ಮಂಜುನಾಥ ಗದಗಿನ

ಬೆಳಗಾವಿ ಜಿಲ್ಲೆಯ ಗೋಕಾಕ್‌ ನಗರದ ಓಂಕಾರ್‌ ಪತ್ತಾರ್‌, ಸಂಗೀತ ಪ್ರೇಮಿ. ಸಂಗೀತದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದಿದ್ದರೂ ಸಂಗೀತ ದಿಗ್ಗಜರು ಮೆಚ್ಚುವಂತೆ ಹಾಡಿ ತೋರಿಸಿ ಕರುನಾಡಿನ ಮನೆಮಾತಾಗಿದ್ದಾನೆ. ಸಂಗೀತವೆ ನನ್ನುಸಿರು ಎಂದು ಸ್ಪರ್ಧಾಳುಗಳಿಗೆ ಪೈಪೋಟಿ ನೀಡಿ, ಶ್ರದ್ಧೆ, ಭಕ್ತಿಯಿಂದ ಕಠಿಣ ಪರಿಶ್ರಮವನ್ನೇ ಮೂಲ ಮಂತ್ರವಾಗಿಸಿಕೊಂಡಿದ್ದಾನೆ. ಇತ್ತೀಚೆಗೆ ಗೋಕಾಕ್‌ನಲ್ಲಿ ಕೃಷ್ಣಾ ನದಿ ತುಂಬಿ ಹರಿದು ಪ್ರವಾಹ ಉಂಟಾಗಿತ್ತು. ಈ ಸಂದರ್ಭದಲ್ಲಿ ಓಂಕಾರ್‌ ಅವರ ಮನೆ ಕುಸಿದು ನಷ್ಟವಾಗಿತ್ತು. ಆಗ ಓಂಕಾರ್‌ ಸರಿಗಮಪ ಫೈನಲ್‌ ವೇದಿಕೆಯಲ್ಲಿದ್ದ. ಮನಸ್ಸಲ್ಲಿನ ದುಃಖ ಮರೆಮಾಚಿಕೊಂಡು, ಸ್ಪರ್ಧೆ ಕಡೆ ಕೇಂದ್ರೀಕರಿಸುವ ಮೂಲಕ ಇಂದು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾನೆ. ಆತನ ಪ್ರತಿಭೆ, ಸಂಗೀತದಲ್ಲಿ ಆಸಕ್ತಿಗೆ ಹಿಡಿದ ಕೈಗನ್ನಡಿ.

ಕಷ್ಟದಲ್ಲಿ ಅರಳಿದ ಹೂ

ಓಂಕಾರ್‌ನ ತಂದೆ ಪತ್ತಾರ್‌ ಅವರ ವೃತ್ತಿ ಟೈಲರಿಂಗ್‌, ತಾಯಿ ಗೃಹಿಣಿ. ಈ ನಡುವೆ ಸಂಗೀತ ಕಲಿಯುವ ಹಂಬಲ ಓಂಕಾರ್‌ನಲ್ಲಿತ್ತು. ಶಿಕ್ಷಕಿ ಶಶಿಕಾಲ ಅವರ ಒತ್ತಾಸೆಯ ಮೇರೆಗೆ ಪೋಷಕರು ಕಷ್ಟದಲ್ಲಿ ಓಂಕಾರ್‌ನನ್ನು ಸಂಗೀತಕ್ಕೆ ಸೇರಿಸಿದರು. ಇತ್ತ ಶಾಲೆಯಲ್ಲಿ ಹಾಡುತ್ತಾ, ಕ್ರಮೇಣ ಊರಿನ ಸುತ್ತಮುತ್ತ ಕಾರ್ಯಕ್ರಮ ನೀಡುತ್ತಲೇ ಹೆಸರಾಗಿದ್ದ. ಹೀಗೆ ಸಣ್ಣ ಪುಟ್ಟಕಾರ್ಯಕ್ರಮಗಳಲ್ಲಿ ನೀಡುತ್ತಿದ್ದ ಹಣವನ್ನು ಸಂಗ್ರಹಿಸಿ ತನ್ನ ಓದಿನ ಖರ್ಚಿಗೆ ತಾನೇ ಹಣವನ್ನು ಭರಿಸಿದ್ದ. 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಶುಲ್ಕವನ್ನು ತಾನೇ ಭರಿಸಿದ್ದ. ಇದಕ್ಕೆಲ್ಲಾ ನೆರವಾಗಿದ್ದು ಸಂಗೀತ.

'ಸರಿಗಮಪ' ವೇದಿಕೆಯಲ್ಲೇ 'ಐಗಿರಿ ನಂದಿನಿ' ಸವಾಲ್ ಹಾಕಿದ ಮೂಡುವಡೆ ವರ್ಷ ಜ್ಞಾನ!

ಸಂಗೀತದ ಒಲವು ಮೂಡಿದ್ದು ಹೀಗೆ

ಓಂಕಾರ್‌ ಪತ್ತಾರ್‌ ಮೂರನೇ ತರಗತಿಯಲ್ಲಿದ್ದಾಗ, ಶಿಕ್ಷಕಿ ಶಶಿಕಲಾ ಅವರು ಓಂಕಾರ್‌ನಲ್ಲಿ ಸಂಗೀತದ ಕುರಿತ ಪ್ರತಿಭೆ, ಕಲಿಯುವ ಕಿಚ್ಚನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿದರು. ಅವರ ಪ್ರೋತ್ಸಾಹದಿಂದಾಗಿ ಅದೊಂದು ಕಾರ್ಯಕ್ರಮದಲ್ಲಿ ಅಮೋಘವಾಗಿ ಹಾಡಿ ಎಲ್ಲರಿಂದಲೂ ಭೇಷ್‌ ಎನಿಸಿಕೊಂಡಿದ್ದನು. ಅವನಲ್ಲಿದ್ದ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸಬೇಕೆಂದು ಶಶಿಕಲಾ ಅವರು ಓಂಕಾರ್‌ ಪೋಷಕರಿಗೆ ತಿಳಿಸಿದರು. ಆಗ ಪೋಷಕರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೂ ಒತ್ತಡ ಹಾಕಿದರು. ಶಶಿಕಲಾ ಅವರ ಮಾತಿನಿಂದಾಗಿ ಕೊನೆಗೆ ಪೋಷಕರು ಓಂಕಾರ್‌ನನ್ನು ಸಂಗೀತ ಶಾಲೆಗೆ ಸೇರಿಸಿದರು. ಅಂದಿನಿಂದ ಆರಂಭವಾಯ್ತು ಓಂಕಾರ್‌ನ ಸಂಗೀತ ಜರ್ನಿ. ಗೋಕಾಕ್‌ನ ಸುತ್ತಮುತ್ತ ಅನೇಕ ಕಡೆ ಸಣ್ಣಪುಟ್ಟಕಾರ್ಯಕ್ರಮಗಳನ್ನು ನೀಡುತ್ತಿದ್ದ. ಇಂದು ನಾಡಿಗೆ ಅವನ ಕಂಠ ಚಿರಪರಿಚಯವಾಗಿದೆ.

ಸಣ್ಣ ಪುಟ್ಟವೇದಿಕೆಯಿಂದ ಹೆಸರಾಗಿದ್ದ

ಓಂಕಾರ್‌ ತಾಯಿಯ ಊರು ಹುಬ್ಬಳ್ಳಿ. ಮಠದ ಹಿಂದೆಯೇ ತಾಯಿಯ ಮನೆಯಿದ್ದಿದ್ದರಿಂದ ಹುಬ್ಬಳ್ಳಿಗೆ ಹೋದಾಗಲೆಲ್ಲಾ ಸಿದ್ಧಾರೂಢ ಮಠಕ್ಕೆ ಭೇಟಿ ನೀಡುತ್ತಿದ್ದ. ಮಠದಲ್ಲಿ ಕೆಲ ಕಾಲ ಇದ್ದು, ಅಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮ, ಪ್ರವಚನವನ್ನು ಆಲಿಸುತ್ತಿದ್ದ. ಕ್ರಮೇಣ ಸಂಗೀತದಲ್ಲಿನ ಆಸಕ್ತಿ ಮತ್ತಷ್ಟುಹೆಚ್ಚಿ, ಶಾಲೆಯಲ್ಲಿ ಅತ್ಯುತ್ತಮವಾಗಿ ಹಾಡುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದ. ಗೋಕಾಕ್‌ನ ಸುತ್ತಮುತ್ತಲ ಹಳ್ಳಿಗಳಿಗೆ ಓಂಕಾರ್‌ನ ಕಂಠ, ಅವನ ಪ್ರತಿಭೆ ಬಗ್ಗೆ ತಿಳಿದಿದ್ದರಿಂದ ಕಾರ್ಯಕ್ರಮಗಳಿಗೆ ಕರೆಸುತ್ತಿದ್ದರು. ಅಲ್ಲದೆ ಜಾತ್ರಾ ಮಹೋತ್ಸವ, ಬೀಳ್ಕೊಡುಗೆ ಸಮಾರಂಭಗಳಲ್ಲಿ ಹೀಗೆ ಸಣ್ಣ ಪುಟ್ಟವೇದಿಕೆಗಳಲ್ಲಿ ಹಾಡುತ್ತಿದ್ದ. ಈವರೆಗೂ ಅವನಿಗೆ ಸಿಕ್ಕ ದೊಡ್ಡ ವೇದಿಕೆ ಎಂದರೆ ಅದು ಪ್ರತಿ ವರ್ಷ ನಡೆಯುವ ಸತೀಶ್‌ ಶುಗ​ರ್‍ಸ್ ಅವಾರ್ಡ್‌. ಈ ಕಾರ್ಯಕ್ರಮದಲ್ಲಿ ಹಲವು ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ.

ದೊಡ್ಡ ಗೆಲವು

ಗೋಕಾಕ್‌ನಲ್ಲಿ ನಡೆದ ಸರಿಗಮಪ ಲಿಟಲ್‌ ಚಾಂಫ್ಸ್‌ ಸೀಸನ್‌ 16 ಆಡಿಷನ್‌ನಲ್ಲಿ ಓಂಕಾರ್‌ ಪಾಲ್ಗೊಂಡಾಗ ಆಯ್ಕೆಯಾಗುವ ಬಗ್ಗೆ ಆತನಿಗೇ ತಿಳಿದಿರಲಿಲ್ಲ. ಎರಡು ಸುತ್ತು ಯಶಸ್ವಿಯಾಗಿ ಪೂರೈಸಿ ಕೊನೆಗೆ ಸರಿಗಮಪ ಕಾರ್ಯಕ್ರಮದ ಮೇನ್‌ ಸ್ಕ್ರೀನ್‌ಗೆ ಆಯ್ಕೆಯಾದ. ಇತರೆ ಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಾ ಪ್ರತೀ ಬಾರಿಯೂ ಗೋಲ್ಡನ್‌ ಬಜರ್‌ ಪಡೆದುಕೊಳ್ಳುತ್ತಿದ್ದ. ಎಲ್ಲರಂತೆ ದೊಡ್ಡವರ ಬಳಿ ಸಂಗೀತ ಕಲಿಯದಿದ್ದರೂ ಪ್ರತೀ ಬಾರಿಯೂ ಸೆಟ್‌ನಲ್ಲಿಯೇ ಅಭ್ಯಾಸ ಮಾಡಿ ವೇದಿಕೆ ಮೇಲೆ ಧೈರ್ಯದಿಂದ ಪ್ರಸ್ತುತಪಡಿಸುತ್ತಿದ್ದ. ‘ನಿರಂತರ ಶ್ರಮ, ಕಲಿಯುವ ಛಲದಿಂದಾಗಿ ಚಾಂಪಿಯನ್‌ ಪಟ್ಟಪಡೆದಿದ್ದೇನೆ’ ಎನ್ನುತ್ತಾರೆ ಓಂಕಾರ್‌ ಪತ್ತಾರ್‌.

'ಸರಿಗಮಪ' ಸ್ಪರ್ಧಿಗೆ ಸಿಕ್ತು ಉಚಿತ ವಿದ್ಯಾಭ್ಯಾಸ, 25 ಸಾವಿರ ರೂ ಕೆಲಸ!

ಫೈನಲ್‌ನಲ್ಲಿ ಗುರುಕಿರಣ್‌ ಹಾಗೂ ಓಂಕಾರ್‌ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಕೊನೆ ಕ್ಷಣದವರೆಗೂ ವೋಟ್‌ ಮಾಡುವ ಮೂಲಕ ಕರುನಾಡಿನ ಜನತೆ ಓಂಕಾರ್‌ನನ್ನು ಗೆಲ್ಲಿಸಿದ್ದಾರೆ. ವಿಜೇತನಾದ ಮೇಲೆ 30ಲಕ್ಷದ ಸೈಟ್‌, ಟ್ರೋಫಿ ತನ್ನದಾಗಿಸಿಕೊಂಡಿದ್ದಾನೆ. ಈ ಮೂಲಕ ಕಲಿಕೆಯಲ್ಲಿ ಶ್ರದ್ಧೆಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದೆಂದು ಇತರೆ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.