ಮದುವೆಗೆ ಸಪ್ತಪದಿಯಾದ್ರೆ ಪ್ರೀತಿಗೆ ಸಪ್ತದಿನ; ವ್ಯಾಲೆಂಟೆನ್ಸ್ ವೀಕ್ ಬಗ್ಗೆ ನಿಮಗೇನು ಗೊತ್ತು?
ಫೆಬ್ರವರಿ ಪ್ರೇಮಿಗಳ ತಿಂಗಳು. ಪ್ರೀತಿಯನ್ನು ಎದೆಗೂಡಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡವರಿಗೆ, ಈಗಾಗಲೇ ಪ್ರೀತಿ ಹೇಳಿಕೊಂಡು ಅದರ ನಶೆಯಲ್ಲಿ ತೇಲುತ್ತಿರುವವರಿಗೆ ಎಲ್ಲರಿಗೂ ತಮ್ಮ ಪ್ರೀತಿಯನ್ನು ಸಂಭ್ರಮಿಸಲು ಇರುವ ದಿನವೇ ವ್ಯಾಲೆಂಟೆನ್ಸ್ ಡೇ. ಈ ಪ್ರೀತಿ ಹಬ್ಬದ ಆಚರಣೆ ಫೆ.7ರಿಂದಲೇ ಪ್ರಾರಂಭವಾಗುತ್ತದೆ.
ಫೆಬ್ರವರಿ ಎಂದರೆ ಪ್ರೇಮಾ ಮಾಸ. ಪ್ರೀತಿಸುವ ಹೃದಯಗಳಿಗೆ ಪ್ರೇಮಾ ನಿವೇದನೆಯ ವಸಂತ ಕಾಲವಿದು.ಚಿಗುರೆಲೆಗಳಿಂದ ಶೃಂಗರಿಸಿಕೊಂಡ ಭುವಿ ತನ್ನ ಇನಿಯಾನಿಗಾಗಿ ಕಾದು ಕುಳಿತಿರುವಂತೆ ಕಾಣುವ ಈ ತಿಂಗಳಲ್ಲಿ ಜೋಡಿಹಕ್ಕಿಗಳಿಗೆ ಪ್ರೀತಿಯ ಹಬ್ಬದ ಸಂಭ್ರಮ. ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ಹಬ್ಬ. ಹೌದು,ವ್ಯಾಲೆಂಟೆನ್ಸ್ ಡೇ ಅಂದ್ರೆ ಹೃದಯದಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯನ್ನು ನಿವೇದಿಸಿಕೊಳ್ಳುವ ದಿನ.ಎಷ್ಟೋ ಮಂದಿ ತಮ್ಮ ಪ್ರೀತಿ ವ್ಯಕ್ತಪಡಿಸಲು ಈ ದಿನಕ್ಕಾಗಿ ಕಾದು ಕುಳಿತಿರುತ್ತಾರೆ.ಆದರೆ, ಈ ಪ್ರೀತಿ ಹಬ್ಬದ ಸಂಭ್ರಮಾಚರಣೆ ಫೆಬ್ರವರಿ 7ರಿಂದಲೇ ಪ್ರಾರಂಭವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಈ ಒಂದು ವಾರವನ್ನು ವ್ಯಾಲೆಂಟೆನ್ಸ್ ವೀಕ್ ಎಂದೇ ಕರೆಯಲಾಗುತ್ತದೆ. ಹಾಗಾದ್ರೆ ಈ ಏಳು ದಿನಗಳ ವಿಶೇಷತೆ ಏನು?
ವೀಕೆಂಡ್‌ನಲ್ಲಿ ಮಾತ್ರ ಜೊತೆಯಾಗ್ತಾರೆ ಗಂಡ ಹೆಂಡತಿ!
ಫೆಬ್ರವರಿ 7-ರೋಸ್ ಡೇ: ರೊಮ್ಯಾನ್ಸ್ ವೀಕ್‍ನ ಮೊದಲ ದಿನವಾದ ರೋಸ್ ಡೇಯನ್ನು ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಪ್ರೀತಿಪಾತ್ರರಿಗೆ ಬಣ್ಣ ಬಣ್ಣದ ಗುಲಾಬಿ ಹೂಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಫೆಬ್ರವರಿ ಪ್ರೀತಿಯ ಸಂಕೇತವಾಗಿರುವ ಗುಲಾಬಿ ಹೂವಿನ ಸೀಸನ್ ಕೂಡ ಹೌದು. ಹೀಗಾಗಿ ರೋಸ್ ಡೇ ಆಚರಿಸಲು ಇದು ಸೂಕ್ತವಾದ ತಿಂಗಳು. ಕೆಂಪು ಗುಲಾಬಿ ರೊಮ್ಯಾನ್ಸ್ ಸಂಕೇತ ಎಂಬುದು ಎಲ್ಲರಿಗೂ ಗೊತ್ತು. ನೀವು ಪ್ರೀತಿಸುವ ಹುಡುಗ ಅಥವಾ ಹುಡುಗಿಗೆ ಈ ದಿನ ಸುಂದರವಾದ ಕೆಂಪು ಗುಲಾಬಿ ನೀಡಲು ಮರೆಯಬೇಡಿ.ಆತ್ಮೀಯ ಸ್ನೇಹಿತರಿಗೆ ಹಳದಿ ಗುಲಾಬಿ ನೀಡಿ ಶುಭ ಹಾರೈಸಿ. ಇನ್ನು ಲವರ್ ಅಲ್ಲ,ಆದರೆ ಜಸ್ಟ್ ಫ್ರೆಂಡ್‍ಗಿಂತ ಜಾಸ್ತಿ ಎಂಬ ಸ್ಪೆಷಲ್ ಫ್ರೆಂಡ್‍ಗೆ ಪಿಂಕ್ ಕಲರ್ ರೋಸ್ ನೀಡಬಹುದು.ಶತ್ರುಗಳೊಂದಿಗೆ ಗೆಳೆತನವನ್ನು ಸಂಪಾದಿಸಲು ಕೂಡ ಇದು ಒಳ್ಳೆಯ ದಿನ. ನಿಮ್ಮ ಶತ್ರುಗೆ ಬಿಳಿ ಬಣ್ಣದ ಗುಲಾಬಿಗಳ ಗುಚ್ಛವೊಂದನ್ನು ನೀಡಿ.ಬಿಳಿ ಶಾಂತಿಯ ಬಣ್ಣವಾಗಿದ್ದು,ಆ ವ್ಯಕ್ತಿಯೊಂದಿಗೆ ನೀವು ಇನ್ನುಮುಂದೆ ಯಾವುದೇ ಶತ್ರುತ್ವ ಸಾಧಿಸಲು ಬಯಸುವುದಿಲ್ಲ ಎಂಬುದರ ದ್ಯೋತಕವಾಗಿದೆ.
ಫೆಬ್ರವರಿ 8-ಪ್ರಪೋಸ್ ಡೇ: ರೋಸ್ ಡೇ ದಿನ ನಿಮ್ಮ ಕ್ರಷ್‍ಗೆ ರೆಡ್ ರೋಸ್ ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುತ್ತೀರಿ.ಇದಕ್ಕೆ ಪ್ರತಿಯಾಗಿ ಅವರಿಂದಲೂ ನಿಮಗೊಂದು ರೆಡ್ ರೋಸ್ ಸಿಕ್ಕಿ ನಿಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಪ್ರಪೋಸ್ ಡೇಗೆ ಸಿದ್ಧರಾಗಿ. ವ್ಯಾಲೆಂಟೆನ್ಸ್ ವೀಕ್‍ನ ಎರಡನೇ ದಿನ ಫೆ.8 ಪ್ರಪೋಸ್ ಡೇಯಾಗಿದ್ದು, ಈ ದಿನ ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಭಾವನೆಗಳನ್ನು ನಿಮ್ಮ ಪ್ರೀತಿಯ ಮುಂದೆ ನಿವೇದಿಸಿಕೊಳ್ಳಿ. ಪ್ರಪೋಸ್ ಡೇಯಂದು ಅನೇಕ ಸಿಂಗಲ್ ಹಾರ್ಟ್‍ಗಳು ಡಬಲ್ ಹಾರ್ಟ್‍ಗಳಾದ್ರೆ,ಇನ್ನೂ ಕೆಲವು ಬ್ರೇಕ್ ಆಗುತ್ತವೆ.
ಉತ್ತಮ ಕೇಳುಗನಾಗಲು ಕಿವಿಯಿದ್ರೆ ಸಾಲದು, ಮನಸ್ಸೂ ಬೇಕು
ಫೆಬ್ರವರಿ 9-ಚಾಕೋಲೇಟ್ ಡೇ: ಪ್ರೀತಿ ನಿವೇದಿಸಿಕೊಂಡ ಬಳಿಕ ಆ ಕಡೆಯಿಂದಲೂ ಓಕೆ ಸಿಗ್ನಲ್ ಸಿಕ್ಕ ಮೇಲೆ ಬಾಯಿ ಸಿಹಿ ಮಾಡದಿದ್ರೆ ಹೇಗೆ ಅಲ್ವಾ? ಇದಕ್ಕಾಗಿಯೇ ವ್ಯಾಲೆಂಟೆನ್ಸ್ ವೀಕ್‍ನ ಮೂರನೇ ದಿನ ಚಾಕೋಲೇಟ್ ಡೇ ಆಚರಿಸಲಾಗುತ್ತದೆ.ಈ ದಿನ ನಿಮ್ಮ ಪ್ರಿಯತಮೆ ಅಥವಾ ಪ್ರಿಯತಮಗೆ ಅವರಿಗಿಷ್ಟವಾದ ಚಾಕೋಲೇಟ್‍ಗಳನ್ನು ಗಿಫ್ಟ್ ನೀಡಿ.ಇಬ್ಬರೂ ಜೊತೆಯಾಗಿ ಕುಳಿತು ಚಾಕೋಲೇಟ್ ರುಚಿ ನೋಡಿ. ಈ ದಿನ ಪ್ರೇಮಿಗಳು ಮಾತ್ರ ಪರಸ್ಪರ ಚಾಕೋಲೇಟ್ ವಿನಿಮಯ ಮಾಡಿಕೊಳ್ಳಬೇಕು ಎಂದೇನಿಲ್ಲ. ಯಾರೂ ಬೇಕಾದರೂ ತಮ್ಮ ಪ್ರೀತಿಪಾತ್ರರಿಗೆ ಚಾಕೋಲೇಟ್ ನೀಡಿ ಪ್ರೀತಿಯನ್ನು ತೋರ್ಪಡಿಸಬಹುದು.
ಫೆಬ್ರವರಿ 10-ಟೆಡ್ಡಿ ಡೇ: ಲವರ್‍ಗೆ ಏನಾದ್ರೂ ಗಿಫ್ಟ್ ನೀಡಬೇಕಲ್ಲವೆ? ಅದಕ್ಕೆಂದೇ ವ್ಯಾಲೆಂಟೆನ್ಸ್ ವೀಕ್‍ನ ನಾಲ್ಕನೇ ದಿನ ಟೆಡ್ಡಿ ಡೇ ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳು ಪರಸ್ಪರ ಕ್ಯೂಟಾದ ಟೆಡ್ಡಿಗಳನ್ನು ಗಿಫ್ಟ್ ಮಾಡಬಹುದು. ಅದರಲ್ಲೂ ತನ್ನ ಪ್ರಿಯತಮ ಟೆಡ್ಡಿಯನ್ನು ಉಡುಗೊರೆಯಾಗಿ ನೀಡಿದ್ರೆ ಹುಡುಗಿ ಸಖತ್ ಖುಷಿಯಾಗುವ ಜೊತೆಗೆ ಅದನ್ನು ತನ್ನ ಮಗುವಿನಂತೆ ಸದಾ ಜೊತೆಯಲ್ಲೇ ಇಟ್ಟುಕೊಂಡು ಜೋಪಾನ ಮಾಡುತ್ತಾಳೆ.
ಫೆಬ್ರವರಿ 11-ಪ್ರಾಮಿಸ್ ಡೇ: ಇದು ವ್ಯಾಲೆಂಟೆನ್ಸ್ ವೀಕ್‍ನ ಅತ್ಯಂತ ಮಹತ್ವದ ದಿನ. ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆಗೆ ನೀವು ಅವರ ಪ್ರೀತಿಯನ್ನು ಜೀವನದುದ್ದಕ್ಕೂ ನಿಭಾಯಿಸುವ ವಚನ ನೀಡುವ ದಿನ. ತಮ್ಮ ಸಂಬಂಧವನ್ನು ಸುದೀರ್ಘ ಕಾಲ ಕಾಪಾಡಿಕೊಳ್ಳುವ ಕುರಿತು ಇಬ್ಬರೂ ಪರಸ್ಪರ ಪ್ರಾಮಿಸ್ ಮಾಡುವ ಮೂಲಕ ನಂಬಿಕೆಯ ಭದ್ರ ಬುನಾದಿ ಹಾಕಬೇಕು.
ಫೆಬ್ರವರಿ 12-ಹಗ್ ಡೇ: ಇದು ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಂಡು ಭಾವನೆಗಳನ್ನು ವ್ಯಕ್ತಪಡಿಸುವ ದಿನ. ಎಷ್ಟೋ ಬಾರಿ ಪದಗಳಲ್ಲಿ ವಿವರಿಸಲಾಗದ್ದನ್ನು ಒಂದೇ ಒಂದು ಅಪ್ಪುಗೆ ಮಾಡಬಲ್ಲದು.ಅಪ್ಪುಗೆ ಪ್ರೀತಿ, ಕಾಳಜಿ ಜೊತೆಗೆ ಒತ್ತಡವನ್ನು ತಗ್ಗಿಸಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ.
ಫೆಬ್ರವರಿ 13-ಕಿಸ್ ಡೇ: ವ್ಯಾಲೆಂಟೆನ್ಸ್ ಡೇ ಮುನ್ನ ದಿನ ಪ್ರೇಮಿಗಳು ಕಿಸ್ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ.ಮುತ್ತು ಇಬ್ಬರ ನಡುವಿನ ಪ್ರೀತಿಯನ್ನು ಬಲಗೊಳಿಸುವ ಜೊತೆಗೆ ಸಂಬಂಧಕ್ಕೆ ಹೊಸ ಅರ್ಥವನ್ನು ನೀಡುತ್ತದೆ.
ಫೆಬ್ರವರಿ 14 –ವ್ಯಾಲೆಂಟೆನ್ಸ್ ಡೇ: ಪ್ರೇಮಿಗಳು ಕಾತರದಿಂದ ಕಾಯುವ ಈ ದಿನವನ್ನು ಮೂರನೇ ಶತಮಾನದ ರೋಮನ್ ಸಂತ ವ್ಯಾಲೆಂಟೆನ್ಸ್ ಸವಿನೆನಪಿಗಾಗಿ ಆಚರಿಸಲಾಗುತ್ತದೆ. ಈತ ಪ್ರೀತಿಯ ಸೊಬಗನ್ನು ಜಗತ್ತಿಗೆ ಪರಿಚಯಿಸಿದಾತ. ಈ ದಿನ ನೀವು ನಿಮ್ಮ ಲವರ್ ಜೊತೆ ಸ್ಪೆಷಲ್ ಡೇಟ್ ಪ್ಲ್ಯಾನ್ ಮಾಡಿ. ಇಬ್ಬರೂ ಏಕಾಂತದಲ್ಲಿ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳಲು ಸೂಕ್ತವಾದ ತಾಣವೊಂದನ್ನು ಆಯ್ದುಕೊಳ್ಳಿ. ಈ ದಿನ ನಿಮ್ಮ ಪ್ರೀತಿಯನ್ನು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಲು ಮರೆಯಬೇಡಿ.