ ಜೀವನ ಸುದೀರ್ಘ ಕಾಲ ಚೆನ್ನಾಗಿರಬೇಕು,ದಂಪತಿಗಳ ನಡುವೆ ಆರೋಗ್ಯಕರ ಸಂಬಂಧವಿರಬೇಕೆಂದ್ರೆ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸೋದು,ನಂಬಿಕೆಯಿಡೋದು ಮುಖ್ಯ.ನಾವು ನಂಬೋ, ಗೌರವಿಸೋ ವ್ಯಕ್ತಿಗಳನ್ನು ಸದಾ ಎತ್ತರದ ಸ್ಥಾನದಲ್ಲಿಟ್ಟಿರುತ್ತೇವೆ. ಹೀಗಾಗಿ ಅಂಥವರಿಂದ ದೂರವಾಗೋ ಸಾಧ್ಯತೆ ಕಡಿಮೆ.ದಾಂಪತ್ಯದಲ್ಲಿ ಕೆಲವೊಮ್ಮೆ ಯಾವುದೋ ಕಾರಣಕ್ಕೆ ನಂಬಿಕೆ ಅನ್ನೋದು ಸ್ವಲ್ಪ ಮಟ್ಟಿಗೆ ಕಡಿಮೆಯಾಗೋ ಸಾಧ್ಯತೆಯೂ ಇರುತ್ತೆ. ಹಾಗಂದ ಮಾತ್ರಕ್ಕೆ ಇಬ್ಬರ ನಡುವಿನ ಸಂಬಂಧ ಕೊನೆಯಾಗುತ್ತೆ ಎಂದು ಹೇಳಲಾಗದು.ನೀವು ನಿಮ್ಮ ಪತಿ ಹಾಗೂ ಪತ್ನಿಯನ್ನು ಗೌರವಿಸುತ್ತೀರಿ, ನಂಬುತ್ತೀರಿ ಎಂದಾದ್ರೆ ನಿಮ್ಮಿಬ್ಬರ ಸಂಬಂಧ ಸದೃಢವಾಗಿದೆ ಎಂದೇ ಅರ್ಥ.

ಗೆಳೆತನ
ಬಹುಶಃ ನಾವು ಅದೆಷ್ಟೇ ಉತ್ತಮ, ಆತ್ಮೀಯ ಸ್ನೇಹಿತರನ್ನು ಹೊಂದಿದ್ದರೂ ನಮ್ಮ ಸಂಗಾತಿಯಷ್ಟು ಬೆಸ್ಟ ಫ್ರೆಂಡ್‌ ಇನ್ನೊಬ್ಬರು ಇರಲಾರರು. ವಿವಾಹದ ಬಳಿಕ  ಸಂಗಾತಿಯೇ ನಮ್ಮಬೆಸ್ಟ್‌ ಫ್ರೆಂಡ್‌ ಅಗಿರುತ್ತಾರೆ. ಇಬ್ಬರು ಮನಸ್ಸಿನಲ್ಲಿರೋದನ್ನು ಪರಸ್ಪರ ಹಂಚಿಕೊಳ್ಳಬಲ್ಲಿರಿ, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆದು ತಮಾಷೆ ಮಾಡಿಕೊಂಡು ನಗಬಲ್ಲಿರಿ ಎಂದಾದ್ರೆ ನಿಮ್ಮ ದಾಪತ್ಯ ಸರಿಯಾದ ಟ್ರ್ಯಾಕ್‌ನಲ್ಲೇ ಇದೆ ಎಂದರ್ಥ. ಮನಶಾಸ್ತ್ರಜ್ಞರ ಪ್ರಕಾರ ಉತ್ತಮ ದಂಪತಿಗಳು ತಮ್ಮ ಸಂಗಾತಿಯನ್ನೇ ಬೆಸ್ಟ್‌ ಫ್ರೆಂಡ್‌ ಎಂದು ಭಾವಿಸುತ್ತಾರಂತೆ. 

ಹೆರಿಗೆಗಿಂತಲೂ ಮಗು ಸಾಕೋದು ಪ್ರಯಾಸವೇಕೆ?

ಕಾಳಜಿ,ಕರುಣೆ
ವಿಚ್ಛೇದನೆ ಕೋರಿ ಕೋರ್ಟ್‌ ಮೆಟ್ಟಿಲೇರಿದ ಅನೇಕ ದಂಪತಿಗಳು ಪರಸ್ಪರ ಒಬ್ಬರ ಮೇಲೆ ಇನ್ನೊಬ್ಬರು ಗೂಬೆ ಕೂರಿಸುತ್ತ ಮಾಡೋ ಆರೋಪಗಳಲ್ಲಿ ಕಾಮನ್‌  ಆಗಿರೋದು ಅಂದ್ರೆ ಕೇರ್‌ ಮಾಡಲ್ಲ, ತುಂಬಾ ಸ್ವಾರ್ಥಿ ಅನ್ನೋದು.ದಾಂಪತ್ಯದಲ್ಲಿ ಪತಿ-ಪತ್ನಿ ಪರಸ್ಪರ ಕಾಳಜಿ, ಕರುಣೆ ತೋರೋದು, ಅಗತ್ಯ ಸಂದರ್ಭಗಳಲ್ಲಿ ನೆರವಿನ ಹಸ್ತ ಚಾಚೋದ್ರಿಂದ ಇಬ್ಬರ ನಡುವಿನ ಬಾಂಡಿಂಗ್‌ ಗಟ್ಟಿಗೊಳ್ಳುತ್ತೆ.ನಿಮ್ಮ ದಾಂಪತ್ಯದಲ್ಲೂ ಕಾಳಜಿಯೆಂಬುದು ಇನ್ನೂ ಉಳಿದಿದೆ ಎಂದಾದ್ರೆ ಡೋಂಟ್‌ ವರಿ,ನೀವಿಬ್ಬರು ಬೇರೆಯಾಗಲು ಸಾಧ್ಯವಿಲ್ಲ.

ಮುಕ್ತ ಸಂಭಾಷಣೆ
ಕಮ್ಯೂನಿಕೇಷನ್‌ ಅನ್ನೋದು ಆರೋಗ್ಯಯುತ ಹಾಗೂ ಸಂತಸದಾಯಕ ಸಂಬಂಧದ ಕೀಲಿ ಕೈ. ನೀವಿಬ್ಬರೂ ಮನಸ್ಸಿನಲ್ಲಿರೋದನ್ನು ಪರಸ್ಪರ ಮುಕ್ತವಾಗಿ ಹಂಚಿಕೊಳ್ಳ ಬಲ್ಲೀರಿ ಎಂದಾದ್ರೆ ಸಂಬಂಧ ಗಟ್ಟಿಯಾಗಿದೆ ಎಂದೇ ಅರ್ಥ.ನಿಮ್ಮ ಮನಸ್ಸಿನಲ್ಲಿ ಏನಿದೆ, ನೀವೇನು ಬಯಸುತ್ತೀರಿ,ನಿಮ್ಮ ಸಂಗಾತಿ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಹೊಂದಿದ್ದಾರಾ? ನೀವು ಬೇಸರದಲ್ಲಿರೋವಾಗ ಸಂಗಾತಿ ನಿಮ್ಮ ಮನಸ್ಸಿನಲ್ಲಿರೋದನ್ನು ಅರ್ಥೈಸಿಕೊಂಡು ನಿಮಗೆ ಸಮಾಧಾನ, ಕಂಫರ್ಟ್‌ ನೀಡಬಲ್ಲರಾಗಿದ್ರೆ, ನೀವಿಬ್ಬರ ಸಂಬಂಧ ಸರಿಯಾದ ಟ್ರ್ಯಾಕ್‌ನಲ್ಲಿದೆ.

ಪ್ರಾಮಾಣಿಕತೆ
ಒಬ್ಬರಿಂದ ತಪ್ಪು ನಡೆದಾಗ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳೋ ಗುಣವಿದ್ರೆ, ದಾಂಪತ್ಯ ಜೀವನದಲ್ಲಿ ಯಾವುದೇ ತೊಂದ್ರೆ ಎದುರಾಗೋದಿಲ್ಲ. 

ಸರ್ಪ್ರೈಸ್‌ ನೀಡೋದು
ಮದುವೆಯಾದ ಪ್ರಾರಂಭಿಕ ದಿನಗಳಲ್ಲಿ ಪತಿ-ಪತ್ನಿ ಒಬ್ಬರಿಗೊಬ್ಬರು ಸರ್ಪ್ರೈಸ್‌ ಗಿಫ್ಟ್‌ಗಳನ್ನು ನೀಡಿ ಹಿರಿ ಹಿರಿ ಹಿಗ್ಗೋದು ಕಾಮನ್‌. ಈ ಸರ್ಪ್ರೈಸ್‌ ಮದುವೆಯಾಗಿ ಅನೇಕ ವರ್ಷಗಳು ಕಳೆದ ಮೇಲೂ ವರ್ಕೌಟ್‌ ಆಗುತ್ತೆ. ಸಣ್ಣ ಹುಸಿ ಮುನಿಸನ್ನು ಶಾಂತವಾಗಿಸಲು ಚಿಕ್ಕ ಸರ್ಪ್ರೈಸ್‌ ಗಿಫ್ಟ್‌ ಸಾಕು. ಆಗಾಗ ಸರ್ಪ್ರೈಸ್‌ ನೀಡುತ್ತ ಒಬ್ಬರನ್ನೊಬ್ಬರು ಖುಷಿಪಡಿಸುತ್ತಿದ್ರೆ ದಾಂಪತ್ಯದಲ್ಲಿ ವಿರಸ ತಗ್ಗಿ ಸರಸ ಹೆಚ್ಚುತ್ತೆ.

ರೊಮ್ಯಾನ್ಸ್ ಹೆಚ್ಚಿಸಲು ರೊಮ್ಯಾಂಟಿಕ್ ಸೂತ್ರಗಳು..!...

ವಾದಿಸಲು ಭಯ
ನಿಮಗೆ ಸಂಗಾತಿಯೊಂದಿಗೆ ವಾದಿಸಲು ಭಯವಾಗುತ್ತೆ ಅಂದಾದ್ರೆ ನೀವು ನಿಮ್ಮ ಸಂಬಂಧಕ್ಕೆ ಹೆಚ್ಚಿನ ಬೆಲೆ ನೀಡುತ್ತೀರಿ ಎಂದಾಯ್ತು.ವಾದ, ವಾಗ್ವಾದದಿಂದ ಇಬ್ಬರ ನಡುವಿನ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತೆ ಅಥವಾ ನನ್ನಿಂದ ದೂರವಾಗಬಹುದು ಎಂಬ ಭಯ ನಿಮ್ಮಿಬ್ಬರ ನಡುವೆ ಗಟ್ಟಿಯಾದ ಬಾಂಡಿಂಗ್‌ ಇದೆ ಅನ್ನೋದಕ್ಕೆ ಸಾಕ್ಷಿ.

ಕೊನೇ ತನಕ ಉಳಿಯೋ ನಂಬಿಕೆ
ಇಬ್ಬರ ಸಂಬಂಧ ಕೊನೇ ತನಕ ಉಳಿಯೋ ನಂಬಿಕೆಯಿದ್ರೆ ಎಲ್ಲವೂ ಚೆನ್ನಾಗಿಯೇ ಸಾಗುತ್ತೆ. ಮೊದಲು ನಿಮ್ಮಿಬ್ಬರಿಗೂ ನಿಮ್ಮ ಸಂಬಂಧದ ಮೇಲೆ ನಂಬಿಕೆಯಿರಬೇಕು. ಅಂಥ ನಂಬಿಕೆ ಇನ್ನೂ ನಿಮಗಿದೆ ಅಂದಾದ್ರೆ ಎಲ್ಲವೂ ಸರಿಯಾಗಿದೆ ಎಂದೇ ಅರ್ಥ.