ಅವರ ನಗುವಿನ ಮಾತುಗಳ ಹಿಂದೆ ಬಾಲಿವುಡ್‌ ಸಿನಿಮಾ ನಿರ್ಮಾಣದ ಈ ಹೊತ್ತಿನ ವಿಧಾನ, ಹಣಕಾಸಿನ ಶಿಸ್ತು ಎಲ್ಲವೂ ಕಂಡವು. ಸ್ಯಾಂಡಲ್‌ವುಡ್‌ಗೆ ಹೋಲಿಕೆ ಮಾಡಿ ಅವರು ಆ ಮಾತುಗಳನ್ನು ಹೇಳದಿದ್ದರೂ, ಅಲ್ಲಿಗೂ ಇಲ್ಲಿಗೂ ಸಾಕಷ್ಟುವ್ಯತ್ಯಾಸಗಳಿವೆ ಎನ್ನುವುದಕ್ಕೆ ಆ ಮಾತುಗಳು ಸಾಕ್ಷಿಯಾಗಿದ್ದಂತೂ ಹೌದು. ಅಂದಹಾಗೆ, ದತ್ತಣ್ಣ ಈ ಮಾತುಗಳನ್ನು ಹೇಳಿದ್ದು ಬಾಲಿವುಡ್‌ನ ‘ಮಿಷನ್‌ ಮಂಗಲ್‌’ ಚಿತ್ರೀಕರಣದ ಅನುಭವದ ಕಾರಣಕ್ಕೆ.

‘ಮಿಷನ್‌ ಮಂಗಲ್‌’ ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ. ಅಕ್ಷಯ್‌ ಕುಮಾರ್‌ ಇದರ ನಾಯಕ. ಇಸ್ರೋದ ವಿಜ್ಞಾನಿಗಳ ಸಾಧನೆಯನ್ನೇ ಪ್ರಧಾನವಾಗಿಟ್ಟುಕೊಂಡು ಸೃಷ್ಟಿಯಾದ ಕತೆ. ಬಾಲ್ಕಿ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕ ಜಗನ್‌ ಶಕ್ತಿ. ಅಕ್ಷಯ್‌ ಕುಮಾರ್‌ ಜತೆಗೆ ಸ್ಟಾರ್‌ ನಟಿಯರಾದ ವಿದ್ಯಾಬಾಲನ್‌, ಸೋನಾಕ್ಷಿ ಸಿನ್ಹಾ ,ತಾಪ್ಸಿ ಪನ್ನು, ನಿತ್ಯಾ ಮೆನನ್‌ ಸೇರಿ ದೊಡ್ಡ ತಾರಾಗಣವೇ ಇರುವಂತಹ ಸಿನಿಮಾ. ಇಷ್ಟುನಟರಲ್ಲಿ ತಾವೂ ಒಬ್ಬರಾಗಿ ಅಭಿನಯಿಸಿ, ಚಿತ್ರತಂಡದಿಂದ ಅಪಾರ ಮೆಚ್ಚುಗೆ ಪಡೆದು ಬಂದಿರುವುದು ದತ್ತಣ್ಣ ಅವರ ಹೆಗ್ಗಳಿಕೆ.

‘ಮಿಷನ್ ಮಂಗಲ್’ ಗೆ ಮೂವರು ಕನ್ನಡತಿಯರ ಟಚ್!

ದತ್ತಣ್ಣ ತಮ್ಮ ನಟನೆ, ವ್ಯಕ್ತಿತ್ವದಿಂದಾಗಿ ಅಕ್ಷಯ್‌ ಕುಮಾರ್‌ ಸೇರಿದಂತೆ ಇಡೀ ಚಿತ್ರತಂಡಕ್ಕೆ ಭಾರಿ ಇಷ್ಟವಾಗಿಬಿಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಇತ್ತೀಚೆಗೆ ನಡೆದ ಮಿಷನ್‌ ಮಂಗಲ್‌ ಪತ್ರಿಕಾಗೋಷ್ಠಿ. ಅವತ್ತು ಅಕ್ಷಯ್‌ ಕುಮಾರ್‌ ದತ್ತಣ್ಣರನ್ನು ಅಪ್ಪಿಕೊಂಡು ಕೊಂಡಾಡಿಬಿಟ್ಟರು. ಹಾಗಾಗಿ ದತ್ತಣ್ಣ ಈಗ ರಾಷ್ಟಾ್ರದ್ಯಂತ ಸುದ್ದಿಯಲ್ಲಿದ್ದಾರೆ.

ಆಗಸ್ಟ್‌ 15ರಂದು ಮಿಷನ್‌ ಮಂಗಲ್‌ ಬಿಡುಗಡೆಯಾಗುತ್ತಿದೆ. ಈ ಸದರ್ಭದಲ್ಲಿ ದತ್ತಣ್ಣ ಜತೆ ಮಾತುಕತೆ.

ಸ್ಟಾರ್‌ ಜತೆಗೆ ಇದು ಮೊದಲು...

ಹಿಂದಿಯಲ್ಲಿ ಅಭಿನಯಿಸಿದ್ದು ಇದು ಮೊದಲಲ್ಲ. ಇದು ಮೂರನೇ ಸಿನಿಮಾ. ಆದರೆ ಸ್ಟಾರ್‌ ನಟರ ಸಿನಿಮಾ ಅಂತ ಬಂದಾಗ ಇದು ಮೊದಲು. ಹಾಗೆ ನೋಡಿದರೆ ನನ್ನ ಸಿನಿಮಾ ಜರ್ನಿ ಶುರುವಾಗಿದ್ದೇ ಹಿಂದಿ ಸಿನಿಮಾದ ಮೂಲಕ. ಆರಂಭದ ದಿನಗಳಲ್ಲಿ ಪಿ.ಎಸ್‌. ರಂಗ ಅವರು ಲೇಖಕ ಬೆಸಗರಹಳ್ಳಿ ರಾಮಣ್ಣನವರ ಬೆಲುವ ಪರಂಗಿ ಗಿಡಗಳು ಕೃತಿ ಆಧರಿಸಿ ಉದ್ಭವ ಅಂತ ಹಿಂದಿ ಸಿನಿಮಾ ಮಾಡಿದ್ದರು. ಅದು ಬೆಂಗಳೂರಿನಲ್ಲೇ ನಿರ್ಮಾಣವಾಗಿತ್ತು. ಅದರಲ್ಲಿ ನಾನು ಅಭಿನಯಿಸಿದ್ದೆ. ಆದಾದ ನಂತರ ದೂಸ್ರಾ ಅಂತ ಮತ್ತೊಂದು ಹಿಂದಿಯ ಕಿರುಚಿತ್ರ ಇಲ್ಲಿಯೇ ನಿರ್ಮಾಣವಾಗಿತ್ತು. ಅದರಲ್ಲೂ ಅಭಿನಯಿಸಿದ್ದೆ. ಆನಂತರದ ತೆನಾಲಿ ರಾಮ, ಸೋನ್‌ ಬಾಯಿ ಸೇರಿದಂತೆ ಹಿಂದಿಯ ಹಲವು ಧಾರಾವಾಹಿ ಮತ್ತು ಟೆಲಿಫಿಲ್ಮ್‌ಗಳಲ್ಲಿ ಅಭಿನಯಿಸಿದ್ದೆ. ಇಷ್ಟಾಗಿಯೂ ಸ್ಟಾರ್‌ ನಟರು ಇರುವಂತಹ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದು ಇದೇ ಮೊದಲು. ಈ ಅವಕಾಶ ಸಿಕ್ಕಿದ್ದು ನಿರ್ದೇಶಕ ಜಗನ್‌ ಶಕ್ತಿ ಮೂಲಕ.

ಮಿಷನ್‌ ಮಂಗಲ್‌ ನಿರ್ದೇಶಕ ಜಗನ್‌ಶಕ್ತಿ ಮೊದಲೇ ಪರಿಚಯ

ಕೆಲವು ವರ್ಷಗಳ ಹಿಂದೆ ಪ್ರಕಾಶ್‌ ಬೆಳವಾಡಿ ‘ದೂಸ್ರಾ’ ಅಂತ ಒಂದು ಕಿರುಚಿತ್ರ ಮಾಡಿದ್ದರು. ಅದರಲ್ಲಿ ನಾನು ಅಭಿನಯಿಸಿದ್ದೆ. ಅದರಲ್ಲಿ ಜಗನ್‌ ಶಕ್ತಿ ಕೂಡ ಪ್ರಕಾಶ್‌ ಬೆಳವಾಡಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ನನಗೆ ಜಗನ್‌ ಪರಿಚಯವಾಗಿದ್ದರು. ಅಲ್ಲಿಂದ ನಮ್ಮಿಬ್ಬರ ಪರಿಚಯ ನಿರಂತರವಾಗಿತ್ತು. ಹೀಗೆಯೇ ಒಮ್ಮೆ ಅವರು ಔಪಚಾರಿಕವಾಗಿ ಮಾತನಾಡುವಾಗ ಮಿಷನ್‌ ಮಂಗಲ್‌ ಸಿನಿಮಾದ ಬಗ್ಗೆ ಹೇಳಿದ್ದರು. ಬೆಂಗಳೂರು ಹುಡುಗ, ಅಷ್ಟುದೊಡ್ಡ ಸಾಹಸಕ್ಕೆ ಕೈ ಹಾಕುತ್ತಿದ್ದಾನೆ, ಒಳ್ಳೆಯದಾಗಲಿ ಅಂತ ಮನಸಲ್ಲಿ ಅಂದುಕೊಂಡು ಅಲ್‌ ದಿ ಬೆಸ್ಟ್‌ ಹೇಳಿದ್ದೆ .ಆದಾದ ಕೆಲವು ದಿನಗಳ ನಂತರ ಆತ ಫೋನ್‌ ಮಾಡಿ, ಮಿಷನ್‌ ಮಂಗಲ್‌ ಸಿನಿಮಾದಲ್ಲಿ ನೀವು ಇರಬೇಕು. ಪ್ರಮುಖವಾದ ಪಾತ್ರ. ಅಭಿನಯಿಸಿದರೆ ಚೆನ್ನಾಗಿರುತ್ತೆ ಅಂದ್ರು. ಹಾಗೆಯೇ ಇದು ಅಕ್ಷಯ್‌ ಕುಮಾರ್‌ ಅಭಿನಯದ ಸಿನಿಮಾ ಅಂತಲೂ ಹೇಳಿದ್ದರು. ಸ್ಟಾರ್‌ ಸಿನಿಮಾ ಎನ್ನುವುದಕ್ಕಿಂತ ನಾನೊಬ್ಬ ಕಲಾವಿದ, ಸಿನಿಮಾದ ಕತೆ ಮತ್ತು ಪಾತ್ರ ಚೆನ್ನಾಗಿದ್ದರೆ ಯಾಕೆ ಮಾಡಬಾರದು ಅಂತ ಯೋಚಿಸಿ, ಆಯ್ತು ಅಭಿನಯಿಸುತ್ತೇನೆ ಅಂತಂದೆ. ಸ್ವಲ್ಪ ಭಾಷೆಯ ತೊಡಕುಂಟಾಯಿತು ಎನ್ನುವುದನ್ನು ಬಿಟ್ಟರೆ ನಟನೆ ಎನ್ನುವುದರಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ.

‘ಮಿಷನ್ ಮಂಗಲ್‌’ನಲ್ಲಿ ಅಕ್ಷಯ್ ಜೊತೆ ಕನ್ನಡದ ಹೆಮ್ಮೆಯ ನಟ ದತ್ತಣ್ಣ

ವಿಜ್ಞಾನಿ ಆಗುವ ಆಸೆ ಕೊನೆಗೂ ಈಡೇರಿತು...

ನಿಜ ಜೀವನದಲ್ಲಿ ನಾನು ಏನೇನು ಆಗಲು ಸಾಧ್ಯವಾಗಿರಲಿಲ್ಲವೋ ಅದು ಸಿನಿಮಾದಲ್ಲಿ ಸಾಧ್ಯವಾಗಿದೆ. ಇದು ನನ್ನ ಸಿನಿಮಾ ಬದುಕಿನ ವೈಶಿಷ್ಟ್ಯ. ಏರ್‌ಫೋರ್ಸ್‌ಗೆ ಸೇರುವ ಮುಂಚೆ ಸೈಂಟಿಸ್ಟ್‌ ಆಗ್ಬೇಕು ಆನ್ನೋ ಆಸೆಯಿತ್ತು. ಹಾಗಂತ ಆ ನಿಟ್ಟಿನಲ್ಲಿ ನಾನು ಯಾವುದೇ ಪ್ರಯತ್ನ ಮಾಡಿರಲಿಲ್ಲ. ಆದರೆ ಅಂತಹದೊಂದು ಆಸೆ ಇದ್ದಿದ್ದು ನಿಜ. ಕೊನೆಗೆ ಆರ್ಮಿಗೆ ಹೋದೆ. ಅಲ್ಲಿಂದ ಬಂದು ಸಿನಿಮಾ ನಟನಾದೆ. ನಿಜ ಜೀವನದಲ್ಲಿ ಆಗ್ಬೇಕು ಅಂತಂದುಕೊಂಡಿದ್ದವು ಆ ಕಾರಣಕ್ಕೆ ಆಗಲಿಲ್ಲ. ಅವೆಲ್ಲ ಸಿನಿಮಾದಲ್ಲಿ ಸಾಧ್ಯವಾದವು. ‘ಮಿಷನ್‌ ಮಂಗಲ್‌’ನಲ್ಲಿ ನಾನು ವಿಜ್ಞಾನಿ ಆಗಿದ್ದೇ ಅದಕ್ಕೆ ಸಾಕ್ಷಿ. ಇನ್ನು ನಿಜ ಜೀವನದಲ್ಲಿ ಸದಾ ಮೌನವನ್ನೇ ಹೆಚ್ಚು ಇಷ್ಟಪಡುವ ನಾನು ಹಾಸ್ಯ ಮಾಡಬಲ್ಲನೇ ಎನ್ನುವ ಪ್ರಶ್ನೆ ಇದ್ದೇ ಇತ್ತು. ಅದು ಕೂಡ ಸಿನಿಮಾದಲ್ಲಿ ಸಾಧ್ಯವಾಯಿತು. ‘ನೀರ್‌ದೋಸೆ’ ಸಿನಿಮಾ ನೋಡಿದವರೆಲ್ಲ ನಿಮ್ಮ ಕಾಮಿಡಿ ಸೆನ್ಸ್‌ ಸಖತ್‌ ಆಗಿದೆ ಅಂದ್ರು. ಕಲಾವಿದರ ಬದುಕೇ ಹಾಗೆ.

ಅದೆಲ್ಲ ಕಾರ್ಪೊರೇಟ್‌ ಕಲ್ಚರ್‌...

ಬಾಲಿವುಡ್‌ ಭಯಂಕರ ಬೆಳೆದಿದೆ. ಅಲೆಲ್ಲ ಸಿನಿಮಾ ನಿರ್ಮಾಣ ಅನ್ನೋದು ಪಕ್ಕಾ ಕಾರ್ಪೊರೇಟ್‌ ಸ್ಟೈಲ್‌ಗೆ ಬದಲಾಗಿದೆ. ಶೂಟಿಂಗ್‌ ನಲ್ಲೂ ಶಿಸ್ತು, ಪೇಮೆಂಟ್‌ನಲ್ಲೂ ಶಿಸ್ತು. ದುರಂತ ಅಂದ್ರೆ ನಮ್ಮಂತಹ ಸಣ್ಣ ಪುಟ್ಟಕಲಾವಿದರಿಗೂ ನೀಡುವ ಪೇಮೆಂಟ್‌ ಮೇಲೂ ಟ್ಯಾಕ್ಸ್‌ ಇರುತ್ತೆ ಎನ್ನುವುದು ಕೊಂಚ ಬೇಸರ. ಅದು ಬಿಟ್ಟರೆ ಎಲ್ಲವೂ ನೀಟ್‌. ಶೂಟಿಂಗ್‌ ಇಂತಿಷ್ಟುಹೊತ್ತಿಗೆ ಅಂತ ಟೈಮ್‌ ಕೊಟ್ಟರೆ ಮುಗೀತು, ಅಷ್ಟೊತ್ತಿಗೆ ನಾವು ಅಲ್ಲಿರಬೇಕು. ಚೆನ್ನಾಗಿತ್ತು ಆ ಅನುಭವ. ಶೂಟಿಂಗ್‌ ಎಷ್ಟೇ ಬಾಕಿಯಿದ್ದರೂ, ಸಂಜೆ 6 ಗಂಟೆಯಾದ್ರೆ ಪ್ಯಾಕಪ್‌. ಅದು ಒಂಥರ ಶಿಸ್ತು ಬೆಳೆಸುತ್ತದೆ. ಮಿಷನ್‌ ಮಂಗಲ್‌ ಚಿತ್ರೀಕರಣದ ಉದ್ದಕ್ಕೂ ನಾನು ಅಂತಹ ಶಿಸ್ತು ನೋಡಿದೆ. ಅಕ್ಷಯ್‌ ಕುಮಾರ್‌ ಸೇರಿ ಪ್ರತಿಯೊಬ್ಬರು ಸರಿಯಾದ ಸಮಯಕ್ಕೆ ಸೆಟ್‌ಗೆ ಬರುತ್ತಿದ್ದರು. ಆ ದಿನದ ಶೂಟಿಂಗ್‌ ಮುಗಿಸಿಕೊಂಡು ವಾಪಸ್‌ ಆಗುತ್ತಿದ್ದರು. ಅವರ ಜತೆಗಿನ ಒಟನಾಟವೇ ಚೆನ್ನಾಗಿತ್ತು. ಅವರಿಂದ ನಾನು ಒಂದಷ್ಟುಕಲಿತೆ ಎನ್ನುವುದು ನಿಜ.

ತುಂಬಾ ಮಾನವೀಯ ಗುಣವಿರುವ ಮನುಷ್ಯ..

ನಾನು ಕಂಡ ನಟರ ಪೈಕಿ ಅಕ್ಷಯ್‌ ಕುಮಾರ್‌ ತುಂಬಾ ಸ್ಪೆಷಲ್‌ ವ್ಯಕ್ತಿ. ಕನ್ವೇನ್‌ಷನಲ್‌ ಹೀರೋ. ಮುಖದ ಮೆರಗು, ಬಟ್ಟೆಮೆರೆಗು ಎಲ್ಲವೂ ವಿಶೇಷ. ಅಷ್ಟುದೊಡ್ಡ ಸ್ಟಾರ್‌ ನಟ , ಕಿಂಚಿತ್ತು ಹಮ್ಮು-ಬಿಮ್ಮು ಇಟ್ಟುಕೊಂಡ ಮನುಷ್ಯ ಅಲ್ಲ. ತುಂಬಾ ಸರಳ ವ್ಯಕ್ತಿತ್ವ. ಮೊದಲ ದಿನ ನನ್ನನ್ನು ಪರಿಚಯಿಸಿಕೊಂಡ ಬಗೆಯೇ ಸೊಗಸಾಗಿತ್ತು. ಬಿಗಿಹಿಡಿದ ಅಪ್ಪುಗೆಯಲ್ಲಿ ಅತ್ಯಂತ ಆತ್ಮೀಯತೆ ತೋರಿ, ಮಾತನಾಡಿಸಿದರು. ಅಲ್ಲಿಂದ ಶುರುವಾಯಿತು ನಮ್ಮಿಬ್ಬರ ತಮಾಷೆ, ಹುಡುಗಾಟಿಕೆಯ ಮಾತು-ಮಂಥನ. ಪ್ರತಿದಿನ ಸೆಟ್‌ಗೆ ಬಂದಾಗ ಪ್ರೀತಿಯ ಅಪ್ಪುಗೆಯಲ್ಲಿ ಆತ್ಮೀಯತೆಯ ಮಾತುಗಳನ್ನಾಡುವುದು ಸಹಜವಾಯಿತು. ತುಂಬಾ ಗೌರವದಿಂದಲೇ ಮಾತನಾಡಿಸುತ್ತಿದ್ದರು. ನಾನು ಕೂಡ ಅಷ್ಟೇ ಪ್ರೀತಿಯಲ್ಲಿ ಅಕ್ಷಯ್‌ ಅಂತಲೇ ಕರೆಯುತ್ತಿದ್ದೆ. ಇದರಾಚೆ ಆತನ ಸಾಮಾಜಿಕ ಕಾಳಜಿ ನನಗೆ ತುಂಬಾ ಇಷ್ಟ. ಎಲ್ಲಿಯೋ ಪ್ರಕೃತಿ ವಿಕೋಪವಾದರೆ, ಇನ್ನಾರಿಗೋ ತೊಂದರೆಯಾದರೆ ಉದಾರವಾಗಿ ದೇಣಿಗೆ ನೀಡುವ ಆತನ ಮಾನವೀಯ ಗುಣಕ್ಕೆ ನನ್ನದೊಂದು ಸಲಾಂ. ತುಂಬಾ ಸರಳತೆ ಇರುವ ಮನುಷ್ಯ. ಸ್ಟಾರ್‌ ಇಮೇಜ್‌ ಅನ್ನು ಖಾಸಗಿ ಬದುಕಿಗೆ ಅಂಟಿಸಿಕೊಂಡಿಲ್ಲ. ಇಂತಹವರು ಅಪರೂಪ. ಅದು ಆತನ ಪತ್ನಿಯಿಂದ ಬಂದ ಗುಣ ಇರಬೇಕು.

 

ಒಂದೊಳ್ಳೆ ಸಿನಿಮಾ ಮಾಡಿದ ಖುಷಿಯಿದೆ..

ಸಣ್ಣದು, ದೊಡ್ಡದು ಅಂತಲ್ಲ, ನಾನು ಅಭಿನಯಿಸುವ ಪ್ರತಿ ಸಿನಿಮಾವೂ ನನಗೆ ಮುಖ್ಯ. ಅದು ಯಾವುದೇ ಭಾಷೆಯ ಸಿನಿಮಾವಾದರೂ ಸರಿ. ಆದರೂ ಮಿಷನ್‌ ಮಂಗಲ್‌ ಸ್ವಲ್ಪ ವಿಶೇಷ. ಯಾಕಂದ್ರೆ ಇದು ಬಾಹ್ಯಕಾಶ ವಿಜ್ಞಾನಿಗಳ ಸಾಧನೆಯ ಕುರಿತು ಮಾಡಿದ ಸಿನಿಮಾ. ಅನೇಕ ಹೊಸ ಸಂಗತಿಗಳು ಈ ಸಿನಿಮಾದಲ್ಲಿವೆ. ನಿರ್ದೇಶಕರು ಇದಕ್ಕಾಗಿ ಸಾಕಷ್ಟುಸಂಶೋಧನೆ ಮಾಡಿದ್ದಾರೆ. ‘ಕತೆ ಸಿದ್ಧಪಡಿಸಿಸುವುದಕ್ಕಾಗಿ ನಾನು ದೇಶವೆಲ್ಲ ಸುತ್ತಿದ್ದೇನೆ ’ಅಂತ ನಿರ್ದೇಶಕರು ಹೇಳಿದ್ದನ್ನು ನಾನು ಕೇಳಿದ್ದೇನೆ. ಇದೆಲ್ಲ ತಮಾಷೆ ಅಲ್ಲ. ಇಸ್ರೋದಂತಹ ಒಂದು ಸಂಸ್ಥೆಯನ್ನು ಸೆಟ್‌ ಮೂಲಕ ಮರು ಸೃಷ್ಟಿಸಿ, ಅಲ್ಲಿ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ. ಇದಕ್ಕೆ ದೊಡ್ಡ ಮಟ್ಟದ ಹಣ ಸುರಿಯಲಾಗಿದೆ. ಹಾಗೆಯೇ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಹಣ ಮಾಡ್ಬೇಕು, ಹೆಸರು ಪಡೆಯಬೇಕು ಎನ್ನುವುದಕ್ಕಿಂತ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರಿಗೂ ಏನೋ ಒಂದು ಹೇಳ್ಬೇಕು ಎನ್ನುವ ತುಡಿತವಿದೆ. ಹಾಗಾಗಿ ಸಿನಿಮಾದಲ್ಲಿ ಅದ್ಧೂರಿತನ ತುಂಬಿಕೊಂಡಿದೆ. ಅವರ ಶ್ರಮ ಸಾರ್ಥಕವಾಗಬೇಕಾದ್ರೆ, ಸಿನಿಮಾ ಪ್ರೇಕ್ಷಕರಿಗೆ ತಲುಪಬೇಕು.

ಹೊಂದಾಣಿಕೆಯೇ ಅದ್ಭುತ ಎನಿಸಿತು...

ಇಲ್ಲಿಯ ಹಾಗೆಯೇ ಅಲ್ಲೂ ಕೂಡ, ಸೆಟ್‌ಗೆ ಹೋದ್ರೆ ಎಲ್ಲರೂ ಒಂದು ಫ್ಯಾಮಿಲಿ ಹಾಗೆಯೇ ಇರುತ್ತಾರೆ. ಸಿನಿಮಾ ಜಗತ್ತಿಗೆ ಅದು ತೀರಾ ಅಗತ್ಯ. ಇಲ್ಲಿ ನಾನು ವಿಜ್ಞಾನಿ, ಅಕ್ಷಯ್‌ ಪ್ರಾಜೆಕ್ಟ್ ಡೈರೆಕ್ಟರ್‌, ವಿದ್ಯಾಬಾಲನ್‌ ಮಿಷನ್‌ ಡೈರೆಕ್ಟರ್‌. ಉಳಿದವರೆಲ್ಲ ಸೈಂಟಿಸ್ಟ್‌. ಪ್ರತಿ ಪಾತ್ರಗಳಿಗೂ ಅದರದ್ದೇಯಾದ ಮಹತ್ವವಿದೆ. ಪ್ರತಿ ಪಾತ್ರಗಳು ಸಿನಿಮಾದ ಉದ್ದಕ್ಕೂ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಚಿತ್ರೀಕರಣದ ವೇಳೆ ಪ್ರತಿಯೊಬ್ಬರು ಮುಖಾಮುಖಿ ಆದಾಗ ತಮಾಷೆಯೇ ಹೆಚ್ಚಾಗಿರುತ್ತಿತ್ತು. ಅದೇ ವಾತಾವರಣ ಮಾಧ್ಯಮಗಳ ಮುಂದೆ ಬಂದಾಗಲೂ ಕಾಣುತ್ತಿತ್ತು. ಮಾಧ್ಯಮದವರಿಗೆ ಅಕ್ಷಯ್‌ ನನ್ನನ್ನು ಪರಿಚಯಿಸುವ ಬಗೆಯೇ ವಿಶೇಷವಾಗಿರುತ್ತಿತ್ತು. ಎಷ್ಟೋ ಸರಿ ನನಗದು ಮುಜುಗರ. ಆದರೂ ಅವರು ಬಿಡುತ್ತಿರಲಿಲ್ಲ. ಮೂರು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟರು ಅಂತ ಪರಿಚಯಿಸುತ್ತಿದ್ದರು. ಅದು ಅವರ ದೊಡ್ಡ ಗುಣ.