ಕಾವೇರಿ ಎಸ್‌.ಎಸ್‌

ರಾಜಧಾನಿ ಬೆಂಗಳೂರಿನ ಹೈಫೈ ಜೀವನಶೈಲಿ ಬದಲಾಗುತ್ತಿದೆ. ಅಲ್ಲದೆ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವಂಥ ಅನಿವಾರ್ಯಕ್ಕೆ ಜನತೆ ಸಿಲುಕಿದ್ದಾರೆ. ಸಾಮಾಜಿಕವಾಗಿ ಸಕ್ರಿಯರಾದವರು ತಮ್ಮೆಲ್ಲ ದೈನಂದಿನ ಚಟುವಟಿಕೆಗಳನ್ನು ಬದಿಗಿಟ್ಟು ಮನೆಯಲ್ಲೇ ಕಾಲ ಕಳೆಯುವ ಸ್ಥಿತಿ ಬಂದಿದೆ. ರೋಗ ವ್ಯಾಪಿಸುವ ಭಯದಲ್ಲಿ ಜನರು ಅಂತರ ಕಾಯ್ದುಕೊಂಡು ಸ್ನೇಹ-ಸಂಬಂಧಗಳನ್ನೂ ದೂರವಿಟ್ಟಿದ್ದಾರೆ. ಐಟಿಬಿಟಿ ಉದ್ಯೋಗಿಗಳು, ಖಾಸಗಿ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸ ಮಾಡಲು ಸೂಚಿಸಲಾಗಿದೆ. ಆದರೆ, ಮನೆಯಲ್ಲಿ ವಿವಿಧ ಕಾರಣಾಂತರಗಳಿಂದ ತಮ್ಮ ಕಚೇರಿಯ ಕೆಲಸವನ್ನು ನಿರ್ದಿಷ್ಟಸಮಯದೊಳಗೆ ಮುಗಿಸಲು ಸಾಧ್ಯವಾಗದೆ ಹಲವರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ದೈನಂದಿನ ಕೆಲಸ ನಂಬಿಕೊಂಡಿದ್ದವರಿಗೆ ಹೊಟ್ಟೆಪಾಡು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದರೆ, ಮನೆಯಿಂದ ಹೊರಬಾರದವರಿಗೆ ಸಮಯವನ್ನು ಹೇಗೆ ಕಳೆಯುವುದು ಎಂಬ ಚಿಂತೆ ಕಾಡುತ್ತಿದೆ.

ಕಕ್ಷಿದಾರರು, ವಕೀಲರಿಲ್ಲದೆ ಹೈಕೋರ್ಟ್‌ ಬಣ ಬಣ!

ಇದರ ಮಧ್ಯೆಯೇ ಕಿತ್ತುತಿನ್ನುವ ಬಡತನ, ಬರಗಾಲ, ಆರ್ಥಿಕ ಸಂಕಷ್ಟದಿಂದ ಸಿಲಿಕಾನ್‌ ಸಿಟಿಗೆ ವಲಸೆ ಬಂದವರು, ಒಂದೊತ್ತಿನ ತುತ್ತು ಅನ್ನಕ್ಕೆ ದಿನಗೂಲಿ ನಂಬಿಕೊಂಡಿದ್ದ ಅಸಂಘಟಿತ ಕಾರ್ಮಿಕ ವರ್ಗ ಕೊರೋನಾ ವೈರಸ್‌ ಹಾಗೂ ಸರ್ಕಾರದ ಕೆಲ ನಿರ್ಧಾರಗಳಿಂದ ನಲುಗುತ್ತಿದೆ. ಇತ್ತೀಚೆಗೆ ವಿವಿಧ ಮೂಲಗಳಿಂದ ಸಾಲ ಮಾಡಿ ಬಂಡವಾಳ ಹೂಡಿದವರು, ಮನೆ ಖರೀದಿಸಿದವರು, ಹೊಸದಾಗಿ ವ್ಯವಹಾರ ಪ್ರಾರಂಭಿಸಿದವರು ಸಹ ವ್ಯಾಪಾರ ವಹಿವಾಟು ಇಲ್ಲದೆ ದಿಕ್ಕು ಕಾಣದಂತಾಗಿದ್ದಾರೆ.

ಸೀಮಿತ ಆದಾಯದಲ್ಲಿ ಬದುಕುತ್ತಿದ್ದವರು, ಬೇಕರಿ, ಹೋಟೆಲ್‌, ತಳ್ಳುಗಾಡಿ ತಿಂಡಿ ವ್ಯಾಪಾರಿಗಳು ಹೀಗೆ ಎಲ್ಲಾ ವರ್ಗದವರು ನಷ್ಟಕ್ಕೆ ಒಳಗಾಗಿದ್ದಾರೆ. ಹೊರಗಡೆ ಊಟ-ತಿಂಡಿ ನಂಬಿ ಬದುಕಿದ್ದವರಿಗೂ ತೊಂದರೆ ಅನುಭವಿಸುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಬಂದವರು, ಖಾಸಗಿ ಉದ್ಯೋಗಿಗಳು, ಬ್ಯಾಚ್ಯುಲ​ರ್‍ಸ್ ಒಳಗೊಂಡಂತೆ ತಳವರ್ಗದ ಜನರನ್ನು ಕೊರೋನಾ ವೈರಸ್‌ ಸಂದಿಗ್ಧತೆಗೆ ದೂಡಿದೆ. ಈ ರೀತಿಯ ಕಷ್ಟಕರ ಪರಿಸ್ಥಿತಿ ಇನ್ನೆಷ್ಟುದಿನ ಎಂಬ ಅನಿಶ್ಚಿತತೆ ಜನರನ್ನು ಕಾಡುತ್ತಿದೆ.

‘ದೂರದ ಬೆಟ್ಟನುಣ್ಣಗೆ’ ಎಂಬ ಗಾದೆ ಮಾತಿನಂತೆ ಪಾಶ್ಚಿಮಾತ್ಯ ಸಂಸ್ಕೃತಿಯ ಛಾಯೆ ಜನರಲ್ಲಿ ಕರಗುತ್ತಿದೆ. ಮಹಾಮಾರಿ ಕೊರೋನಾ ವೈರಸ್‌ ಸಿಲಿಕಾನ್‌ ಸಿಟಿ ಜನರ ಬದುಕಿನ ದಿಕ್ಕನ್ನೇ ಬದಲಿಸಿದೆ. ಕೆಲವರು ಪಟ್ಟಣದ ನಂಟು ಸಾಕೆಂದು ಬದುಕಿದೆಯಾ ಬಡಜೀವವೇ ಎಂಬ ದೃಷ್ಟಿಯಿಂದ ತಂತಮ್ಮ ಊರಿನತ್ತ ಹೆಜ್ಜೆ ಹಾಕಿದ್ದಾರೆ. ಕೊರೋನಾ ಮಹಾಮಾರಿ ಜನರಲ್ಲಿನ ಭೇದ-ಭಾವ ತೊಡೆದು ತನ್ನ ಕಬಂಧಬಾಹು ಚಾಚಿದೆ. ಇದರ ಹೊಡೆತಕ್ಕೆ ಸಿಲುಕಿದ ಅದೆಷ್ಟೋ ಮುಗ್ಧ ಜನರು ಒಂದು ಹೊತ್ತಿನ ಊಟವೂ ಸಿಗದೆ ಪರದಾಡುವಂಥ ಶೋಚನೀಯ ಸ್ಥಿತಿಯೂ ಕೆಲವೆಡೆ ನಿರ್ಮಾಣವಾಗಿದೆ. ಸೋಂಕು ವ್ಯಾಪಿಸುವ ಭೀತಿಯಿಂದ ಬಹುತೇಕ ಜನರನ್ನು ಕಾಡುತ್ತಿದೆ. ಆದರೆ, ಪ್ರಜ್ಞಾವಂತ ವಿದ್ಯಾವಂತರೇ ರೋಗವನ್ನು ನಿರ್ಲಕ್ಷ್ಯತೆಯಿಂದ ಕಾಣುತ್ತಿರುವುದು ರೋಗ ಇನ್ನಷ್ಟುಉಲ್ಬಣಿಸಲು ಕಾರಣವಾಗಿದೆ. ಇದರ ಪರಿಣಾಮವನ್ನು ಜನಸಾಮಾನ್ಯರು ಎದುರಿಸುವಂತಾಗಿದೆ.