12 ದೇಶಗಳಲ್ಲಿ ನೂರಕ್ಕೂ ಅಧಿಕ ಮಕ್ಕಳನ್ನು ಪಡೆದಿರುವ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೋವ್ ಅಷ್ಟೂ ಮಕ್ಕಳಿಗೆ 13 ಲಕ್ಷ ಕೋಟಿ ಆಸ್ತಿ ಹಂಚಲು ನಿರ್ಧರಿಸಿದ್ದಾರೆ. ಏನಿದು ನೋಡಿ!
ಇತ್ತೀಚಿನ ವರ್ಷಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆ್ಯಪ್ಗಳಲ್ಲಿ ಒಂದು ಟೆಲಿಗ್ರಾಮ್. ಪಾವೆಲ್ ಡುರೋವ್ ಅವರು ಟೆಲಿಗ್ರಾಮ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ. ಅವರು 2013 ರಲ್ಲಿ ತಮ್ಮ ಸಹೋದರ ನಿಕೊಲಾಯ್ ಡುರೊವ್ ಜೊತೆಗೂಡಿ ಟೆಲಿಗ್ರಾಮ್ ಅನ್ನು ಪ್ರಾರಂಭಿಸಿದರು. ಫೋರ್ಬ್ಸ್ ಪ್ರಕಾರ, ಅವರು 2024 ರಲ್ಲಿ ಸುಮಾರು $15.5 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 120 ನೇ ಶ್ರೀಮಂತ ವ್ಯಕ್ತಿಯಾಗಿದ್ದರು. 2023 ರಲ್ಲಿ, ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶ್ರೀಮಂತ ವಲಸಿಗರಾಗಿ ಗುರುತಿಸಲ್ಪಟ್ಟರು ಮತ್ತು ಅವರ ಅದೃಷ್ಟವು ಹೆಚ್ಚಾಗಿ ಟೆಲಿಗ್ರಾಮ್‌ನ ಮಾಲೀಕತ್ವದಿಂದ ಬಂದಿದೆ. ಇಂತಿಪ್ಪ, ಪಾವೆಲ್ ಡುರೋವ್ ಒಬ್ಬ ವಿಚಿತ್ರ ಮನುಷ್ಯ. ಇವರಿಗೆ 12 ದೇಶಗಳಲ್ಲಿ ನೂರಕ್ಕೂ ಅಧಿಕ ಮಕ್ಕಳು ಇದ್ದಾರೆ!
ಹೌದು. ಹಾಗೆಂದು ಇವರು ಹೋದ ಹೋದಲ್ಲಿ ಬೇಡದ ಕೆಲಸ ಮಾಡಿಬಂದವರು ಅಂತಲ್ಲ. ಮೂರು ವಿಭಿನ್ನ ಮಹಿಳೆಯರೊಂದಿಗೆ ಆರು ಮಕ್ಕಳಿಗೆ ಜೈವಿಕ ತಂದೆಯಾಗಿದ್ದಾರೆ ಅಷ್ಟೇ. ಆದರೆ ಇನ್ನು 100ಕ್ಕೂ ಅಧಿಕ ಮಕ್ಕಳನ್ನು ಪಡೆದಿರುವುದು ವೀರ್ಯದಾನ ಮಾಡುವ ಮೂಲಕ. ಕಳೆದ ಹದಿನೈದು ವರ್ಷಗಳಿಂದ, ಬಿಲಿಯನೇರ್ ವೀರ್ಯ ದಾನ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ 100ಕ್ಕೂ ಹೆಚ್ಚು ಮಕ್ಕಳ ಗರ್ಭಧಾರಣೆ ಸಂಭವಿಸಿದೆ. ಈಗ ಕುತೂಹಲದ ವಿಷಯ ಏನಪ್ಪಾ ಎಂದರೆ, ಪಾವೆಲ್ ಡುರೋವ್ ತಮ್ಮ $13.9 ಬಿಲಿಯನ್ ಮೌಲ್ಯದ ಸಂಪತ್ತನ್ನು ಈ 100 ಮಕ್ಕಳಿಗೆ ಬಿಟ್ಟುಕೊಡುವ ನಿರ್ಧಾರ ಮಾಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಅವರು ಬಹಿರಂಗಪಡಿಸುವ ಮೂಲಕ ಇಡೀ ವಿಶ್ವವೇ ಅಚ್ಚರಿ ಪಡುವಂತೆ ಮಾಡಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಪಾವೆಲ್ ಡುರೋವ್ $13.9 ಬಿಲಿಯನ್ ಆಸ್ತಿಯನ್ನು ಹೊಂದಿದ್ದಾರೆ. ಬ್ಲೂಮ್‌ಬರ್ಗ್‌ನ ವರದಿಯಲ್ಲಿ ಉಲ್ಲೇಖಿಸಲಾದ ಫ್ರಾನ್ಸ್‌ನ ಲೆ ಪಾಯಿಂಟ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, 40 ವರ್ಷದ ಟೆಕ್ ಉದ್ಯಮಿ ತಮ್ಮ ಯೋಜನೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. "ನನ್ನ ಮಕ್ಕಳು ಹೇಗೆಯೇ ಹುಟ್ಟಿರಲಿ, ಅವರ ನಡುವೆ ನಾನು ವ್ಯತ್ಯಾಸ ಮಾಡುವುದಿಲ್ಲ. ಜೈವಿಕ ತಂದೆಯೇ ಆಗಿರಲಿ, ವೀರ್ಯದ ಮೂಲಕವೇ ಹುಟ್ಟಿರಲಿ, ಅವರು ನನ್ನ ಮಕ್ಕಳು ಎನ್ನುವುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಸ್ವಾಭಾವಿಕವಾಗಿ ಗರ್ಭಧರಿಸಲ್ಪಟ್ಟವರು ಮತ್ತು ನನ್ನ ವೀರ್ಯ ದಾನದಿಂದ ಜನಿಸಿದವರು ಎಲ್ಲರೂ ನನ್ನ ಮಕ್ಕಳೇ. ಆದ್ದರಿಂದ ಎಲ್ಲರಿಗೂ ಒಂದೇ ರೀತಿಯ ಹಕ್ಕುಗಳಿರುತ್ತವೆ. ಈ ಹಿನ್ನೆಲೆಯಲ್ಲಿ ನನ್ನೆಲ್ಲಾ ಆಸ್ತಿಯಲ್ಲಿ ಅವರಿಗೂ ಪಾಲು ಇದೆ" ಎಂದು ಪಾವೆಲ್ ಡುರೋವ್ ಹೇಳಿದ್ದಾರೆ.
ಈ ಘೋಷಣೆಯ ಹೊರತಾಗಿಯೂ, ಮುಂದಿನ 30 ವರ್ಷಗಳವರೆಗೆ ತನ್ನ ಮಕ್ಕಳು ತನ್ನ ಸಂಪತ್ತನ್ನು ಬಳಸುವುದಿಲ್ಲ ಎಂದು ಡುರೊವ್ ಹೇಳಿದ್ದಾರೆ. ನಾನು ಇತ್ತೀಚೆಗೆ ನನ್ನ ಉಯಿಲು ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಅದರ ಪ್ರಕಾರ, ಇಂದಿನಿಂದ ಪ್ರಾರಂಭಿಸಿ ಮೂವತ್ತು ವರ್ಷಗಳ ಅವಧಿ ಮುಗಿಯುವವರೆಗೆ ನನ್ನ ಮಕ್ಕಳು ನನ್ನ ಸಂಪತ್ತನ್ನು ಬಳಸುವಂತಿಲ್ಲ. ಆ ಬಳಿಕ ಅವರಿಗೆ ಎಲ್ಲಾ ಹಕ್ಕು ಇದೆ ಎಂದಿದ್ದಾರೆ. ಅಷ್ಟಕ್ಕೂ, ಡುರೊವ್ ತಮ್ಮ ತಂತ್ರಜ್ಞಾನ ನಾವೀನ್ಯತೆಗಾಗಿ ಜಾಗತಿಕ ಮೆಚ್ಚುಗೆಯನ್ನು ಪಡೆದಿದ್ದರೂ, ಅವರು ಕಾನೂನು ಸವಾಲುಗಳನ್ನೂ ಎದುರಿಸುತ್ತಿದ್ದಾರೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಟೆಲಿಗ್ರಾಮ್ ವೇದಿಕೆಯಲ್ಲಿ ನಡೆದ ಅಪರಾಧಗಳನ್ನು ಸಕ್ರಿಯಗೊಳಿಸುವಲ್ಲಿ ಅವರು ಭಾಗಿಯಾಗಿದ್ದಾರೆಂದು ಹೇಳಿಕೊಳ್ಳುವ ಫ್ರೆಂಚ್ ಅಧಿಕಾರಿಗಳು ಕಳೆದ ವರ್ಷ ಅವರ ಮೇಲೆ ಆರೋಪ ಹೊರಿಸಿದ್ದರು. ಡುರೊವ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
