ನವೆಂಬರ್ 5ರಂದು ಬಿಡುಗಡೆಯಾಗಲಿರುವ 'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಕೆಬಿಸಿ ಶೋನಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಅಮಿತಾಭ್ ಬಚ್ಚನ್ ಅವರ ಪ್ರಶ್ನೆಗೆ ಉತ್ತರಿಸಿದ ಸಾಯಿ ಪಲ್ಲವಿ, ತಮ್ಮ ಭಾವಿ ಪತಿ ಹೇಗಿರಬೇಕು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
ಮುಂಬೈ: ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ, ನಟರಾದ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸಿರುವ ಬಹುನಿರೀಕ್ಷಿತ 'ರಾಮಾಯಣ: ಭಾಗ 1' (Ramayana: Part 1) ಚಲನಚಿತ್ರವು ನವೆಂಬರ್ 5 ರಂದು ವಿಶ್ವದಾದ್ಯಂತ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ಇದರ ಮೇಲೆ ವೀಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಪ್ರಮೋಷನ್ಗಾಗಿ ಕಲಾವಿದರು ವಿವಿಧ ಷೋಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಭಾಗವಾಗಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರು ಅಮಿತಾಭ್ ಬಚ್ಚನ್ ಅವರು ಕೌನ್ ಬನೇಗಾ ಕರೋರ್ಪತಿ (Kaun Banega Crorepati)ಯಲ್ಲಿ ಕಾಣಿಸಿಕೊಂಡಿದ್ದು, ಈ ವಿಶೇಷ ಎಪಿಸೋಡ್ ದೀಪಾವಳಿ ಸಂದರ್ಭದಲ್ಲಿ ಪ್ರಸಾರ ಆಗಲಿದೆ.
ಈ ಷೋನಲ್ಲಿ ನಟರು ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ. ಅದರಲ್ಲಿ ಹೆಚ್ಚು ಗಮನ ಸೆಳೆದದ್ದು ನಟಿ ಸಾಯಿ ಪಲ್ಲವಿಯವರ ಕನಸಿನ ಹುಡುಗನ ಕುರಿತು ಅರ್ಥಾತ್ ಮದುವೆಯಾಗುವ ಹುಡುಗ ಯಾವ ರೀತಿ ಇರಬೇಕು ಎಂದು ಅಮಿತಾಭ್ ಬಚ್ಚನ್ ಅವರು ಕೇಳಿದಾಗ. ಈ ಕುರಿತು ಮೊದಲ ಬಾರಿಗೆ ಓಪನ್ ಆಗಿ ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದಾರೆ ರಾಮಾಯಣದ ಸೀತಾಮಾತಾ ಸಾಯಿ ಪಲ್ಲವಿ (Sai Pallavi).
ಭಾವಿ ಪತಿ ಹೀಗಿರಬೇಕು
ತಮ್ಮ ಭಾವಿ ಪತಿ ಹೇಗಿರಬೇಕು ಎಂದು ಹೇಳಿರುವ ಅವರು, ಆತ ತಮ್ಮ ಸಂಪೂರ್ಣ ವೈಯಕ್ತಿಕ ಮತ್ತು ವೃತ್ತಿಪರ ಸ್ವಾತಂತ್ರ್ಯವನ್ನು ಅನುಮತಿಸುವ ಮತ್ತು ತಮ್ಮ ಗುರಿಗಳನ್ನು ಬೆನ್ನಟ್ಟುವುದನ್ನು ನಿರ್ಬಂಧಿಸದ ಸಂಗಾತಿ ಬೇಕು ಎಂದಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಬಗ್ಗೆ ನನ್ನ ಬಲವಾದ ನಿಲುವಿಗೆ ಅನುಗುಣವಾಗಿ, ಅದನ್ನು ಗೌರವಿಸುವ ವ್ಯಕ್ತಿ ಬೇಕು ಎಂದಿದ್ದಾರೆ ನಟಿ. ಸಂಬಂಧದಲ್ಲಿ ವಿಶ್ವಾಸ ಇರಬೇಕು, ಪರಸ್ಪರ ಗೌರವಿಸಬೇಕು ಮತ್ತು ಉತ್ತಮ ಹಾಸ್ಯಪ್ರಜ್ಞೆ ಇರಬೇಕು ಎಂದಿದ್ದಾರೆ. ಕೊನೆಯಲ್ಲಿ ತಮಾಷೆಯಾಗಿ ಅವರು, ಆತನಿಗೆ ತುಂಬಾ ಚೆನ್ನಾಗಿ ಅಡುಗೆ ಮಾಡಲು ಬರಬೇಕು ಎಂದಾಗ ಅಲ್ಲಿದ್ದ ವೀಕ್ಷಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಈ ಮೂಲಕ ನಟಿ ತಮ್ಮ ಕನಸಿನ ಹುಡುಗನ ಬಗ್ಗೆ ರಿವೀಲ್ ಮಾಡಿದ್ದಾರೆ.
ಸಿನಿಮಾ ಕುರಿತು
ಇನ್ನು, ಈ ಸಿನಿಮಾದ ಕುರಿತು ಹೇಳುವುದಾದರೆ, ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ನವೆಂಬರ್ 5ರಂದು ‘ರಾಮಾಯಣ’ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಮುಂಗಡ ಟಿಕೆಟ್ ಮಾರಾಟದಿಂದಲೇ ಚಿತ್ರಕ್ಕೆ ಉತ್ತಮ ಆದಾಯ ಹರಿದುಬರುತ್ತಿದ್ದು, ಒಟ್ಟು ಗಳಿಕೆ ಈಗಾಗಲೇ 20 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ದೇಶದ ಹಲವು ಭಾಗಗಳಲ್ಲಿ ಸಾವಿರಾರು ಪ್ರದರ್ಶನಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಬ್ಬದ ರಜೆ ಹಾಗೂ ಚಿತ್ರದ ಮೇಲಿರುವ ಭಾರೀ ನಿರೀಕ್ಷೆಯನ್ನು ಗಮನಿಸಿದರೆ, ಬಿಡುಗಡೆಯ ದಿನದಂದು ಪ್ರದರ್ಶನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.






