ಪವನ್ ಕಲ್ಯಾಣ್ ಮತ್ತು ಅನ್ನಾ ಲೆಝ್ನೆವಾ ತಮ್ಮ 13 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಜಂಟಿಯಾಗಿ ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಜ್ಯೋತಿಷಿ ವೇಣು ಸ್ವಾಮಿ ಅವರು ಹಿಂದೆ ನುಡಿದಿದ್ದ ಭವಿಷ್ಯದ ವೀಡಿಯೊ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಲೆಝ್ನೆವಾ ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಲು ಜಂಟಿಯಾಗಿ ನಿರ್ಧರಿಸಿದ್ದಾರೆ. ಪರಸ್ಪರ ಗೌರವ ಹಾಗೂ ತಿಳುವಳಿಕೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅಧಿಕೃತ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಆಘಾತಕಾರಿ ಸುದ್ದಿಯ ಬೆನ್ನಲ್ಲೇ, ಪ್ರಸಿದ್ಧ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಹಿಂದೆ ನುಡಿದಿದ್ದ ಜಾತಕ ಭವಿಷ್ಯದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿವೆ.
ಜಂಟಿ ಪ್ರಕಟಣೆ ಮತ್ತು ಮಕ್ಕಳ ಜವಾಬ್ದಾರಿ
ತಮ್ಮ ಹಿತೈಷಿಗಳಿಗೆ ಬಿಡುಗಡೆ ಮಾಡಿರುವ ಜಂಟಿ ಪ್ರಕಟಣೆಯಲ್ಲಿ, "ದಾಂಪತ್ಯ ಕೊನೆಗೊಂಡಿದ್ದರೂ, ನಾವಿಬ್ಬರೂ ಕೊನೆಯವರೆಗೂ ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ" ಎಂದು ಪವನ್ ಕಲ್ಯಾಣ್ ಹಾಗೂ ಅನ್ನಾ ತಿಳಿಸಿದ್ದಾರೆ. ಮಕ್ಕಳ ಮಾನಸಿಕ ನೆಮ್ಮದಿ ಮತ್ತು ಭವಿಷ್ಯಕ್ಕೆ ತಾವು ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.
2011ರಲ್ಲಿ ಬಿಡುಗಡೆಯಾದ 'ತೀನ್ ಮಾರ್' ಚಿತ್ರೀಕರಣದ ಸಮಯದಲ್ಲಿ ಪರಿಚಯಗೊಂಡ ಈ ಜೋಡಿ, 2013ರ ಡಿಸೆಂಬರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಪವನ್ ಅವರ ರಾಜಕೀಯ ಹಾಗೂ ಸಿನಿ ಪಯಣದಲ್ಲಿ ಅನ್ನಾ ಕೊಣಿದೇಲ ಸಾಥ್ ನೀಡಿದ್ದರು.
ವೈರಲ್ ಆಯ್ತು ವೇಣು ಸ್ವಾಮಿ ಹಳೆಯ ವಿಡಿಯೋ
ಈ ವಿಚ್ಛೇದನ ಸುದ್ದಿಯ ನಡುವೆಯೇ ಜ್ಯೋತಿಷಿ ವೇಣು ಸ್ವಾಮಿ ಅವರ ಹಳೆಯ ವೀಡಿಯೋಗಳು ಒಮ್ಮಿಂದೊಮ್ಮೆಲೆ ಮುನ್ನೆಲೆಗೆ ಬಂದಿವೆ. ಪವನ್ ಕಲ್ಯಾಣ್ ಜಾತಕದ ಬಗ್ಗೆ ಮಾತನಾಡಿದ್ದ ಅವರು, ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ದೊಡ್ಡ ಯಶಸ್ಸು ಕಂಡರೂ, ವೈಯಕ್ತಿಕ ಜೀವನದಲ್ಲಿ ಕೆಲವು ಪ್ರತಿಕೂಲ ಘಟನೆಗಳು ಹಾಗೂ ಮನಸ್ತಾಪಗಳು ಎದುರಾಗಲಿವೆ ಎಂದು ಅಂದಾಜಿಸಿದ್ದರು.
ಹಿಂದೆ ನಟ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನದ ಬಗ್ಗೆ ವೇಣು ಸ್ವಾಮಿ ನುಡಿದಿದ್ದ ಭವಿಷ್ಯ ನಿಜವಾಗಿದ್ದರಿಂದ, ಈಗ ಪವನ್ ಕಲ್ಯಾಣ್ ವಿಷಯದಲ್ಲೂ ಅವರ ಹಳೆಯ ಮಾತುಗಳು ನೆಟ್ಟಿಗರ ಗಮನ ಸೆಳೆದಿವೆ.
4ನೇ ಮದುವೆ ಬಗ್ಗೆ ಚರ್ಚೆ!
ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೇಣು ಸ್ವಾಮಿ, "ಪವನ್ ಕಲ್ಯಾಣ್ ಜಾತಕದಲ್ಲಿ ಗುರು ಗ್ರಹ ನೀಚ ಸ್ಥಾನದಲ್ಲಿದ್ದಾನೆ. ಇದರಿಂದ ವೈಯಕ್ತಿಕ ಜೀವನದಲ್ಲಿ ಏಳುಬೀಳುಗಳು ಉಂಟಾಗುತ್ತವೆ. ಅವರು ನಾಲ್ಕನೇ ಮದುವೆ ಆಗುವ ಸಾಧ್ಯತೆಗಳೂ ಇವೆ" ಎಂದು ಹೇಳಿಕೆ ನೀಡಿದ್ದರು.
ಈಗ ವಿಚ್ಛೇದನ ಪ್ರಕಟಣೆ ಹೊರಬಿದ್ದ ತಕ್ಷಣವೇ ವೇಣು ಸ್ವಾಮಿ ಆ ಹಳೆಯ ವೀಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಟ್ರೋಲ್ ಹಾಗೂ ಟೀಕೆಗಳಿಂದ ತಪ್ಪಿಸಿಕೊಳ್ಳಲು ಕಾಮೆಂಟ್ ಸೆಕ್ಷನ್ ಅನ್ನು ಡಿಸೇಬಲ್ ಮಾಡಿರುವುದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.














