ಮೊದಲಿನಂತೆ ಜೆನ್‌ ಝೀ ಜೀವಮಾನವಿಡೀ ಒಂದೇ ಉದ್ಯೋಗಕ್ಕೆ ಅಂಟಿ ಕೂರುತ್ತಿಲ್ಲ. ಕೆಲಸ ಬದಲಾಯಿಸುತ್ತಿದೆ. ಆದರೆ ಈ ಬದಲಾವಣೆಗೆ ಕಾರಣ ಅತೃಪ್ತಿಯಲ್ಲ. ಮತ್ತೇನು? ಲಿಲಿ ಪ್ಯಾಡಿಂಗ್ ಎಂದರೇನು? ಇಲ್ಲಿದೆ ವಿವರ. 

ʼಲಿಲಿ ಪ್ಯಾಡಿಂಗ್ʼ ಎನ್ನುವ ಪದ ಇತ್ತೀಚೆಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಕೇಳಿಬರುತ್ತಿದೆ. ವಿಶೇಷವಾಗಿ Gen Z ಯುವಜನತೆಯ ನಡುವೆ. ಏನು ಹೀಗೆಂದರೆ? ಒಂದು ಕೆಲಸದಿಂದ ಇನ್ನೊಂದಕ್ಕೆ ಸದಾ ಜಿಗಿಯುತ್ತಾ ಇರುತ್ತಾರಲ್ಲ, ಅದೇ ಈ ಲಿಲಿ ಪ್ಯಾಡಿಂಗ್.‌

ಹಿಂದಿನ ಕಾಲದಲ್ಲಿ ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ವರ್ಷಗಳ ಕಾಲ ಕೆಲಸ ಮಾಡಿ ನಿಧಾನವಾಗಿ ಮೇಲೇರಲು ಪ್ರಯತ್ನಿಸುತ್ತಿದ್ದರು. ಆದರೆ ಇಂದಿನ ಯುವಕರು ತಮ್ಮ ಕ್ಯಾರಿಯರ್ ಅನ್ನು ಸರಳ ಮೆಟ್ಟಿಲುಗಳಂತೆ ನೋಡುವುದಿಲ್ಲ. ಬದಲಾಗಿ, ಅವರಿಗೆ ಅದು ವಿಭಿನ್ನ ಅನುಭವಗಳ ಸರಣಿಯಂತೆ ಕಾಣುತ್ತದೆ. ಪ್ರತಿಯೊಂದು ಹಂತವೂ ಅವರ ಮುಂದಿನ ಅವಕಾಶಗಳಿಗೆ ಸಿದ್ಧಪಡಿಸುವ ಒಂದು ಹಾದಿಯಾಗಿರುತ್ತದೆ.

ʼಲಿಲಿ ಪ್ಯಾಡಿಂಗ್; ಎಂಬ ಪದವೇ ಇದನ್ನು ಚೆನ್ನಾಗಿ ವಿವರಿಸುತ್ತದೆ. ಒಂದು ಕಪ್ಪೆ ನೀರಿನ ಮೇಲೆ ತೇಲುತ್ತಿರುವ ಲಿಲಿ ಹೂವಿನಿಂದ ಮತ್ತೊಂದಕ್ಕೆ ಹಾರುವಂತೆ, ಯುವ ಉದ್ಯೋಗಿಗಳು ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಹೋಗುತ್ತಾರೆ. ಆದರೆ ಈ ಹಾರಾಟ ಯದ್ವಾತದ್ವಾ ಇರುವುದಿಲ್ಲ. ಪ್ರತಿ ಬದಲಾವಣೆಯೂ ಹೊಸ ಕೌಶಲ್ಯ ಕಲಿಯಲು, ಹೊಸ ಕ್ಷೇತ್ರವನ್ನು ಅರ್ಥಮಾಡಿಕೊಳ್ಳಲು ಅಥವಾ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ. ಹೀಗಾಗಿ ಇದು ಕೇವಲ ಕೆಲಸ ತಪ್ಪಿಸಿಕೊಳ್ಳುವುದಲ್ಲ. ಬದಲು ಇದೊಂದು ಉದ್ದೇಶಪೂರಿತ ಕ್ಯಾರಿಯರ್ ಮಾರ್ಗ.

ಒಂದೇ ಸ್ಕಿಲ್‌ ಸಾಲದು, ಹಲವು ಬೇಕು

ಈ ರೀತಿಯ ಯೋಚನೆಗೆ ಪ್ರಮುಖ ಕಾರಣಗಳಲ್ಲಿ ಒಂದು ತಂತ್ರಜ್ಞಾನದ ವೇಗವಾದ ಬದಲಾವಣೆ. ಇಂದು ಕೃತಕ ಬುದ್ಧಿಮತ್ತೆ ಮತ್ತು ಆಟೋಮೇಷನ್‌ ಹಲವು ಉದ್ಯಮಗಳ ಸ್ವರೂಪವನ್ನೇ ಬದಲಾಯಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಒಂದೇ ಸ್ಕಿಲ್‌ ಅನ್ನು ಹಿಡಿದುಕೊಂಡು ವರ್ಷಗಳ ಕಾಲ ಉಳಿಯುವುದು ಅಪಾಯಕಾರಿ ಎಂದು ಹಲವರು ಭಾವಿಸುತ್ತಿದ್ದಾರೆ. ಆದ್ದರಿಂದ ಹೊಸ ಕೆಲಸಗಳು ಹೊಸ ಕಲಿಕೆಯ ಅವಕಾಶಗಳಾಗಿ ಕಾಣುತ್ತವೆ. ಮತ್ತೊಂದೆಡೆ, ಇಂದಿನ ಯುವಕರು ʼಜಾಬ್‌ ಸೆಕ್ಯುರಿಟಿʼಗಿಂತ ʼಸ್ಕಿಲ್‌ ಸೆಕ್ಯುರಿಟಿʼಗೆ ಹೆಚ್ಚು ಮಹತ್ವ ಕೊಡುತ್ತಾರೆ. ಅವರಿಗೆ ಒಂದೇ ಕಂಪನಿಯ ಮೇಲೆ ಅವಲಂಬನೆಯಾಗುವುದಕ್ಕಿಂತ, ತಮ್ಮಲ್ಲಿ ಇರುವ ಕೌಶಲ್ಯಗಳ ಮೇಲೆ ವಿಶ್ವಾಸ ಇಡುವುದು ಮುಖ್ಯವಾಗುತ್ತದೆ.

ಇದಕ್ಕೆ ಜೊತೆಯಾಗಿರುವ ಮತ್ತೊಂದು ದೊಡ್ಡ ಬದಲಾವಣೆ ಎಂದರೆ ಕೆಲಸದ ಪರಿಸರ. ವರ್ಕ್‌ ಫ್ರಂ ಹೋಮ್‌, ರಿಮೋಟ್‌ ವರ್ಕ್‌, ಫ್ರೀಲ್ಯಾನ್ಸಿಂಗ್‌ ಮತ್ತು ಗ್ಲೋಬಲ್‌ ಜಾಬ್‌ ಅವಕಾಶಗಳು. ಇವುಗಳ ಪರಿಣಾಮವಾಗಿ, ಈಗ ಉದ್ಯೋಗಿಗಳು ಒಂದೇ ನಗರ ಅಥವಾ ದೇಶಕ್ಕೆ ಸೀಮಿತವಾಗಿರೊಲ್ಲ. ಬೆಂಗಳೂರಿನಲ್ಲಿ ಇರುವ ಒಬ್ಬ ಯುವಕ ವಿದೇಶದ ಕಂಪನಿಗೆ ಕೆಲಸ ಮಾಡುವುದು ಈಗ ಸಾಮಾನ್ಯ. ಈ ಅವಕಾಶಗಳ ವಿಸ್ತಾರವೇ ಜನರನ್ನು ಹೊಸ ಕೆಲಸಗಳನ್ನು ಪರೀಕ್ಷಿಸಲು ಪ್ರೇರೇಪಿಸುತ್ತಿದೆ. ಜೊತೆಗೆ, Gen Z ತಲೆಮಾರು ತನ್ನ ಬೆಳವಣಿಗೆಯನ್ನು ಹೆಚ್ಚು ಪ್ರಾಮುಖ್ಯತೆಯಿಂದ ನೋಡುತ್ತದೆ. ಅವರು “ನಾನು ಇಲ್ಲಿ ಎಷ್ಟು ಕಾಲ ಇದ್ದೇನೆ?” ಎಂಬುದಕ್ಕಿಂತ “ನಾನು ಇಲ್ಲಿ ಏನು ಕಲಿತೆ?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ.

ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿಯೂ ಈ ಬದಲಾವಣೆ ಸ್ಪಷ್ಟವಾಗಿ ಕಾಣುತ್ತಿದೆ. ವಿಶೇಷವಾಗಿ ಐಟಿ, ಸ್ಟಾರ್ಟ್‌ಅಪ್ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಯುವಕರು ಕೆಲಸ ಬದಲಾಯಿಸುವುದನ್ನು ತಮ್ಮ ಬೆಳವಣಿಗೆಯ ಭಾಗವಾಗಿ ಬಳಸುತ್ತಿದ್ದಾರೆ. ಒಂದು ಕೆಲಸದಿಂದ ಮತ್ತೊಂದಕ್ಕೆ ಹೋಗುವುದರಿಂದ ಅವರಿಗೆ ಹೊಸ ತಂತ್ರಜ್ಞಾನಗಳನ್ನು ಕಲಿಯಲು, ವಿಭಿನ್ನ ಸಂಸ್ಥೆಗಳ ಕಾರ್ಯವೈಖರಿ ಅರಿತುಕೊಳ್ಳಲು ಮತ್ತು ತಮ್ಮ ಸಂಬಳವನ್ನು ವೇಗವಾಗಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಈ ಅನುಭವಗಳು ಅವರನ್ನು ಹೆಚ್ಚು ಸ್ಕಿಲ್‌ ಹೊಂದಿದ ವೃತ್ತಿಪರರನ್ನಾಗಿ ರೂಪಿಸುತ್ತಿವೆ.

ಕಂಪನಿಗಳು ಹೇಗೆ ನೋಡುತ್ತವೆ?

ಆದರೆ ಈ ಟ್ರೆಂಡ್‌ಗೆ ಮತ್ತೊಂದು ಮುಖವೂ ಇದೆ. ಕಂಪನಿಗಳ ದೃಷ್ಟಿಯಲ್ಲಿ, ಪದೇ ಪದೇ ಕೆಲಸ ಬದಲಾಯಿಸುವುದು ಸವಾಲಾಗಿ ಪರಿಣಮಿಸಿದೆ. ಹೊಸ ಉದ್ಯೋಗಿಗಳನ್ನು ನೇಮಿಸುವುದು ಮತ್ತು ತರಬೇತಿ ನೀಡುವುದು ತುಂಬಾ ಖರ್ಚಿನ ಕೆಲಸ. ಉದ್ಯೋಗಿಗಳು ಅತ್ಯಲ್ಪ ಸಮಯದಲ್ಲೇ ಬಿಟ್ಟರೆ, ಸಂಸ್ಥೆಗಳ ಯೋಜನೆಗಳಿಗೆ ವ್ಯತ್ಯಯ ಉಂಟಾಗುತ್ತದೆ. ಅದೇ ರೀತಿ, ಹೆಚ್ಚು ಜಾಬ್‌ ಬದಲಾಯಿಸಿದವರ ಬಗ್ಗೆ ನೇಮಿಸಿಕೊಳ್ಳುವವರು ಕೆಲವೊಮ್ಮೆ ಅನುಮಾನಪಡುವುದು ಸಹ ಸತ್ಯ. ಅವರು “ಈ ವ್ಯಕ್ತಿ ಇಲ್ಲಿ ಎಷ್ಟು ಕಾಲ ಉಳಿಯಬಹುದು?” ಎಂದು ಪ್ರಶ್ನಿಸುತ್ತಾರೆ. ಜೊತೆಗೆ, ಒಂದೇ ಕ್ಷೇತ್ರದಲ್ಲಿ ಆಳವಾದ ಪರಿಣತಿ ಬೆಳೆಸಿಕೊಳ್ಳಲು ಸಮಯ ಬೇಕು. ಅದು ಹೆಚ್ಚು ಜಾಬ್‌ ಬದಲಾಯಿಸುವವರಿಗೆ ಸವಾಲಾಗಬಹುದು.

ʼಲಿಲಿ ಪ್ಯಾಡಿಂಗ್ʼ ಸಂಪೂರ್ಣವಾಗಿ ಸರಿಯೇ ಅಥವಾ ತಪ್ಪೇ ಎಂಬ ಪ್ರಶ್ನೆಗೆ ಸರಳ ಉತ್ತರ ಇಲ್ಲ. ಇದು ಹೇಗೆ ಬಳಸಲಾಗುತ್ತದೆ ಎಂಬುದರ ಮೇಲೆ ಅದರ ಪರಿಣಾಮ ಅವಲಂಬಿತವಾಗಿರುತ್ತದೆ. ಯೋಚನೆ ಇಲ್ಲದೆ ಕೆಲಸ ಬದಲಾಯಿಸುವುದು ಗೊಂದಲಕ್ಕೆ ಕಾರಣವಾಗಬಹುದು. ಆದರೆ ಸ್ಪಷ್ಟ ಗುರಿಯೊಂದಿಗೆ ತೆಗೆದುಕೊಳ್ಳುವ ನಿರ್ಧಾರಗಳು ದೊಡ್ಡ ಅವಕಾಶಗಳತ್ತ ಕರೆದೊಯ್ಯಬಹುದು.

ಒಟ್ಟಿನಲ್ಲಿ, ಇದು ಒಂದು ದೊಡ್ಡ ಮನೋಭಾವದ ಬದಲಾವಣೆಯನ್ನು ಸೂಚಿಸುತ್ತದೆ. ಹಿಂದಿನ ಕಾಲದಲ್ಲಿ ಕಂಪನಿಗೆ ನಿಷ್ಠೆ ಮುಖ್ಯವಾಗಿದ್ದರೆ, ಇಂದಿನ ಕಾಲದಲ್ಲಿ ವ್ಯಕ್ತಿಯ ಕ್ಯಾರಿಯರ್‌ ಮೇಲೆ ಅವನದೇ ಹಿಡಿತ ಮುಖ್ಯವಾಗಿದೆ. Gen Z ತಲೆಮಾರು ತನ್ನ ಹಾದಿಯನ್ನು ತಾನೇ ಆಯ್ಕೆ ಮಾಡುತ್ತಿದೆ. ಪ್ರತಿಯೊಂದು ಕೆಲಸವೂ ಒಂದು ಗುರಿಯ ಕಡೆ ಸಾಗುವ ಹೆಜ್ಜೆಯಾಗುತ್ತದೆ. ಆದರೆ ಯಶಸ್ಸಿನ ಗುಟ್ಟು ಒಂದೇ- ಪ್ರತಿ ಹೆಜ್ಜೆಯೂ ಅರ್ಥಪೂರ್ಣವಾಗಿರಬೇಕು.