Asianet Suvarna News Asianet Suvarna News

ವಿಷವನ್ನೇ ಬಿತ್ತುವಂಥ ಇಂಥವರೊಂದಿಗೆ ಒಡನಾಟವಿದ್ದರೆ ನಿಲ್ಲಿಸಿದರೆ ನಿಮಗೇ ಒಳ್ಳೇದು!

ಇತರರ ಯಾವುದೋ ವರ್ತನೆ, ಸ್ವಭಾವ ನಮ್ಮನ್ನು ಕುಗ್ಗಿಸುತ್ತದೆ. ಜನರಲ್ಲಿರುವ ಹಲವು ರೀತಿಯ ನಕಾರಾತ್ಮಕ ಭಾವನೆಗಳು ನಮ್ಮನ್ನು ಹಿಂಸೆಗೆ ಗುರಿಪಡಿಸುತ್ತವೆ. ಅಂಥವರಿಂದ ದೂರ ಇರುವುದೇ ಕ್ಷೇಮ. ಆದರೆ, ಯಾವೆಲ್ಲ ಭಾವನೆಗಳನ್ನು ಹೊಂದಿರುವವರಿಂದ ನಮಗೆ ಹಿಂಸೆ ಎನಿಸುತ್ತದೆ ಗೊತ್ತಾ? 
 

Someone displays these toxic traits you should keep away from them sum
Author
First Published Sep 15, 2023, 5:21 PM IST

ಯಾವುದಾದರೂ ಸ್ನೇಹಿತರ ಜತೆಗೆ ಸ್ವಲ್ಪ ಹೊತ್ತು ಒಡನಾಡಿದ ಬಳಿಕ ಮನಸ್ಸು ಮುದುಡಿದಂತೆ ಆಗುತ್ತದೆಯೇ? ಸಾಕಪ್ಪಾ ಸಾಕು ಎನ್ನುವಂತಾಗುತ್ತದೆಯೇ? ಆದರೆ, ಯಾಕೆಂದು ಸರಿಯಾಗಿ ಅರ್ಥವಾಗದೇ ಕಿರಿಕಿರಿ ಉಂಟಾಗುತ್ತದೆಯೇ? ಹಾಗಿದ್ದರೆ ನೀವು ಯಾರೊಂದಿಗೆ ಒಡನಾಡಿದ್ದೀರೋ ಅವರು ಯಾವುದಾದರೂ ರೀತಿಯಲ್ಲಿ ನಕಾರಾತ್ಮಕ ಧೋರಣೆ ಹೊಂದಿರುವವರಾಗಿರುತ್ತಾರೆ. ನೆನಪಿಸಿಕೊಳ್ಳಿ, ಅವರ ಯಾವುದೋ ನಿರ್ದಿಷ್ಟ ಗುಣ ನಿಮ್ಮನ್ನು ತೊಂದರೆಗೆ ಗುರಿ ಮಾಡುತ್ತದೆ. ನಕಾರಾತ್ಮಕತೆ ಹಲವು ರೀತಿಯಲ್ಲಿ ನಮ್ಮನ್ನು ಕಾಡಬಹುದು. ಕೆಲವು ಜನರ ಯಾವುದೋ ಅಭ್ಯಾಸ, ನಡತೆ, ವರ್ತನೆ, ಮಾನಸಿಕ ಸ್ಥಿತಿಗತಿ ನಮಗೆ ಆಗಿಬರುವುದಿಲ್ಲ. ನಕಾರಾತ್ಮಕತೆ ಎಂದರೆ, ನಿರ್ದಿಷ್ಟವಾಗಿ ಒಂದೇ ರೀತಿಯಲ್ಲಿರುವುದಿಲ್ಲ, ಹಲವು ಮಗ್ಗಲುಗಳಲ್ಲಿ ಕಂಡುಬರಬಹುದು. ಅಂಥವುಗಳನ್ನು ಹೊಂದಿರುವ ಜನ ತಮ್ಮ ಸುತ್ತ ವಿಷ ಬಿತ್ತಿದಂತೆ ಮಾಡುತ್ತಾರೆ. ಜನರಲ್ಲಿರುವ ಯಾವೆಲ್ಲ ರೀತಿಯ ಭಾವನೆಗಳು ನಮ್ಮೊಳಗೆ ಹಿಂಸೆ ಮೂಡಿಸುತ್ತವೆ ಎನ್ನುವುದನ್ನು ಅರಿತುಕೊಳ್ಳಿ.

•    ಆತ್ಮರತಿ (Narcissism)
ಇವರ ಸಮೀಪವರ್ತಿಗಳು ಆತ್ಮರತಿ ಧೋರಣೆಯಿಂದ ಹೈರಾಣಾಗಿಬಿಡುತ್ತಾರೆ. ಏಕೆಂದರೆ, ಇವರಿಗೆ ಸಿಕ್ಕಾಪಟ್ಟೆ ಪ್ರಾಮುಖ್ಯತೆ (Importance) ನೀಡಬೇಕಾಗಿರುತ್ತದೆ. ಇವರು ತಮ್ಮ ಬಗ್ಗೆ ಅತ್ಯಧಿಕ ಗಮನ ಬಯಸುತ್ತಾರೆ. ಇತರರ ಬಗ್ಗೆ ಸಹಾನುಭೂತಿ (Empathy) ಹೊಂದಿರುವುದಿಲ್ಲ. ಹೀಗಾಗಿ, ಬೇರೊಬ್ಬರ ಭಾವನೆಗಳನ್ನು ಅರ್ಥೈಸಿಕೊಳ್ಳುವುದು, ಅಗತ್ಯಗಳನ್ನು ಅರಿಯುವುದು ಇವರಿಗೆ ಸಾಧ್ಯವಾಗುವುದಿಲ್ಲ. ಇಂಥವರೊಂದಿಗೆ ಒಡನಾಡುವುದರಿಂದ ಮನಸ್ಸು ಕುಗ್ಗುತ್ತದೆ. ದುರಂತವೆಂದರೆ, ಈ ಗುಣ ಸುಲಭವಾಗಿ ಬಹಿರಂಗವಾಗುವುದಿಲ್ಲ. ತಮ್ಮ ವರ್ಚಸ್ಸಿನಿಂದ ಸೆಳೆಯುವ ಈ ಜನರ ಅಸಲಿತನ ಸಂಬಂಧವೇರ್ಪಟ್ಟ (Relation) ನಂತರವೇ ಗೊತ್ತಾಗುತ್ತದೆ.

ಜತೆಗಿದ್ದೂ ನಿಮ್ಮ ಯಶಸ್ಸನ್ನು ಸಹಿಸದ ಮಂದಿ ಹೇಗೆಲ್ಲ ವರ್ತಿಸುತ್ತಾರೆ! ಬೆನ್ನಿಗೆ ಚೂರಿಗೆ ಹಾಕೋರು ಇವರು!

•    ಅಭದ್ರತೆ (Insecurity)
ಇದೊಂದು ರೀತಿಯ ವಿಚಿತ್ರ ಭಾವನೆಯಷ್ಟೆ (Feel) ಎನ್ನಬೇಡಿ. ಅಭದ್ರತೆಯಿಂದ ನರಳುವ ಜನ ಅತ್ಯಂತ ವಿಷಕಾರಿ (Toxic) ವೃತ್ತ ಸೃಷ್ಟಿಸುತ್ತಾರೆ. ಪದೇ ಪದೆ ದೃಢೀಕರಣ ಬೇಕಾಗಿರುತ್ತದೆ. ಇವರೊಂದಿಗಿನ ಒಡನಾಟ ಕೊನೆಕೊನೆಗೆ ಹೇಗಾಗುತ್ತದೆ ಎಂದರೆ, ಸಂಬಂಧಕ್ಕಿಂತ ಅಥವಾ ಸ್ನೇಹಕ್ಕಿಂತ ಥೆರಪಿಸ್ಟ್‌ ಗಳಾಗಿ ಬದಲಾವಣೆ ಹೊಂದಬೇಕಾಗುತ್ತದೆ. ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಇವರು ಇತರರನ್ನು ಕೆಟ್ಟದಾಗಿ ಟೀಕಿಸುವ ಅಭ್ಯಾಸವನ್ನೂ ಬೆಳೆಸಿಕೊಂಡಿರುತ್ತಾರೆ. ಇದನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಜತೆಗೆ, ತಮ್ಮ ಸಮಸ್ಯೆಯನ್ನು ನಿಮ್ಮದೆಂದು ಬಿಂಬಿಸುವ ಕಲೆ ಇವರಿಗೆ ಕರಗತವಾಗಿರುತ್ತದೆ. 

•    ಸ್ಪರ್ಧಾತ್ಮಕತೆ (Competitiveness)
ಈ ಗುಣ ಆರೋಗ್ಯಕರವಾಗಿದ್ದಾಗ ಚೆಂದ. ಆದರೆ, ಮಿತಿ ಮೀರಿದರೆ ವಿನೋದ, ಖುಷಿಯೆಲ್ಲ (Happiness) ಖಾಲಿಯಾಗುತ್ತದೆ. ಯಾರಾದರೂ ಸ್ನೇಹಿತರು ನಿಮ್ಮ ಜತೆಗಿದ್ದೇ ನಿಮ್ಮ ಯಶಸ್ಸನ್ನು ಸಹಿಸಿಕೊಳ್ಳುವುದಿಲ್ಲ, ಸದಾ ಸ್ಪರ್ಧೆಗೆ ಬಿದ್ದವರಂತೆ ವರ್ತಿಸುತ್ತಾರೆ ಎಂದರೆ ಅವರೊಂದಿಗೆ ಸುಲಭವಾಗಿ ಒಡನಾಡಲು ಸಾಧ್ಯವೇ? ಅತಿಯಾಗಿ ಸ್ಪರ್ಧಾತ್ಮಕ ಧೋರಣೆ ಹೊಂದಿರುವ ಜನ ತಮ್ಮವರ ಯಶಸ್ಸನ್ನು ಸಹಿಸಿಕೊಳ್ಳುವುದಿಲ್ಲ. ಅವರು ಬೇಕೆಂದಾದರೆ ನೀವು ಅವರೆದುರು ಯಾವತ್ತೂ ಸೋಲುತ್ತಲೇ ಇರಬೇಕು. 

•    ನಿರಾಶಾವಾದಿಗಳು (Pessimism)
ನಾವೆಲ್ಲರೂ ಜೀವನದಲ್ಲಿ ಏಳುಬೀಳುಗಳನ್ನು ಅನುಭವಿಸುತ್ತೇವೆ. ಆದರೂ ಅವುಗಳಲ್ಲೇ ಚೈತನ್ಯ (Energy) ಕಂಡು ಪುಟಿದೇಳಲು ಯತ್ನಿಸುತ್ತೇವೆ. ಆದರೆ, ನೀವು ಎಂದಾದರೂ ಕುಗ್ಗಿದ ಸಮಯದಲ್ಲಿ ನಿರಾಶಾವಾದಿಗಳ ಸಹವಾಸಕ್ಕೆ ಬಂದಿರಿ ಎಂದಾದರೆ ಜೀವನ (Life) ಅಲ್ಲಿಗೇ ಮುಗಿಯಬಲ್ಲದು! ಏಕೆಂದರೆ, ಅವರು ತಮ್ಮ ನಿರಾಶಾವಾದವನ್ನು ಅತ್ಯಂತ ಚೆನ್ನಾಗಿ, ವಿವಿಧ ರೀತಿಯ ಲೆಕ್ಕಾಚಾರಗಳೊಂದಿಗೆ ಬೇರೊಬ್ಬರಲ್ಲೂ ತುಂಬಿಬಿಡುತ್ತಾರೆ. ಯಾವುದಾದರೂ ವಿಚಾರದಲ್ಲಿ ಎಚ್ಚರಿಕೆ ನೀಡುವುದು ಬೇರೆ, ನಕಾರಾತ್ಮಕತೆಯನ್ನೇ (Negativity) ಬಿಂಬಿಸುವುದು ಬೇರೆ. 

ಮುರಿದುಬಿದ್ದ ಸಂಬಂಧದಲ್ಲಿ ನಂಬಿಕೆ ಪುನರನಿರ್ಮಾಣ ಮಾಡಲು ಇಲ್ಲಿವೆ ಮಾರ್ಗಗಳು!

•    ಪ್ರತೀಕಾರದ (Vindictive) ಗುಣ
ಕೆಲವರು ಮಾತುಮಾತಿಗೂ “ಅವರು ತಮಗೆ ಹಾಗೆ ಮಾಡಿದರು, ಹೀಗೆ ಮಾಡಿದರು, ಸೇಡು ತೀರಿಸಿಕೊಳ್ಳದೆ ಬಿಡೋದಿಲ್ಲʼ ಎನ್ನುವಂತಹ ಮಾತುಗಳನ್ನಾಡುತ್ತಿರುತ್ತಾರೆ. ಹಳೆಯ ತಪ್ಪುಗಳನ್ನು ಕ್ಷಮಿಸಿ, ಮುಂದೆ ಸಾಗುವುದು ಅವರಿಗೆ ಸಾಧ್ಯವಾಗುವುದಿಲ್ಲ. ಪದೇ ಪದೆ ಇತರರನ್ನು ಸಹ ಅವರು ಹಿಂದಿನ ಘಟನೆಗೇ ಎಳೆಯುತ್ತಿರುತ್ತಾರೆ. ಇವರೊಂದಿಗಿನ ಒಡನಾಟ ಭಾರೀ ಅಪಾಯಕಾರಿ. ಉದ್ದೇಶರಹಿತವಾಗಿ ಆಡಿದ ಸಣ್ಣದೊಂದು ಮಾತನ್ನೂ ನೆನಪಿನಲ್ಲಿ ಇಟ್ಟುಕೊಂಡು ಮತ್ತೊಮ್ಮೆ ಯಾವಾಗಲಾದರೂ ಅದಕ್ಕೆ ಪ್ರತಿಯಾಗಿ ಆಕ್ರಮಣಕಾರಿ (Aggressive) ಹೇಳಿಕೆ ನೀಡುತ್ತಾರೆ.

•    ಭಾವನಾತ್ಮಕ ಏರಿಳಿತ (Emotional Volatility)
ಅಸಲಿಗೆ ಇದೊಂದು ಸಮಸ್ಯೆಯೂ ಆಗಿದ್ದಿರಬಹುದು. ಅತಿಯಾಗಿ ಭಾವನಾತ್ಮಕ ಏರಿಳಿತ ಹೊಂದಿರುವ ಜನ ಪ್ರತಿಕ್ಷಣವೂ ಇತರರು  ತಮ್ಮ ಬಗ್ಗೆ ಯೋಚನೆ ಮಾಡುವಂತೆ ವರ್ತಿಸುತ್ತಾರೆ. ಖುಷಿಯಾಗಿದ್ದವರು ಏಕಾಏಕಿ ದುಃಖಕ್ಕೆ ತುತ್ತಾಗುತ್ತಾರೆ. ಹಾಗೆಯೇ ತಾಳ್ಮೆ (Tolerance) ಇಲ್ಲದವರು, ಅಪನಂಬಿಕೆಯ (Distrust) ಸಮಸ್ಯೆ ಹೊಂದಿರುವವರು ತಮ್ಮವರನ್ನು ಗೋಳಾಡಿಸಿಬಿಡುತ್ತಾರೆ. 

Follow Us:
Download App:
  • android
  • ios