Relationship Tips: ಕಿರಿಕಿರಿ ಮಾಡೋ ನೆಂಟರೊಂದಿಗೆ ಏಗೋದ್ ಹ್ಯಾಗೆ?
ಕಿರಿಕಿರಿ ನೆಂಟರ ಸಹವಾಸದಿಂದ ತಪ್ಪಿಸಿಕೊಳ್ಳುವುದು ಬಹುತೇಕ ಎಲ್ಲರ ಆಸೆ. ಆದರೆ, ಅದು ಸುಲಭವಲ್ಲ. ಹೀಗಾಗಿ ಅವರನ್ನು ಜಾಣತನದಿಂದ ನಿಭಾಯಿಸುವುದೇ ಒಳಿತು. ಅದಕ್ಕಾಗಿ ಕೆಲವು ಟ್ರಿಕ್ ಅನುಸರಿಸಬೇಕು.
ಅಳೆದು-ಸುರಿದು ನಿಮ್ಮನ್ನು ಒರೆಗೆ ಹಚ್ಚುವ ಕಣ್ಣುಗಳು, ನಿಮ್ಮ ಬದುಕಿನ ಬಗ್ಗೆ ಮುಗಿಯದ ಕುತೂಹಲ, ಅದಕ್ಕೆ ತಕ್ಕಂತೆ ಕೊನೆಯಿಲ್ಲದ ಪ್ರಶ್ನೆಗಳು, ಮನೆಗೆ ಬಂದರೂ ನಿಮ್ಮ ಪ್ರತಿ ನಡೆನುಡಿಯನ್ನು ಪರಿಶೀಲಿಸುವ ನೋಟ...ಯಾರ ಬಗ್ಗೆ ಈ ಮಾತೆಂದು ನಿಮಗೆ ಅಂದಾಜಾಗಿರಬೇಕು. ಅವರೇ ನೆಂಟರು (Relatives).
ನೆಂಟರಲ್ಲಿ ಎಲ್ಲರೂ ಸಮೀಪದ ಬಂಧುಗಳೇ ಆಗಿರುವುದಿಲ್ಲ. ಎಲ್ಲರೂ ಆತ್ಮೀಯವಾಗಿರುವುದಿಲ್ಲ. ಕೇವಲ ಕಿರಿಕಿರಿ (Annoy), ಗಾಸಿಪ್ (Gossip) ಗಾಗಿಯೇ ಒಂದಿಷ್ಟು ನೆಂಟರು ಇದ್ದೇ ಇರುತ್ತಾರೆ. ಅವರನ್ನು ಎಷ್ಟೇ ಅವಾಯ್ಡ್ (Avoid) ಮಾಡಿದರೂ ಒಂದಲ್ಲ ಒಂದು ಬಾರಿ ಮುಖಾಮುಖಿಯಾಗುವ, ಅಕಸ್ಮಾತ್ತಾಗಿ ಮನೆಗೆ ಹೋಗುವ ಅಥವಾ ಕರೆಯುವ ಪ್ರಸಂಗ ಬಂದುಬಿಡುತ್ತದೆ. ಇತರರ ಬಗ್ಗೆ ಕುತೂಹಲವುಳ್ಳವರು ನೆಂಟರ ಮನೆಗಳಿಗೆ ಆಗಾಗ ಭೇಟಿ ನೀಡುತ್ತಾರೆ. ಅಂತಹ ಸಮಯದಲ್ಲಿ ಹೇಗೆ ಅವರ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬೇಕು ನೋಡಿ.
• ನಿಖರ ಉತ್ತರ (Exact Answer) ನೀಡುವ ತೊಂದರೆ ತೆಗೆದುಕೊಳ್ಳಬೇಡಿ!
ನಿಮ್ಮ ಕಿರಿಕಿರಿಯ ನೆಂಟರ್ಯಾರೋ ಮನೆಗೆ ಬಂದು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಪ್ರಾಮಾಣಿಕವಾಗಿ ಉತ್ತರ ಹೇಳಲು ಯತ್ನಿಸಬೇಡಿ. ಹೇಳುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ ಎನ್ನುವ ಸನ್ನಿವೇಶದಲ್ಲಿ ಸುಮ್ಮನೆ ತೇಲುವ ಉತ್ತರ ನೀಡಿಬಿಡಿ. ಅವರು ಇನ್ನೂ ಕೆದಕಿ ಕೆದಕಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಸುಮ್ಮನೆ ಕಿರುನಗುತ್ತ ಇದ್ದುಬಿಡಿ. ಕೆಲವು ಉತ್ತರಗಳು ಸ್ವಲ್ಪ ಒರಟಾಗಿದ್ದರೂ ಪರವಾಗಿಲ್ಲ. ಟಾಪಿಕ್ ಬದಲಿಸಲು ಯತ್ನಿಸಿ. ನೀವು ಸ್ವತಃ ಕಿರಿಕಿರಿಗೆ ಒಳಗಾಗಬೇಡಿ.
• ಮಾತನಾಡಬೇಕಾ (Speak)? ಸುಮ್ಮನಿರುವುದು (Silent) ಲೇಸಾ?
ನೆಂಟರೊಂದಿಗೆ ಯಾವಾಗ ಮಾತನಾಡಬೇಕು, ಯಾವಾಗ ಸುಮ್ಮನಿರಬೇಕು ಎನ್ನುವುದನ್ನು ಅರಿತುಕೊಳ್ಳಿ. ನೆಂಟಸ್ತಿಕೆಯ ಬಾಂಧವ್ಯದಿಂದ ಸುಮ್ಮನೆ ಮೂಗು ತೂರಿಸುವ ಜನರನ್ನು ಅವಾಯ್ಡ್ ಮಾಡಿ. ಆದರೆ, ಕೆಲವರು ನಿಜವಾಗಿಯೂ ನಿಮ್ಮ ಬಗ್ಗೆ ಕಾಳಜಿ ಹೊಂದಿರುತ್ತಾರೆ. ನಿಮ್ಮ ತಂದೆಯೋ, ತಾಯಿಯೋ ಅವರ ಪ್ರೀತಿಗೆ ಪಾತ್ರರಾಗಿರುತ್ತಾರೆ. ಹಾಗಾಗಿ ನಿಮ್ಮನ್ನೂ ಅವರು ಕಾಳಜಿಯಿಂದ ಕಾಣಬಹುದು. ಅಂಥವರನ್ನು ತೀರ ಕಡೆಗಣಿಸಬೇಡಿ. ಅವರೇನು ಹೇಳುತ್ತಿದ್ದಾರೆ, ಅವರ ಉದ್ದೇಶವೇನು ಎಂದು ಅರ್ಥ ಮಾಡಿಕೊಂಡು ಉತ್ತರ ಕೊಡಿ. ಆಗ ಉತ್ತರ ಕೊಡದೆ ಇರುವುದು ಸರಿಯಲ್ಲ. ಆದರೆ, ಕೆಲವರು ತಮ್ಮ ಹವ್ಯಾಸ ಬಲದಿಂದ ಕೇವಲ ಮಾಹಿತಿಗಾಗಿ ಪ್ರಶ್ನೆ ಕೇಳುತ್ತಿದ್ದರೆ ಅವುಗಳಿಗೆ ಉತ್ತರ ನೀಡಬೇಕೆಂದಿಲ್ಲ. ಅಂತಹ ಸಮಯದಲ್ಲಿ ನಗುತ್ತ, “ಹಾಗೇನಿಲ್ಲ’ ಎಂದೇನಾದರೂ ಹೇಳಿ ಸುಮ್ಮನಿದ್ದುಬಿಡಿ.
ಇದನ್ನೂ ಓದಿ: Unmarried ಜೋಡಿಗೆ ಗೊತ್ತಿರ್ಬೇಕು ಈ ಎಲ್ಲ ನಿಯಮ
• ಸ್ಮಾರ್ಟ್ (Smart) ಆಗಿ ಬಿಹೇವ್ (Behave) ಮಾಡಿ, ನೀವೂ ಪ್ರಶ್ನೆ ಕೇಳಿ!
ನಗುತ್ತ ತೇಲುವ ಉತ್ತರ ನೀಡಿದರೂ, ಅವಾಯ್ಡ್ ಮಾಡಿದರೂ ಕುತೂಹಲದ ಮೂಟೆಯಾಗಿರುವ ನಿಮ್ಮ ನೆಂಟರು ಇನ್ನೂ ಸುಮ್ಮನೆ ಇರದಿದ್ದರೆ ನೀವೂ ಸ್ಮಾರ್ಟ್ ಆಗಿ ವರ್ತಿಸಬೇಕು. ಅವರಿಗೆ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕು. ನಿಮಗೆ ಬೇಕಿರಲಿ, ಇಲ್ಲದಿರಲಿ. ಅವರ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಪ್ರತಿಯಾಗಿ ಪ್ರಶ್ನೆ ಕೇಳಿಬಿಡಿ. ಉದಾಹರಣೆಗೆ, “ನೀನೆಲ್ಲಿ ಈ ರೀತಿಯ ಡ್ರೆಸ್ ಖರೀದಿ ಮಾಡುವುದು?’ ಎನ್ನುವ ಪ್ರಶ್ನೆ ಕೇಳಿದರೆ ಪ್ರತಿಯಾಗಿ, “ನಿಮಗೆ ಎಲ್ಲಿ ಶಾಪಿಂಗ್ ಮಾಡುವುದು ಇಷ್ಟ? ಯಾವ ರೀತಿಯ ಬಟ್ಟೆ ಇಷ್ಟ?’ ಇತ್ಯಾದಿ ಅವರ ಟಾಪಿಕ್ ಗೇ ಸಂಬಂಧಿಸಿದ ಪ್ರಶ್ನೆ ಕೇಳಬಹುದು. ನೀವು ಒಂದೊಮ್ಮೆ ಅವರ ಪ್ರಶ್ನೆಗೆ ಸರಿಯಾದ ಉತ್ತರ ಹೇಳಿದಿರೋ ಅದಕ್ಕೆ ಹತ್ತಾರು ಸಲಹೆಗಳು ಬರಬಹುದು. ಅದರಿಂದ ಕಿರಿಕಿರಿಯೇ ಹೆಚ್ಚು.
• ಸಹಾಯ (Help) ಪಡೆದುಕೊಳ್ಳಿ
ನೆಂಟರ ಕಿರಿಕಿರಿ ಮುಂದುವರಿದರೆ ನಿಮ್ಮ ಪತಿಯೋ, ಮಕ್ಕಳೋ, ಸ್ನೇಹಿತರೋ, ಅಕ್ಕನೋ, ತಂಗಿಯೋ ಯಾರನ್ನಾದರೂ ಸಹಾಯ ಪಡೆದುಕೊಳ್ಳಿ. ಅವರಿಗೆ ಅಲ್ಲಿಯೇ ಇರುವಂತೆ ಹೇಳಿ.
ಇದನ್ನೂ ಓದಿ: ಹೆಣ್ಮಕ್ಕಳು ಎಷ್ಟು ಮಾತನಾಡ್ತಾರಪ್ಪ ಅಂತ ದೂರು ಹೇಳ್ಬೇಡಿ, ಅದಕ್ಕೇನು ಕಾರಣ ತಿಳ್ಕೊಳ್ಳಿ
• ಪರಾರಿಯಾಗ್ಬೋದಲ್ಲ?
ಸರಿಯಾದ ಕಾರಣವಿದ್ದರೆ ಅವರಿಂದ ತಪ್ಪಿಸಿಕೊಳ್ಳಲು ಹೊರಗೆ ಹೋಗಬಹುದು. ಆದರೆ, ಶಾಲೆ, ಕಾಲೇಜು, ಕಚೇರಿಗೆ ಹೋಗುವವರಾಗಿದ್ದರೆ ಈ ನೆಪಗಳು ವರ್ಕ್ ಆಗುತ್ತವೆ. ಮನೆಯಲ್ಲೇ ಇರುವ ಗೃಹಿಣಿಯರಿಗೆ ಇದು ಕಷ್ಟವಾಗುತ್ತದೆ. ಆದರೂ, ಸರಿಯಾದ ಒಂದು ಕಾರಣದಿಂದ ಮನೆಯಿಂದ ಹೊರಡಲು ಸಾಧ್ಯವಾ ನೋಡಿ.