Asianet Suvarna News Asianet Suvarna News

ಮಾಡಿದ ತಪ್ಪಿಗೆ ಕ್ಷಮೆ ಕೇಳಿಬಿಟ್ರೆ ಸಾಕಾ? ಮತ್ತೇನು ಮಾಡಬೇಕು?

ತಪ್ಪು ಮಾಡಿದ ಬಳಿಕ ಕ್ಷಮೆ ಕೇಳುವುದು ಸಹಜ. ಆದರೆ, ಮಗದೊಮ್ಮೆ ಅಂಥದ್ದೇ ತಪ್ಪು ಮಾಡುತ್ತ ಸಾಗಿದರೆ ಕ್ಷಮೆಗೂ ಅರ್ಥವಿಲ್ಲ, ಸಂಬಂಧಗಳೂ ಹದಗೆಡುತ್ತವೆ. ಸಂಬಂಧದಲ್ಲಿ ಪದೇ ಪದೆ ತಪ್ಪುಗಳನ್ನು ಮಾಡುವುದು ನಿಮ್ಮ ಅಭ್ಯಾಸವಾಗಿದ್ದರೆ ಕೇವಲ ಕ್ಷಮೆ ಕೇಳುವುದರಿಂದ ಬದಲಾವಣೆ ಸಾಧ್ಯವಿಲ್ಲ. ಅದಕ್ಕಾಗಿ ಹೀಗ್ಮಾಡಿ.
 

Some time saying sorry is not enough personality tips here sum
Author
First Published Sep 6, 2023, 3:27 PM IST

ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ತಪ್ಪು ಮಾಡದವನು ಹೊಸತನ್ನು ಕಲಿಯಲು ಸಾಧ್ಯವಿಲ್ಲ. ಇದು ಜೀವನವಿಡೀ ನಡೆಯುವ ಪ್ರಕ್ರಿಯೆ. ಆದರೆ, ಬೆಳೆದು ವಯಸ್ಕರಾದ ಬಳಿಕ ನಮ್ಮ ವಿವೇಚನೆಯಿಂದ ತಪ್ಪುಗಳನ್ನು ಮಾಡುವುದರಿಂದ ಸಾಧ್ಯವಾದಷ್ಟೂ ದೂರ ಉಳಿಯುತ್ತೇವೆ. ಆದರೂ ತಪ್ಪುಗಳು ಸಂಭವಿಸುತ್ತಲೇ ಇರುತ್ತವೆ ಎನ್ನುವುದು ಬೇರೆ ಮಾತು. ಹಾಗೆ ನಮ್ಮಿಂದಾಗುವ ತಪ್ಪುಗಳಿಗೆ ಸಾರಿ ಕೇಳುವ ಹೊರತಾಗಿ ಬೇರೆ ಏನು ಮಾಡುತ್ತೇವೆ? ಬಹುಶಃ ಏನೂ ಇಲ್ಲ. ಎಷ್ಟೋ ಬಾರಿ ಗಂಭೀರ ತಪ್ಪುಗಳಾದಾಗಲೂ ಅದರ ಬಗ್ಗೆ ಪಶ್ಚಾತ್ತಾಪ ಪಟ್ಟು, ಸಾರಿ ಕೇಳುವ ಹೊರತಾಗಿ ಬೇರೆ ಏನನ್ನೂ ಮಾಡುವುದಿಲ್ಲ. ಸಂಬಂಧಗಳಲ್ಲಿ ತಪ್ಪುಗಳನ್ನು ಮಾಡಿದಾಗ ಸಾರಿ ಕೇಳುವ ಜತೆಗೇ, ಅವು ಮರುಕಳಿಸದಂತೆ ಬದ್ಧರಾಗಬೇಕಾಗುತ್ತದೆ. ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಪದೇ ಪದೆ ತಪ್ಪುಗಳನ್ನು ಮಾಡುವುದು ಸರಿಯಲ್ಲ. ಹೀಗಾಗಿ, ಎಲ್ಲ ತಪ್ಪುಗಳನ್ನೂ ಒಂದೇ ತಕ್ಕಡಿಯಲ್ಲಿಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ತಪ್ಪುಗಳು ವಿಭಿನ್ನವಾಗಿರುತ್ತವೆ. ಹಾಗೆಯೇ, ಅವು ನಮ್ಮ ಮನಸ್ಥಿತಿಗೆ ಸಂಬಂಧಿಸಿಯೂ ಇರಬಹುದು. ಹೀಗಾಗಿ, ಮೂಲ ಮನಸ್ಥಿತಿಯನ್ನು ಬದಲಿಸಿಕೊಳ್ಳಲು ಹೆಚ್ಚಿನ ಯತ್ನ ಬೇಕಾಗುತ್ತದೆ.

•    ನಂಬಿಕೆಗೆ ದ್ರೋಹ (Betrayal)
ನಂಬಿಕೆ (Trust) ಒಮ್ಮೆ ಕಳೆದುಹೋಯಿತೆಂದರೆ ಮತ್ತೆ ಸಿಗುವುದು ಕಷ್ಟ. ಆದರೂ ಮನಃಪೂರ್ವಕವಾಗಿ ಕ್ಷಮೆ (Forgive) ಕೇಳುವುದರಿಂದ ನಮ್ಮವರು ಆ ತಪ್ಪನ್ನು ಕ್ಷಮಿಸಬಹುದು. ಆದರೆ, ನಿಜವಾಗಿ ನೀವು ಬದಲಾಗಬೇಕು, ಮತ್ತೆ ನಂಬಿಕೆಗೆ ದ್ರೋಹ ಮಾಡಬಾರದು ಎಂದರೆ ಕೇವಲ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ. ಸತತವಾಗಿ ವಿಶ್ವಾಸದಿಂದ ಇರಬೇಕಾಗುತ್ತದೆ. ಮತ್ತೊಬ್ಬರು ನಿಮ್ಮ ಬಗ್ಗೆ ವಿಶ್ವಾಸ ಹೊಂದಲು ಸಮಯ ನೀಡಬೇಕಾಗುತ್ತದೆ. 

ಮಕ್ಕಳನ್ನು ಮುದ್ದು ಮಾಡದೇ ಇರ್ಬೇಡಿ, ಆದರೆ, ಸಂಸ್ಕಾರ ಕಲಿಸೋದ ಮರೀಬೇಡಿ!

•    ಪದೇ ಪದೆ ನೋವು (Pain)
ನೀವು ಯಾರಿಗಾದರೂ ಪದೇ ಪದೆ ನೋವು ನೀಡಿದ್ದರೆ ಅದನ್ನು ಸುಲಭವಾಗಿ ಅಳಿಸಲು ಸಾಧ್ಯವಿಲ್ಲ. ಚಿಕ್ಕದ್ದಾದರೂ ಸರಿ, ಪದೇ ಪದೆ ತಪ್ಪು (Mistake) ಮಾಡಿದಾಗ ನಿಮ್ಮನ್ನು ಅವರು ನಂಬುವುದಿಲ್ಲ. ಸಂಗಾತಿಗೆ ಮೋಸ ಮಾಡಿದ್ದರೆ ಅವರ ಹೃದಯವೇ ಚೂರಾಗಿರುತ್ತದೆ. ಅವರಿಗೆ ನಿಮ್ಮ ಸಂಬಂಧ (Relation) ಅರ್ಥಹೀನವೆನಿಸುತ್ತದೆ. ಅವರನ್ನು ಉಳಿಸಿಕೊಳ್ಳಬೇಕು ಎನ್ನುವ ಭಾವನೆ ಇದ್ದರೆ ಪ್ರಯತ್ನಪಟ್ಟಾದರೂ ನಿಮ್ಮ ವರ್ತನೆಯನ್ನು (Behavior) ಬದಲಿಸಿಕೊಳ್ಳಬೇಕಾಗುತ್ತದೆ.

•    ಭಾವನಾತ್ಮಕ ನಿಂದನೆ (Emotional Abuse)
ಭಾವನಾತ್ಮಕವಾಗಿ ಯಾರನ್ನಾದರೂ ನಿಂದಿಸುವುದರಿಂದ ಅವರು ಮಾನಸಿಕವಾಗಿ ಭಾರೀ ಸಮಸ್ಯೆಗೆ ಸಿಲುಕಿರುತ್ತಾರೆ. ಕೇವಲ ಕ್ಷಮೆ ಕೇಳುವುದರಿಂದ ಸಮಸ್ಯೆ ಸುಧಾರಣೆಯಾಗುವುದಿಲ್ಲ. ನಿಮ್ಮದೇ ಸುಧಾರಣೆಗೆ ನೀವು ಬದ್ಧರಾಗಿದ್ದರೆ ವೃತ್ತಿಪರ ಆತ್ಮಸಮಾಲೋಚಕರು ಅಥವಾ ಮನೋವೈದ್ಯರ ಸಹಕಾರ ಪಡೆದುಕೊಂಡು ಅದರಂತೆ ಕ್ರಮ ಕೈಗೊಳ್ಳಿ. ಏಕೆಂದರೆ, ಮತ್ತೊಬ್ಬರನ್ನು ನಿಂದಿಸುವುದು ನಿಮ್ಮಲ್ಲಿರುವ ಅನೇಕ ಸಮಸ್ಯೆಗಳನ್ನು ಸಹ ವ್ಯಕ್ತಪಡಿಸುತ್ತದೆ.

•    ದೈಹಿಕ ಹಲ್ಲೆ (Physical Harm)
ದೈಹಿಕವಾಗಿ ಹಲ್ಲೆ ಮಾಡುವುದು ತೀರ ಅತಿರೇಕದ ವರ್ತನೆ. ಆದರೆ, ಇದು ಸಮಾಜದಲ್ಲಿ ಸಾಕಷ್ಟು ವ್ಯಾಪಕವಾಗಿದೆ. ಅನಕ್ಷರಸ್ಥರಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು, ಶಿಕ್ಷಿತರಲ್ಲೂ ಸಾಕಷ್ಟು ಪ್ರಮಾಣದಲ್ಲಿದೆ. ನೀವೂ ಯಾರ ಮೇಲಾದರೂ ದೈಹಿಕ ಹಲ್ಲೆ ನಡೆಸಿದ್ದು, ಪಶ್ಚಾತ್ತಾಪವಾಗಿದ್ದರೆ, ಮತ್ತೊಬ್ಬರು ನಿಮ್ಮಿಂದ ಯಾವ ಬದಲಾವಣೆ (Change) ನಿರೀಕ್ಷಿಸುತ್ತಾರೆ ಎನ್ನುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವರ ಬೇಡಿಕೆ ನ್ಯಾಯಬದ್ಧವಾಗಿದ್ದರೆ ನೀವು ಬದಲಾಗಿ, ಅವರ ಬೇಡಿಕೆ ಅವಾಸ್ತವವಾಗಿದ್ದರೆ ಅವರನ್ನು ಕನ್ವಿನ್ಸ್ ಮಾಡಿ. ಕೋಪವನ್ನು (Anger) ನಿರ್ವಹಣೆ ಮಾಡುವ ಕುರಿತು ಅರಿತುಕೊಳ್ಳಿ. ಥೆರಪಿಗೆ ಮೊರೆ ಹೋಗಿ. ಮತ್ತೊಮ್ಮೆ ಇಂಥ ಕೃತ್ಯ ಮಾಡುವುದಿಲ್ಲವೆಂದು ಪಣತೊಡಿ.

Personality Tips: ಮಕ್ಕಳು ದೊಡ್ಡೋರಾಗ್ತಾ ಇದಾರೆ ಅಂತಾದ್ರೆ ಈ ಕೆಲ್ಸಗಳನ್ನ ಕಲಿತ್ಕೊಳ್ಬೇಕು!

•    ಸಾರ್ವಜನಿಕವಾಗಿ ಅವಮಾನ (Humiliation)
ನಾಲ್ಕು ಜನರ ಎದುರು ಯಾರನ್ನಾದರೂ ಅವಮಾನಿಸಿದ್ದರೆ ಅದು ಸಹ ಕ್ಷಮೆಗೆ ಅರ್ಹವಲ್ಲ. ಈ ಧೋರಣೆಯನ್ನು ಮುಂದುವರಿಸುವುದಿಲ್ಲವೆಂದು ನಿರ್ಧರಿಸಿ. ಮಾತನಾಡುವ ಮುನ್ನ ಯೋಚಿಸಿ ಮಾತನಾಡುವುದನ್ನು ಅಭ್ಯಾಸ ಮಾಡಿ. ಈ ಎಲ್ಲ ಕೆಟ್ಟ ಅಭ್ಯಾಸಗಳಿಂದ ಸಂಬಂಧಗಳು ಹದಗೆಡುತ್ತವೆ, ಜೀವನದಲ್ಲಿ ಏಕಾಂಗಿಯಾಗುತ್ತೀರಿ.  

Follow Us:
Download App:
  • android
  • ios