ಹಸ್ತಮೈಥುನ ಸುಖ ಸಂಸಾರಕ್ಕೆ ಅಡ್ಡಿಯೇ? ಅಯ್ಯೋ ಎಷ್ಟೊಂದು ಮಿಥ್ಸ್!
ಹಸ್ತಮೈಥುನದ ಬಗ್ಗೆ ಸಮಾಜದಲ್ಲಿ ತಿಳಿವಳಿಕೆ ಮೂಡಿದಂತೆ, ತಪ್ಪು ಕಲ್ಪನೆಗಳೂ ಯುವಜನರಲ್ಲಿ ಬೇರೂರಿವೆ. ಇವುಗಳನ್ನು ಹೋಗಲಾಡಿಸುವುದು ಮುಖ್ಯ. ಅಂಥ ಕೆಲವು ಮಿಥ್‌ಗಳ ನಿವಾರಣೆ ಇಲ್ಲಿದೆ.
ಹೆಚ್ಚಿನ ಯುವಜನತೆ ಇಂದು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಸಂಗಾತಿ ಪಕ್ಕದಲ್ಲಿ ಇಲ್ಲದಾಗ, ಉದ್ರೇಕವಾದಾಗ ವಿವಾಹಿತ/ತೆಯರೂ ಇದನ್ನು ಸಾಕಷ್ಟು ಮಾಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ಎಷ್ಟೊಂದು ಜನರಿಗೆ ಇದು ತಿಳಿದಿದ್ದರೂ, ಇನ್ನೂ ಸಾಕಷ್ಟು ತಪ್ಪು ಕಲ್ಪನೆಗಳು ಇದರ ಬಗ್ಗೆ ಉಳಿದೇ ಇವೆ. ಉದಾಹರಣೆಗೆ, ಹಸ್ತಮೈಥುನದಿಂದ ದೇಹದ ಶಕ್ತಿಯೆಲ್ಲ ಸೋರಿ ಹೋಗಿ ನಿಶ್ಶಕ್ತಿಯಾಗುತ್ತದೆ ಎಂಬುದು ಹೊಸದಾಗಿ ಹಸ್ತಮೈಥುನ ಆರಂಭಿಸುವವರಲ್ಲಿ ಸೃಷ್ಟಿಯಾಗುವ ಒಂದು ತಪ್ಪು ಕಲ್ಪನೆ. ಇದು ನಿಜವಲ್ಲ ಎಂಬುದನ್ನು ಸೆಕ್ಸ್‌ಪರ್ಟ್‌ಗಳು ಸಾಕಷ್ಟು ಸಾರಿ ಹೇಳಿದ್ದಾರೆ, ಹೇಳುತ್ತಲೇ ಇದ್ದಾರೆ. ಅದೇ ನಿಜವೆಂದಾದರೆ ವಿವಾಹಿತರು ಪ್ರತಿದಿನವೂ ಮೈಥುನ ಮಾಡುತ್ತಾರೆ; ಅವರು ಒಂದು ತಿಂಗಳಲ್ಲಿ ನಿಶ್ಶಕ್ತಿಯಿಂದ ಸತ್ತೇ ಹೋಗಬೇಕಿತ್ತು! ಹಾಗಾಗುವುದಿಲ್ಲ. ವೀರ್ಯ ಸದಾಕಾಲ ಗಂಡಸಿನ ವೃಷಣಗಳಲ್ಲಿ ಉತ್ಪತ್ತಿಯಾಗುತ್ತಲೇ ಇರುತ್ತದೆ. ದಿನಕ್ಕೊಮ್ಮೆ ವೀರ್ಯ ಸ್ಖಲನ ಉಂಟಾದರೆ ಅದರಲ್ಲಿ ಸಮಸ್ಯೆಯೇನಿಲ್ಲ. ಹಸ್ತಮೈಥುನ ಮಾಡಿಕೊಳ್ಳದೇ ಇದ್ದರೆ ವೀರ್ಯ ರಾತ್ರಿ ನಿದ್ರೆಯಲ್ಲಿ ಸ್ವಪ್ನಸ್ಖಲನದ ಮೂಲಕವೂ ಹೊರಹೋಗುವ ಸಂಭವ ಉಂಟು, ಹೀಗಾಗಿ ಹಸ್ತಮೈಥುನ ವೀರ್ಯನಾಶಕ್ಕೆ, ನಿಶ್ಶಕ್ತಿಗೆ ಕಾರಣವಾಗುವುದಿಲ್ಲ. ಇಂಥದೇ ಇನ್ನೂ ಕೆಲವು ಮಿಥ್‌ಗಳು ಇಲ್ಲಿವೆ.
ಹಸ್ತಮೈಥುನದಿಂದ ಶಿಶ್ನ ಡೊಂಕಾಗುತ್ತದೆ
ಶಿಶ್ನದ ಡೊಂಕಿಗೂ ಹಸ್ತಮೈಥುನಕ್ಕೂ ಸಂಬಂಧವಿಲ್ಲ. ಎಲ್ಲರ ಶಿಶ್ನವೂ ನೇರವಾಗಿರುವುದಿಲ್ಲ. ಶೇ.೫೦ ಮಂದಿಯ ಶಿಶ್ನ ಸ್ವಲ್ಪವಾದರೂ ಬಾಗಿದಂತಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಸ್ತಮೈಥುನದಿಂದ ಈ ಬಾಗುವಿಕೆ ಹೆಚ್ಚಾಗುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಈ ಬಾಗುವಿಕೆಯಿಂದ ನಿಜವಾದ ಸೆಕ್ಸ್‌ಗೆ ಅಮಸ್ಯೆಯೂ ಆಗುವುದಿಲ್ಲ. ಆದರೆ ೪೫ ಡಿಗ್ರಿಗಿಂತಲೂ ಅಧಿಕ ಬಾಗಿದ್ದರೆ ನೀವು ವೈದ್ಯರನ್ನು ಕಾಣಬೇಕು.
ಹಸ್ತಮೈಥುನ ಸಂಗಾತಿಗೆ ಮೋಸ ಮಾಡಿದಂತೆ
ಸಂಗಾತಿ ಬಳಿ ಇಲ್ಲದಾಗ ಉದ್ರೇಕವಾದಾಗ ಹಸ್ತಮೈಥುನ ಮಾಡಿಕೊಂಡರೆ ಅದು ಸಂಗಾತಿಗೆ ಮೋಸ ಮಾಡಿದಂತಲ್ಲ. ನಿಮ್ಮ ಕೈ ನಿಮ್ಮ ಸಂಗಾತಿಗೆ ಪರ್ಯಾಯವಲ್ಲ! ಸಂಗಾತಿ ನೀಡುವ ಸುಖವನ್ನು ಕೈ ನೀಡಲಾರದು ನಿಜ. ಆದರೆ ಅದು ತಾತ್ಕಾಲಿಕ ಸಮಾಧಾನ ಸಂತೋಷಗಳನ್ನು ನೀಡುತ್ತದೆ. ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ. ನಿಮಗೆ ಮೂಡ್ ಇದ್ದಾಗ ನಿಮ್ಮ ಸಂಗಾತಿಗೂ ಇರಬೇಕೆಂದಿಲ್ಲ. ಹೀಗಾಗಿ ನಿಮ್ಮ ಸಂಗಾತಿಯೆದುರೇ ಹಸ್ತಮೈಥುನ ಮಾಡಿಕೊಳ್ಳುವುದೂ ಓಕೆ.
ಸ್ತ್ರೀಯರು ಹಸ್ತಮೈಥುನ ಮಾಡಿಕೊಳ್ಳುವುದಿಲ್ಲ
ಲೈಂಗಿಕ ಬಯಕೆ ಗಂಡಿಗೆ ಮಾತ್ರ ಸೀಮಿತ ಅಲ್ಲವಲ್ಲಾ, ಅವನಷ್ಟೇ ಅವಳಿಗೂ ಲೈಂಗಿಕಾಸಕ್ತಿ ಇರುತ್ತದೆ, ಲೈಂಗಿಕಾಸಕ್ತಿ ಹುಡುಗನಿಗೆ ಹೆಚ್ಚೋ ಹುಡುಗಿಗೆ ಹೆಚ್ಚೋ ಅಂತ ಮೌಲ್ಯಮಾಪನ ಮಾಡೋದಂತೂ ಸಾಧ್ಯ ಇಲ್ಲವಲ್ಲ. ಹಾಗಿರುವಾಗ ಜಗತ್ತಿನ ಎಲ್ಲ ಕಡೆಯೂ ಮಹಿಳೆಯರು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಅವಳು ಪೂರಕ ವಾತಾವರಣ ಇಲ್ಲದ ಕಾರಣ ಇದನ್ನು ಮುಕ್ತವಾಗಿ ಹೇಳಿಕೊಳ್ಳಲು ಆಗುತ್ತಿಲ್ಲ.
#Feelfree: ನಾನು ಒಂಟಿ, ಸೆಕ್ಸ್ ಟಾಯ್ಸ್ ಬಳಸಬಹುದೇ?
ಹಸ್ತಮೈಥುನ ಪುರುಷತ್ವಕ್ಕೆ ಹಾನಿ
ಹಸ್ತಮೈಥುನದಿಂದ ವೀರ್ಯ ಹೊರಗೆ ಹೋಗುತ್ತದೆ. ಸುಖ ಸಿಗುತ್ತದೆ. ಆದರೆ ಪುರುಷತ್ವವೇ ನಾಶವಾಗುತ್ತದೆ ಅನ್ನಲು ಆಧಾರಗಳಿಲ್ಲ. ವೈದ್ಯಕೀಯವೂ ಇದನ್ನು ಒಪ್ಪುವುದಿಲ್ಲ. ವಿವಾಹಿತರು ನಿತ್ಯ ಮೈಥುನ ಮಾಡಿದರೆ ಗಂಡಸರ ಪುರುಷತ್ವ ಹಾನಿಯಾಗುತ್ತದೇನು? ಇಲ್ಲವಲ್ಲ! ಹಾಗೇ ಇದೂ ಕೂಡ.
ಗರ್ಭಿಣಿಯಾಗಿರುವಾಗ ಹಸ್ತಮೈಥುನ ಕೂಡದು
ಗರ್ಭಿಣಿಯಾಗಿರುವಾಗ ಹಸ್ತಮೈಥುನವನ್ನೂ ಮಾಡಬಹುದು, ಗಂಡನ ಜತೆ ಸೆಕ್ಸ್ ಕೂಡ ನಡೆಸಬಹುದು. ವಾಸ್ತವವಾಗಿ ಸೆಕ್ಸ್‌ಗಿಂತಲೂ ಆಗ ಹಸ್ತಮೈಥುನವೇ ಸುರಕ್ಷಿತ, ಆರಾಮದಾಯಕ. ಗರ್ಭಿಣಿಯಾದ ಮಾತ್ರಕ್ಕೆ ಲೈಂಗಿಕ ಬಯಕೆಗಳೇನೂ ಇಲ್ಲದಾಗುವುದಿಲ್ಲ. ಈ ಹೊತ್ತಿನಲ್ಲಿ ಗಂಡ ಕೂಡ ನಿಮಗೆ ಹಸ್ತಮೈಥುನ ನೀಡಿ ನಿಮ್ಮನ್ನು ಖುಷಿಪಡಿಸಬಹುದು.
ವೃದ್ಧರು ಹಸ್ತಮೈಥುನ ಮಾಡಿಕೊಳ್ಳುವುದಿಲ್ಲ
ಇದು ಕೂಡ ಸುಳ್ಳು. ಸುಮಾರು ೫೦ರ ವಯಸ್ಸಿನಲ್ಲಿ ಹೆಂಗಸರಿಗೆ ಮೆನೋಪಾಸ್ ಆಗಿ, ೬೦ ವಯಸ್ಸಿನಲ್ಲಿ ಗಂಡಸರಲ್ಲಿ ವೀರ್ಯದ ಉತ್ಪತ್ತಿ ನಿಂತುಹೋದರೂ, ಆಗಾಗ ಕಾಮೋದ್ರೇಕ ಉಂಟಾಗಬಹುದು. ಈ ವಯಸ್ಸಿನಲ್ಲಿ ಕೆಲವರ ಸಂಗಾತಿಯನ್ನು ಕಳೆದುಕೊಂಡಿರಬಹುದು ಅಥವಾ ಸಂಗಾತಿ ಹತ್ತಿರ ಇರಲಿಕ್ಕಿಲ್ಲ. ಇಂಥ ಹೊತ್ತಿನಲ್ಲಿ ಹಸ್ತಮೈಥುನವೇ ರಾಮಬಾಣ, ಇದು ಅಸಹಜವಲ್ಲ, ವಿಲಕ್ಷಣವಲ್ಲ.
ಹಸ್ತಮೈಥುನ ಸುಖ ಸಂಸಾರಕ್ಕೆ ಅಡ್ಡಿ
ಹಾಗೇನಿಲ್ಲ. ಕೆಲವೊಮ್ಮೆ ಅತೃಪ್ತ ಸಂಗಾತಿಯು ಹಸ್ತಮೈಥುನದಿಂದಲೂ ಸುಖ ಹೊಂದುವುದರಿಂದ, ದಾಂಪತ್ಯ ಚೆನ್ನಾಗಿಯೇ ಇರುತ್ತದೆ ಎನ್ನಬಹುದು. ಹಸ್ತಮೈಥುನವು ಸ್ವಯಂ ಪ್ರೀತಿ. ಅದು ತನ್ನನ್ನು ಪ್ರೀತಿಸಲು ಕಲಿಸದಿರಬಹುದು, ಆದರೆ ಅದು ತನ್ನದೇ ಆದ ಪ್ರಾಮುಖ್ಯತೆಯನ್ನು ಅನುಭವಿಸುವಂತೆ ಮಾಡುತ್ತದೆ.
ಹೆಣ್ಣು ಮಕ್ಕಳೂ ಹಸ್ತಮೈಥುನ ಮಾಡಿಕೊಳ್ತಾರಾ ? ಇದು ಸಹಜ ಪ್ರಕ್ರಿಯೆಯೇ ?