ರಾಶಿ ಪ್ರಕಾರ, ನೀವು ವೃಥಾ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಹೇಗೆ?
ನಮ್ಮ ರಾಶಿಯು ನಮ್ಮ ಸ್ವಭಾವದ ಬಗ್ಗೆ ಬಹಳಷ್ಟನ್ನು ಹೇಳಬಲ್ಲದು. ಅಂತೆಯೇ ಸಂಬಂಧಗಳ ವಿಷಯದಲ್ಲಿ ಯಾವ ರಾಶಿಯವರು ಹೇಗೆ, ಉದ್ದೇಶವಿಲ್ಲದೆ ಎಡವುತ್ತಾರೆ ಎಂಬುದು ಇಲ್ಲಿದೆ.
ನಮ್ಮವರ ವಿಷಯದಲ್ಲಿ ನಮ್ಮ ಪ್ರೀತಿಯನ್ನು ಯಾವುದರಿಂದಲೂ ಅಳೆಯಲಾಗದು. ಜಗತ್ತಿನ ಬೇರಾವ ವಸ್ತುಗಳಿಂದಲೂ ಅದಕ್ಕೆ ಬೆಲೆ ಕಟ್ಟಲಾಗದು. ಅದೊಂತರಾ ತಿರುಗಿ ಏನನ್ನೂ ಬಯಸದೇ ಎಲ್ಲವನ್ನೂ ಕೊಟ್ಟುಬಿಡುವ ಬಯಕೆ. ಹಾಗಿದ್ದೂ, ಕೆಲವೊಮ್ಮೆ ಅಲ್ಲಿ ನೆಗೆಟಿವ್ ಎಮೋಷನ್ಸ್ ನುಗ್ಗುತ್ತವೆ. ಸಂಬಂಧದ ವಿಷಯದಲ್ಲಿ ನಾವು ಎಡವುವಂತೆ ಮಾಡುತ್ತವೆ. ಸಂಬಂಧವನ್ನು ಗಟ್ಟಿಯಾಗಿಸಲು ನಾವು ನಮ್ಮ ಇಂಥ ಎಡವುವ ಅಭ್ಯಾಸದ ಬಗ್ಗೆ ತಿಳಿದಿರುವುದು ಮುಖ್ಯ. ನಮ್ಮ ರಾಶಿ, ನಕ್ಷತ್ರಗಳು ಹೀಗೆ ಸಂಬಂಧವನ್ನು ಅನಗತ್ಯವಾಗಿ ಹಾಳು ಮಾಡಿಕೊಳ್ಳುವ ನಮ್ಮ ಸ್ವಭಾವದ ಬಗ್ಗೆ ಚೆನ್ನಾಗಿ ಹೇಳಬಲ್ಲವು. ಅವನ್ನು ತಿಳಿದುಕೊಂಡರೆ ಈ ಬಗ್ಗೆ ಎಚ್ಚರವಾಗಿರಲು ಸಾಧ್ಯವಾಗುತ್ತದೆ.
ಮೇಷ
ನಿಮಗೆ ನಿಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರ ಮೇಲೆ ಹೇರುವ ಹಾಗೂ ದುಡುಕಿನಲ್ಲಿ ನಿರ್ಧಾರ ಕೈಗೊಳ್ಳುವ ದುರಭ್ಯಾಸ. ನೀವು ನಿಮ್ಮ ಸಂಗಾತಿಯನ್ನು ಬಹಳ ಪ್ರೀತಿಸುತ್ತೀರಾದರೂ ಅವರು ಹೇಳುವುದನ್ನು ಕೇಳುವ ವ್ಯವಧಾನ ನಿಮ್ಮಲ್ಲಿಲ್ಲ. ನೀವು ಸಂಗಾತಿಯನ್ನು ಕೇಳದೆ ಮಾಡುವ ಆಯ್ಕೆಗಳು ಹಾಗೂ ನಿರ್ಧಾರಗಳು ನಿಮ್ಮ ಸಂಬಂಧದ ಅಳಿವಿಗೆ ಕಾರಣವಾಗುತ್ತವೆ. ನೀವು ತಾಳ್ಮೆ ಹಾಗೂ ಕೇಳುವ ಗುಣ ಬೆಳೆಸಿಕೊಳ್ಳದಿದ್ದಲ್ಲಿ ಸಂಬಂಧದ ವಿಷಯದಲ್ಲಿ ಕಷ್ಟವಿದೆ.
ಹೊಂದಾಣಿಕೆ ಅಸ್ತ್ರ ಬತ್ತಳಿಕೆಯಲ್ಲಿದ್ರೆ ಲೈಫ್‍ನಲ್ಲಿ ನೋ ವರಿಸ್
ವೃಷಭ
ನಿಮ್ಮ ಹಟಮಾರಿತನ ನಿಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ. ಸಂಬಂಧವು ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು ಹಾಗೂ ಹೊಂದಿಕೊಳ್ಳಬೇಕು ಎಂಬುದನ್ನು ಕೇಳುತ್ತದೆ. ನೀವು ನಿಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರದಿದ್ದರೆ, ನಿಮ್ಮ ಸಂಗಾತಿಯೊಂದಿಗೆ ಎದುರಾಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸದಿದ್ದರೆ ಸಂಬಂಧ ಹಾಳಾಗುತ್ತದೆ.
ಮಿಥುನ
ನೀವೊಂದು ಕುತೂಹಲದ ಮೂಟೆ. ಸಾಹಸಗಳನ್ನು ಕೈಗೊಳ್ಳಲು ನಿಮಗಿಷ್ಟ ಆದರೆ ಯಾವಾಗಲೂ ಎರಡು ಎಮೋಶನ್ಸ್ ನಡುವೆ ಸಿಲುಕಿ ಒದ್ದಾಡುತ್ತೀರಿ. ಇನ್ನೊಬ್ಬರನ್ನು ಪ್ರೀತಿಸುವಾಗ ಕೂಡಾ ಅವರೊಂದಿಗೆ ಸೆಟಲ್ ಆಗುವ ಕನಸು ಕಾಣುತ್ತಲೇ, ಒಂದೆಡೆ ನಿಲ್ಲದೆ ಸುತ್ತಾಡುತ್ತಾ ಬದುಕು ಸವೆಸುವ ಕನಸೂ ಕಾಣುತ್ತೀರಿ. ಪ್ರಾಕ್ಟಿಕಲಿ ಹೀಗೆ ಎರಡೆರಡು ಕನಸುಗಳು ಒಟ್ಟಿಗೇ ಸಿದ್ದಿಸುವುದು ಕಷ್ಟಸಾಧ್ಯವಾಗಿದ್ದು, ಯಾವುದಾದರೊಂದು ನಿರ್ಧಾರಕ್ಕೆ ಬದ್ಧರಾಗಲು ಒದ್ದಾಡುತ್ತೀರಿ. ಹಾಗೊಂದು ವೇಳೆ ಒಂದು ನಿರ್ಧಾರ ಕೈಗೊಂಡರೂ ಕಡೆಗೆ ಮತ್ತೊಂದು ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಕೊರಗುತ್ತೀರಿ. ಇದೇ ಕಾರಣಕ್ಕೆ ಸಂಬಂಧ ಸ್ಥಿರವಾಗಿರದೇ ಓಲಾಡುತ್ತದೆ.
ಕರ್ಕಾಟಕ
ನೀವು ನಿಜವಾಗಿಯೂ ಚೆನ್ನಾಗಿ ಪ್ರೀತಿಸಬಲ್ಲಿರಿ. ಆದರೆ, ಸುತ್ತಮುತ್ತಲಿನ ಸಂಗತಿಗಳು ನಿಮ್ಮ ನಿಯಂತ್ರಣ ತಪ್ಪಿದಾಗ ಮಾತ್ರ ಅತಿಯಾದ ಭಾವನೆಗಳಿಗೆ ಸಿಲುಕಿ ದೊಡ್ಡ ಡ್ರಾಮಾವನ್ನೇ ಹುಟ್ಟುಹಾಕಿಬಿಡುತ್ತೀರಿ. ಸಂಬಂಧದಲ್ಲಿ ಸಂಗಾತಿಗೆ ಉಸಿರಾಡಲು ಅವಕಾಶವನ್ನೇ ನೀಡುವುದಿಲ್ಲ.
ಸಿಂಹ
ನಿಮ್ಮದು ಡಾಮಿನೆಂಟ್ ವ್ಯಕ್ತಿತ್ವವಾಗಿರುವುದರಿಂದ ಸುತ್ತಮುತ್ತಲಿನ ಜಗತ್ತನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಲ್ಲಿರಿ. ಆದರೆ, ಸಂಬಂಧದ ವಿಷಯಕ್ಕೆ ಬಂದರೆ ನಿಮ್ಮ ಅಹಂಕಾರವೇ ಹಾಗೂ ಅಧಿಕಾರಯುತ ನಡೆಯೇ ನಿಮಗೆ ಮುಳ್ಳಾಗಲಿದೆ. ರೊಮ್ಯಾನ್ಸ್ ವಿಷಯಕ್ಕೆ ಬಂದಾಗ ನಿಮ್ಮ ಸಂಗಾತಿಗೂ ಸಮಾನ ಅಧಿಕಾರ ನೀಡಿ ಅವರ ಆಯ್ಕೆಗಳನ್ನೂ ಗೌರವಿಸಬೇಕು.
ಕನ್ಯಾ
ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂದು ಬಯಸುವವರು ನೀವು. ನೀವು ಮಾಡುವ ಕೆಲಸಗಳು ಪರ್ಫೆಕ್ಷನ್‍ಗೆ ಹತ್ತಿರವಾಗಿರುವಂತೆ ನೋಡಿಕೊಳ್ಳುವುದು ಉತ್ತಮವೇ. ಆದರೆ, ಪಾರ್ಟ್ನರ್ ಬಳಿಯೂ ಅದನ್ನೇ ನಿರೀಕ್ಷಿಸುವುದು ಅವರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಸಣ್ಣ ಪುಟ್ಟದ್ದಕ್ಕೂ ದೂರುವುದು, ಕೊರಗುವುದು, ಸಿಟ್ಟು ಮಾಡುವುದರಿಂದ ಸುಂದರ ಸಂಬಂಧವೊಂದನ್ನು ಹಾಳುಮಾಡಿಕೊಳ್ಳುವ ಸಂಭವ ಹೆಚ್ಚು.
ಕ್ವಾರಂಟೈನ್ ಅವಧಿಯಲ್ಲಿ ಬಯಲಾಗ್ತಿದೆ ಬಾಲಿವುಡ್ ಬೆಡಗಿಯರ ಬ್ಯೂಟಿ ಸೀಕ್ ...
ತುಲಾ
ನೀವು ಯಾವುದನ್ನೂ ಹೇಳಿಕೊಳ್ಳುವ ಪ್ರವೃತ್ತಿಯವರಲ್ಲ, ದುಃಖವಾದರೂ, ಕೋಪ ಬಂದರೂ ಎಲ್ಲವನ್ನೂ ನಿಮ್ಮೊಳಗೇ ಇಟ್ಟುಕೊಂಡಿರುತ್ತೀರಿ. ಕಾಲಾಂತರದಲ್ಲಿ ಈ ನೆಗೆಟಿವ್ ಎಮೋಶನ್ಸ್‌ಗಳು ಒಳಗೇ ಬೆಳೆದು ಒಳಗೆ ಹುಟ್ಟಿದ್ದ ಪ್ರೀತಿಯನ್ನು ಬದಿಗೆ ಸರಿಸಿ ಸಂಬಂಧಕ್ಕೆ ಮುಳುವಾಗಬಲ್ಲವು.
ವೃಶ್ಚಿಕ
ಸಂಬಂಧಗಳನ್ನು ಹತ್ತಿರಾಗಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತೀರಿ. ಆದರೆ, ಒಮ್ಮೆ ಯಾರನ್ನಾದರೂ ಹತ್ತಿರ ಬಿಟ್ಟುಕೊಂಡರೆ ಅವರಿಗಾಗಿ ಎಲ್ಲವನ್ನೂ ಕೊಡಲು ಸಿದ್ಧರಾಗಿರುತ್ತೀರಿ. ಆದರೆ, ಸಂಬಂಧ ಹಾಳು ಮಾಡಿಕೊಳ್ಳುವ ನಿಮ್ಮ ಸ್ವಭಾವ ಎಂದರೆ ಸಂಗಾತಿಯ ಕುರಿತ ಅತಿಯಾದ ಪೊಸೆಸಿವ್‌ನೆಸ್ ಹಾಗೂ ಅವರನ್ನು ಅನುಮಾನಿಸುವುದು.
ಧನು
ನಿಮ್ಮ ನಂಬುವ ಗುಣದಿಂದಾಗಿ ಹಲವು ಬಾರಿ ಮೋಸ ಹೋಗಿದ್ದೀರಿ. ಹೀಗೆ ಮೋಸ ಹೋದ ಬಳಿಕ ಸಂಬಂಧದಲ್ಲಿ ಕೂಡಾ ಮತ್ತೆ ಮೋಸ ಹೋಗುವ ಭಯದಲ್ಲೇ ಬದುಕುತ್ತೀರಿ. ಸಂಗಾತಿಯ ನಡೆ ಸ್ವಲ್ಪ ಬದಲಾದರೂ ನಿಮ್ಮ ಚಿಪ್ಪಿನೊಳಗೆ ಹೋಗಿ ಕೂರುತ್ತೀರಿ. ಇದರಿಂದಲೇ ಸಂಬಂಧ ಹಾಳುಮಾಡಿಕೊಳ್ಳುತ್ತೀರಿ.
ಮಕರ
ಎಲ್ಲ ವಿಷಯದಲ್ಲೂ ಲಾಜಿಕ್ ಹುಡುಕುವವರು ನೀವು. ಸಂಬಂಧಗಳಿಗೂ ಇದು ಹೊರತಲ್ಲ. ಸಂಬಂಧವನ್ನು ಲಾಜಿಕ್ ಹಾಗೂ ಪ್ರಾಕ್ಟಿಕಾಲಿಟಿಯಾಗಿ ನೋಡುತ್ತೀರಿ. ಆದರೆ, ಪ್ರೀತಿಯ ವಿಷಯದಲ್ಲಿ ಲಾಜಿಕ್ ಕೆಲಸ ಮಾಡುವುದಿಲ್ಲ, ಆಳವಾದ ಎಮೋಶನ್ಸ್ ಜೊತೆ ನೀವು ಪ್ರವಹಿಸಬೇಕಾಗುತ್ತದೆ.
ಕುಂಭ
ನೀವು ಯಾವಾಗಲೂ ನಿಮ್ಮನ್ನು ದ್ವೀಪವಾಗಿಸಿಕೊಳ್ಳುವವರು. ಸಂಬಂಧದಲ್ಲಿದ್ದಾಗಲೂ ನಿಮ್ಮ ಸ್ವಾತಂತ್ರ್ಯ ಹಾಗೂ ವ್ಯಕ್ತಿತ್ವ ಬಿಟ್ಟು ಕೊಡಲು ಸಿದ್ಧರಿಲ್ಲದವರು. ಪ್ರೀತಿಗಾಗಿ ಎದುರು ನೋಡುತ್ತಲೇ, ಸ್ವಾತಂತ್ರ್ಯವನ್ನು ಪ್ರೀತಿಸುವ ನಿಮ್ಮ ನಡೆಯೇ ಮುಳುವಾಗಬಲ್ಲದು.
ಮೀನ
ಬಹಳ ಸೃಜನಶೀಲರಾದ ನೀವು ಸದಾ ಕನಸಿನ ಲೋಕದಲ್ಲಿ ತೇಲುತ್ತಿರುತ್ತೀರಿ. ಪ್ರೀತಿಯ ಕುರಿತು ನೀವು ಬಹಳಷ್ಟು ಕನಸು ಕಟ್ಟಿಕೊಂಡಿರುವುದರಿಂದಲೇ ಸಂಗಾತಿಯಿಂದ ನಿಮ್ಮ ನಿರೀಕ್ಷೆಗಳು ಅತಿಯಾಗಿರುತ್ತವೆ. ಇದು ಬಹಳಷ್ಟು ಬಾರಿ ನಿರಾಸೆಗೆ ಕಾರಣವಾಗುತ್ತದೆ. ಅಲ್ಲದೆ, ಸಂಗಾತಿಗೂ ಒತ್ತಡವೆನಿಸುತ್ತದೆ.