Asianet Suvarna News Asianet Suvarna News

ಮಾನಸಿಕ ಅಸ್ವಸ್ಥ ಮಗ 7 ವರ್ಷಗಳ ಬಳಿಕ ಭಿಕ್ಷುಕನಾಗಿ ದೊರೆತ!

ಮಾನಸಿಕ ಅಸ್ವಸ್ಥ ಮಗ ಭಿಕ್ಷಾಟನೆಯ ಕೂಪದಲ್ಲಿ ಸಿಲುಕಿದರೆ ತಾಯಿಯ ಹೃದಯ ಅದೆಷ್ಟು ಸಂಕಟಪಡಬೇಡ, ಪಾಕಿಸ್ತಾನದಲ್ಲಿ ಇಂಥದ್ದೇ ಒಂದು ಘಟನೆ ಜರುಗಿದೆ. ಮನೆಯಿಂದ ನಾಪತ್ತೆಯಾದ ಮಗ ಬರೋಬ್ಬರಿ 7 ವರ್ಷಗಳ ಬಳಿಕ ದೊರೆತಿದ್ದಾನೆ.

Mother finds her son after 7 years as begger
Author
First Published Dec 23, 2023, 5:14 PM IST

ಯಾವ ದೇಶದಲ್ಲಿದ್ದರೂ ತಾಯಿ ತಾಯಿಯೇ, ಮಕ್ಕಳು ಮಕ್ಕಳೇ. ಹಾಗೆಯೇ, ಎಷ್ಟೇ ವಯಸ್ಸಾಗಿದ್ದರೂ ಅಮ್ಮನ ಪಾಲಿಗೆ ಮಕ್ಕಳು ಚಿಕ್ಕವರೇ. ಅವರು ಚೆನ್ನಾಗಿರಬೇಕೆಂಬುದೇ ಅಮ್ಮನ ಆಶಯವಾಗಿರುತ್ತದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಇತ್ತೀಚೆಗೆ ಮನಮಿಡಿಯುವ ಸಂಗತಿಯೊಂದು ವರದಿಯಾಗಿದೆ. ಬರೋಬ್ಬರಿ ಏಳು ವರ್ಷಗಳ ಬಳಿಕ ಮನೆಯಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ಮಗ ಹಾಗೂ ಅಮ್ಮನ ಮಿಲನವಾಗಿದೆ. ಭಿಕ್ಷಾಟನೆ ಮಾಡುವವರ ಸಂಗಡ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಮಗನನ್ನು ಪತ್ತೆ ಮಾಡಿದ ತಾಯಿ, ಆತನನ್ನು ಮತ್ತೆ ಮನೆಗೆ ಮರಳಿ ಕರೆತಂದಿದ್ದಾರೆ. ಭಿಕ್ಷಾಟನೆಯ ದಂಧೆ ಎಲ್ಲೆಡೆಯೂ ಇದೆ. ಪಾಕಿಸ್ತಾನವೂ ಇದಕ್ಕೆ ಹೊರತಲ್ಲ. ಭಾರತದಲ್ಲಂತೂ ಭಿಕ್ಷಾಟನೆಯ ದಂಧೆ ಕರಾಳವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಚಿಕೊಂಡಿದೆ ಎನ್ನಲಾಗುತ್ತದೆ. ಪುಟ್ಟ ಮಕ್ಕಳಿಗೆ ಮತ್ತು ಬರಿಸುವ ಔಷಧ ಹಾಕಿ ಭಿಕ್ಷಾಟನೆ ಮಾಡುವವರಿಂದ ಹಿಡಿದು, ಮಕ್ಕಳನ್ನು ಹೊತ್ತೊಯ್ದು ಬೇರೆ ಬೇರೆ ಪ್ರದೇಶಗಳಿಗೆ ರವಾನಿಸುವ ಕಿರಾತಕರಿದ್ದಾರೆ. ಇದೂ ಸಹ ಇಂಥದ್ದೇ ಘಟನೆ. ಈ ಪ್ರಕರಣದಲ್ಲಿ ಮಗ ವಯಸ್ಕನಾಗಿದ್ದರೂ ಸಹ ಮಾನಸಿಕ ಅಸ್ವಸ್ಥನಾಗಿರುವುದರಿಂದ ಭಿಕ್ಷಾಟನೆಗೆ ದೂಡಲಾಗಿತ್ತು.

ಪಾಕಿಸ್ತಾನಿ ಮಹಿಳೆ (Pakistani Woman) ಶಾಹೀನ್‌ ಅಖ್ತರ್‌ (Shaheen Akthar) ಎಂಬಾಕೆ ತನ್ನ ಮಗ ಮುಸ್ತಕೀಮ್‌ ಖಾಲಿದ್‌ (Khalid) ನನ್ನು ರಾವಲ್ಪಿಂಡಿಯ ಬೀದಿಯಲ್ಲಿ ಕಂಡುಹಿಡಿದು ಮನೆಗೆ ಕರೆತಂದಿದ್ದಾರೆ. ಡಾನ್‌ ಪತ್ರಿಕೆಯ ವರದಿ ಪ್ರಕಾರ, ಇದೊಂದು ಭಾವನಾತ್ಮಕ (Emotional) ಮಿಲನವಾಗಿತ್ತು. ಶಾಹೀನ್‌ ಅಖ್ತರ್‌ ಗೆ ಅದೊಂದು ದಿನ ಮಗ ಖಾಲಿದ್‌ ಸ್ನೇಹಿತರೊಬ್ಬರ ಫೋನ್‌ (Phone) ಬಂದಿತ್ತು. ರಾವಲ್ಪಿಂಡಿಯ ಜನನಿಬಿಡ ಚೌಕವೊಂದರಲ್ಲಿ ಭಿಕ್ಷಾಟನೆ (Begging) ಮಾಡುತ್ತಿರುವ ಗುಂಪಿನಲ್ಲಿ ಖಾಲಿದ್‌ ನನ್ನು ಕಂಡಿರುವುದಾಗಿ ಅವರು ಹೇಳಿದ್ದರು. ಅದಕ್ಕೆ ಪೂರಕವಾಗಿ ಫೋಟೊವನ್ನೂ ಕಳಿಸಿದ್ದರು.

ಶಸ್ತ್ರಚಿಕಿತ್ಸೆ ವೇಳೆ ಅಜ್ಜಿಗೆ ಪಂಚ್‌ ಮಾಡಿದ ಚೀನಾದ ವೈದ್ಯ ಅಮಾನತು; ಮಹಿಳೆಯ ಕಣ್ಣೂ ಢಮಾರ್: ವಿಡಿಯೋ ವೈರಲ್‌

ಮಾನಸಿಕ ಅಸ್ವಸ್ಥ (Mentally Challenged) ಮಗ ಭಿಕ್ಷುಕನ ರೂಪದಲ್ಲಿ ಕಂಡ ಅಮ್ಮ ಶಾಹೀನ್‌ ಕ್ಷಣವೂ ತಡಮಾಡದೇ ರಾವಲ್ಪಿಂಡಿಗೆ ಆಗಮಿಸಿದ್ದರು. ಅಖ್ತರ್‌ ಖಾಲಿದ್‌ ನನ್ನು ಸಮೀಪಿಸುತ್ತಿದ್ದಂತೆ ಉಳಿದ ಭಿಕ್ಷುಕರು (Beggars) ಆಕೆಯ ಮೇಲೆ ದಾಳಿ ಮಾಡಿದರು. ಖಾಲಿದ್‌ ನನ್ನು ಇಬ್ಬರು ಪುರುಷರು, ಮೂವರು ಮಹಿಳೆಯರು ಸುತ್ತುವರಿದಿದ್ದರು. ಶಾಹೀನ್‌ ಅಖ್ತರ್‌ ದೈಹಿಕವಾಗಿ ಗಾಯಗೊಂಡಿದ್ದಷ್ಟೇ ಅಲ್ಲ, ಬೈಗುಳವನ್ನೂ ಎದುರಿಸಿದರು. 
ಖಾಲಿದ್‌ ಭಿಕ್ಷುಕರ ಗುಂಪಿನಲ್ಲಿ ಅತ್ಯಂತ ಹಿಂಸೆಗೆ (Assault) ಒಳಗಾಗಿದ್ದ. ತಾಯಿ ಶಾಹೀನ್‌ ಪ್ರಕಾರ, ದಿನವೂ ಆತನಿಗೆ ನೆನಪು ಮರುಕಳಿಸದಂತೆ ಇಂಜೆಕ್ಷನ್‌ ನೀಡಲಾಗುತ್ತಿತ್ತು. 

ಮಾನಸಿಕವಾಗಿ ಘಾಸಿಗೊಂಡ ಮಾಜಿ ಅಧಿಕಾರಿ: ಅಸಲಿಗೆ ಖಾಲಿದ್‌, ಮಾಜಿ ಪೋಲೀಸ್ ಅಧಿಕಾರಿ (Police Officer). ಟೈಫಾಯ್ಡ್‌ ಜ್ವರದಿಂದ ತೀವ್ರ ಆರೋಗ್ಯ ಸಮಸ್ಯೆಯಾಗಿದ್ದರಿಂದ ತನ್ನ ಪೊಲೀಸ್‌ ಹುದ್ದೆಯನ್ನು ಕಳೆದುಕೊಂಡಿದ್ದ. ಇದರಿಂದಾಗಿ ಮಾನಸಿಕವಾಗಿ ನೊಂದುಕೊಂಡಿದ್ದ ಹಾಗೂ ಕ್ರಮೇಣ ಅಸ್ವಸ್ಥತೆಗೆ ತಿರುಗಿತ್ತು. ಬಳಿಕ, ಆಗಾಗ ಕೆಲವು ದಿನಗಳ ಕಾಲ ಮನೆಬಿಟ್ಟು ಎಲ್ಲಾದರೂ ಹೋಗಿಬಿಡುತ್ತಿದ್ದ. ಕೆಲವು ದಿನಗಳಲ್ಲೇ ವಾಪಸ್‌ ಬರುತ್ತಿದ್ದ. ಆದರೆ, 2016ರಲ್ಲಿ ಆತ ಮನೆ ಬಿಟ್ಟು ಹೋದ ಬಳಿಕ ಪುನಃ ಬರಲೇ ಇಲ್ಲ. ಹಲವಾರು ದಿನಗಳ ಬಳಿಕ ಶಾಹೀನ್‌ ಮಗನ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಿದ್ದಳು, ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಸಲ್ಮಾನ್ ಖಾನ್ ಜೊತೆ ಫೋಟೋಗಾಗಿ ಬಂದ ಮಹಿಳೆ ಕಿಸ್ ಮಾಡಿ ಬಿಟ್ಟಳು: ವಿಡಿಯೋ ವೈರಲ್!

7 ವರ್ಷಗಳ ಬಳಿಕ, ಖಾಲಿದ್‌ ಸ್ನೇಹಿತರಿಂದ ಭಿಕ್ಷಾಟನೆಯ ಬಗ್ಗೆ ಮಾಹಿತಿ ದೊರೆತಿತ್ತು. ಖಾಲಿದ್‌ ಗೆ ಮದುವೆಯೂ ಆಗಿದೆ. ಆದರೆ, ಆತನ ಕುಟುಂಬದ (Family) ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮಗನನ್ನು ಮರಳಿ ಮನೆಗೆ ಕರೆತಂದಿರುವ ಶಾಹೀನ್‌ ಗೆ ಆಕೆಯ ಗ್ರಾಮಸ್ಥರು, ಸಂಬಂಧಿಕರು ನೆರವು, ಬೆಂಬಲ ನೀಡಿದ್ದಾರೆ. 
ಖಾಲಿದ್‌ ಪ್ರಕರಣದ ಬಳಿಕ ಪಾಕಿಸ್ತಾನ ಪೊಲೀಸರು ಭಿಕ್ಷಾಟನೆಯ ಗ್ಯಾಂಗ್‌ (Gang) ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಗ್ಯಾಂಗ್‌ ಮುಖ್ಯಸ್ಥ ವಾಹಿದ್‌ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ಜಾಲವನ್ನು ಶೋಧಿಸಲಾಗಿದೆ.  

Latest Videos
Follow Us:
Download App:
  • android
  • ios