'ಮದುವೆಗಳು ಸ್ವರ್ಗದಲ್ಲಿ ನಿರ್ಣಯವಾಗ್ತವೆ. ಆದ್ರೆ ಅದನ್ನು ಲಾಕ್‌ಡೌನ್ ಟೈಮಲ್ಲಿ ನಾವೇ ಸೆಟ್ ಮಾಡ್ಕೊಬೇಕು' ಅಂತ ಯಾರೋ ಮೊನ್ನೆ ತಮಾಷೆ ಮಾಡುತ್ತಿದ್ದರು. ಅವರು ಯಾರದೋ ಮನೆಯಲ್ಲಿ ನಡೆದ ಮದುವೆಗೆ ಹೋಗಿ ಬಂದು ಈ ಮಾತು ಹೇಳ್ತಾ ಇದ್ದರು. 

 

ಕೊರೊನಾ ಟೈಮಿಗೆ ಮೊದಲೆಲ್ಲ ಮನೆಯಲ್ಲಿ ಮದುವೆ ಎಂಬ ಮಾತೇ ಇರಲಿಲ್ಲ. ಏನಿದ್ದರೂ ಮೂರು ತಿಂಗಳ ಮೊದಲು ಛತ್ರ ಬುಕ್ ಮಾಡಬೇಕು. ಬಡವರ ಮನೆಯ ಮುವೆಯಾದರೆ ಒಂದೆರಡು ಲಕ್ಷ, ಮಧ್ಯಮವರ್ಗದವರ ಮದುವೆ ಅಂತಾದರೆ ಹತ್ತಿಪ್ಪತ್ತು ಲಕ್ಷ, ಶ್ರೀಮಂತರ ಮನೆಯವರದು ಆಗಿದ್ದರೆ ಒಂದೆರಡು ಕೋಟಿ ಖರ್ಚಿಗೆ ಮೋಸವಿಲ್ಲ. ವಧುವಿನ ಮೈಮೇಲೆ ಬಾಡಿಗೆ ತಂದ ಆಭರಣಗಳನ್ನಾದರೂ ಹೇರದಿದ್ದರೆ ಮದುವೆಗೆ ಕಳೆಯಿಲ್ಲ. ಐನೂರು ಮಂದುಯಾದರೂ ಆಗಮಿಸದಿದ್ದರೆ ಮರ್ಯಾದೆಯಿಲ್ಲ. ಮೂರು ಸ್ವೀಟು, ಬಗೆಬಗೆ ಐಸ್‌ಕ್ರೀಮು, ರಿಚ್ ರಿಟರ್ನ್ ಗಿಫ್ಟು ಅಥವಾ ತಾಂಬೂಲ ಕೊಡ್ಲೇಬೇಕು. ಇವೆಲ್ಲ ಕಡ್ಡಾಯವೆನಿಸಿದ್ದವು.

 

 

ಆದ್ರೆ ಲಾಕ್‌ಡೌನ್ ಬಂದದ್ದೇ ನೋಡಿ. ಹೇಗೆ ಎಲ್ಲಾ ಬದಲಾಯಿತು! ಮದುವೆಗೆ ಅನಿವಾರ್ಯ ಅಂತ ಇರೋರು ಇಬ್ರೇ- ಮದುಮಗ ಮದುಮಗಳು. ಮಂತ್ರ ಹೇಳೋಕೊಬ್ರು ಪುರೋಹಿತ. ಧಾರೆ ಎರೆಯೋಕೆ ಹೆಣ್ಣಿನ ತಂದೆ ತಾಯಿ. ಎರೆಸಿಕೊಳ್ಳೋಕೆ ಗಂಡಿನ ತಂದೆ ತಾಯಿ. ಅಲಂಕಾರ ಮಾಡೋಕೆ ಬೇಕಿದ್ದರೆ ಅಕ್ಕ ಬಾವ ಅತ್ತೆ ಮಾವ. ಚಂದ ನೋಡೋಕೆ ಅಣ್ಣ ತಮ್ಮ ಅಕ್ಕ ತಂಗಿ. ಉಳಿದವರಿಗೆ ಏನು ಕೆಲಸ ಅಲ್ಲಿ? 60 ವರ್ಷ ದಾಟಿದವರು ಬರುವ ಹಾಗೂ ಇಲ್ಲ ಅಂತ ಸರಕಾರದ ಕಡ್ಡಾಯ. ಹಂಗಾಗಿ ವಧು ವರರ ಅಜ್ಜನೋ ಅಜ್ಜಿಯೋ ಮನೆಯಿಂದಲೇ ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡಬೇಕು.

 

ಮನೆಯಲ್ಲೊಬ್ಬರಿಗೆ ಕೊರೋನಾ ಬಂದರೇನು ಮಾಡಬೇಕು?

 

50 ಜನ ದಾಟುವ ಹಾಗೇ ಇಲ್ಲ ಅಂತ ಸರಕಾರ ಕಡ್ಡಾಯ ಮಾಡಿದ್ದೇ ಮಾಡಿದ್ದು, ಮದುವೆಗಳೆಲ್ಲ ಇದಕ್ಕೇ ಕಾಯ್ತಿದ್ದಂತೆ ಸರಳ ಆಗಿಬಿಟ್ಟವು. ನಿಜಕ್ಕೂ ಇಂಥದ್ದೊಂದು ಬದಲಾವಣೆ ಅಗತ್ಯ ಇತ್ತಲ್ವೇ. ಅದ್ದೂರಿ ಮದುವೆಯಿಂದ ಹಣದ ಚಲಾವಣೆ ಆಗುತ್ತೆ, ಎಷ್ಟೋ ಮಂದಿಗೆ ದುಡಿಮೆ ಆಗುತ್ತೆ ಅನ್ನೋದೆಲ್ಲ ನಿಜಾನೇ. ಮಂಟಪ ಕಟ್ಟೋರು, ಹೂವಿನವರು, ವಾಲಗದವರು, ಎಲ್ಲರೂ ಬದುಕಬೇಕು. ಆದರೆ ಈ ಎಲ್ಲ ವೆಚ್ಚಗಳ ಹೆಸರಿನಲ್ಲಿ ಬಡ ಮತ್ತು ಮಧ್ಯಮ ವರ್ಗಕ್ಕೆ ಆಗುತ್ತಿದ್ದ ಹಿಂಸೆ ಅಷ್ಟಿಷ್ಟಲ್ಲ. ಎಷ್ಟೋ ಫ್ಯಾಮಿಲಿಗಳು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟ ಬಳಿಕ ದಿವಾಳಿ ಆಗಿ, ಯಾವ್ಯಾವುದೋ ಸೇಟುಗಳ ಬಳಿ ಅಡ್ಡಾಬಡ್ಡಿಗೆ ಮಾಡಿದ ಸಾಲ ಪೂರೈಸಲು ಜೀವನಪೂರ್ತಿ ದುಡಿಯುವಂತೆ ಆಗುತ್ತಿತ್ತು. ಸದ್ಯ ಅದು ತಪ್ಪಿದೆ.

 

ಮುಟ್ಟನ್ನು ಕಾಯಿಲೆ ಎಂದುಕೊಂಡಿರುತ್ತಾರಂತೆ ಶೇ.38 ಹುಡುಗಿಯರು!

 

 

ಲೋಕದ ಕಣ್ಣಿಗೆ ಅದ್ದೂರಿ ಆಗುವಂತೆ ಪ್ರತಿಷ್ಠೆಗಾಗಿ ಮದುವೆ ಮಾಡಿ ಪಾಪರ್ ಆಗುವುದು ತಪ್ಪಿರೋದರಿಂದ ಅನೇಕ ಫ್ಯಾಮಿಲಿಗಳು ಬದುಕಿಕೊಂಡಿವೆ. ವಿಷ್ಯ ಏನಪ್ಪಾ ಅಂದ್ರೆ, ಕೆಲವರು ಈ ಲಾಕ್‌ಡೌನ್ ಟೈಮಲ್ಲೇ ಮದುವೆ ಮುಗಿಸಿಕೊಂಡು ಬಿಡೋಣ ಅಂತ ಅವಸರ ಮಾಡ್ತಿದಾರಂತೆ! ಯಾಕಂದ್ರೆ ಹೆಚ್ಚಿನ ಖರ್ಚು ಇಲ್ದೆ ಸುಧಾರಿಸಬಹುದು ಅಲ್ವಾ! ತುಂಬಾ ಮಂದಿಗೆ ಹೇಳಬೇಕೆಂದೇನೂ ಇಲ್ಲ. ಊಟದ ಖರ್ಚು ಉಳಿಯುತ್ತೆ. ಅನಿವಾರ್ಯವಲ್ಲದ ಬಂಧುಗಳನ್ನು ಪ್ರತಿಷ್ಠೆಗಾಗಿ ಕರೆಯುವುದು ತಪ್ಪುತ್ತೆ. ಹಾಗೆ ಉಳಿಸುವ ಹಣದಲ್ಲೇ ನವದಂಪತಿಗೆ ಮನೆ ಹೊಂದಿಸಲು ಅಗತ್ಯ ಸಾಮಗ್ರಿಗಾಗಿ ಖರ್ಚು ಮಾಡಬಹುದು. ಬಂಧುಗಳೆಂಬ ಹೆಸರಿನಲ್ಲಿ ಬಂದು ಐವತ್ತು ರುಪಾಯಿಯ ಕವರ್ ಕೊಟ್ಟು ಇನ್ನೂರು ರುಪಾಯಿಯ ಊಟ ಮಾಡಿ ಹೋಗುವವರ ರಗಳೆಯೂ ಇಲ್ಲ.

 

ತಾಯಿಯಾದ ಮೇಲೂ ತ್ವಚೆಯ ರಂಗು ಕಾಪಾಡಿಕೊಳ್ಳುವುದು ಹೇಗೆ?

 

ಹಲವು ಮದುವೆಗಳ ಆಮಂತ್ರಣ ಪತ್ರಿಕೆ(ಆಮಂತ್ರಣ ಅಲ್ಲ ಅವು, ಮಾಹಿತಿ ಪತ್ರಿಕೆಗಳಷ್ಟೇ)ಗಳಲ್ಲಿ ''ನೀವು ಇದ್ದಲ್ಲೇ ಆಶೀರ್ವದಿಸಿ" ಎಂದು ಛಾಪಿಸಿದ್ದೂ ಇದೆ ! ಮದುವೆಗಳು ಏಕ್‌ದಂ ಐವತ್ತು ವರ್ಷ ಹಿಂದಕ್ಕೆ ಹೋದಂತಾಗಿದೆ. ಮನೆಯಲ್ಲೇ ಮದುವೆ, ಆತ್ಮೀಯ ಬಂಧು ಮಿತ್ರರದಷ್ಟೇ ಉಪಸ್ಥಿತಿ, ಅಗತ್ಯವಿದ್ದಷ್ಟೇ ವೆಚ್ಚ, ಕೃತಕತೆಯಿಲ್ಲದ ಅಲಂಕಾರ, ಬಂದ ಎಲ್ಲರ ಜತೆ ಸಾಧ್ಯವಾಗುವ ಆತ್ಮೀಯ ಮಾತುಕತೆ...ಮತ್ತೆ ಕಾಣಿಸುತ್ತಿವೆ. ಮುಂಬರುವ ದಿನಗಳಲ್ಲಿ ಇಂಥ ಮದುವೆಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.