ಮೊದಲೆಲ್ಲಾ ಯಾವುದೇ ಅಪ್ಲಿಕೇಷನ್‌ ಭರ್ತಿಗೆ ಸಿಕ್ಕರೂ ಅಲ್ಲಿ ಹೆಸರು, ತಂದೆಯ ಹೆಸರು ನಮೂದಿಸಿದ ಮೇಲೆ ಖಾಯಂ ವಿಳಾಸ, ಪ್ರಸ್ತುತ ವಿಳಾಸ ಎನ್ನುವ ಎರಡು ಬಾಕ್ಸ್‌ಗಳು ಕಾಣುತ್ತಿದ್ದವು. ನನಗೆ ಆಗಿದ್ದ ವಿಳಾಸ ಒಂದೇ. ಅದನ್ನು ಭರ್ತಿ ಮಾಡಿ ಖಾಲಿ ಉಳಿದ ಸದ್ಯದ ವಿಳಾಸವನ್ನು ಹಾಗೆಯೇ ನೋಡುತ್ತಾ, ನಾನು ಯಾವಾಗ ಈ ಬಾಕ್ಸ್‌ ಅನ್ನು ಫಿಲ್‌ ಮಾಡುತ್ತೇನೆ ಎಂದುಕೊಳ್ಳುತ್ತಿದ್ದೆ.

ಆದರೆ ಈಗ ಆ ಬಾಕ್ಸ್‌ ಅನ್ನು ಫಿಲ್‌ ಮಾಡುವ ಕಾಲ ಬಂದಿದೆ. ಉದ್ಯೋಗ ಅರಸಿ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಬಂದಾಗ, ಎಲ್ಲೋ ಏನೋ ಪಡೆಯಲು ಅರ್ಜಿಗಳನ್ನು ಫಿಲ್‌ ಮಾಡಬೇಕಾಗಿ ಬಂದಾಗ ಮೊದಲಿನಂತಯೇ ಸಿಗುವ ಇದೇ ಎರಡು ಬಾಕ್ಸ್‌ಗಳು ಇದೀಗ ನನ್ನನ್ನೇ ಅಣಕಿಸುತ್ತವೆ. ಖಾಯಂ ವಿಳಾಸವನ್ನು ಭರ್ತಿ ಮಾಡುವಾಗ ಇಡೀ ಊರಿನ ನೆನಪುಗಳು ಒಮ್ಮೆಗೆ ಒತ್ತಿಕೊಂಡು ಬರುತ್ತವೆ. ಎಂದು, ಎಷ್ಟೊತ್ತಿಗೆ ನಾನು ನನ್ನ ಖಾಯಂ ವಿಳಾಸವನ್ನು ಸೇರುತ್ತೇನೋ ಎಂದು ಅನ್ನಿಸುವ ಹೊತ್ತಿಗೆ ಕೆಳಗೆ ಸದ್ಯದ ವಿಳಾಸ ಎನ್ನುವ ಕಾಲಂ ಕಾಣುತ್ತದೆ.

ರಾಜಸ್ಥಾನದಲ್ಲಿ ಸೋಲೋ ಟ್ರಿಪ್‌ ಮಾಡಿ ಬಂದಿದ್ದಾರೆ ಸಿಂಧೂ ಲೋಕನಾಥ್‌

ನಾನು ಈಗ ಇರುವ ನನ್ನದಲ್ಲ ವಿಳಾಸವನ್ನು, ಯಾರದ್ದೋ ಮನೆಗೆ ಬಂದು ಬಾಡಿಗೆಗೆ ಹಿಡಿದು, ಅದನ್ನೇ ನನ್ನ ಸದ್ಯದ ವಿಳಾಸ ಎಂದು ನಮೂದು ಮಾಡುವಾಗ ಮನಸ್ಸು ಆಧ್ಯಾತ್ಮದ ಕಡೆಗೆ ಓಡುತ್ತದೆ. ಲೈಫು ಇರುವುದೆಲ್ಲವನ್ನೂ ಬಿಟ್ಟು, ಇರದುದ್ದನ್ನೇ ಯಾಕೆ ಬಯಸುತ್ತೆ ಎನ್ನುವ ಪ್ರಶ್ನೆಗಳು ಕಾಡಲು ಶುರುವಾಗುತ್ತವೆ.

ನನ್ನ ವಿಳಾಸ ಯಾವುದು ಎನ್ನುವ ಘನವಾದ ಪ್ರಶ್ನೆಯೊಂದು ಎದೆಯೊಳಗೆ ಹುಟ್ಟುತ್ತದೆ. ಅಷ್ಟರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಕೊಡಬೇಕಾದ ಅನಿವಾರ್ಯತೆ. ಏನು ಮಾಡುವುದು ಈ ಖಾಯಂ ವಿಳಾಸ ಮತ್ತು ಸದ್ಯದ ವಿಳಾಸಗಳ ನಡುವಲ್ಲಿ ಎನ್ನುವ ತುಮುಲವೊಂದು ಹಾಗೆಯೇ ಉಳಿದುಬಿಡುತ್ತದೆ. ಬದುಕು ಮುಂದೆ ಸಾಗುತ್ತಿರುತ್ತದೆ.