ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಗೆ ಯುವತಿಯೊಬ್ಬಳು 1.59 ಲಕ್ಷ ಸಂದೇಶಗಳನ್ನು ಕಳುಹಿಸಿ ಬಂಧಿತಳಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವೊಂದು ವಿಚಿತ್ರ ಘಟನೆಗಳು ಅವು ಎಷ್ಟೇ ಹಳೆಯದಾದರೂ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ವೈರಲ್ ಆಗಿ ನಗು ತರಿಸುತ್ತವೆ. ಅದೇ ರೀತಿ ಇಲ್ಲೊಂದು ಹಳೇ ಸುದ್ದಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ವಿವಿಧ ರೀತಿಯಲ್ಲಿ ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಜನಗಳಿರ್ತಾರೆ ನೋಡಿ, ಅಯ್ಯೋ ನಮ್ ಹುಡ್ಗಿ ಮೆಸೇಜೇ ಮಾಡಲ್ಲ, ಕಾಲು ಮಾಡಲ್ಲ ಅಂತ ಅಳುವವರು ಕೆಲವರಾದರೆ ಅಯ್ಯೋ ಎಂತೆಂಥವರಿಗೆಲ್ಲಾ ಗರ್ಲ್‌ಫ್ರೆಂಡ್/ಬಾಯ್‌ಫ್ರೆಂಡ್‌ಗಳಿದ್ದಾರೆ ನಮಗೆ ಮಾತ್ರ ಯಾರಿಲ್ಲ ಮದುವೆನೂ ಆಗಲ್ಲ ಅಂತ ತುಂಬಾ ಜನ ಅಳಲು ತೋಡಿಕೊಳ್ಳುವವರಿದ್ದಾರೆ. ಆದರೆ ಇಲ್ಲೊಬ್ಬಳು ಯುವತಿ ಹುಡುಗನಿಗೆ ಮೆಸೇಜ್ ಮಾಡಿದ ಕಾರಣಕ್ಕೆ ಬಂಧಿತಳಾಗಿದ್ದಾಳೆ. ಹೌದು ವಿಚಿತ್ರ ಆದರೂ ಸತ್ಯ ಹಾಗಂತ ಈಕೆ ಮಾಡಿರುವ ಮೆಸೇಜ್ ಒಂದೆರಡಲ್ಲ, ಡೇಟಿಂಗ್ ಆಪ್‌ನಲ್ಲಿ ತನಗೆ ಪರಿಚಯವಾದ ಯುವಕನೋರ್ವನಿಗೆ ಮಹಿಳೆಯೊಬ್ಬಳು ಬರೋಬ್ಬರಿ 1 ಲಕ್ಷದ 59 ಸಾವಿರ ಮೆಸೇಜ್‌ಗಳನ್ನು ಮಾಡಿದ್ದಾಳೆ. ಇದೇ ಕಾರಣಕ್ಕೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಿಚಾರದ ಪೋಸ್ಟ್‌ಗಳು ಈಗ ವೈರಲ್ ಆಗುತ್ತಿದ್ದು, ನೆಟ್ಟಿಗನೊಬ್ಬ ಆಕೆಗೆ ತನ್ನ ನಂಬರ್ ನೀಡುವಂತೆ ಕಾಮೆಂಟ್ ಮಾಡಿದ್ದಾನೆ.ಅಯ್ಯೋ ನಾನೇ ಸಂದೇಶ ಕಳುಹಿಸಿದರು ನನಗೆ ಒಂದೇ ಒಂದು ಮೆಸೇಜ್ ಬರ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಪ್ರೀತಿ ನನಗೆ ಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು 2019ರಲ್ಲಿ ಅಮೆರಿಕಾದ ಅರಿಜೋನಾದಲ್ಲಿ. ಇಲ್ಲಿನ ಮಹಿಳೆಯೊಬ್ಬಳು ತಾನು ಡೇಟಿಂಗ್ ಆಪ್‌ನಲ್ಲಿ ಭೇಟಿಯಾದ ವ್ಯಕ್ತಿಯೊಬ್ಬನಿಗೆ 159,000 ಸಂದೇಶಗಳನ್ನು ಕಳುಹಿಸಿದ್ದಳು. ಕೆಲವು ಸಂದೇಶಗಳು ಮನವಿಗಳಾಗಿದ್ದರೆ, ಮತ್ತೆ ಕೆಲವು ಅಪಾಯಕಾರಿಯಾಗಿ ಬೆದರಿಕೆಯೊಡ್ಡುವ ಸಂದೇಶಗಳಾಗಿದ್ದವು ಎಂದು ಪೊಲೀಸರು ಹೇಳಿದ್ದರು.
ಅರಿಜೋನಾ ಗಣರಾಜ್ಯವು ಪಡೆದ ದಾಖಲೆಗಳ ಪ್ರಕಾರ, ಜಾಕ್ವೆಲಿನ್ ಅಡೆಸ್ ಎಂಬ ಸ್ವಯಂ ಉದ್ಯೋಗ ನಡೆಸುತ್ತಿದ್ದ ಸೌಂದರ್ಯಶಾಸ್ತ್ರಜ್ಞೆಯೊಬ್ಬಳು ವ್ಯಕ್ತಿಯೊಬ್ಬನಿಗೆ ಕೇವಲ ಹತ್ತು ತಿಂಗಳ ಅವಧಿಯಲ್ಲಿ ಸಂದೇಶಗಳ ಸುರಿಮಳೆಯನ್ನು ಕಳುಹಿಸಿದ್ದಳು.
ಸೌಂದರ್ಯ ತಜ್ಞೆ ಜಾಕ್ವೆಲಿನ್ ಅರಿಜೋನಾ ಮೂಲದ ಚರ್ಮದ ಆರೈಕೆ ಕಂಪನಿಯ ಸಿಇಒ ಆಗಿದ್ದ ವ್ಯಕ್ತಿಯನ್ನು ಡೇಟಿಂಗ್ ಆಪ್ ಲಕ್ಸಿ ಮೂಲಕ ಭೇಟಿಯಾಗಿದ್ದರು. ಇದು ನಿರ್ದಿಷ್ಟವಾಗಿ ಶ್ರೀಮಂತ ವ್ಯಕ್ತಿಗಳಿಗೆ ಸೇವೆ ಸಲ್ಲಿಸುವ ಡೇಟಿಂಗ್ ವೆಬ್‌ಸೈಟ್ ಆಗಿತ್ತು. ಈ ವೆಬ್‌ಸೈಟ್‌ನಲ್ಲಿ ಇಬ್ಬರು ಸಕ್ರಿಯ ಸದಸ್ಯರಲ್ಲಿ ಒಬ್ಬರು ವರ್ಷಕ್ಕೆ $500,000 ಕ್ಕಿಂತ ಹೆಚ್ಚು ಗಳಿಕೆ ಮಾಡುವಂತಹ ಶ್ರೀಮಂತರೇ ಇರುತ್ತಿದ್ದರು.
2017ರಲ್ಲಿ ಈ ವೆಬ್‌ಸೈಟ್ ಮೂಲಕ ಜಾಕ್ವೆಲಿನ್‌ಗೆ ಒಬ್ಬ ಪರಿಚವಾಗಿದ್ದಾನೆ. ಇಬ್ಬರಿಗೂ ಪರಸ್ಪರ ಮ್ಯಾಚ್ ಆಗಿದ್ದು, ಕೆಲವು ದಿನಗಳ ಕಾಲ ಮಾತುಕತೆ ನಡೆಸಿ ಇವರು ಡೇಟ್‌ಗೆ ಹೋಗಿದ್ದರು. ಇದಾದ ನಂತರ ಆ ವ್ಯಕ್ತಿ ಜಾಕ್ವೆಲಿನ್‌ನನ್ನು ಮತ್ತೆ ನೋಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾನೆ. ಇದರಿಂದ ಧೃತಿಗೆಟ್ಟ ಜಾಕ್ವೆಲಿನ್ ಆತನಿಗೆ ನಿರಂತರ ಸಂದೇಶ ಕಳುಹಿಸುವ ಮೂಲಕ ಸಂದೇಶ ಕಳುಹಿಸಿಯೇ ಕಿರುಕುಳ ನೀಡಲು ಶುರು ಮಾಡಿದ್ದಾಳೆ.
ಬರೀ ಸಂದೇಶ ಕಳುಹಿಸಿದ್ದು ಮಾತ್ರವಲ್ಲ 2017ರ ಜುಲೈನಲ್ಲಿ ಈಕೆ ಆತನ ಮನೆಯ ಮುಂದೆ ನಿಂತಿದ್ದಳು. ಇದನ್ನು ನೋಡಿ ಆತ ಪೊಲೀಸರಿಗೆ ಕರೆ ಮಾಡಿದ್ದ. ನಂತರ ಆಕೆಯನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಆದರೆ ಆಕೆಯ ವಿರುದ್ಧ ಯಾವುದೇ ಆರೋಪ ಹೊರಿಸಲಾಗಿರಲಿಲ್ಲ.
ಆದರೆ ಇದಾದ ಸ್ವಲ್ಪ ಸಮಯದ ನಂತರ ಜಾಕ್ವೆಲಿನ್ ಆ ವ್ಯಕ್ತಿಗೆ ಕಳುಹಿಸಿದ ಪಠ್ಯ ಸಂದೇಶಗಳು ಹೆಚ್ಚು ಬೆದರಿಕೆಯಿಂದ ಕೂಡಿದ್ದವು ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ.
ಓಹ್, ನಿನ್ನ ರಕ್ತದಿಂದ ನಾನು ಏನು ಮಾಡಲಿ! ನನಗೆ ಅದರಲ್ಲಿ ಸ್ನಾನ ಮಾಡಬೇಕು, ನಾನು ನಿನ್ನ ಮೂತ್ರಪಿಂಡಗಳಿಂದ ಸುಶಿ(ಒಂದು ರೀತಿಯ ಆಹಾರ) ಮತ್ತು ನಿನ್ನ ಕೈ ಮೂಳೆಗಳಿಂದ ಚಾಪ್‌ಸ್ಟಿಕ್‌ಗಳನ್ನು ತಯಾರಿಸುತ್ತೇನೆ ಹೀಗೆ ಆಕೆ ಸಂದೇಶಗಳನ್ನು ಕಳುಹಿಸಿದ್ದಳು.
2018ರಲ್ಲೂ ಆಕೆ ತನ್ನ ಕೃತ್ಯವನ್ನು ಮುಂದುವರೆಸಿದ್ದಳು. 2018ರಲ್ಲಿ ಆತ ದೇಶದಿಂದ ಹೊರಗಿದ್ದಾಗ ಆಕೆ ಆತನ ಮನೆಗೆ ನುಗ್ಗುವ ಯತ್ನ ಮಾಡಿದ್ದಳು.
ಆದರೆ ಗೃಹ ಭದ್ರತಾ ವ್ಯವಸ್ಥೆಗಾಗಿ ಇಟ್ಟ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆಕೆ ಆತನ ಮನೆಗೆ ನುಗ್ಗಿ ಸ್ನಾನ ಮಾಡುತ್ತಿರುವುದನ್ನು ತೋರಿಸಿದಾಗ ಆ ಯುವಕ ಪೊಲೀಸರಿಗೆ ಕರೆ ಮಾಡಿದ. ಹೀಗಾಗಿ ನಂತರ ಆಕೆಯನ್ನು ಪೊಲೀಸರು ಬಂಧಿಸಿದ್ದರು. ನಂತರ ಆಕೆಯ ಕಾರಿನ ಸೀಟಿನಲ್ಲಿ ಕಸಾಯಿಖಾನೆಯಲ್ಲಿ ಬಳಸಲಾಗುವ ಚಾಕು ಇರುವುದನ್ನು ಪೊಲೀಸರು ಗಮನಿಸಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರಬೇಕೆಂದು ಶಂಕಿಸಿದರು ಅಲ್ಲದೇ ಆಕೆಯನ್ನು ಬಂಧಿಸಿದ್ದರು.
