ಕೊರೊನಾದಿಂದಾಗಿ ಶಾಲೆಯಿಲ್ಲ, ಅಕ್ಕಪಕ್ಕದ ಮಕ್ಕಳು ಆಟಕ್ಕೂ ಬರುತ್ತಿಲ್ಲ. ಮನೆಯಲ್ಲೇ ಸೋಮಾರಿಯಾಗಿ ಕುಳಿತು ಮಕ್ಕಳು ಬೊಜ್ಜು ತುಂಬಿಕೊಂಡರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ. ಇದನ್ನು ತಪ್ಪಿಸುವುದು ಹೇಗೆ? 

ಚುರುಕಾಗಿ ಆಟವಾಡಿಕೊಂಡು ಇರಬೇಕಾದ ಮಕ್ಕಳು ಸುಮ್ಮನೇ ಸೋಫಾದಲ್ಲಿ ಕುಳಿತು ಟಿವಿ ನೋಡುತ್ತಾ, ಜಂಕ್‌ಫೂಡ್‌ ಹಾಳುಮೂಳು ತಿಂದು ಮೈತೂಕ ಹೆಚ್ಚಿಸಿಕೊಂಡು ಬೊಜ್ಜು ಬೆಳೆಸಿಕೊಳ್ಳುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ. ಹೀಗಾದರೆ ಅಪ್ಪ- ಅಮ್ಮನಿಗೆ ಬೇಜಾರಾಗದೆ ಇರುತ್ತದೆಯೇ? ಮನೆಯಲ್ಲೇ ಕುಳಿತು ಉಣ್ಣುವುದು ತಿನ್ನುವುದು, ಸಾಕಷ್ಟು ವ್ಯಾಯಾಮ ಇಲ್ಲದಿರುವುದರಿಂದ ಉಂಟಾಗುವ ಮಕ್ಕಳ ಬೊಜ್ಜು ಅತ್ಯಂತ ಹಾನಿಕರ. ಭಾರತದ ಮಕ್ಕಳಲ್ಲಿ ಸುಮಾರು ಶೇಕಡಾ ೬೦ ಮಕ್ಕಳು ಲಾಕ್‌ಡೌನ್‌ ಟೈಮಲ್ಲಿ ಮೈ ಬೆಳೆಸಿಕೊಂಡಿದ್ದಾರಂತೆ. ಇಂಥ ಅನಗತ್ಯ ಬೊಜ್ಜಿನಿಂದ ಟೈಪ್‌ 2 ಡಯಾಬಿಟೀಸ್‌ ಬರುವ ಸಾಧ್ಯತೆ ಇದೆ. ಅದನ್ನು ಅವಾಯ್ಡ್‌ ಮಾಡೋಕೆ ಮಕ್ಕಳ ಆಹಾರ ಹಾಗೂ ಚಟುವಟಿಕೆಯಲ್ಲಿ ಕೆಲವು ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕಾದೀತು.

Add Asianetnews Kannada as a Preferred SourcegooglePreferred

ಆಟಕ್ಕೆ ಟೈಮ್‌ಟೇಬಲ್‌
ಮಗು ದಿನದಲ್ಲಿ ಕನಿಷ್ಠ ಎರಡು ಗಂಟೆ ಆಡಲಿ, ನಡೆದಾಡಲಿ, ಓಡಲಿ, ವ್ಯಾಯಾಮ ಮಾಡಲಿ. ಸುರಕ್ಷಿತವೆನಿಸಿದರೆ ಪಾರ್ಕಿಗೆ ಕರೆದೊಯ್ದು ನಡೆದಾಡಿಸಿ. ಇಲ್ಲವಾದರೆ ಮನೆಯಲ್ಲೇ ಸ್ಕಿಪ್ಪಿಂಗ್‌, ಜಾಗಿಂಗ್‌, ಜಂಪಿಂಗ್‌ ಮಾಡಲಿ, ನೂರು ಬಾರಿ ಮೆಟ್ಟಿಲು ಹತ್ತಿ ಇಳಿಯುವುದು ಮಾಡಲಿ. ರಾತ್ರಿಯ ಹೊತ್ತಿಗೆ ಮಗು ಸಾಕಷ್ಟು ದಣಿಯಲಿ. ಅಂದರೆ ನಿದ್ರೆ ಚೆನ್ನಾಗಿ ಬರುತ್ತದೆ. ಆಟಕ್ಕೆ ಟೈಮ್ಟೇಬಲ್‌ ನಿಗದಿಪಡಿಸಿ, ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಿ.

ಆದ್ಯವೀರ ಒಡೆಯರ್‌ ಹುಟ್ಟಿದ ದಿನ ಬರ್ತ್‌ಡೇ ಆಚರಿಸಲ್ಲ..! ಇದರ ಹಿಂದಿದೆ ...

ಸಾಕಷ್ಟು ನಿದ್ರಿಸಲಿ

ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ, 3ರಿಂಧ 5 ವರ್ಷದ ಮಕ್ಕಳು ದಿನದಲ್ಲಿ ಕನಿಷ್ಠ 10 ಗಂಟೆ, ಗರಿಷ್ಠ 13 ಗಂಟೆ ನಿದ್ರೆ ಮಾಡಲೇಬೇಕು. ಈ ಪ್ರಾಯದಲ್ಲಿ ಮಗು ಚಟುವಟಿಕೆಗಾಗಿ ತನ್ನೆಲ್ಲ ಶಕ್ತಿಯನ್ನೂ ವ್ಯಯಿಸುತ್ತದೆ. ನಿದ್ರೆ ಮಾಡುವ ಸಂದರ್ಭದಲ್ಲಿ ಮಗು ಸೇವಿಸುವ ಆಹಾರ ನಿಧಾನವಾಗಿ ಜಠರದಲ್ಲಿ ಪಚನಕ್ರಿಯೆಗೆ ಒಳಗಾಗುತ್ತದೆ. ಎಚ್ಚರದಲ್ಲಿ ಇದು ವೇಗವಾಗಿ ನಡೆಯುತ್ತದೆ. ನಿದ್ರೆ ಮೆದುಳಿನ ಜೀವಕೋಶಗಳಿಗೆ ಅಗತ್ಯವಾದ ವಿಶ್ರಾಂತಿಯನ್ನು ಒದಗಿಸಿ, ಎಚ್ಚರದ ಬಳಿಕ ದೇಹವನ್ನು ಚುರುಕಾಗಿಡುತ್ತದೆ. ನಿದ್ರೆಯಿಲ್ಲದಿದ್ದರೆ ಮೈ ಜಡವಾಗುವುದು ಸಹಜ.

ವಾಚ್ ಕದ್ದ ವಿದ್ಯಾರ್ಥಿ ಶಿಕ್ಷಕನಾಗಿದ್ದು ಹೇಗೆ? ಓಶೋ ಹೇಳಿದ ಕತೆ 

ಸರಿಯಾದ ಸಮಯಕ್ಕೆ ನಿದ್ರೆ

ಮಗುವನ್ನು ನಿದ್ರೆ ಮಾಡಿಸುವುದಕ್ಕೆ ಒಂದು ನಿಗದಿತ ಸಮಯವನ್ನು ಕಲ್ಪಿಸಿಕೊಳ್ಳುವುದು ತುಂಬಾ ಮುಖ್ಯ. ಆ ಸಮಯಕ್ಕಿಂತ ಹದಿನೈದು ನಿಮಿಷಗಳ ಮೊದಲೇ ಆಟವನ್ನೆಲ್ಲ ಬಂದ್‌ ಮಾಡಿ, ಕತೆ ಹೇಳುವುದರ ಮೂಲಕ ಮಗುವನ್ನು ಬೆಡ್‌ಗೆ ಒಯ್ಯಬಹುದು. ದಿನಾ ನಿರ್ದಿಷ್ಟ ಸಮಯದಲ್ಲಿ ನಿದ್ರೆ ಹೋಗುವುದರಿಂದ ದೇಹದ ಜೈವಿಕ ಗಡಿಯಾರ ಸಮತೋಲನದಲ್ಲಿರುತ್ತದೆ.

ತುಂಟಿ ಮಗಳಿಗೊಂದು ಪತ್ರ: ಇಂದು ಮಗಳ ದಿನವಂತೆ! ...

ಸರಿಯಾದ ಹೊತ್ತಿಗೆ ಊಟ
ಸೂಕ್ತ ಸಮಯದಲ್ಲಿ ಊಟವನ್ನೂ ಮಗು ಮಾಡಲಿ. ಎರಡು ಊಟಗಳ ಮಧ್ಯೆ ಜಂಕ್‌ಫುಡ್‌, ಬೇಕರಿ ಐಟಂ, ಐಸ್‌ಕ್ರೀಮ್‌ ಅಥವಾ ಚಾಕಲೇಟ್‌ ಕೊಟ್ಟು ಮಗುವಿನ ಹಸಿವನ್ನು ಕೆಡಿಸದಿರಿ. ರಾತ್ರಿ ವೇಳೆ ಚಾಕಲೇಟ್‌ ತಿಂದರೆ ನಿದ್ರೆ ಕೆಡುತ್ತದೆ. ಊಟದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ಎರಡು ಊಟಗಳ ನಡುವೆ, ಆಟದ ಮಧ್ಯೆ ಮಕ್ಕಳು ಹಸಿವು ಎಂದರೆ ಹಣ್ಣು ಅಥವಾ ಸೌತೆಕಾಯಿ, ಕ್ಯಾರೆಟ್‌ನಂತಹ ತರಕಾರಿಗಳನ್ನು ಕಟ್‌ ಮಾಡಿ ಕೊಡಿ. ಊಟದಲ್ಲಿ ಪ್ರೊಟೀನ್‌ನಂತೆಯೇ ಬೇಳೆಕಾಳು, ತರಕಾರಿ ಇರುವುದು ಅಗತ್ಯ.

ಸ್ಕ್ರೀನ್‌ಟೈಮ್‌ ಮಿತಿಗೊಳಿಸಿ
ಕಂಪ್ಯೂಟರ್‌ ಹಾಗೂ ಮೊಬೈಲ್‌ ನೋಡುವ ಅವಧಿ ಹೆಚ್ಚಾಗಿದೆ. ಇದನ್ನು ನೋಡುತ್ತಿರುವಷ್ಟು ಹೊತ್ತೂ ಮಕ್ಕಳು ಜಡವಾಗಿ ಒಂದೆಡೆ ಕುಳಿತೇ ಇರುತ್ತವೆ. ಇದು ಅಪಾಯಕಾರಿ. ಪುಟ್ಟ ಮಕ್ಕಳು ದಿನದಲ್ಲಿ ಹೆಚ್ಚೆಂದರೆ ಒಂದು ಗಂಟೆ, ಮಧ್ಯೆ ಆಗಾಗ ಬಿಡುವು ಕೊಟ್ಟು ಕಂಪ್ಯೂಟರ್‌ ನೋಡಬಹುದು. ಅರ್ಧ ಗಂಟೆಗಿಂತ ಹೆಚ್ಚು ಮೊಬೈಲ್‌ ಬಳಕೆ ಬೇಡ. ಎರಡು ಆನ್‌ಲೈನ್ ಕ್ಲಾಸ್‌ಗಳ ನಡುವೆ ಕನಿಷ್ಠ ಅರ್ಧಗಂಟೆ ಬಿಡುವು ಕೊಡಿ. ನೀವು ಕೂಡ ಮೊಬೈಲ್‌ ಆಚೆಗಿಟ್ಟು ಮಕ್ಕಳೊಡನೆ ಮಗುವಾಗಿ ಆಡಿದಾಗ, ಮಗುವಿಗೆ ಮಲಗುವ ಮುನ್ನ ಕತೆ ಹೇಳಿದಾಗ, ಮಗುವಿನೊಡನೆ ಕೂತು ನೀವೂ ಊಟ ಮಾಡಿದಾಗ- ಮಗುವಿನ ಆರೋಗ್ಯವನ್ನು ನಿಮಗೇ ಗೊತ್ತಿಲ್ಲದಂತೆ ಆರೋಗ್ಯಕರವಾಗಿ ಬೆಳೆಸುತ್ತೀರಿ. ಮಕ್ಕಳಲ್ಲಿ ಬೊಜ್ಜು ಬೆಳೆಯದಂತಿರಲು ನೀವೂ ಅವರಿಗೆ ಸಾಕಷ್ಟು ಟೈಮ್‌ ಕೊಡುವುದು ಇಂಪಾರ್ಟೆಂಟು.