ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ಮಾರ್ಚ್ 4 ರಂದು ವಿವಾಹವಾಗಲಿದ್ದಾರೆ. ಶಿವಶ್ರೀ, ಪ್ರಧಾನಿ ಮೋದಿಯವರ ಮೆಚ್ಚುಗೆ ಗಳಿಸಿದ್ದ "ಹೂಗಳ ತಂದೆ" ಹಾಡಿನ ಗಾಯಕಿ. ತಾಯಿಯಂತೆ ಕಾಳಜಿ ತೋರುವ ಹಾಗೂ ಹಿರಿಯರನ್ನು ಗೌರವಿಸುವ ಹೆಣ್ಣನ್ನು ಬಯಸಿದ್ದ ತೇಜಸ್ವಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಬೆಂಗಳೂರು ದಕ್ಷಿಣ ಸಂಸದ, 34 ವರ್ಷದ ತೇಜಸ್ವಿ ಸೂರ್ಯ ಅವರು ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನಸಾರೆ ಹೊಗಳಿದ್ದ ಗಾಯಕಿ, ಭರತನಾಟ್ಯ ಕಲಾವಿದೆ 28 ವರ್ಷದ ಶಿವಶ್ರೀ ಸ್ಕಂದಪ್ರಸಾದ್​ ಅವರ ಜೊತೆ ಮದುವೆ ಫಿಕ್ಸ್​ ಆಗಿದ್ದು, ಮಾರ್ಚ್ 4ರಂದು ಮದುವೆ ಎಂದು ಹೇಳಲಾಗುತ್ತಿದೆ. ಕಳೆದ ಜನವರಿಯಲ್ಲಿ ಶ್ರೀರಾಮಲಲ್ಲಾ ಉದ್ಘಾಟನೆ ವೇಳೆ ಪೂಜಿಸಲೆಂದೇ ಹೂಗಳ ತಂದೆ ಹಾಡಿನ ಮೂಲಕ ಪ್ರಧಾನಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು ಶಿವಶ್ರೀ ಅವರು. ಈ ಮೂಲಕ, ಬಿಜೆಪಿಯ 'ಯಂಗ್ ಆ್ಯಂಡ್ ಡೈನಾಮಿಕ್' ಮತ್ತು 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಂಸದ ಎಂದೇ ಕರೆಯಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಇದೀಗ ಮದುವೆಗೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದು ಪುನೀತ್​ ರಾಜ್​ಕುಮಾರ್​ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ತೇಜಸ್ವಿ ಸೂರ್ಯ ಅವರು, ವಿಶೇಷ ಅತಿಥಿಯಾಗಿ ಬಂದ ಸಂದರ್ಭದಲ್ಲಿ ಪುನೀತ್​ ಅವರು ಮದುವೆಯ ಬಗ್ಗೆ ಕೇಳಿದ್ದ ವಿಡಿಯೋ. ಇದರಲ್ಲಿ ಪುನೀತ್​ ರಾಜ್​ಕುಮಾರ್​ ಅವರು ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ನೋಡೋಣ ನಮ್ಮ ವೀಕ್ಷಕರಲ್ಲಿ ಹಲವರಿಗೆ ಇದು ಸಹಾಯವಾಗುತ್ತದೆ ಎಂದು ಅಪ್ಪು ತಮಾಷೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ತೇಜಸ್ವಿ ಸೂರ್ಯ ಅವರು, ತುಂಬಾ ಕಷ್ಟದ ಪ್ರಶ್ನೆ ಕೇಳಿಬಿಟ್ರಿ ಎಂದು ಒಂದು ಕ್ಷಣ ನಿರುತ್ತರಾದರು.

ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ ಸಂಸದ ಸೂರ್ಯ! ಯಾರೀ ಚೆಲುವೆ? ಯಾವಾಗ ಮದುವೆ?

ಕೊನೆಗೆ ಸಾವರಿಸಿಕೊಂಡು, ಬಹುತೇಕ ಎಲ್ಲ ಗಂಡು ಮಕ್ಕಳಿಗೂ ಇರುವ ಒಂದೇ ಆಸೆ ಎಂದರೆ, ಪತ್ನಿಯಾಗುವವಳು ಅಮ್ಮ ನೋಡಿಕೊಳ್ಳುವ ರೀತಿಯಲ್ಲಿ ನೋಡಿಕೊಳ್ಳಬೇಕು ಎನ್ನುವುದು. ತಾಯಿಯಾದವಳಿಗೆ ಮಕ್ಕಳ ಮನಸ್ಸಿನಲ್ಲಿ ಏನು ಇರುತ್ತದೆ ಎನ್ನುವುದನ್ನು ನೋಡಿಯೇ ತಿಳಿದುಕೊಳ್ಳುತ್ತಾಳೆ. ಅಂಥ ಮನಸ್ಥಿತಿ ಮದುವೆಯಾಗುವ ಹೆಣ್ಣಿನಲ್ಲಿಯೂ ಇರಬೇಕು ಎಂದಿದ್ದರು. ಜೊತೆಗೆ, ನನ್ನಮ್ಮ ನನಗೆ ಯಾವಾಗಲೂ ಹೇಳುತ್ತಿದ್ದುದು ಒಂದೇ, ನಿನ್ನಿಂದ ಸಹಾಯ ಬಯಸಿ ನಿನಗಿಂತ ತುಂಬಾ ಹಿರಿಯರು ನಿನ್ನನ್ನು ಹುಡುಕಿ ಬರುತ್ತಾರೆ. ಆ ಸಮಯದಲ್ಲಿ ನೀನು ಎದ್ದು ನಿಂತು ಅವರನ್ನು ಕುಳ್ಳರಿಸಿ ಆಮೇಲೆ ಕುಳಿತುಕೊಳ್ಳಬೇಕು. ನೀನು ಬೇರೆ ಕಡೆ ಹೋದಾಗ ಅವರು ನಿನ್ನನ್ನು ಹೇಗೆ ಟ್ರೀಟ್​ ಮಾಡುತ್ತಾರೆ ಎಂದು ನೀನು ಅಂದುಕೊಂಡಿರುತ್ತಿಯೊ, ಅದೇ ರೀತಿ ನಿನ್ನನ್ನು ಹುಡುಕಿ ಬಂದವರಿಗೆ ನೀನು ನಡೆದುಕೊಳ್ಳಬೇಕು ಎನ್ನುತ್ತಿದ್ದರು. ಇಂಥ ಮನಸ್ಥಿತಿ ಪ್ರತಿ ಹೆಣ್ಣಿನಲ್ಲಿಯೂ ಇರಬೇಕು ಎನ್ನುವ ಮೂಲಕ ಅಮ್ಮನ ಮನಸ್ಸಿನ ಹೆಣ್ಣು ತಮಗೆ ಬೇಕು ಎಂದು ಹೇಳಿದ್ದರು.

 ಇನ್ನು ತೇಜಸ್ವಿ ಸೂರ್ಯ ಅವರು ಮದುವೆಯಾಗುತ್ತಿರುವ ಶಿವಶ್ರೀ ಸ್ಕಂದಪ್ರಸಾದ್​ ಕುರಿತು ಹೇಳುವುದಾದರೆ, ಇವರು, ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿ, ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿ ಪಡೆದು ಕೊಂಡಿದ್ದಾರೆ. ಇದರೊಂದಿಗೆ ಸೈಕ್ಲಿಂಗ್, ಟ್ರೆಕ್ಕಿಂಗ್ ವಾಕಥಾನ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಇವರು, ಯೂಟ್ಯೂಬ್‌ನಲ್ಲಿ ಸುಮಾರು ಎರಡು ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. “ಪೊನ್ನಿಯಿನ್ ಸೆಲ್ವನ್-ಪಾರ್ಟ್ 2” ಚಿತ್ರದ ಕನ್ನಡ ಭಾಷೆಯ ಹಾಡನ್ನು ಹಾಡಿದ್ದಾರೆ. ಕೆಲವರಿಗೆ ಹಿನ್ನೆಲೆ ದನಿಯನ್ನೂ ನೀಡಿದ್ದಾರೆ.

View post on Instagram