ಮಧ್ಯವಯಸ್ಕರಲ್ಲಿ ಹುಟ್ಟುವ ಪ್ರೀತಿ, ಅಕ್ರಮ ಸಂಬಂಧದ ಖುಷಿ, ಕೌಟುಂಬಿಕ ಜವಾಬ್ದಾರಿಗಳ ನಡುವಿನ ಗೊಂದಲ, ಮುನಿಸು-ಮಾತುಗಳ ಚಕ್ರ, ಸುಳ್ಳು ಸಮಾಧಾನ, ಕೊನೆಗೆ ಬೇಸರ, ಅಪರಾಧಿ ಭಾವನೆ, ಸಂಬಂಧದ ಅಂತ್ಯ - ಇದು ಕ್ಷಣಿಕ ಪ್ರೇಮದ ಕಥೆ. ನಿಜವಾದ ಪ್ರೇಮ ನಿಸ್ವಾರ್ಥ, ಶುದ್ಧ ಹಾಗೂ ಸ್ಥಾಯಿ. ಅಪ್ರಾಮಾಣಿಕ ಪ್ರೇಮಕ್ಕೆ ಆಯಸ್ಸಿಲ್ಲ.
ನಲವತ್ತರ ವಯಸ್ಸು, ಹೊಸತು ಬಯಸುವ ಮನಸ್ಸು, ಏನೋ ಮಿಸ್ಸಿಂಗ್ ಎನ್ನುವ ಭಾವ. ಅರೇ, ಅವನ ಕಣ್ಣೋಟದಲ್ಲಿ ಅದೇನು ಸೆಳೆತ? ನನ್ನನ್ನೇ ನೋಡಿದ್ದಾ? ಕಾಫಿಗೆ ಕರೆದಿದ್ದಾ? ಶುರುವಾಯ್ತಲ್ಲ ಸಣ್ಣ ಹರಟೆ, ಆಗಾಗ ಮೆಸೇಜ್. ಗುಡ್ ಮಾರ್ನಿಂಗ್ನಿಂದ ಗುಡ್ನೈಟ್. ಆಮೇಲೆ, ತಿಂಡಿ, ಊಟ ಆಯ್ತಾ? ಮುಂದೆ, ಆಗಲೇ ಅಂತರಂಗಕ್ಕೆ ಧಾಂಗುಡಿ ಇಟ್ಟಾಯ್ತಲ್ಲ.
ಮನೆ ಜವಾಬ್ದಾರಿ, ಮಕ್ಕಳ ಕಮಿಂಟ್ಮೆಂಟ್, ಗಂಡನ ಕಿರಿಕಿರಿ, ಅತ್ತೆ, ಮಾವ, ಸಂಬಂಧಿಕರ ಕೊಂಕುಗಳು.. ಎಲ್ಲವೂ ತೆರೆದ ಪುಸ್ತಕ. ಮನದೊಳಗೆ ಕಟ್ಟಿದ್ದ ಕಟ್ಟೆ ಒಡೆಯಲು ಅವನೊಂದು ನೆಪ. ಅದಕ್ಕೊಂದು ಪ್ರೀತಿಯ ಹೆಸರು. ಸಮಾಧಾನಕ್ಕೊಂದು ತೋಳು, ಕಣ್ಣೀರಿಗೊಂದು ಹೆಗಲು. ಇವಳದ್ದೂ ಮಾತ್ರವಾ? ಹುಂ, ಅವನದ್ದೂ ಅದೇ ಗೋಳು, ಥೇಟ್ ಅಂಥದ್ದೇ ಉಸಿರುಗಟ್ಟಿಸುವ ಸ್ಥಿತಿ. ಹೆಂಡತಿ ಈಗ ನಿರೀಕ್ಷೆಗಳ ಮೂಟೆ, ದೂರುಗಳನ್ನೇ ಹೊತ್ತೇ ನಿಂತಿರುವ ಫೈಲ್ನಂತೆ. ಪ್ರೀತಿ-ಪ್ರೇಮ-ಪ್ರಣಯ ಮುಗಿದು ಹಾಸಿಗೆ ಮಧ್ಯೆಯಲ್ಲಿ ದೊಡ್ಡ ಕಂದಕ. ಅವಳೂ ಬೋರ್, ಅವಳ ಮಾತಂತೂ ಮಹಾ ಬೋರ್. ಅವನ ಕಣ್ಣಿಗೆ ಇವಳು, ಹರೆಯದ ಹುಡುಗಿ. ಕಾಲೇಜಿನಲ್ಲಿ ಕಳೆದುಕೊಂಡ ಮೊದಲ ಲವ್ ಇವಳೇ ಅನ್ನಿಸುವಷ್ಟು ಹೃದಯ ಗಲಗಲ.
ನಿನ್ನ ಮಡಿಲು ಕೊಡು ಅಂತಾನೆ, ಯು ಆರ್ ಮೈ ಆತ್ಮಸಖಿ ಅಂತಾನೆ, ಇವಳು ಕರಗುತ್ತಾಳೆ. ನಮ್ಮ ಸಂಬಂಧ Destiny ಅಂತಾನೆ. ನಿಜವೋ ಸುಳ್ಳೋ ಅರಿಯದೇ ನಂಬುತ್ತಾಳೆ. ಅಲ್ಲಿಗೆ ಗಟ್ಟಿ ಬೇರು ಇಲ್ಲದ ಸಂಬಂಧವೊಂದು ಟಿಸಿಲೊಡೆದು ನಿಲ್ಲುತ್ತದೆ. ಈ ಸಂಬಂಧಕ್ಕೆಷ್ಟು ಆಯಸ್ಸು? ಇಬ್ಬರಿಗೂ ಗೊತ್ತಿಲ್ಲ. ಎಲ್ಲವೂ ಗುಪ್ತ್, ಗುಪ್ತ್. ರಹಸ್ಯ ಸಂಬಂಧದಲ್ಲೊಂದು ಅನೂಹ್ಯ ಸುಖ ಕಂಡುಕೊಂಡ ಜೀವಗಳು. ಕದ್ದು ಮುಚ್ಚಿ ನಡೆಯುವ ಆಟ. ರಾತ್ರಿಯೂ ಕಣ್ತಪ್ಪಿಸಿ ನಡೆಯುವ ಪ್ರೇಮದಾಟ. ಅಯ್ಯೋ, ಆಗಲೇ ಆರು ತಿಂಗಳಾಯ್ತಾ? ಈಗೀಗ ಮನೆಯಲ್ಲಿ ಮೊಬೈಲ್ ಹಿಡಿದರೆ ಕಿರಿಕಿರಿ ಮಾರಾಯ್ತಿ. ಸಾರಿ ಮೆಸೇಜ್ ಕಷ್ಟ ಎಂಬ ಸಂದೇಶ. ಇವಳಿಗೆ ಅರ್ಥವಾಗುವಷ್ಟರಲ್ಲಿ ಸಂಜೆಯೊಳಗೆ ಎಲ್ಲವೂ ಮುಗಿದಿರುತ್ತೆ. ರಾತ್ರಿ ಮೊಬೈಲ್, ಮೆಸೇಜ್, ಮಾತು- ಕತೆ ಬಂದ್. ಅವನಲ್ಲಿ ಎದೆ ಮೇಲೆ ಮಲಗಿದ ಮಡದಿಯ ತಲೆ ನೇವರಿಸುತ್ತಾ, ಮಕ್ಕಳ ಫೀಜು, ಅಪ್ಪನ ಕಾಯಿಲೆ, ಬರ್ತ್ಡೆ ಗಿಫ್ಟ್ ಬಗ್ಗೆ ಆಸೆ ಹುಟ್ಟಿಸುತ್ತಿದ್ದರೆ, ಇವಳಿಲ್ಲಿ ಒಂಟಿತನದ ಬೇಗುದಿ.
ನಿರಾಕರಣೆಯನ್ನೂ ಅರಗಿಸಿಕೊಳ್ಳುವುದನ್ನು ಕಲಿಯಿರಿ!
ಆಮೇಲೆ? ಸಣ್ಣಗೆ ಶುರುವಾದ ಅಸಹನೆ, ಕಿರಿಕಿರಿ. ನನ್ನನ್ನು ಅವಾಯ್ಡ್ ಮಾಡ್ತಿದ್ದೀಯಾ ಎಂಬ ಮಾತಿನೊಂದಿಗೆ ಶುರುವಾದ ಜಗಳ. ಅವನ ಸಿಟ್ಟು, ಸಿಡುಕು ಇವಳಿಗೆ ಹೊಸದು. ಮೂರು ದಿನ ಮಾತಿಲ್ಲ. ನಾಲ್ಕನೇ ದಿನ ಅವನೇ ಬರುತ್ತಾನೆ, ಸಾಕು ಮೌನ. ನೀನಿಲ್ಲದೇ ನಾನಿಲ್ಲ. ಮನೆಯಲ್ಲಿದ್ದರೂ, ದೇಹ ನಿನ್ನೊಂದಿಗೆ ಅನ್ನುತ್ತಾನೆ. ಇವಳು ನಂಬುತ್ತಾಳೆ. ಪ್ರತಿ ತಿಂಗಳಿಗೆ ಮೂರು ದಿನ ಮುಟ್ಟಾದಂತೆ ಇಬ್ಬರ ಮುನಿಸು. ಇವಳ ಮುಟ್ಟು ತಪ್ಪಬಹುದು, ಅವನ ಮುನಿಸು ತಪ್ಪದು. ಇವಳ ಸಿಟ್ಟಿಗೆ ಬೆದರಿ ‘ನನ್ನ ನಂಬು, ಸಮಯ ಕೊಡು, ನಿನ್ನ ಪ್ರೀತಿಯ ಋಣ ನನ್ ಮೇಲಿದೆ,’ ಅಂತಾನೆ. ಇವಳದು ಅದೇ ಕರಗುವ ಕರುಳು. ಇನ್ನೆಷ್ಟು ದಿನ? ನಮ್ಮ, ನಮ್ಮ ಒತ್ತಡಗಳಿಗೆ ಹುಟ್ಟಿದ ಪ್ರೀತಿಗೆ ಆಯಸ್ಸು ಕಡಿಮೆ. ಅನಿವಾರ್ಯದ ಬಸಿರು ಹೊತ್ತು ಬೆಳೆಸುವುದು ಸಾಧ್ಯವೇ ಇಲ್ಲ. ಪ್ರೇಮ ಬಲಿಯುವ ಮುನ್ನ, ಪ್ರೇಮಕ್ಕೆ ಕಣ್ಣು, ಕಿವಿ, ಕೈಕಾಲು ಬೆಳೆಯುವ ಮುನ್ನವೇ ಅಬಾರ್ಷನ್ ಆಗಲೇಬೇಕು. ಅದೊಂದು ಟೈಂಪಾಸ್ ಅಷ್ಟೇ. ಇದು ಅರ್ಥವಾದ ದಿನ ಇಬ್ಬರೂ ದೂರ, ದೂರ. ಗಂಡಸಿಗೆ ನನಗಾಗಿ, ನನ್ನನ್ನು ಪ್ರೀತಿಸುವ ಜೀವವೊಂದಿದೆ ಎಂಬ ಭಾವ ಕೊಡುವ ಸುಖವೇ ಅಂಥದ್ದು. ಮೆಸೇಜ್ಗಳಲ್ಲಿನ ಆರ್ದ್ರತೆಗೆ ಕರಗಿ, ನನಗಾಗಿ ಯಾರೋ ಮಿಡಿಯುತ್ತಿದ್ದಾರೆ, ಸ್ಪಂದಿಸುತ್ತಿದ್ದಾರೆ ಎಂದು ಕೊಳ್ಳುವ ಮಧ್ಯ ವಯಸ್ಕ ಮಗು. ದೇಹ ಬಲಿತ ಮೇಲೂ ಅದಕ್ಕೆ ಯಾರಾದಾರೂ ನಮ್ಮವರು, ನಾನಿದ್ದೇನೆ ನಿನಗೆ ಅನ್ನುವವರು ಸಿಕ್ಕರೆ, ಪ್ರೀತಿ, ಪ್ರೇಮ, ರೊಮ್ಯಾನ್ಸ್.. ಎಲ್ಲವೂ ಮತ್ತೊಂದು ಹರೆಯ ತರುತ್ತದೆ. ಇಡೀ ಜಗತ್ತು ಕಲರ್ ಕಲರ್ ಎನ್ನಿಸುತ್ತೆ. ಆದ್ರೆ, ವಾಸ್ತವ ಬದುಕು, ಮನೆ, ಹೆಂಡ್ತಿ, ಮಕ್ಕಳು ನೆನಪು ಜಗ್ಗುತ್ತದೆ. ತಪ್ಪಿತಸ್ಥ ಭಾವ. ಛೇ, ಇವಳಿಗಾಗಿ ಫ್ಯಾಮಿಲಿಯನ್ನೇ ಮರೆತನಲ್ಲ ಅನ್ನೋ ಅಪರಾಧಿ ಭಾವ. ಇವಳಿನ್ನು ಸಾಕು ಎಂಬ ನಿರ್ಧಾರಕ್ಕೆ ಬಂದರೆ, ಅವಳದ್ದೂ ಅದೇ ಡಿಸಿಷನ್. ಮಧ್ಯವಯಸ್ಕ ಪ್ರೇಮಕ್ಕೆ ಸಮಾಧಿ ಕಟ್ಟುವ ಸಮಯ.
ಅಷ್ಟಕ್ಕೂ ದೊಡ್ಡ ವ್ಯವಹಾರವೇನಲ್ಲ ಪ್ರೇಮ. ಪ್ರೇಮಿಯಾಗುವುದು ಅಷ್ಟು ಸುಲಭವಲ್ಲ, Uconditional Love ಅಂದ್ರೆ, ಒಬ್ಬರನ್ನು ಪ್ರೀತಿಸುತ್ತಾ ನಾವು ಶುದ್ಧವಾಗ್ತೀವಿ. ನಿರಹಂಕಾರಿಗಳಾಗ್ತೀವಿ. ನಿಷ್ಕಾಮ ಪ್ರೇಮವೆಂಬುದು ನಮ್ಮನ್ನು ಒಳಗಿನಿಂದ ಪರಿಶುದ್ಧವಾಗಿಸುವ ಪ್ರಕ್ರಿಯೆ. ಸದಾ ನಿಷ್ಕಾಮ ಪ್ರೇಮ ಇರಬೇಕೆಂಬುದು ಅಪಾತ್ರದಾನದ ಹಾಗೆ ಅಪಾತ್ರರು ನಮಗೆ ಸಿಕ್ಕಿದಾಗ ಅಥವಾ ಅಪಾತ್ರರೇ ನಿಷ್ಕಾಮ ಪ್ರೇಮವನ್ನು ಹೆಚ್ಚು ಶುದ್ಧೀಕರಿಸುವ ಶಕ್ತಿಯುಳ್ಳವರು. ಎಲ್ಲವೂ ಚೆನ್ನಾಗಿದ್ದರೆ ನಿಷ್ಕಾಮ ಪ್ರೇಮಕ್ಕೆ ಪರೀಕ್ಷೆಯೇ ಇಲ್ಲ. ಅಪಾತ್ರರಿಂದಲೇ ನಾವು ಪರಿಶುದ್ಧರಾಗೋದು, ಹಾಗಾಗಿ ಅಪಾತ್ರರಿಗೊಂದು ನಮಸ್ಕಾರ. ಪ್ರಾಮಾಣಿಕವಲ್ಲದ ಯಾವುದೂ ಹಾಗೇ ಉಳಿಯುವುದಿಲ್ಲ. ಪ್ರೀತಿಯೂ. ಪ್ರಾಮಾಣಿಕತೆಯನ್ನು ಕಾಲ ಪರೀಕ್ಷಿಸಿ ಬಿಸಾಕತ್ತೆ.
ನಿಶ್ಚಿತಾರ್ಥದ ಬೆನ್ನಲ್ಲೇ ವಧುವಿನೊಂದಿಗೆ ಮೊದಲರಾತ್ರಿ ಮಿಲನ ಆಚರಿಸಿದ ವರ; ಈಗ ಮದುವೆ ಬೇಡವಂತೆ!
ಸ್ವಾರ್ಥ -ನಿರ್ಲಕ್ಷ್ಯಗಳನ್ನು ಅನುಭವಿಸುವುದು ಕಷ್ಟ. ಅದು ಸುಡುವ ಕೆಂಡ. ಮುಟ್ಟಿದಾಗ ಸುಟ್ಟಿದ್ದು ಸೀದು ಹೋಗಬೇಕು. ಸೀದು ಬೂದಿಯಾಗಬೇಕು. ಜೊತೆಯಲ್ಲಿದ್ದೇ ಬಿಡಿಸಿ ಕೊಳ್ಳುವ ಪ್ರಯಾಣ. ಸುಟ್ಟು ಬೂದಿಯಾಗಿ ಬಿಡುವ ಪ್ರೊಸೆಸ್ ಇನ್ನೂ ಚೆಂದ. ಕಾಲಕ್ರಮೇಣ ಕರಗಬೇಕು, ಕಿತ್ತರೆ ನೋವು. ನಮ್ಮ ಯಾವ್ದೋ ಪ್ರಾಮಾಣಿಕ ಭಾವನೆಗೆ ಸ್ಪಂದಿಸದಿರುವುದು ವ್ಯಕ್ತಿಯ ದೋಷವೇ ಹೊರತು, ಅದು ಆ ಭಾವನೆಯ ದೋಷವಲ್ಲ. ಇದು ಎಲ್ಲ ವಯಸ್ಸಿನ ಪ್ರೇಮಿಗಳಿಗೂ ಅನುಭವವೇದ್ಯ. ಪ್ರೇಮಕ್ಕೆ ವಯಸ್ಸಿಲ್ಲ. ಆದ್ರೆ, ಅಪ್ರಾಮಾಣಿಕವಲ್ಲ. ಯಾವುದೂ ಹೆಚ್ಚು ದಿನ ಉಳಿಯುವುದಿಲ್ಲ. ಹಾಗಾಗಿಯೇ, ವೈವಾಹಿಕ ಸಂಬಂಧದಾಚೆಗಿನ ಸಂಬಂಧಗಳು ಸಾಯುವುದು, ಸಾಯುತ್ತಿರುವುದು. ಕಟ್ಟಿಕೊಂಡಷ್ಟೇ ಇಟ್ಟುಕೊಳ್ಳುವುದು ಸುಲಭವಲ್ಲ.
