ಜಗತ್ತಿನಲ್ಲಿ ಯಾವ ಮಗುವೂ ನೀಡದಷ್ಟು ಪ್ರೀತಿಯನ್ನು ನನಗೆ ನನ್ನ ಮಗ ನೀಡಿದಾನೆ. ಅಷ್ಟು ಸಾಕು ಅನ್ನುತ್ತಾರೆ ಭಾರ್ಗವ ಎಂಬ ಹೆಸರಿನ ಆ ಮಗುವಿನ ತಾಯಿ. ಭಾರ್ಗವನಿಗೆ ಈಗ ಎಂಟು ವರ್ಷ. ಹುಟ್ಟಿನಿಂದಲೇ ಡೌನ್‌ ಸಿಂಡ್ರೋಮ್‌. ಆದರೆ ಆ ಮಗು ತನ್ನ ಸುತ್ತಮುತ್ತಲಿನವರ ಮೇಲೆ ತೋರಿಸೋ ಅಕ್ಕರೆ, ಕಳಕಳಿ ಇನ್ಯಾವ ಮಗುವಿನಲ್ಲೂ ಅವರು ಕಂಡಿಲ್ಲ. ಅವರ ಕತೆ ಇಲ್ಲಿದೆ:

ನಂಗೆ 22 ವರ್ಷವಿದ್ದಾಗ ಭಾರ್ಗವ ಹುಟ್ಟಿದ. ಅವನಿಗೆ ಡೌನ್‌ ಸಿಂಡ್ರೋಮ್‌ ಇದೆ; ಮಾತನಾಡೋ ಶಕ್ತಿ ಬರೋದು ಕಷ್ಟ ಅಂತ ಡಾಕ್ಟರ್ ಹೇಳಿದಾಗ, ನಂಗೆ ಆಕಾಶವೇ ಕಳಚಿ ಬಿದ್ದಷ್ಟು ದುಃಖವಾಯಿತು. ಅವನು ಊಟ ಮಾಡೋದು, ಡ್ರೆಸ್‌ ಹಾಕ್ಕೊಳ್ಳೋದು, ಶಾಲೆಗೆ ಹೋಗೋದು ಇದೆಲ್ಲ ಸಾಧ್ಯವಾ ಅನ್ನಿಸಿಬಿಟ್ಟಿತ್ತು. ಈ ಮಗುವನ್ನು ಸಾಕಬೇಕಿರೋದು ಹೇಗೆ ಅಂತ ತಿಳಕೊಳ್ಳೊದಕ್ಕೆ ಇದೇ ಸಮಸ್ಯೆ ಇರೋ ಬೇರೆ ಮಕ್ಕಳ ಪೇರೆಂಟ್ಸ್ ಹತ್ರ ಹೋಗತೊಡಗಿದೆ. ಹೀಗೆ ಒಮ್ಮೆ ಒಂದು ಫ್ಯಾಮಿಲಿ ಹತ್ರ ಹೋದಾಗ, ಅಲ್ಲಿ ಮಗುವಿನ ತಂದೆ ತಾಯಿ ಇರಲಿಲ್ಲ. ಆದರೆ ಮಗು ಇತ್ತು. ಜತೆಗೆ ಅವನ ಅಜ್ಜಿ ಇದ್ರು. ಆ ಮಗುವಿನ ಮುಖದ ಮೇಲಿದ್ದ ಸಂತೋಷ, ನಗು ನೋಡಿದಾಗ ನನ್ನ ಎಲ್ಲ ಚಿಂತೆ ದೂರಾಯ್ತು. ಆ ಅಜ್ಜಿ ಹೇಳಿದ್ರು: ಏನಿಲ್ಲ ಮಗೂ, ಇದು ನೀನು ದೇವಸ್ಥಾನಕ್ಕೆ ಹೋದ ಹಾಗೆ. ಅಲ್ಲಿ ಏನು ಪ್ರಸಾದ ಸಿಗುತ್ತೋ ಅದನ್ನು ದೇವರ ಕೃಪೆ ಅಂತ ತಿಳಿದು ಸ್ವೀಕರಿಸ್ತೀ ತಾನೆ? ಹಾಗೇ ಇದೂ ಕೂಡ!

ಈ ಮಾತು ನನ್ನ ಯೋಚನೆಯನ್ನೇ ಬದಲಾಯಿಸ್ತು. ಸಮಸ್ಯೆ ಇರೋದು ಈ ಮಕ್ಕಳಲ್ಲಿ ಅಲ್ಲ, ಬದಲಾಗಿ ನನ್ನ ಯೋಚನಾಕ್ರಮದಲ್ಲಿ ಅಂತ ಗೊತ್ತಾಯ್ತು. ನಾನೇ ಬದಲಾದೆ. ಡೌನ್‌ ಸಿಂಡ್ರೋಮ್ ಬಗ್ಗೆ ಹೆಚ್ಚು ಹೆಚ್ಚು ಓದಿದೆ, ರಿಸರ್ಚ್‌ ಮಾಡ್ದೆ. ಭಾರ್ಗವನಿಗೆ ಕಲಿಸುವ ಹೊಸ ವಿಧಾನ ಹುಡುಕಿದೆ, ಸ್ಪೀಚ್‌ ಥೆರಪಿ ಶುರು ಮಾಡ್ದೆ.

 

ಕೆಲವು ವರ್ಷಗಳ ಬಳಿಕ ನಂಗೆ ಇನ್ನೊಂದು ಮಗು ಆಯ್ತು. ಗಂಡು ಮಗು. ನಂಗೆ ತಮ್ಮ ಬರ್ತಾ ಇದಾನೆ ಅಂತ ತಿಳಿದಾಗ ಭಾರ್ಗವ ಮುಖದಲ್ಲಿ ಮೂಡಿದ ಖುಷಿಯನ್ನು ನೀವು ನೋಡ್ಬೇಕಿತ್ತು! ಆತ ಅಣ್ಣನಾಗಿ ತನ್ನ ರೋಲ್‌ ಮಾಡೋಕೆ ತಯಾರಾದ. ಅದನ್ನು ಪ್ರೀತಿಯಿಂದ, ಜವಾಬ್ದಾರಿಯಿಂದ ಮಾಡ್ದ. ತಮ್ಮನನ್ನು ಬಹಳ ಪ್ರೀತಿಯಿಂದ ಆತ ನೋಡ್ಕೋತಾನೆ. ಭಾರ್ಗವ್‌ಗೆ ತುಂಬಾ ವಿಶಾಲ ಹೃದಯ ಇದೆ. ತನ್ನ ಅಥವಾ ತಮ್ಮನ ಬಗ್ಗೆ ಯಾರಾದರೂ ತುಂಬ ಕೇವಲವಾಗಿ ನಡೆದುಕೊಂಡಾಗ ಭಾರ್ಗವ ಹೋಗಿ ಅವರನ್ನು ತಬ್ಬಿಕೊಂಡುಬಿಡುತ್ತಾನೆ!

 

ಮಕ್ಕಳು ಅಂದರೆ ಇಷ್ಟಾನೇ ಆಗಲ್ಲ! ಇದೊಂಥರಾ ಹೊಸ ಟ್ರೆಂಡಾ?

 

ನಂಗೆ ತುಂಬಾ ಕೆಲಸ ಇದ್ರೆ, ಇಡೀ ದಿನ ಊಟ ಮಾಡೋಕೆ ಆಗಿರದೇ ಇದ್ರೆ ಅದು ಮೊದಲು ಗೊತ್ತಾಗೋದೇ ಅವನಿಗೆ! ಅದು ಹೇಗೆ ಅವನಿಗೆ ತಿಳಿಯುತ್ತೋ ನಂಗೆ ಇನ್ನೂ ಅರ್ಥವಾಗಿಲ್ಲ. ಅಂತ ಸಮಯದಲ್ಲಿ ಆತ ಕಿಚನ್‌ಗೆ ಹೋಗಿ ತಟ್ಟೆಯಲ್ಲಿ ಅನ್ನ ತುಂಬಿಕೊಂಡು ಬಂದು ನಂಗೆ ಕೊಟ್ಟು ನನ್ನ ಪಕ್ಕದಲ್ಲಿ ಕೂತುಕೊಂಡುಬಿಡ್ತಾನೆ. ತಿನ್ನೋವರೆಗೂ ಬಿಡಲ್ಲ. ತನ್ನ ಸುತ್ತಮುತ್ತ ಇರೋ ಎಲ್ರೂ ಹ್ಯಾಪಿಯಾಗಿರ್ಬೇಕು ಅಂತ ಅವನಿಗೆ ಆಸೆ. ಹಾಗೇ ಇರೋಕೆ ತನ್ನಿಂದ ಸಾಧ್ಯವಿರೋದೆಲ್ಲ ಮಾಡ್ತಾನೆ.

 

ಅವನಿಗೆ ಸೋಪ್‌ ಅಲರ್ಜಿ ಅಂತ ಗೊತ್ತಾಯ್ತು. ಅವನ ಬಾಡಿಗೆ ಸೂಟ್‌ ಆಗುವಂತ ಸೋಪ್‌ ನಾನೇ ಮಾಡಿದೆ. ಅಂದು ಹಾಗೆ ನಾನು ಆರಂಭಿಸಿದ್ದು ಈಗ ಬ್ಯುಸಿನೆಸ್‌ ಆಗಿ ಬೆಳೆದಿದೆ! ಭಾರ್ಗವನ ಬೆಳವಣಿಗೆ ನಂಗೆ ಜೀವನಕ್ಕೆ ಹೊಸ ಉದ್ದೇಶವನ್ನೇ ಕಲ್ಪಿಸಿಕೊಟ್ಟಿದೆ. ಅವನೂ ಹಾಗೇ ಬೆಳೆದಿದಾನೆ. ಅವನಿಂದ ಏನು ಸಾಧ್ಯವಿಲ್ಲ ಅಂತ ಅವನ ಕೋಚ್‌ ಭಾವಿಸಿದ್ದರೋ, ಅದನ್ನು ಸಾಧಿಸಿದಾನೆ. ಅವನೊಬ್ಬ ಒಳ್ಳೇ ಈಜುಗಾರ. ಹಲವು ಲೋಕಲ್ ಕಾಂಪಿಟಿಶನ್‌ಗಳಲ್ಲಿ ಗೆದ್ದಿದಾನೆ. ಸ್ವಿಮ್ಮಿಂಗ್‌ನಲ್ಲಿ ಪ್ಯಾರಾ ಒಲಿಂಪಿಕ್ಸ್‌ಗೆ ಅವನನ್ನು ಕಳಿಸಬೇಕು ಅನ್ನೋದು ನಮ್ಮ ಕನಸು. ಒಳ್ಳೇ ಓಟಗಾರ ಕೂಡ.ಓಡೋದು ಅವನಿಗಿಷ್ಟ. ಗೆರೆ ಕ್ರಾಸ್‌ ಮಾಡಿದ ಮೇಲೂ ಓಡ್ತಾನೇ ಇರ್ತಾನೆ! ತಮ್ಮ, ತಾಯಿ, ತಂದೆ, ಅಜ್ಜ- ಇವರೆಲ್ಲ ಏನಾದರೂ ಮರೆತರೆ ಓಡಿಹೋಗಿ ತಲುಪಿಸೋಕೆ ಇವನು ಸದಾ ಮುಂದು! ನಾವು ಅವನಿಗೆ ಕೊಡೋ ಪ್ರೀತಿಗಿಂತ ಅವನು ನಮಗೆ ಕೊಡೋ ಪ್ರೀತಿನೇ ಹೆಚ್ಚು.

 

ನಿಮ್ಮ ಮಗು ಇಂಟರ್‌ನೆಟ್‌ ಪೋರ್ನೋಗ್ರಫಿ ನೋಡ್ತಾ ಇದೆಯಾ?

 

ಆದ್ರೂ ಕೆಲವೊಮ್ಮೆ ಅವನನ್ನು ನೋಡೋ ಬೇರೆ ಮಕ್ಕಳು 'ಅವನ್ಯಾಕೆ ಹೀಗಿದಾನೆ?' ಅಂತ ಹೆತ್ತವರನ್ನು ಕೇಳುವಾಗ, ಅವರು "ಅದೊಂದು ಕಾಯಿಲೆ' ಅಂತ ಉತ್ತರ ಕೊಡುವಾಗ ನಂಗೆ ಬೇಸರವಾಗುತ್ತೆ. ಇದು ಕಾಯಿಲೆ ಅಲ್ಲ. ಅದೊಂದು ಸ್ಥಿತಿ ಅಷ್ಟೇ. ಆತ ನಮಗಿಂತ ಹ್ಯಾಪಿಯಾಗಿದಾನೆ. ಕೆಲವು ಸಲ ನಾವು ಅವನಂತೆ ಇರಬಾರದಿತ್ತೇ ಅನಿಸಿದ್ದು ಇದೆ. ಅಂದ್ರೆ, ಹೊರಜಗತ್ತನ್ನು ಪ್ರೀತಿಸ್ತಾ, ಅದು ಕೊಡೋ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಅದಕ್ಕೆ ಕೊಡ್ತಾ....

 

ಕೃಪೆ: ಹ್ಯೂಮನ್ಸ್ ಆಪ್‌ ಬಾಂಬೇ