ಸಂಬಂಧದಲ್ಲಿ ಪತ್ನಿಯ ಪಾತ್ರವೇ ಬೇರೆ, ಪತಿಯ ಪಾತ್ರವೇ ಬೇರೆ. ಇಬ್ಬರೂ ಬೇರೆ ಬೇರೆಯಾದ ಒಂದಿಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುತ್ತಾರೆ. ದಿನ ಬೆಳಗಾದರೆ ಆಕೆ ಬೇಗನೆದ್ದು ಅಡುಗೆ ಮಾಡಿ, ಮಕ್ಕಳನ್ನು ಶಾಲೆಗೆ ರೆಡಿ ಮಾಡುತ್ತಾಳೆ, ಆತ ಪೇಪರ್ ಓದಿ, ಜಿಮ್‌ಗೆ ಹೋಗುತ್ತಾನೆ. ಆಕೆ ಅಡುಗೆ ಮಾಡುತ್ತಾಳೆ, ಆತ ಮಕ್ಕಳನ್ನು ಶಾಲೆಯಿಂದ ಕರೆ ತಂದು ಅವರಿಗೆ ಹೋಂವರ್ಕ್ ಮಾಡಿಸುತ್ತಾನೆ, ಒಂದಿಷ್ಟು ಆಡಿಸುತ್ತಾನೆ. ಆಕೆ ಮನೆ ಸ್ವಚ್ಛಗೊಳಿಸಿದರೆ ಆತ ಬಟ್ಟೆ ಇಸ್ತ್ರಿ ಮಾಡುತ್ತಾನೆ. ಪ್ರತಿ ದಿನ ಇಬ್ಬರ ದಿನಚರಿಯೂ ಹೀಗೆಯೇ ಹೋಗುತ್ತಿರುತ್ತದೆ. ಕಡೆಗೊಂದು ದಿನ ಇಬ್ಬರಿಗೂ ಜೀವನವೇ ಬೋರಿಂಗ್. ಇದರಲ್ಲಿ ಯಾವ ವಿಶೇಷವೂ ಇಲ್ಲ ಎನಿಸಲಾರಂಭಿಸುತ್ತದೆ. ಇಂಥ ಸಮಯಕ್ಕೊಂದು ಸರಿಯಾದ ಪ್ರಯೋಗ ರೋಲ್ ರಿವರ್ಸಲ್. ಅದು ಒಂದು ದಿನಕ್ಕಿರಬಹುದು, ವಾರ ಅಥವಾ ತಿಂಗಳಿಗೇ ಇರಬಹುದು. ಪತಿಯ ಪಾತ್ರವನ್ನು ಪತ್ನಿ ನಿಭಾಯಿಸುವುದು ಹಾಗೂ ಪತ್ನಿಯ ಪಾತ್ರವನ್ನು ಪತಿ ನಿಭಾಯಿಸುವುದು- ಹೀಗೆ ಬದಲಿಸಿ ನೋಡಿ. 

ಯುವಜೋಡಿಗಳ ನಡುವೆ ಟ್ರೆಂಡ್ ಆಗುತ್ತಿರುವ ಈ ರೋಲ್ ರಿವರ್ಸಲ್‌ ನೀವೂ ಟ್ರೈ ಮಾಡಿ ನೋಡಿ ಎನ್ನಲು ಕೆಲ ಕಾರಣಗಳಿವೆ. 

ಆರಾಧ್ಯ ವಿಷಯದಲ್ಲಿ ಐಶ್ವರ್ಯ ರೈ ಸೂಪರ್‌ ಮಾಮ್ ಅಂತೆ!

ಸಂಬಂಧದ ಬೇಜಾರಿಗೆ ಬೈಬೈ
ರಿಲೇಶನ್‌ಶಿಪ್ ಬೋರ್‌ಡಂ ಎಂಬುದು ಸಾಮಾನ್ಯ. ಯಾವುದೇ ಸಂಬಂಧ ಹಳತಾಗುತ್ತಾ ಬಂದಂತೆ ಅದದೇ ದಿನಚರಿ, ಮಾತುಗಳಿಂದಾಗಿ ಬೋರ್ ಎನಿಸಲಾರಂಭಿಸುತ್ತದೆ. ಮೊದಮೊದಲು ಡೇಟಿಂಗ್‌ನಲ್ಲಿ ಹೊಟ್ಟೆಯಲ್ಲಿ ಕುಣಿಯುತ್ತಿದ್ದ ಚಿಟ್ಟೆಗಳೆಲ್ಲ ಈಗ ಎತ್ತ ಹೋದವೋ ಎಂದು ಹುಡುಕುವಂತಾಗುತ್ತದೆ. ಆದರೆ, ರೋಲ್ ರಿವರ್ಸಲ್ ಮಾಡಿಕೊಂಡಾಗ ನಿಮಗೆ ನಿಮ್ಮದೇ ವ್ಯಕ್ತಿತ್ವದ ಹೊಸ ಮುಖ ಕಾಣಿಸಲಾರಂಭಿಸುತ್ತದೆ. ನೀವು ಹೊಸ ಹವ್ಯಾಸಗಳನ್ನು ಎಕ್ಸ್‌ಪ್ಲೋರ್ ಮಾಡತೊಡಗುತ್ತೀರಿ. ಇದು ನಿಮ್ಮ ಸಂಬಂಧವನ್ನು ಮತ್ತೆ ಹೊಸತೆನಿಸುವಂತೆ ಮಾಡಬಹುದು. 

ನಿಮ್ಮ ಮ್ಯಾಸ್ಕುಲಿನ್ ಹಾಗೂ ಫೆಮಿನಿನ್ ಮುಖ
ಪ್ರತಿಯೊಬ್ಬ ಹುಡುಗಿಯಲ್ಲೂ ಹುಡುಗನ ಕೆಲ ಗುಣಗಳು, ಹುಡುಗರಲ್ಲಿ ಹುಡುಗಿಯರ ಗುಣಗಳು ಇರುತ್ತವೆ. ಆದರೆ ಮೇಲ್ನೋಟಕ್ಕೆ ಕಾಣುತ್ತಿರುವುದಿಲ್ಲ. ಸಮಾಜದ ನಿರೀಕ್ಷೆಗೆ ಸರಿಯಾಗಿ ವರ್ತಿಸುತ್ತಾ ನಮ್ಮ ಜೆಂಡರ್‌ಗೆ ಯಾವುದನ್ನು ತೋರಿಸಬೇಕೆಂದು ಎಲ್ಲ ಬಯಸುತ್ತಾರೋ ಹಾಗೇ ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ, ಹೀಗೆ ರೋಲ್ ರಿವರ್ಸಲ್ ಮಾಡಿಕೊಂಡಾಗ ಪತಿಯಲ್ಲಿರುವ ಹೆಣ್ಮನಸ್ಸು, ಪತ್ನಿಯಲ್ಲಿರುವ ಗಂಡಿನ ಗಡಸು ಗುಣಗಳಿಗೆ ಸರಾಗವಾಗಿ ಹೊರಬರಲು ಅವಕಾಶ ನೀಡಿದಂತಾಗುತ್ತದೆ. ಇದು ಇಬ್ಬರ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.  ಇದು ಕೇವಲ ಕೆಲಸಗಳಲ್ಲ, ರೊಮ್ಯಾನ್ಸ್ ವಿಷಯದಲ್ಲೂ ಪತ್ನಿಯೇ ಮೊದಲ ಮೂವ್ ತೋರುವುದು, ಡಾಮಿನೇಟ್ ಮಾಡುವುದರಿಂದ ಸಂಬಂಧ ಹೊಸತೆನಿಸಲಾರಂಭಿಸುತ್ತದೆ. 

ಸಹಾನುಭೂತಿ
ಒಬ್ಬರು ಮತ್ತೊಬ್ಬರ ಸ್ಥಾನದಲ್ಲಿ ನಿಂತು ಅನುಭವ ಪಡೆದಾಗ ಪತಿಯ ಕಷ್ಟಸುಖಗಳೇನೆಂಬುದು ಪತ್ನಿಗೂ, ಪತ್ನಿಯ ಕಷ್ಟಗಳೇನೆಂಬುದು ಪತಿಗೂ ಅರಿವಾಗುತ್ತದೆ. ಇದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಜೊತೆಗೆ ಇಬ್ಬರ ನಡುವೆ ಸಹಾನುಭೂತಿ ಬೆಳೆಯುತ್ತದೆ. ಈ ಅನುಭವದ ಬಳಿಕ ಒಬ್ಬರಿಗೊಬ್ಬರ ಭಾವನಾತ್ಮಕ ಬೆಂಬಲ ಹೆಚ್ಚುತ್ತದೆ. ಭಾವನಾತ್ಮಕ ಬೆಂಬಲವೇ ಆರೋಗ್ಯಕರ ವೈವಾಹಿಕ ಜೀವನದ ಒಳಗುಟ್ಟು ಎನ್ನುತ್ತವೆ ಅಧ್ಯಯನ ವರದಿಗಳು. 

ಸೇಫ್‌ ಸೆಕ್ಸ್‌ಗೆ ಕಾಂಡೋಮ್ ಬೆಸ್ಟ್: ಇದರ‌ ಬಗ್ಗೆ ನಿಮಗೆಷ್ಷು ಗೊತ್ತು ...

ಆತಂಕ ನಿವಾರಣೆ
ಬಹಳಷ್ಟು ಪತಿ ಅಥವಾ ಪತ್ನಿಯರಿಗೆ ತಾನು ಊರಿಗೆ ಹೋದರೆ ಅಥವಾ ಕಾರಣಾಂತರಗಳಿಂದ ಕೆಲ ಕಾಲ ದೂರವಿರಬೇಕಾಗಿ ಬಂದರೆ ಪಾರ್ಟ್ನರ್ ಒಂಟಿಯಾಗಿ ಮನೆಮಕ್ಕಳನ್ನು ಹೇಗೆ ನಿಭಾಯಿಸುತ್ತಾರೋ ಎಂಬ ಭಯವಿರುತ್ತದೆ. ತಾನಿಲ್ಲದಿದ್ದರೆ ಮನೆ ಗಬ್ಬೆದ್ದು ಹೋಗುವ ಜೊತೆಗೆ ಮಕ್ಕಲಿಗೆ ಸಕಾಲದಲ್ಲಿ ಹೊಟ್ಟೆಗೆ ಬೀಳುವುದಿಲ್ಲವೇನೋ ಎಂದು ಪತ್ನಿ ಕೊರಗಿದರೆ, ತಾನಿಲ್ಲದಿದ್ದರೆ ಪತ್ನಿಗೆ ಒಂದು ಬಿಲ್ ಕಟ್ಟಲೂ ತಿಳಿಯುವುದಿಲ್ಲ, ಸಣ್ಣ ಪುಟ್ಟ ಮನೆಗೆಲಸ ಮಾಡಿಸಬೇಕಿದ್ದರೂ ಅದು ತಿಳಿಯಲ್ಲ ಎಂದು ಪತಿ ಹೆದರುತ್ತಾನೆ. ಆದರೆ ರೋಲ್ ರಿವರ್ಸಲ್ ಮಾಡಿಕೊಂಡಾಗ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಪಾರ್ಟ್ನರ್ ಮನೆಯನ್ನು ಹೇಗೆ ನಿಭಾಯಿಸುತ್ತಾರೆಂಬ ಅರಿವಾಗುತ್ತದೆ. ಅಷ್ಟೇ ಅಲ್ಲ, ಆ ಕೆಲಸಗಳು ಗೊತ್ತಿಲ್ಲದಿದ್ದಲ್ಲಿ ಕಲಿಯಲೂ ಅವಕಾಶವಾಗುತ್ತದೆ. ಹೀಗೆ ಇಬ್ಬರ ಕೆಲಸಗಳನ್ನೂ ಒಬ್ಬರೇ ನಿಭಾಯಿಸಬಹುದೆಂಬುದು ತಿಳಿದಾಗ ಪಾರ್ಟ್ನರ್ ನಿರಾಳವಾಗಬಹುದು. 

ಮಕ್ಕಳಿಗೆ ಶಿಕ್ಷಣ
ಅಪ್ಪ ಅಮ್ಮನ ಕೆಲಸ ಮಾಡಿದಾಗ, ಅಮ್ಮನಂತೆ ವರ್ತಿಸಿದಾಗ ಹಾಗೂ ಅಮ್ಮ ಅಪ್ಪನಾದಾಗ ಮಕ್ಕಳಿಗೂ ಈ ಬದಲಾವಣೆ ಮಜಾ ಕೊಡುತ್ತದೆ. ಜೊತೆಗೆ, ಮನೆಕೆಲಸಗಳಿಗೆ ಲಿಂಗ ತಾರತಮ್ಯವಿಲ್ಲ ಎಂಬುದು ಅರಿವಾಗುತ್ತದೆ. ಗಂಡು ಹೆಣ್ಣು ಇಬ್ಬರೂ ಸಮಾನರು ಎಂದು ತಿಳಿಯುತ್ತದೆ. 

ರೋಲ್ ರಿವರ್ಸಲ್ ಎಂಬುದು ನಿಮ್ಮನ್ನು ಸಂಗಾತಿಯಾಗಿ ಹಾಗೂ ಪೋಷಕರಾಗಿ ಇನ್ನಷ್ಟು ಉತ್ತಮಗೊಳಿಸುವ ಜೊತೆಗೆ ವ್ಯಕ್ತಿಯಾಗಿಯೂ ಉತ್ತಮಗೊಳಿಸುತ್ತದೆ.