ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆಯಾ?
ಈ ಕಮಿಟ್‌ಮೆಂಟ್ ಫೋಬಿಯಾ ಇರೋ ಆಸಾಮಿ ಜೊತೆ ಏಗೋದಿದ್ಯಲ್ಲ, ಕಷ್ಟ ಕಷ್ಟ. ಅವರನ್ನು ನಂಬಿದ್ರೆ ಬದುಕು ಮುಂದೂ ಹೋಗೋಲ್ಲ, ಹಿಂದೂ ಹೋಗೋಕಾಗಲ್ಲ. ಆದ್ರೆ ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆ ಎಂದು ತಿಳ್ಕೋಳೋದು ಹೇಗೆ?
ಆತ ಒಳ್ಳೆಯವನೇ, ಆದ್ರೆ ಬಸವನಗುಡಿ ಹೋಗೋಣ ಎಂದ್ರೆ ಅಲ್ಲೇ ನೆಂಟ್ರ ಮನೆ ಇದೆ ಬೇಡ ಅಂತಾನೆ, ಹೊಟೋಲ್‌ಗೆ ಡಿನ್ನರ್ ಪ್ಲ್ಯಾನ್ ಮಾಡಿದ್ರೆ ಅಲ್ಲಿ ಗೆಳೆಯರು ಬಂದ್ರೆ ಅಂತ ಭಯ ಬೀಳ್ತಾನೆ, ಭವಿಷ್ಯದ ಬಗ್ಗೆ ಮಾತಾಡಿದ್ರೆ ಮಾತು ಬದಲಾಯಿಸ್ತಾನೆ... ಇವೆಲ್ಲ ಲಕ್ಷಣಗಳೂ ನಿಮ್ಮ ಸಂಗಾತಿಗಿದ್ಯಾ? ಬಹುಷಃ ಆತ ಕಮಿಟ್‌ಮೆಂಟ್ ಫೋಬಿಕ್ ಇರಬೇಕು. ಇಂಥ ಕಮಿಟ್‌ಮೆಂಟ್ ಫೋಬಿಕ್‌ಗಳೊಂದಿಗೆ ಏಗೋದು ಹೇಗೆ? ಅವರನ್ನು ನಂಬಬಹುದಾ? ಎಲ್ಲಕ್ಕಿಂತ ಮುಂಚೆ ವ್ಯಕ್ತಿಗೆ ಇಂಥ ಫೋಬಿಯಾ ಇದೆ ಎಂದು ತಿಳ್ಕೊಳೋದು ಹೇಗೆ?
ಕಮಿಟ್‌ಮೆಂಟ್ ಫೋಬಿಕ್‌ಗಳನ್ನು ಮೂವಿಗಳಲ್ಲಿ ನೋಡೋಕೆ ಕಾಮಿಡಿ ಅನಿಸ್ಬಹುದು, ಆದರೆ, ನಿಜ ಜೀವನದಲ್ಲಿ ಅಂಥವನಿಗೇ ಪ್ರೀತಿಗಾಗಿ ಗಂಟು ಬಿದ್ದಿದ್ದೀರಾದರೆ ನಿಮ್ಮ ಬಗ್ಗೆ ಖಂಡಿತಾ ಮರುಕವೆನಿಸುತ್ತದೆ. ಏಕೆಂದರೆ ಸಂಬಂಧದ ತಳಹದಿಯೇ ಪ್ರಾಮಾಣಿಕತೆ ಹಾಗೂ ನಂಬಿಕೆ. ಈ ಕಮಿಟ್ಮೆಂಟ್ ಫೋಬ್‌ಗಳಲ್ಲಿ ಅವಕ್ಕೇ ಕೊರತೆ ಇರುವುದು ಸಂಬಂಧವನ್ನು ಕ್ಲಿಷ್ಟವಾಗಿಸುತ್ತದೆ. ಹಾಗಂಥ ಆತ/ಆಕೆ ಕೆಟ್ಟವರೆಂದಲ್ಲ. ಮಾತು ಕೊಡಲು ಅವರಿಗೆ ಅವರ ಮೇಲೆಯೇ ನಂಬಿಕೆ ಇರುವುದಿಲ್ಲ. ಫೈನಾನ್ಷಿಯಲ್ ಸ್ಟೇಟಸ್ ಕುರಿತ ಭಯ, ಕುಟುಂಬ ಒಪ್ಪಿಲ್ಲದಿದ್ದರೆ ಎಂಬ ಆತಂಕ, ಇನ್ನೂ ಒಳ್ಳೆಯ ಸಂಗಾತಿ ಸಿಕ್ಕರೆ ಎಂಬ ದುರಾಸೆಯೂ ಅವರನ್ನು ಕಮಿಟ್ ಆಗಲು ಹಿಂಜರಿಯುವಂತೆ ಮಾಡುತ್ತಿರಬಹುದು.
ಮನೆಯೊಳಗೆ ಕೂತು ಆಗಲೇ ತಲೆ ಕೆಟ್ಟಿದೆ, ಇನ್ನೊಂದೆರಡು ವಾರ ಇರೋದು ಹೇಗೆ?...
- ಅವರ ಹಳೆ ಸಂಬಂಧಗಳೆಲ್ಲವೂ ಅಲ್ಪಾವಧಿಯಲ್ಲೇ ಮುರಿದು ಬಿದ್ದಿವೆ
ನಿಮ್ಮ ಗೆಳೆಯ/ಗೆಳತಿಯ ಎಕ್ಸ್‌ಗಳೆಲ್ಲ ಕೆಲ ತಿಂಗಳುಗಳಲ್ಲೇ ಅವರಿಗೆ ಟಾಟಾ ಬೈ ಹೇಳಿ ಹೋಗಿದ್ದಾರೆ. ಇದಕ್ಕೆ ಕಾರಣ ಧೀರ್ಘಾವಧಿಯ ಸಂಬಂಧಕ್ಕೆ ಆತ ಕಮಿಟ್ ಆಗಲು ತಯಾರಿಲ್ಲದ್ದು. ಅಲ್ಲದೆ ಈ ಫೋಬಿಯಾ ಇದ್ದ ವ್ಯಕ್ತಿಯು ನಿಮ್ಮ ಮಾತುಗಳೊಂದನ್ನೂ ಕೇಳದೆ ಮೊಂಡು ಹಿಡಿಯುವುದರಿಂದಲೇ ಸಣ್ಣ ಪುಟ್ಟ ವಿಷಯಕ್ಕೂ ಆತ ಜಗಳವಾಡುತ್ತಾನೆ. ಇದರಿಂದಲೇ ಸಂಬಂಧಗಳು ಮುರಿದು ಬೀಳುತ್ತವೆ.
- ಗೊಂದಲದ, ನಿಖರವಲ್ಲದ ಹೇಳಿಕೆಗಳ ಬಳಕೆ
ಯಾವುದೇ ವಿಷಯಕ್ಕೆ ಪ್ರತಿಕ್ರಿಯಿಸುವಾಗಲೂ ಇರಬಹುದು, ಇಲ್ದೇ ಇರಬಹುದು, ಬಹುಷಃ, ಆದರೆ.... ಇಂಥ ಪದಗಳ ಬಳಕೆಯನ್ನು ಕಮಿಟ್‌ಮೆಂಟ್ ಫೋಬಿಕ್‌ಗಳು ಹೆಚ್ಚಾಗಿ ಬಳಸುತ್ತಾರೆ. ಯಾವುದನ್ನೂ ನಿಖರವಾಗಿ, ಸ್ಪಷ್ಟವಾಗಿ ಹೇಳಿ ಸಿಕ್ಕಿಬೀಳುವ ತೊಂದರೆ ತೆಗೆದುಕೊಳ್ಳಲಾರರು. ಬೇಡದ ಸಂದರ್ಭಗಳನ್ನು ತಪ್ಪಿಸಿಕೊಳ್ಳಲು ಅವರ ಬಳಿ ಏನೋ ಒಂದು ಎಕ್ಸ್ಯೂಸ್ ಇದ್ದೇ ಇರುತ್ತದೆ.
- ತನ್ನ ತಪ್ಪನ್ನು ಒಪ್ಪಿಕೊಳ್ಳಲಾರ/ಳು
ಕಮಿಟ್‌ಮೆಂಟ್‌ಗೆ ಹೆದರುವ ವ್ಯಕ್ತಿಯು ಯಾವತ್ತೂ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ, ಅದನ್ನು ಇನ್ನೊಬ್ಬರ ಮೇಲೆ ಎತ್ತಿ ಹಾಕಿ, ವಾದಿಸುತ್ತಲೇ ಇರುತ್ತಾರೆ. ಸಂಬಂಧದಲ್ಲಿ ಸ್ಪೇಸ್ ಬೇಕೆಂದು ಸದಾ ಡಿಮ್ಯಾಂಡ್ ಮಾಡುತ್ತಿರುತ್ತಾರೆ.
ಕೊರೋನಾ ಕಾಲದಲ್ಲಿ ಬೆಂದಕಾಳೂರು; ಹೀಗಿದೆ ನೋಡಿ!...
- ಭವಿಷ್ಯದ ಮಾತುಗಳಿಗೆ ಬ್ರೇಕ್
ಕಮಿಟ್‌ಮೆಂಟ್ ಫೋಬಿಯಾ ಹೊಂದಿರುವ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವ ದೊಡ್ಡ ಅಪಾಯವೆಂದರೆ ನಿಮಗೆ ಎಂದಿಗೂ ಭವಿಷ್ಯದ ಕುರಿತ ಸ್ಪಷ್ಟ ಚಿತ್ರಣ ಸಿಗಲಾರದು. ಭವಿಷ್ಯದಲ್ಲಿ ನಿಮ್ಮೊಂದಿಗಿರುತ್ತೇನೆಂದೂ ಹೇಳಲಾರರು, ಇರಲಾರೆನೆಂದೂ ಹೇಳದೆ ಸತಾಯಿಸುವರು. ಮದುವೆ ನಂತರದ ಮಾತುಗಳನ್ನು ನೀವು ಎತ್ತಿದಾಗೆಲ್ಲ ಟಾಪಿಕ್ ಚೇಂಜ್ ಮಾಡುವಲ್ಲಿ ಇಂಥವರು ಸಿದ್ಧಹಸ್ತರು. ಅವರಾಗಿಯೇ ಎಂದಿಗೂ ನಿಮ್ಮೊಂದಿಗಿನ ಭವಿಷ್ಯದ ಕುರಿತ ಕನಸು ಹಂಚಿಕೊಳ್ಳಲಾರರು.