Asianet Suvarna News Asianet Suvarna News

ವೃದ್ಧಾಪ್ಯದ ಒಂಟಿತನ ಬಲ್ಲಿರಾ? ಅದನ್ನ ನಿವಾರಿಸುವ 'ಗುಡ್‌ ಫೆಲೋಸ್‌'ಗೆ ರತನ್‌ ಟಾಟಾ ಬೆನ್ನೆಲುಬು

ವೃದ್ಧಾಪ್ಯದಲ್ಲಿ ಕಾಡುವ ಒಂಟಿತನದಿಂದ ನಮ್ಮ ದೇಶದ ವೃದ್ಧರು ಕಂಗೆಟ್ಟಿದ್ದಾರೆ. ಒಂದು ಅಂದಾಜಿನಂತೆ ಐದು ಕೋಟಿಗೂ ಅಧಿಕ ವೃದ್ಧರು ಸಂಗಾತಿಯಿಲ್ಲದೆ ಒಂಟಿತನ ಅನುಭವಿಸುತ್ತಾರೆ. ಅವರ ನೆರವಿಗೆ, ಅವರೊಂದಿಗೆ ಒಡನಾಡಲು ಯಾರೂ ಇರುವುದಿಲ್ಲ. ಅಂತಹ ವೃದ್ಧರ ನೆರವಿಗೆಂದೇ “ಗುಡ್‌ ಫೆಲೋಸ್‌ʼ ಸ್ಟಾರ್ಟಪ್‌ ಆರಂಭವಾಗಿದೆ. ಇದಕ್ಕೆ ಸ್ವತಃ ಹಿರಿಯ ನಾಗರಿಕರಾಗಿರುವ ರತನ್‌ ಟಾಟಾ ಬೆನ್ನೆಲುಬಾಗಿ ನಿಂತಿದ್ದಾರೆ.
 

Senior citizens feel loneliness good fellows start up help for them
Author
First Published Jan 20, 2023, 4:33 PM IST

ಒಂಟಿತನವೆಂದರೆ… ಅದು ಅನುಭವಿಸಿದಾಗಲೇ ತಿಳಿಯುವ ಯಾತನೆ. ಸುತ್ತ ನಮ್ಮವರಿದ್ದರೂ ಕಾಡುವ ಒಂಟಿತನ ಬೇರೆ. ವಯಸ್ಸಾದ ಬಳಿಕ ಅಸಹಾಯಕತೆಯ ಮಡುವಲ್ಲಿದ್ದುಕೊಂಡು ಯಾರೂ ಇಲ್ಲದೆ ಎಲ್ಲವನ್ನೂ ತಾವೇ ನಿಭಾಯಿಸಿಕೊಳ್ಳುವ ಒಂಟಿತನ ಬೇರೆ. ಪ್ರತಿಯೊಂದೂ ಬೇರೆಯದೇ ಭಾವ. ಆದರೆ, ವಯಸ್ಸಾದ ಬಳಿಕ ಯಾರೂ ಇಲ್ಲದ ಸವಾಲೇ ಬೇರೆ ರೀತಿಯದ್ದು. ವೃದ್ಧಾಪ್ಯದ ಮಿತಿಯಲ್ಲಿ ಕೊರಗಬೇಕಾಗುತ್ತದೆ. ವೃದ್ಧರಾದ ಬಳಿಕ ಮಕ್ಕಳು, ಕುಟುಂಬದವರು ಯಾರಾದರೂ ನೋಡಿಕೊಳ್ಳುತ್ತಾರೆಂಬ ಭರವಸೆ ಇಲ್ಲದ ದಿನಗಳಿವು. ಇಂತಹ ಸಮಯದಲ್ಲಿ ಕಾಡುವ ಒಂಟಿತನ ಅತ್ಯಂತ ತೀವ್ರವಾದದ್ದು. ಊಟ-ತಿಂಡಿ, ದೈನಂದಿನ ಕೆಲಸಕಾರ್ಯಗಳಿಗೆ ಇನ್ನೊಬ್ಬರನ್ನು ಅವಲಂಬಿಸಿ ಬದುಕಬೇಕಾದ ಸನ್ನಿವೇಶದಲ್ಲೂ ತಾವೇ ಅನಿವಾರ್ಯವಾಗಿ ಎಲ್ಲವನ್ನೂ ಮಾಡಿಕೊಳ್ಳಬೇಕಾಗುತ್ತದೆ. ಕಾಡುವ ಒಂಟಿತನದೊಂದಿಗೆ ಕೆಲಸವನ್ನೂ ಮಾಡಿಕೊಳ್ಳಲು ಸಾಧ್ಯವಾಗದ ಭಾವನೆಯಿಂದ ವೃದ್ಧರು ಕುಸಿಯುತ್ತಾರೆ. ವೃದ್ಧಾಪ್ಯದ ಈ ಸ್ಥಿತಿಯನ್ನು ಮನಗಂಡು ಹಲವು ರೀತಿಯ ಸೇವೆ ನೀಡುವ ಸಂಸ್ಥೆಗಳು, NGOಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ದೇಶದ ಬಹುದೊಡ್ಡ ಉದ್ಯಮಿ ಹಾಗೂ ಈಗ ವೃದ್ಧರಾಗಿರುವ ರತನ್‌ ಟಾಟಾ ಸ್ವತಃ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ವೃದ್ಧಾಪ್ಯದ ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿರುವ ಅವರು, ವೃದ್ಧರಿಗೆ ಸೇವೆ ನೀಡುವ ಸ್ಟಾರ್ಟಪ್‌ ಒಂದರಲ್ಲಿ ಹೂಡಿಕೆ ಮಾಡಿದ್ದಾರೆ.   
ಇದಂತೂ ಸ್ಟಾರ್ಟಪ್‌ (Start up) ಯುಗ. ಎಲ್ಲವೂ ನವೋದ್ಯಮಗಳ ಮೂಲಕ ಸಾಕಾರಗೊಳ್ಳುವ ಕಾಲ. ಕೃಷಿ ಕ್ಷೇತ್ರದ ಹಲವು ಸವಾಲುಗಳಿಗೂ ನವೋದ್ಯಮಗಳು ಇಂದು ವಿಭಿನ್ನ ರೀತಿಯ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿವೆ. ಇದೀಗ ವೃದ್ಧಾಪ್ಯದ (Senior Citizen) ಸರದಿ. ಟಾಟಾ ಅವರ ಜನರಲ್‌ ಮ್ಯಾನೇಜರ್‌ ಆಗಿರುವ ಶಂತನು ನಾಯ್ಡು (Shantanu Naidu) ವೃದ್ಧರಿಗೆಂದೇ “ಗುಡ್‌ ಫೆಲೋಸ್‌ʼ (Good Fellows) ಎನ್ನುವ ನವೋದ್ಯಮವನ್ನು ಕಳೆದ ವರ್ಷ ಆರಂಭಿಸಿದ್ದು, ಇದಕ್ಕೆ ರತನ್‌ ಟಾಟಾ (Ratan Tata) ಬೆನ್ನೆಲುಬಾಗಿ ನಿಂತಿದ್ದಾರೆ. ಸ್ವತಃ ಹಿರಿಯ ನಾಗರಿಕರಾಗಿರುವ ರತನ್‌ ಟಾಟಾ, ಈ ಸೇವಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವುದಕ್ಕೆ ಸ್ಟಾರ್ಟಪ್‌ ಆರಂಭದ ಸಮಯದಲ್ಲಿ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಸಾಮಾನ್ಯವಾಗಿ, ರತನ್‌ ಟಾಟಾ ಅವರು ಉತ್ತಮ ಕಾರ್ಯ ಸಲ್ಲಿಸುವ ನವೋದ್ಯಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ಸಾಮಾನ್ಯ. ಇಂತಹ ಕಾರ್ಯಗಳಿಗೆ ತಮ್ಮ ಬೆಂಬಲವಿದೆ ಎಂದು ಯಾವತ್ತೂ ಹೇಳುತ್ತಾರೆ. ಅದರಂತೆಯೇ, ತಮ್ಮದೇ ಜನರಲ್‌ ಮ್ಯಾನೇಜರ್‌ ಶಂತನು ನಾಯ್ಡು ಅವರ ಈ ಕಾರ್ಯವನ್ನೂ ಸಹ ಮೆಚ್ಚಿಕೊಂಡಿದ್ದು, ಹಣಕಾಸು (Financial) ಬೆಂಬಲಕ್ಕೆ ನಿಂತಿದ್ದಾರೆ. 

ಒಂಟಿತನ ಸಮಸ್ಯೆ ವಯಸ್ಸಾದವರಲ್ಲಿ ಹೆಚ್ಚಂತೆ, ಇದ್ಯಾಕೆ?

ಒಡನಾಡಿ (Partner) ಇಲ್ಲದ ದಿನಗಳು…
“ಗುಡ್‌ ಫೆಲೋಸ್‌ʼ ಸ್ಟಾರ್ಟಪ್‌ ಆರಂಭದ ಸಮಾರಂಭದಲ್ಲಿ ರತನ್‌ ಟಾಟಾ ಅವರು ಒಂದು ಮಾತು ಹೇಳಿದ್ದರು, “ಒಡನಾಡಿ ಜತೆಗಿರುವವರೆಗೂ ಒಂಟಿತನದ ಅನುಭವದ ಬಗ್ಗೆ ತಿಳಿಯುವುದಿಲ್ಲ. ಒಡನಾಡಿ ಇಲ್ಲದಿರುವ ಸಮಯದಲ್ಲಿ ಅವರನ್ನು ಬಯಸುತ್ತಾ ಕಳೆಯುವ ದಿನಗಳು ನಿಜಕ್ಕೂ ಯಾತನಾಮಯʼ ಎಂದು ಹೇಳಿದ್ದರು. ಹಾಗೆ ಏಕಾಂಗಿಯಾಗಿ ದಿನ ಕಳೆಯುವವರಿಗೆಂದೇ “ಗುಡ್‌ ಫೆಲೋಸ್‌ʼ ಆರಂಭವಾಗಿದೆ. 
ವೃದ್ಧಾಪ್ಯ (Old Age) ಬರುವವರೆಗೂ ಯಾರೂ ಅದರ ಬಗ್ಗೆ ಚಿಂತಿಸುವುದಿಲ್ಲ. ನಮ್ಮ ದೇಶದಲ್ಲಂತೂ ಈ ಬಗ್ಗೆ ಎಚ್ಚರಿಕೆ ವಹಿಸುವವರು ಕಡಿಮೆಯೇ. ಇದ್ದುಬಿದ್ದುದನ್ನೆಲ್ಲ ಮಕ್ಕಳ ಮೇಲೆ ಹೂಡಿಕೆ (Investment) ಮಾಡಿ ಕೈ ಖಾಲಿ ಮಾಡಿಕೊಳ್ಳುವ ಮಧ್ಯಮವರ್ಗದವರೇ ಹೆಚ್ಚು. ಮಕ್ಕಳಿಗಾಗಿ ಏನೂ ಮಾಡಬಾರದೆಂದಲ್ಲ. ಆದರೆ, ಆ ಮಕ್ಕಳು ವೃದ್ಧಾಪ್ಯದಲ್ಲಿ ನಮ್ಮನ್ನು ನೋಡಿಕೊಳ್ಳುವ ಗ್ಯಾರೆಂಟಿ ಇರುವುದಿಲ್ಲ. ಇಂದಿನ ದಿನಗಳಲ್ಲಿ ಅದನ್ನು ನಿರೀಕ್ಷೆ (Expectation) ಮಾಡುವುದೂ ಸಲ್ಲದು ಎನ್ನುವಂತಾಗಿದೆ. ಹೀಗಿರುವಾಗ, ವೃದ್ಧಾಪ್ಯದ ಸ್ಥಿತಿಯನ್ನು (Situation) ಅಂದಾಜು ಮಾಡಿ, ಕೊನೆಯ ಪಕ್ಷ ಆರ್ಥಿಕ ಸ್ಥಿತಿಗತಿಯನ್ನಾದರೂ ಚೆನ್ನಾಗಿ ಇಟ್ಟುಕೊಳ್ಳುವುದು ಅಗತ್ಯ. ಆಗ ಹಣಕ್ಕಾಗಿ ಇನ್ನೊಬ್ಬರ ಮುಂದೆ ಕೈಚಾಚುವ ಸ್ಥಿತಿಯಾದರೂ ಇರುವುದಿಲ್ಲ. ವೃದ್ಧಾಪ್ಯದ ಒಂಟಿತನ ಅನುಭವಿಸುವುದು ತಪ್ಪುವುದಿಲ್ಲ. ಅದರಲ್ಲೂ ಸಂಗಾತಿ ಇಲ್ಲದೆ, ಪರಸ್ಪರ ಅವಲಂಬನೆ (Depend) ದೂರವಾಗಿ ದಿನಗಳನ್ನು ಕಳೆಯುವುದು ಇನ್ನಷ್ಟು ಕಷ್ಟಕರವಾಗುತ್ತದೆ.

Loneliness and Aging: ಹೀಗೆ ಬದುಕಿದ್ರೆ ಬೇಗ ವೃದ್ಧರಾಗ್ತೀರಿ, ಎಚ್ಚರ

ಗುಡ್‌ ಫೆಲೋಸ್‌ ಏನು ಮಾಡುತ್ತದೆ?
ಕ್ರಿಯಾಶೀಲ (Active) ಯುವಕರನ್ನು ವೃದ್ಧರೊಂದಿಗೆ ಬೆರೆಯುವಂತೆ ಮಾಡುತ್ತದೆ. ವಿವಿಧ ಚಟುವಟಿಕೆಗಳ (Activity) ಮೂಲಕ ವೃದ್ಧರನ್ನು ಕ್ರಿಯಾಶೀಲರನ್ನಾಗಿ ಇಡುವುದು ಇವರ ಕಾರ್ಯ. ಒಟ್ಟಾರೆ, ವೃದ್ಧರ ಒಂಟಿತನ (Loneliness) ದೂರಮಾಡುವುದು ಇವರ ಕಾರ್ಯ. ಪ್ರಸ್ತುತ, ಇನ್ನೂ ಆರಂಭದ ಹಂತದಲ್ಲಿರುವ ಈ ಸ್ಟಾರ್ಟಪ್‌ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಪುಣೆ, ಚೆನ್ನೈ ಹಾಗೂ ಬೆಂಗಳೂರಿಗೆ ಸೇವೆ (Service) ವಿಸ್ತರಿಸುವ ಉದ್ದೇಶ ಹೊಂದಿದೆ. 

Follow Us:
Download App:
  • android
  • ios