ಭಾರತದಲ್ಲಿ ಇತ್ತೀಚೆಗೆ ಯುವಜನತೆಯ ಮುಂದಿನ ಭವಿಷ್ಯ ಹಾಗೂ ಕೌಟುಂಬಿಕ ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸಿದ ಒಂದು ಸಂಸ್ಥೆಗೆ ಅಚ್ಚರಿ ಕಾದಿತ್ತು. ಅದರಲ್ಲಿ ಹೆಚ್ಚಿನವರು, ನಮಗೆ ಮದುವೆ ಬೇಕಾಗಿಲ್ಲ, ಮಕ್ಕಳೂ ಬೇಡ ಎಂದು ಹೇಳಿದ್ದಾರೆ. ಇದು ಭಾರತದಲ್ಲಿ ಮಾತ್ರವಲ್ಲ. ಜಗತ್ತಿನಾದ್ಯಂತ ಇಂದು ಕಂಡುಬರುತ್ತಿರುವ ಒಂದು ಮನೋಭಾವ, ಜಪಾನ್‌ ಹಾಗೂ ಚೀನಾಗಳಲ್ಲಿ ಈ ಪ್ರವೃತ್ತಿ ಕಳೆದ ಒಂದೆರಡು ವರ್ಷಗಳಿಂದ ಹೆಚ್ಚಾಗಿತ್ತು. ಅದಕ್ಕೆ ಕಾರಣ ಅಲ್ಲಿ ಹೆಚ್ಚುತ್ತಿರುವ ಕೆಲಸದ ಒತ್ತಡ, ಸಿಗದ ವೈಯಕ್ತಿಕ ಸಮಯ ಹಾಗೂ ಹೆಚ್ಚಾಗಿರುವ ಜೀವನವೆಚ್ಚ. ಆರೋಗ್ಯ ಸೇವೆ ಕೂಡ ತುಂಬಾ ದುಬಾರಿ. ಇದರಿಂದಾಗಿ ಜಪಾನಿನ ಅರ್ಧಕ್ಕೂ ಹೆಚ್ಚು ಮದುವೆಯ ಪ್ರಾಯದ ಯುವಜನತೆ ಮದುವೆಯೇ ಆಗದೆ, ಆಗುವ ಯಾವ ಬಯಕೆಯೂ ಇಲ್ಲದೆ ಸುಮ್ಮನಿದ್ದಾರೆ. ಅವರನ್ನು ಮದುವೆಯಾಗಿ ಮಕ್ಕಳನ್ನು ಮಾಡಿಕೊಳ್ಳಿ ಎಂದು ಜಪಾನ್‌ ಸರಕಾರ ಪೀಡಿಸುತ್ತಿದೆ. 

ಸದ್ಯಕ್ಕೆ ಇತರ ದೇಶಗಳಿಗೆ ಈ ಮನೋಭಾವ ಹಬ್ಬುತ್ತಿರುವುದು ಕೊರೊನಾ ವೈರಸ್‌ ಸೋಂಕಿನ ಕಾರಣದಿಂದ ಈ ಸೋಂಕು ವಯೋವೃದ್ಧರ ಸಾವನ್ನು ತಂದಿರುವುದಷ್ಟೇ ಅಲ್ಲ, ಆರ್ಥಿಕ ಸಂಕಷ್ಟ ತಂದಿರುವುದೂ ಹೌದು. ಅದರ ಜೊತೆಗೆ ಸಾಮಾಜಿಕವಾದ ಕೆಲವು ಪಲ್ಲಟಗಳನ್ನೂ ಮಾಡುತ್ತಿದೆ. ಯುವಜನತೆಯ ಮನಸ್ಸಿನಲ್ಲಿ ಮೂಡಿರುವ ಈ ಭಾವನೆಗೆ ಕಾರಣ, ಭವಿಷ್ಯದಲ್ಲಿ ಢಾಳಾಗಿ ಕಾಣಿಸುತ್ತಿರುವ ಅಭದ್ರತೆ. ಇರುವ ಕೆಲಸ ಉಳಿಯುತ್ತದೋ ಇಲ್ಲವೋ ಎಂಬುದು ಉದ್ಯೋಗಿಗಳ ಚಿಂತೆಯಾದರೆ, ತಮಗೆ ತಕ್ಕ ಕೆಲಸ ಸಿಗುತ್ತದೋ ಇಲ್ಲವೋ ಎಂಬುದು ವಿದ್ಯಾಭ್ಯಾಸ ಮುಗಿಸಿದ ತರುಣ ತರುಣಿಯರ ಚಿಂತೆ. ಇಂಥ ಅಭದ್ರ ಪರಿಸ್ಥಿತಿಯಲ್ಲಿ ಮದುವೆ ಮಾಡಿಕೊಂಡು, ಮಕ್ಕಳನ್ನೂ ಮಾಡಿಕೊಂಡು ಸಂಸಾರದ ಭಾರವನ್ನು ಮೈಮೇಲೆ ಹೇರಿಕೊಳ್ಳಲು ಈ ಜನಾಂಗ ತಯಾರಿಲ್ಲ. ಸದ್ಯಕ್ಕಂತೂ ಮದುವೆ ಮಕ್ಕಳು ಎಂಬ ಆಸೆಯೇ ಈ ತಲೆಮಾರಿನಲ್ಲಿ ಕಮರಿಹೋಗಿದೆ. ಮದುವೆಯ ಯೋಚನೆಯಲ್ಲಿದ್ದವರು ಕೂಡ ಅದನ್ನು ಮುಂದೆ ಹಾಕಿದ್ದಾರೆ. ಆಧುನಿಕ ತಲೆಮಾರಿನಲ್ಲಿ ಮದುವೆಗಿಂತಲೂ ಲಿವ್ ಇನ್‌ ಹೆಚ್ಚು ಸೂಕ್ತ ಎಂಬ ಭಾವನೆ ಪ್ರಬಲಿಸುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. 

ರಾಶಿ ಪ್ರಕಾರ, ನೀವು ವೃಥಾ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಹೇಗೆ? 

ವಯಸ್ಕರಿಗೆ ಕುಟುಂಬದಿಂದ ಬೇರೆಯಾಗುವ ಭಯ
ಇದು ಯುವ ತಲೆಮಾರಿನ ಚಿಂತೆಯಾದರೆ, ಹಿರಿಯ ನಾಗರಿಕರನ್ನು ಇನ್ನೊಂದು ಬಗೆಯ ಚಿಂತೆ ಕಾಡುತ್ತಿದೆ. ಅದೇನೆಂದರೆ, ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳದೆ ಹೋಗಬಹುದು ಎಂಬ ಆತಂಕ. ಕೊರೊನಾ ವೈರಸ್‌ಗೆ ಬಲು ಬೇಗನೆ ತುತ್ತಾಗುವವರು ವೃದ್ಧರು ಅಂಬ ಅಂಶವನ್ನು ಎಲ್ಲ ಕಡೆ ಒತ್ತಿ ಹೇಳಲಾಗುತ್ತಿದೆ. ಹೀಗಾಗಿ ಸಾಮಾಜಿಕ ಸನ್ನಿವೇಶದಲ್ಲಿ ನಮ್ಮನ್ನು ಬಹಳ ಬೇಗನೆ ಸಾಯಲಿರುವವರು ಎಂಬಂತೆ ಕಾಣುವ ಪರಿಪಾಠ ರೂಢಿಯಾಗುತ್ತಿದೆ. ಇದು ಮಕ್ಕಳಲ್ಲಿ ಹಾಗೂ ಮೊಮ್ಮಕ್ಕಳಲ್ಲಿ ತಮ್ಮ ಬಗ್ಗೆ ತಾತ್ಸಾರ ಮೂಡಲು ಕಾರಣವಾಗಲಿದೆ. ನಾವು ಕುಟುಂಬದಲ್ಲಿ ಎಲ್ಲರಿಂದ ಬೇರೆಯಾಗಿ, ಅಸ್ಪೃಶ್ಯರಂತೆ ಬದುಕಬೇಕಾಗಬಹುದು ಎಂದು ಹೆಚ್ಚಿನ ಹಿರಿಯ ನಾಗರಿಕರು ಗೋಳು ತೋಡಿಕೊಂಡಿದ್ದಾರೆ. 

ಡಿಸೆಂಬರ್‌ವರೆಗೆ ವೃದ್ಧರನ್ನು ಮನೆಯಿಂದ ಹೊರ ಬಿಡಬೇಡಿ! 

ಮಕ್ಕಳಿಗೆ ಶಿಕ್ಷಣ ದೊರೆಯದ ಭಯ
ಹೆಚ್ಚಿನ ಮಧ್ಯಮ ವರ್ಗದ ಗಂಡ- ಹೆಂಡತಿಯರಿಗೆ, ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣ ದೊರೆಯದೆ ಹೋಗಬಹುದು ಎಂಬ ಆತಂಕ ಇದೆ. ಈ ಕೊರೊನಾ ವೈರಸ್‌ ಆತಂಕದಿಂದ ಇಂಡಸ್ಟ್ರಿಗಳು ಬಾಗಿಲು ಹಾಕುತ್ತಿವೆ, ಕೆಲಸ ಉಳಿಯುತ್ತದೋ ಇಲ್ಲವೋ ಗೊತ್ತಿಲ್ಲ. ಕೆಲಸ ಉಳಿದರೂ ಸಂಬಳದಲ್ಲಿ ಎಷ್ಟು ಕಟ್‌ ಆಗುತ್ತದೆ ತಿಳಿಯದು. ಇಂಥ ಪರಿಸ್ಥಿತಿಯಲ್ಲಿ ಮಕ್ಕಳನ್ನು ಒಳ್ಳೆಯ ಶಾಲೆಗೆ ಹೆಚ್ಚಿನ ಶುಲ್ಕ ಕೊಟ್ಟು ಸೇರಿಸುವುದಂತೂ ಕನಸಿನ ಮಾತೇ ಸರಿ. ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬುದು ಎಲ್ಲ ಅಪ್ಪ ಅಮ್ಮಂದಿರ ಕನಸು. ಆದರೆ ಆ ಕನಸಿಗೂ ಈ ಕೊರೊನಾ ಕೊಳ್ಳಿ ಹಾಕಿದೆಯಂತೆ.