ಮಕ್ಕಳಿಂದ ದೂರವಿರುವ ಹಿರಿಯರಿಗೆ ಮತ್ತು ಒಂಟಿಯಾಗಿರುವವರಿಗೆ ತಮ್ಮ ಅಂತ್ಯಕ್ರಿಯೆಯನ್ನು ಮೊದಲೇ ಯೋಜಿಸುವ 'ಪ್ರಿ-ಪ್ಲಾನ್ಡ್ ಫ್ಯೂನರಲ್ ಸರ್ವಿಸಸ್' ಹೆಚ್ಚು ಜನಪ್ರಿಯವಾಗುತ್ತಿದೆ. ದೆಹಲಿ ಮೂಲದ ಸ್ಟಾರ್ಟ್ಅಪ್ ಈ ಸೇವೆಗಳನ್ನು ವಿವಿಧ ಪ್ಯಾಕೇಜ್ಗಳಲ್ಲಿ ಒದಗಿಸುತ್ತಿದೆ, ಇದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಹುಟ್ಟು ಅನಿರೀಕ್ಷಿತ, ಸಾವು ಖಚಿತ. ಆದರೆ ಸಾವು ಯಾರಿಗೆ ಹೇಗೆ, ಯಾವ ರೀತಿ ಬರುತ್ತದೆ ಎನ್ನುವುದು ಯಾರಿಗೂ ತಿಳಿಯುವುದೇ ಇಲ್ಲ. ಈಗಿನ ಸನ್ನಿವೇಶದಲ್ಲಿ ಬಹುತೇಕ ಮನೆಗಳಲ್ಲಿ ಮಕ್ಕಳು ಅಪ್ಪ-ಅಮ್ಮಂದಿರಿಂದ ಬಹಳ ದೂರ ಇರುತ್ತಾರೆ. ತಮ್ಮ ಜೀವನವನ್ನು ಸಂಪೂರ್ಣ ಮಕ್ಕಳಿಗೆ ಮೀಸಲಿಟ್ಟು, ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಫಾರಿನ್ಗೆ ಕಳುಹಿಸುವ ಕನಸು ಕಾಣುವ ಅಪ್ಪ-ಅಮ್ಮಂದಿರು, ಅದನ್ನು ಸಾಧಿಸುತ್ತಾರೆಯಾದರೂ, ಇದೇ ಅಪ್ಪ-ಅಮ್ಮನ ಅಂತ್ಯಕ್ರಿಯೆಗೂ ಬರಲು ಸಾಧ್ಯವಾಗದೇ ಮಕ್ಕಳು ವರ್ಚುವಲ್ ಆಗಿ ಭಾಗವಹಿಸುವ ದುರದೃಷ್ಟಕರ ಸಮಾಜದಲ್ಲಿ ನಾವಿದ್ದೇವೆ. ಇನ್ನು ಕೆಲವು ಮನೆಗಳಲ್ಲಿ ಮುತ್ತು ಕೊಡುವವಳು ಬಂದಾಗ ತುತ್ತು ಕೊಡುವವಳು ಮಕ್ಕಳಿಗೆ ಬೇಡವಾಗುತ್ತದೆ. ಅಷ್ಟೂ ವರ್ಷ ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ ಹೆತ್ತವರನ್ನೇ ಪತ್ನಿಯ ಮಾತು ಕೇಳೋ, ಇನ್ನಾವುದೋ ಕಾರಣಕ್ಕೆ ದೂರ ಮಾಡುವ ಮಕ್ಕಳಿಗೆನೂ ಕೊರತೆ ಇಲ್ಲ.
ಈ ಎಲ್ಲಾ ಹಿನ್ನೆಲೆಗಳಲ್ಲಿ, ಸತ್ತ ಬಳಿಕ ಮಕ್ಕಳನ್ನು ನೆಚ್ಚಿಕೊಳ್ಳುವ ಬದಲು, ಸ್ವಂತ ಅಂತ್ಯಕ್ರಿಯೆ ಕಾಯ್ದಿರಿಸುವಿಕೆ (Pre-planned Funeral Services) ಸೌಲಭ್ಯವೇ ಬೆಸ್ಟ್ ಎಂದು ಬಗೆಯುವವರು ಹಲವರಿದ್ದಾರೆ. ಇದರ ಅರ್ಥ, ಸತ್ತ ಮೇಲೆ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಯೋಜಿಸಿ ಪಾವತಿಸುವ ಮೂಲಕ ಕುಟುಂಬದ ಮೇಲಿನ ಆರ್ಥಿಕ ಮತ್ತು ಮಾನಸಿಕ ಹೊರೆಯನ್ನು ಕಡಿಮೆ ಮಾಡುವ ವಿಧಾನ ಇದಾಗಿದೆ. ಇದಾಗಲೇ ಬೆಂಗಳೂರಿನಲ್ಲಿಯೂ ಈ ಸೌಲಭ್ಯ ಇದೆ. ವಿದ್ಯುತ್ ಚಿತಾಗಾರ (Electric cremation), ಕಟ್ಟಿಗೆ ಚಿತಾಗಾರ ಅಥವಾ ಸಮಾಧಿ (Burial) ವಿಧಾನಗಳನ್ನು ನಿಮ್ಮ ಧರ್ಮ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಮೊದಲೇ ಆಯ್ಕೆ ಮಾಡಬಹುದು. ಶವವಾಹನ (Hearse van), ಫ್ರೀಜರ್ ಬಾಕ್ಸ್, ಪುರೋಹಿತರು/ಪಾದ್ರಿಗಳು, ಪೂಜಾ ಸಾಮಗ್ರಿಗಳು ಮತ್ತು ಹೂವಿನ ಅಲಂಕಾರದ ವ್ಯವಸ್ಥೆಗಳನ್ನು ಮುಂಗಡವಾಗಿ ನಿಗದಿ ಮಾಡಬಹುದಾಗಿದೆ.
ಸ್ಟಾರ್ಟ್ಅಪ್ ಆರಂಭ
ಮರಣ ಪ್ರಮಾಣಪತ್ರ (Death Certificate) ಮತ್ತು ಬಿಬಿಎಂಪಿ (BBMP) ಸ್ಮಶಾನದ ಸ್ಲಾಟ್ ಬುಕಿಂಗ್ ಪ್ರಕ್ರಿಯೆಯನ್ನು ಸೇವಾ ಸಂಸ್ಥೆಗಳೇ ನಿರ್ವಹಿಸುತ್ತವೆ. ಇದಕ್ಕಾಗಿ ಇದೀಗ ದೆಹಲಿ ಮೂಲದ ಸ್ಟಾರ್ಟ್ಅಪ್, ಮೋಕ್ಷ್ ವಾಯೇಜ್, ಶವವನ್ನು ಸಾಗಿಸಲು ನಾಲ್ಕು ಜನರನ್ನು ವ್ಯವಸ್ಥೆ ಮಾಡುವುದರಿಂದ ಹಿಡಿದು ವಾಹನಗಳು, ಪುರೋಹಿತರು, ಹೂವುಗಳು, ದಹನ ಸಾಮಗ್ರಿಗಳು ಮತ್ತು ಅಂತಿಮ ವಿಧಿವಿಧಾನಗಳನ್ನು ಒದಗಿಸುವವರೆಗೆ ಸಂಪೂರ್ಣ ಅಂತ್ಯಕ್ರಿಯೆ ಯೋಜನಾ ಸೇವೆಗಳನ್ನು ನೀಡುವ ಮೂಲಕ ಸುದ್ದಿ ಮಾಡುತ್ತಿದೆ.
₹29,999 ರಿಂದ ₹1,49,999 ವರೆಗಿನ ಪ್ಯಾಕೇಜ್ಗಳೊಂದಿಗೆ, ಕಂಪನಿಯು 300 ಕ್ಕೂ ಹೆಚ್ಚು ಜನರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದೆ, ಕೆಲವರು ತಮ್ಮದೇ ಆದ ಅಂತ್ಯಕ್ರಿಯೆಗಳನ್ನು ಮುಂಚಿತವಾಗಿ ಯೋಜಿಸುತ್ತಿದ್ದಾರೆ. ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಪಡೆಯಲು ಸಾಧ್ಯವಾಗದ ಕುಟುಂಬಗಳನ್ನು ಇದು ಬೆಂಬಲಿಸುತ್ತದೆ ಎಂದು ಸ್ಟಾರ್ಟ್ಅಪ್ ಹೇಳುತ್ತದೆ. ಕೆಲವರು ಇದನ್ನು ಪ್ರಾಯೋಗಿಕ ಪರಿಹಾರವೆಂದು ಪರಿಗಣಿಸಿದರೆ, ಇತರರು ಜೀವನದ ಅಂತಿಮ ವಿದಾಯವನ್ನು ವಾಣಿಜ್ಯೀಕರಣಗೊಳಿಸುವುದನ್ನು ಪ್ರಶ್ನಿಸುತ್ತಿದ್ದಾರೆ.
















