40 ವರ್ಷ ದಾಟಿದ ಪುರುಷರು ತಮಗಿಂತ ಕಿರಿಯ ವಯಸ್ಸಿನ ಯುವತಿಯರನ್ನು ವಧುವಾಗಿ ಬಯಸುವ ಪ್ರವೃತ್ತಿಯನ್ನು ಮ್ಯಾಚ್ ಮೇಕರ್ ಒಬ್ಬರು ತೀವ್ರವಾಗಿ ಟೀಕಿಸಿದ್ದಾರೆ. ಆರೋಗ್ಯಕರ ಮಗುವಿನ ನೆಪವೊಡ್ಡುವ ಇವರು, ವಯಸ್ಸಾದಂತೆ ಪುರುಷರ ಫಲವತ್ತತೆ ಕುಸಿಯುವ ಸತ್ಯವನ್ನು ಮರೆಮಾಚುತ್ತಾರೆ.

ವೈವಾಹಿಕ ಮಾರುಕಟ್ಟೆಯಲ್ಲಿ (Matrimonial Market) 40 ವರ್ಷ ದಾಟಿದ ಪುರುಷರು ತಮಗಿಂತ ತೀರಾ ಕಿರಿಯ ವಯಸ್ಸಿನ, ಅಂದರೆ 20 ಅಥವಾ 30 ವಯಸ್ಸಿನ ಯುವತಿಯರನ್ನೇ ವಧುವಾಗಿ ಬಯಸುವ ಪ್ರವೃತ್ತಿ ಹಾಗೂ ಅದಕ್ಕೆ 'ಆರೋಗ್ಯಕರ ಮಗು ಬೇಕು' ಎನ್ನುವ ನೆಪ ನೀಡುವುದರ ವಿರುದ್ಧ ವಿವಾಹ ಸಂಬಂಧ ಬೆಸೆಯುವ 'ಮ್ಯಾಚ್ ಮೇಕರ್' (Matchmaker) ಒಬ್ಬರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಪುರುಷರ ಫಲವತ್ತತೆ (Male Fertility), ವಯಸ್ಸಿನ ಅಂತರ ಹಾಗೂ ಕುಟುಂಬ ವ್ಯವಸ್ಥೆಯ ಮೇಲಿನ ಅಪೇಕ್ಷೆಗಳ ಕುರಿತು ಚರ್ ಹುಟ್ಟುಹಾಕಿದೆ.

ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಈ ಅನುಭವವನ್ನು ಹಂಚಿಕೊಂಡಿರುವ ಮ್ಯಾಚ್ ಮೇಕರ್, 42 ವರ್ಷ ವಯಸ್ಸಿನ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮಗೆ 28 ವರ್ಷದ ಯುವತಿಯನ್ನೇ ಮದುವೆಯಾಗಲು ಹುಡುಕಿಕೊಡುವಂತೆ ಕೋರಿದ ಘಟನೆಯನ್ನು ಬಯಲು ಮಾಡಿದ್ದಾರೆ.

42 ವರ್ಷದ ಟೆಕ್ಕಿಯ ವಿಚಿತ್ರ ವಾದ

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮಾತನಾಡಿರುವ ಮ್ಯಾಚ್ ಮೇಕರ್, "40 ವರ್ಷ ದಾಟಿದ ಪ್ರತಿಯೊಬ್ಬ ಪುರುಷನೂ ತನಗೆ 30 ವರ್ಷದ ಅಥವಾ ಅದಕ್ಕಿಂತ ಚಿಕ್ಕ ವಯಸ್ಸಿನ ಹೆಣ್ಣು ಬೇಕು ಎಂದು ಕೇಳಿದಾಗ ನೀಡುವ ಒಂದೇ ನೆಪವೆಂದರೆ - 'ತಮಗೆ ಆರೋಗ್ಯಕರ ಮಗು ಬೇಕು' ಎಂಬುದು" ಎಂದು ಹೇಳಿದ್ದಾರೆ.

ವಿದೇಶದಲ್ಲಿ ಸ್ನಾತಕೋತ್ತರ ಪದವಿ (Master's Degree) ಪಡೆದು, ಪ್ರಸಿದ್ಧ ಟೆಕ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ 42 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬಳಿ ಬಂದು 28 ವರ್ಷದ ವಧುವನ್ನು ಹುಡುಕುವಂತೆ ಕೇಳಿಕೊಂಡಾಗ ತಮಗೆ ಆಶ್ಚರ್ಯವಾಯಿತು ಎಂದಿದ್ದಾರೆ. "ಮಗುವಿನ ಆರೋಗ್ಯದಲ್ಲಿ ತಂದೆ ಮತ್ತು ತಾಯಿ ಇಬ್ಬರ ಪಾತ್ರವೂ ಇರುತ್ತದೆ ಎಂಬ ಸಾಮಾನ್ಯ ಜ್ಞಾನ ನಿಮಗಿದೆಯೇ?" ಎಂದು ಮ್ಯಾಚ್ ಮೇಕರ್ ಆತನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ, "ಅಯ್ಯೋ, ಪುರುಷರು 60 ವರ್ಷದವರೆಗೂ ಮಕ್ಕಳನ್ನು ಪಡೆಯಬಹುದು. ಎಲ್ಲಾ ಸಿನಿಮಾ ನಟರನ್ನು ಒಮ್ಮೆ ನೋಡಿ" ಎಂದು ತೀರಾ ಬೇಜವಾಬ್ದಾರಿಯ ಉತ್ತರ ನೀಡಿದ್ದಾಗಿ ಮ್ಯಾಚ್ ಮೇಕರ್ ನೆನಪಿಸಿಕೊಂಡಿದ್ದಾರೆ.

ಪುರುಷರೂ ತಮ್ಮ ಫಲವತ್ತತೆಯ ಬಗ್ಗೆ ಯೋಚಿಸಬೇಕು

ವಯಸ್ಸಾದಂತೆ ಪುರುಷರ Sperm Quality ಕುಸಿಯುತ್ತದೆ ಹಾಗೂ ವಯಸ್ಸಾದ ತಂದೆಯಂದಿರಿಗೆ ಹುಟ್ಟುವ ಮಕ್ಕಳಲ್ಲಿ ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ ಎಂಬುದನ್ನು ಮ್ಯಾಚ್ ಮೇಕರ್ ವಿವರಿಸಿದ್ದಾರೆ. ಮಗು ಮಾಡಿಕೊಳ್ಳುವ ಯೋಜನೆಯಲ್ಲಿ ಕೇವಲ ಮಹಿಳೆಯ ವಯಸ್ಸು ಮಾತ್ರ ಮುಖ್ಯ ಎಂಬ ಭ್ರಮೆಯಲ್ಲಿ ಪುರುಷರು ಇರಬಾರದು ಎಂದು ಅವರು ವಾದಿಸಿದ್ದಾರೆ.

ಪುರುಷರು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ವರ್ಷಗಟ್ಟಲೆ ಸಮಯ ಕಳೆದು, ನಂತರ ತಮಗಿಂತ ತುಂಬಾ ಕಿರಿಯ ವಯಸ್ಸಿನ ಮಹಿಳೆಯರ ಮೇಲೆ ಮಗು ಹೆರುವ ಸಂಪೂರ್ಣ ಹೊರೆಯನ್ನು ಹೊರಿಸುವುದನ್ನು ಅವರು ಕಟುವಾಗಿ ವಿಮರ್ಶಿಸಿದ್ದಾರೆ. ಮಗು ಬೇಕು ಎಂದು ಬಯಸುವುದು ಸರಿಯಾದ ನಿರ್ಧಾರವೇ ಆದರೂ, ಆರೋಗ್ಯದ ಕಾಳಜಿ ಇಬ್ಬರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

"ನಾನು ಆತನಿಗೆ ಸ್ಪಷ್ಟವಾಗಿ ಹೇಳಿದೆ - 'ನಿಮಗೆ ನಿಜವಾಗಿಯೂ ಆರೋಗ್ಯವಂತ ಮಗು ಬೇಕು ಎಂದಾದರೆ ಮೊದಲು ನಿಮ್ಮಿಂದಲೇ ಪ್ರಾರಂಭಿಸಿ. ವಧುವಿನ ದೇಹಕ್ಕೆ ಚೆಕ್‌ಲಿಸ್ಟ್ ಸಿದ್ಧಪಡಿಸುವ ಮೊದಲು ನಿಮ್ಮ ವೈದ್ಯಕೀಯ ತಪಾಸಣೆ (Fertility Test) ಮಾಡಿಸಿಕೊಳ್ಳಿ. ನಂತರ ನಿಮ್ಮ ವಯಸ್ಸಿನ ಹಂತದಲ್ಲೇ ಇರುವ ಮಹಿಳೆಯರನ್ನು ಹುಡುಕಿ'" ಎಂದು ಮ್ಯಾಚ್ ಮೇಕರ್ ಹೇಳಿದ್ದರು. ಇದನ್ನು ಕೇಳಿ ಆ ವ್ಯಕ್ತಿ 'ಯೋಚಿಸುತ್ತೇನೆ' ಎಂದು ಹೇಳಿ ಹೋಗಿದ್ದರೂ, ಮರುದಿನ ಬೆಳಿಗ್ಗೆ ಮತ್ತೆ ಮೆಸೇಜ್ ಮಾಡಿ, "ನನ್ನ ಜೊತೆ ಮದುವೆಯಾಗಲು 26 ವರ್ಷದ ಹುಡುಗಿ ಒಪ್ಪಬಹುದೇ?" ಎಂದು ಮರಳಿ ಪ್ರಶ್ನಿಸಿದ್ದಾಗಿ ಮ್ಯಾಚ್ ಮೇಕರ್ ಅಸಮಾಧಾನದಿಂದ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪುರುಷರ ಫಲವತ್ತತೆ ಮತ್ತು ಮನಸ್ಥಿತಿಯ ಕುರಿತು ನೂರಾರು ಜನರು ಕಮೆಂಟ್ ಮಾಡಿದ್ದಾರೆ. 'ವಯಸ್ಸಾದ ಪುರುಷರ ಸ್ಪರ್ಮ್‌ನಿಂದ ಹುಟ್ಟುವ ಮಕ್ಕಳು ಸಂಪೂರ್ಣ ಆರೋಗ್ಯವಾಗಿರಲು ಸಾಧ್ಯವಿಲ್ಲ. ಅಂಡಾಣುಗಳಿಗಿಂತ ವೀರ್ಯಾಣು ವೇಗವಾಗಿ ಕ್ಷೀಣಿಸುತ್ತದೆ. ವಯಸ್ಸಾದ ಗಂಡಸರ ಸ್ಪರ್ಮ್‌ನಿಂದಾಗಿ ಮಹಿಳೆಯರು ಗರ್ಭಪಾತ (Miscarriages) ಮತ್ತು ಲೋಪದೋಷಗಳಿರುವ ಮಕ್ಕಳನ್ನು ಹೆರಬೇಕಾಗುತ್ತದೆ. 30ರ ಹರೆಯದ ಮಹಿಳೆಯರು ಕಿರಿಯ ವಯಸ್ಸಿನ ಗಂಡಸರನ್ನೇ ಮದುವೆಯಾಗುವುದು ಒಳಿತು" ಎಂದು ಬರೆದಿದ್ದಾರೆ. ಇದು ಅವರ ಆದ್ಯತೆಯಲ್ಲ, ಬದಲಿಗೆ ಅವರ ಅಹಂಕಾರ ಮತ್ತು ಹಕ್ಕೊತ್ತಾಯದ ಧೋರಣೆ ಎಂದು ಟೀಕಿಸಿದ್ದಾರೆ.

"ಅಗತ್ಯವಾದ ಪೋಸ್ಟ್. ಇಂತಹ ಗಂಡಸರು ಕಿರಿಯ ಹುಡುಗಿಯರನ್ನು ಮದುವೆಯಾಗಿ, ನಂತರ ಅನಾರೋಗ್ಯದ ಮಗು ಹುಟ್ಟಿದರೆ ಸಂಪೂರ್ಣ ನಿಂದನೆಯನ್ನು ಮಹಿಳೆಯರ ಮೇಲೆಯೇ ಹಾಕಿ ಕಿರುಕುಳ ನೀಡುತ್ತಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

ನನ್ನ ಸ್ನೇಹಿತೆ Fertility Clinicನಲ್ಲಿ ಕೆಲಸ ಮಾಡುತ್ತಿದ್ದಾಳೆ. ಪ್ರಸ್ತುತ 40ರ ಹರೆಯದ ಮಹಿಳೆಯರು ಸುಲಭವಾಗಿ ಗರ್ಭ ಧರಿಸುತ್ತಿದ್ದಾರೆ, ಆದರೆ 30ರ ಹರೆಯದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ತೀವ್ರ ಕಡಿಮೆಯಾಗಿದೆ. ಕ್ಲಿನಿಕ್‌ಗೆ ಬರುವ ಶೇ. 90 ರಷ್ಟು ದಂಪತಿಗಳಲ್ಲಿ ಪುರುಷರಿಗೇ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಕಮೆಂಟ್ ಮಾಡಿದ್ದಾರೆ.

"ಆ ಪುರುಷರಲ್ಲಿ ಜಾಗೃತಿ ಅಥವಾ ಜ್ಞಾನದ ಕೊರತೆಯಿಲ್ಲ. ಅದು ಅವರ ಶುದ್ಧ ಅಹಂಕಾರ. ತಮಗಿಂತ ಕಿರಿಯ ಹುಡುಗಿಗೆ ತಾವು ಸೂಕ್ತವೇ ಎಂದು ಅವರು ಆಕೆಯ ಕೋನದಿಂದ ಯೋಚಿಸುವುದಿಲ್ಲ. ಹಣವಿದ್ದರೆ ಎಲ್ಲವನ್ನೂ ಕೊಳ್ಳಬಹುದು ಎಂದು ಭಾವಿಸುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

View post on Instagram