ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ, ಮಗಳ ಪ್ರೇಮ ವಿವಾಹದಿಂದ ನೊಂದ ರಿಷಿರಾಜ್ ಜೈಸ್ವಾಲ್ ಎಂಬುವವರು ಸಾವಿಗೆ ಶರಣಾಗಿದ್ದಾರೆ. ಮಗಳು ಹರ್ಷಿತಾ ಪ್ರಿಯಕರನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ನ್ಯಾಯಾಲಯವು ಆಕೆಯನ್ನು ಪ್ರಿಯಕರನಿಗೆ ಒಪ್ಪಿಸಿದ ನಂತರ ರಿಷಿರಾಜ್ ಮಾನಸಿಕವಾಗಿ ಕುಗ್ಗಿ ಸ್ವಯಂ ಶೂಟ್ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಮಗಳ ನಿರ್ಧಾರವನ್ನು ಖಂಡಿಸಿ, ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮುಗಿಲು ಬೆಳ್ಮುಗಿಲು.. ನನ್ನ ಈ ಮಗಳು... ದೇವರಿಗಿಂತ ಮಿಗಿಲು... ಬೊಗಸೆ ಗಾತ್ರದ ಚಂದ್ರ, ಅವಳಾ ನೆರಳು... ಕಣ್ಣಲೇ ಇದೆ ಹೊಂಬಿಸಲು... ಎಂದು ಮುದ್ದಾಗಿ ಮಗಳನ್ನು ಸಾಕಿ ಬೆಳೆಸಿದ್ದ ಅಪ್ಪನ ಹೆಣದ ಮೇಲೆ ಮಗಳು ಲವ್ ಮ್ಯಾರೇಜ್ ಮಾಡಿಕೊಂಡು ಓಡಿ ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಘಟನೆ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ಜಿಲ್ಲೆಯ ಝಾನ್ಸಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗಳ ಪ್ರೇಮ ವಿವಾಹದಿಂದ ನೊಂದ ತಂದೆಯೊಬ್ಬರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಮೃತನನ್ನು ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಿಷಿರಾಜ್ ಜೈಸ್ವಾಲ್ ಅವರ ಮಗಳು ಹರ್ಷಿತಾ ಆನಂದ್ ಎಂಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಸ್ವಲ್ಪ ದಿನಗಳ ಹಿಂದೆ ಅವಳು ತನ್ನ ಪ್ರಿಯಕರ ಆನಂದ್ ಜೊತೆ ಓಡಿಹೋದಳು.
ಈ ಬಗ್ಗೆ ಅವರ ಅಪ್ಪ ರಿಷಿರಾಜ್ ಅವರು ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ಪೊಲೀಸರು ಇಂದೋರ್‌ನಿಂದ ಇಬ್ಬರನ್ನೂ ಹಿಡಿದು ಅವರ ಕುಟುಂಬಗಳಿಗೆ ಒಪ್ಪಿಸಿದರು. ಇದಾದ ನಂತರವೂ, ಪ್ರಿಯಕರ ಆನಂದ್ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ನ್ಯಾಯಾಲಯವು ಹರ್ಷಿತಾಳನ್ನು ಆಕೆಯ ಪ್ರಿಯಕರನಿಗೆ ಹಸ್ತಾಂತರಿಸಿತು. ಈ ಘಟನೆಯ ನಂತರ ರಿಷಿರಾಜ್ ತುಂಬಾ ಮಾನಸಿಕವಾಗಿ ನೊಂದುಕೊಮಡಿದ್ದರು. ತಾನು 20 ವರ್ಷಗಳ ಕಾಲ ಮುದ್ದಾಗಿ ಸಾಕಿ, ಸಲುಹಿದ್ದ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಇಲ್ಲದಾಯೊತು ಎಂದು ಬೇಸತ್ತಿದ್ದರು.
ಇದನ್ನೂ ಓದಿ: ಕಿಸ್ ಮಾಡಲು ಹೋದ್ರೆ ಅಲ್ಲಿ ಮುಟ್ಬೇಡಿ, ಇಲ್ಲಿ ಮುಟ್ಬೇಡಿ ಅಂತಾರೆ! ದುಃಖ ತೋಡಿಕೊಂಡ ಕಿಚ್ಚ ಸುದೀಪ್
ಮಾನಸಿಕವಾಗಿ ನೊಂದಿದ್ದ ರಿಷಿರಾಜ್ ನಿನ್ನೆ ರಾತ್ರಿ, ಮನೆಯಲ್ಲಿ ಒಬ್ಬರೇ ಇದ್ದಾಗ, ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದ ಸಮಯದಲ್ಲಿ, ಅವರ ಪತ್ನಿ ಮತ್ತು ಮಗ ತಮ್ಮ ಅಜ್ಜನ ಮನೆಗೆ ಹೋಗಿದ್ದರು. ಬೆಳಿಗ್ಗೆ ಎದ್ದ ಕೂಡಲೇ, ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಸಂಬಂಧಿಕನೊಬ್ಬ ಮನೆಯ ಬಾಗಿಲು ತೆರೆದಿರುವುದನ್ನು ನೋಡಿದನು. ಅವನು ಒಳಗೆ ಹೋದಾಗ, ರಕ್ತದಲ್ಲಿ ಮಡುವಿನಲ್ಲಿ ಬಿದ್ದಿದ್ದ ರಿಷಿರಾಜ್ ಶವವನ್ನು ನೋಡಿದನು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇನ್ನು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವುದು ಕಂಡುಬಂದಿದೆ.
ಆತ್ಮಹತ್ಯೆ ಪತ್ರದಲ್ಲಿ ತಂದೆ ಏನು ಬರೆದಿದ್ದಾರೆ?
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಲಭ್ಯವಾದ ಪತ್ರವನ್ನೂ ವಶಪಡಿಸಿಕೊಂಡಿದ್ದಾರೆ . ಮಗಳ ಆಧಾರ್ ಕಾರ್ಡ್‌ನ ಮುದ್ರಿತ ಪುಟದಲ್ಲಿ, ತಂದೆ 'ಹರ್ಷಿತಾ, ನೀನು ತಪ್ಪು ಮಾಡಿದೆ ಮಗಳೇ, ನಾನು ಹೋಗುತ್ತಿದ್ದೇನೆ' ಎಂದು ಬರೆದಿದ್ದಾರೆ. ಮತ್ತೊಂದು ಡೆತ್‌ನೋಟ್‌ನಲ್ಲಿ 'ನಾನು ಅವರಿಬ್ಬರನ್ನೂ (ಆನಂದ್ ಮತ್ತು ಮಗಳು ಹರ್ಷಿತಾ) ಕೊಲ್ಲಬಹುದಿತ್ತು, ಆದರೆ ನನ್ನ ಮಗಳನ್ನು ನಾನು ಹೇಗೆ ಕೊಲ್ಲಲಿ? ಭಾರತದ ಸಂವಿಧಾನವೂ ತಪ್ಪಾಗಿದೆ, ಇದು ಹುಡುಗಿಯರು ವಯಸ್ಕರಾದಾಗ ತಂದೆಯಿಂದ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸ್ವಲ್ಪ ಹಣಕ್ಕಾಗಿ ಕುಟುಂಬವನ್ನೇ ತ್ಯಾಗ ಮಾಡುವ ಆ ವಕೀಲ ಎಂದೂ ಬರೆಯಲಾಗಿದೆ. ಅವರಿಗೆ ಹೆಣ್ಣು ಮಕ್ಕಳೂ ಇದ್ದಾರೆ. ಅವನು ಸ್ವತಃ ತಂದೆಯ ನೋವಿನ ಬಗ್ಗೆ ಯೋಚಿಸುವುದಿಲ್ಲ. ಒಂದು ಇಡೀ ಕುಟುಂಬ ನಾಶವಾಯಿತು ಮತ್ತು ಸಮಾಜದಲ್ಲಿ ಏನೂ ಉಳಿಯಲಿಲ್ಲ. ರೇಣು, ನೀನು ಪೂರ್ವಾಳನ್ನು ಚೆನ್ನಾಗಿ ನೋಡಿಕೊಳ್ಳು. ಹರ್ಷಿತಾ ಮಗಳೇ ನೀನು ಸರಿಯಾದ್ದನ್ನು ಮಾಡಲಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಆರ್ಯ ಸಮಾಜದ ವಿವಾಹವು ಮಾನ್ಯವಾಗಿಲ್ಲದಿದ್ದರೆ, ನ್ಯಾಯಾಲಯವು ಹುಡುಗಿಯನ್ನು ಅವನ (ಪ್ರೇಮಿ) ಜೊತೆ ಹೇಗೆ ಕಳುಹಿಸಲು ಸಾಧ್ಯ? ಇದರಿಂದಾಗಿ ನಮ್ಮ ಇಡೀ ಕುಟುಂಬ ನಾಶವಾಗಿದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: 46ರ ವಯಸ್ಸಿನಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಪೊಲೀಸರಿಂದ ತನಿಖೆ: ರಿಷಿರಾಜ್ ಅವರು ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಈ ದುರಂತ ಘಟನೆಯಿಂದಾಗಿ ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ಆವರಿಸಿದೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದು, ರಿಷಿರಾಜ್ ಸಾವಿಗೆ ಕಾರಣಗಳ ಬಗ್ಗೆ ಆಳವಾಗಿ ತನಿಖೆ ನಡೆಸುತ್ತಿದ್ದಾರೆ.
