ಮೆಟ್ರೋದಲ್ಲಿ ಮ್ಯಾಗಿ ಶೇರಿಂಗ್: ಹುಡುಗರ ವೀಡಿಯೋದಿಂದ ಹಳೆಯ ನೆನಪಲ್ಲಿ ಮಿಂದೆದ್ದ ನೆಟ್ಟಿಗರು!
ಶಾಲೆ-ಕಾಲೇಜುಗಳ ಜೀವನದ ಅತಿ ಸುಖದ ಸನ್ನಿವೇಶಗಳಲ್ಲಿ ಲಂಚ್ ಬಾಕ್ಸ್ ಶೇರಿಂಗ್ ಕೂಡ ಒಂದು. ಪರಸ್ಪರರ ಲಂಚ್ ಬಾಕ್ಸ್ ಗಳನ್ನು ಸ್ಪರ್ಧೆಗೆ ಬಿದ್ದವರಂತೆ ಕಿತ್ತುಕೊಂಡು ತಿನ್ನುವ ಸುಖವೇ ಬೇರೆ. ಅಂತಹ ನೆನಪುಗಳನ್ನು ಈ ವೀಡಿಯೋ ಬಡಿಸೆಬ್ಬಿಸುತ್ತದೆ.
ಶಾಲೆ ಕಾಲೇಜು ದಿನಗಳಲ್ಲಿ ಸ್ನೇಹಿತರೊಂದಿಗೆ ಬಾಕ್ಸ್ ಶೇರ್ ಮಾಡಿದ ಅನುಭವದ ಮುಂದೆ ಬೇರೆ ಯಾವುದಿದೆ? ಬದುಕಿನ ಯಾವುದೇ ಹಂತದಲ್ಲಿದ್ದರೂ ಕ್ಷಣಕಾಲ ಮನಸ್ಸನ್ನು ಮುದಗೊಳಿಸಿ, ಮಂದಹಾಸ ಉಕ್ಕಿಸಿ, ಆಹ್ಲಾದತೆ ಮೂಡಿಸುವ ಶಕ್ತಿ ಆ ಅನುಭವಕ್ಕಿದೆ. ಬೆಳಗ್ಗೆಯೇ ಅಮ್ಮ ಮಾಡಿದ ತಿಂಡಿ ಆರಿಹೋಗಿದ್ದರೂ ಅದೇನೋ ಆಕೆಯ ಪ್ರೀತಿಯ ಕಾವು ಅದರಲ್ಲಿ ಇರುತ್ತಿತ್ತು. ಎಷ್ಟೊಂದು ರುಚಿಕರ ಎನಿಸುತ್ತಿತ್ತು. ಈಗಿನ ಹೋಟೆಲ್ ತಿಂಡಿಗಳ ದಾಸರಾಗಿರುವ ಮಕ್ಕಳಿಗೆ ಅಮ್ಮನ ಕೈ ರುಚಿ ಸೊಗಸುವುದಿಲ್ಲ. ಆದರೆ, ಮನೆಯ ಅಡುಗೆಯನ್ನು ಇಷ್ಟಪಡುವ ಮಕ್ಕಳಿಗೆ ಅಮ್ಮನ ಕೈರುಚಿಯ ಮುಂದೆ ಬೇರೊಂದಿಲ್ಲ. ಅಂತಹ ತಿಂಡಿಗಳನ್ನು ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಲು ಹೆಮ್ಮೆ, ಖುಷಿ. ಅವರ ಬಾಕ್ಸ್ ಗಳಲ್ಲಿದ್ದ ತಿಂಡಿಗಳ ಮೇಲೆ ಆಸೆಯೂ ಬೆಟ್ಟದಷ್ಟು. ಒಟ್ಟಿನಲ್ಲಿ ಊಟದ ಸಮಯ ಅದೆಷ್ಟು ಆಹ್ಲಾದಕರವಾಗಿ ಮುಗಿಯುತ್ತಿತ್ತು. ಅಂತಹ ಹಳೆಯ ನೆನಪುಗಳನ್ನು ಮೂಡಿಸುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ.
ಇಬ್ಬರು ಶಾಲೆಗೆ ಹೋಗುವ ಬಾಲಕರು (Boys) ಲಂಚ್ ಬಾಕ್ಸ್ (Lunch Box) ನಲ್ಲಿರುವ ತಿಂಡಿಯನ್ನು ಪರಸ್ಪರ ಹಂಚಿಕೊಂಡು (Share) ತಿನ್ನುತ್ತಿರುವ ವೀಡಿಯೋ ಒಂದನ್ನು ಶುಭ್ ಎನ್ನುವವರ ಟ್ವಿಟ್ ಖಾತೆಯಿಂದ ಶೇರ್ ಮಾಡಲಾಗಿದೆ. ಇದನ್ನು ವೀಕ್ಷಿಸಿದ ನೆಟ್ಟಿಗರು (Netizens) ಫಿದಾ ಆಗಿದ್ದಾರೆ. ಹಳೆಯ ನೆನಪುಗಳಲ್ಲಿ (Old Memories) ಕೊಚ್ಚಿ ಹೋಗಿದ್ದಾರೆ. ಶೇರ್ ಮಾಡಿರುವ ಕೆಲವು ಗಂಟೆಗಳಲ್ಲೇ ಈ ವೀಡಿಯೋ ಸಾವಿರಾರು ಮಂದಿಯಿಂದ ವೀಕ್ಷಣೆಗೆ ಒಳಗಾಗಿದೆ. ಅಷ್ಟಕ್ಕೂ ಇದರಲ್ಲೇನಿದೆ ಅಂತೀರಾ?
ಮೆಟ್ರೋದಲ್ಲಿ ಮ್ಯಾಗಿ (Metro and Maggi)
ಯೂನಿಫಾರಂ (Uniform) ಧರಿಸಿದ ಇಬ್ಬರು ಬಾಲಕರು ಮೆಟ್ರೋ ರೈಲಿನಲ್ಲಿ ಕುಳಿತಿರುವಂತೆ ಕಾಣುತ್ತದೆ. ಅದು ಯಾವ ಮೆಟ್ರೋ, ಎಲ್ಲಿಯ ಹುಡುಗರು ಇತ್ಯಾದಿ ಮಾಹಿತಿ ದೊರಕಿಲ್ಲ. ಒಟ್ಟಿನಲ್ಲಿ ಆ ಹುಡುಗರು ಟಿಫಿನ್ ಬಾಕ್ಸ್ ಹಂಚಿಕೊಂಡು ತಿನ್ನುತ್ತಿದ್ದಾರೆ. ಅದೂ ಯಾವ ತಿಂಡಿ ಗೊತ್ತೇ? ಊಹಿಸಿ ನೋಡೋಣ. ಹೌದು, ಅದು ಮ್ಯಾಗಿ. ಇದು ಸಹ ಹಲವರ ಫೇವರಿಟ್ ತಿಂಡಿ (Food). ಆಹಾರ ತಜ್ಞರ ಪ್ರಕಾರ, ಮ್ಯಾಗಿ ಒಳ್ಳೆಯ ತಿನಿಸಲ್ಲವಾದರೂ ಅದನ್ನು ಸಿಕ್ಕಾಪಟ್ಟೆ ಜನ ಇಷ್ಟಪಟ್ಟು ತಿನ್ನುತ್ತಾರೆ ಎನ್ನುವುದು ಸತ್ಯ. ಅಂತಹ ಮ್ಯಾಗಿಯನ್ನು ಇಬ್ಬರೂ ಭಾರೀ ಖುಷಿಯಿಂದ ಸೇವಿಸುತ್ತಿರುವುದು ವೀಡಿಯೋದಲ್ಲಿದೆ. ಅದರಲ್ಲೂ ತನ್ನ ಸ್ನೇಹಿತ ಪೂರ್ತಿ ತಿಂಡಿಯನ್ನು ಸೇವಿಸಿ ಮುಗಿಸಿದಾಗ ಇನ್ನೊಬ್ಬಾತನಿಗೆ ಭಾರೀ ಖುಷಿಯಾಗುವುದು ಮನಸ್ಸನ್ನು ಮುದಗೊಳಿಸುತ್ತದೆ.
Kids Health : 9-5-2-1-0 ಸೂತ್ರದ ಬಗ್ಗೆ ನಿಮಗೆ ಗೊತ್ತಾ?
ತೋಳಗಳಂತೆ ಬಾಕ್ಸ್ ಕಸಿದುಕೊಳ್ಳುತ್ತಿದ್ದ ಸ್ನೇಹಿತರು!
ಹಲವು ರೀತಿಯ ಕಮೆಂಟ್ ಗಳು ಇದಕ್ಕೆ ಬಂದಿವೆ. ಒಬ್ಬರು ತಾವು ತಮ್ಮ ಸಹೋದ್ಯೋಗಿಗಳೊಂದಿಗೆ (Colleagues) ಈ ಕೆಲಸವನ್ನು ಇಂದಿಗೂ ಮಾಡುತ್ತೇನೆ ಎಂದು ಬರೆದುಕೊಂಡಿದ್ದರೆ, ಮತ್ತೊಬ್ಬರು “ಇವು ಜೀವನದ ಅತ್ಯುತ್ತಮ ಕ್ಷಣಗಳು’ ಎಂದು ಹೇಳಿದ್ದಾರೆ. ಒಬ್ಬಾತ, “ಲಂಚ್ ಬಾಕ್ಸ್ ಅನ್ನು ಸ್ನೇಹಿತರಲ್ಲದೆ ಹೀಗೆ ಹಂಚಿಕೊಂಡು ಯಾರು ತಿನ್ನುತ್ತಾರೆ? ನನ್ನ ಸ್ನೇಹಿತರಂತೂ ಲಂಚ್ ಬಾಕ್ಸಿಗೆ ತೋಳಗಳಂತೆ ಮುಗಿ ಬೀಳುತ್ತಿದ್ದರು’ ಎಂದು ಹೇಳಿಕೊಂಡಿದ್ದಾರೆ.
ಮಕ್ಕಳಲ್ಲಿ ಹೆಚ್ಚಾಗ್ತಿರೋ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣಗಳೇನು?
ಶೇರಿಂಗ್ ಅಲ್ಲ ಓಪನ್ ಲೂಟಿ
“ಶೇರಿಂಗ್ ಅಲ್ಲ, ಡಬ್ಬಾ ತೆಗೆಯುತ್ತಿದ್ದಂತೆ ಲೂಟಿ (Loot) ಮಾಡಿಬಿಡುತ್ತಿದ್ದರು’ ಎನ್ನುವುದು ಒಬ್ಬರ ಸವಿ ನೆನಪು. ಒಬ್ಬಾತನಂತೂ ಚಲಚಿತ್ರವೊಂದರ ಡೈಲಾಗ್ ಅನ್ನೇ ಶೇರ್ ಮಾಡಿ, “ಈಗ ಕಣ್ಣೀರು ಬರುವಂತೆ ಮಾಡಿದ್ದೀರಲ್ಲ, ಸಮಾಧಾನವಾಯ್ತಾ?’ ಎಂದು ಕೇಳಿದ್ದಾರೆ. ಯಾರೋ ಒಬ್ಬರು “ಸ್ನೇಹಿತರ ಲಂಚ್ ಬಾಕ್ಸ್ ಶೇರಿಂಗ್ ಅಲ್ಲ ಓಪನ್ (Open) ಲೂಟಿ ಆಗುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೆಟ್ಟಿಗರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.