ಒಮ್ಮೆ ನಿಮ್ಮ ಶಾಲಾ ದಿನಗಳಲ್ಲಿ ಎದುರಾಗುತ್ತಿದ್ದ 'ಆ ದಿನ'ಗಳನ್ನು ನೆನೆಸಿಕೊಳ್ಳಿ. ಪರೀಕ್ಷೆ ಬರೆದು ಏಳುವಾಗ ಕೆಂಪು ಕಲೆಯಾಗಿದ್ದ ಬಿಳಿಯ ಯೂನಿಫಾರಂ, ಅದನ್ನು ಯಾರೂ ನೋಡದಂತೆ ಸುತ್ತುವರೆದು ನಿಲ್ಲುತ್ತಿದ್ದ ಸಹಪಾಠಿ ಹುಡುಗಿಯರು, ಯಾರದೋ ಬ್ಯಾಗಿನಲ್ಲಿ ಪೇಪರ್ ಸುತ್ತಿ ಕುಳಿತ ಪ್ಯಾಡ್ ದಾನ, ನಂತರ ಕಲೆಯ ಭಾಗವನ್ನು ಮುಂದೆ ಬರುವಂತೆ ಹಿಂದುಮುಂದಾಗಿ ಯೂನಿಫಾರಂ ಹಾಕಿಕೊಂಡು ಊಟದ ಬುಟ್ಟಿ ಅಡ್ಡ ಇಟ್ಟುಕೊಂಡು ಮನೆಗೆ ಸೇರಿದರೆ ಸಾಕಪ್ಪಾ ಎಂದು ಆತಂಕದಲ್ಲಿ ಕಳೆಯುತ್ತಿದ್ದ ಕ್ಷಣಗಳು... ಇನ್ನು ಕೆಲವೊಮ್ಮೆ ಹೊಟ್ಟೆ ನೋವಿಗೆ ತಲೆನೋವೆಂದು ಹೇಳಿ ಅರ್ಧ ದಿನ ರಜೆ ತೆಗೆದುಕೊಂಡದ್ದು, ಯಾರೋ ಹುಡುಗಿ ಮಾಹಿತಿ ಹಾಗೂ ಸ್ವಚ್ಛತೆಯ ತಿಳಿವಳಿಕೆ ಕೊರತೆಯಿಂದಾಗಿ ಟಾಯ್ಲೆಟ್‌ನಲ್ಲೇ ಎಸೆದು ಹೋಗುತ್ತಿದ್ದ ಪ್ಯಾಡ್‌ಗಳು, ಸರಿಯಾಗಿ ನೀರು ಹಾಕದೆ ಟಾಯ್ಲೆಟ್‌ನಲ್ಲಾಗಿರುತ್ತಿದ್ದ ರಕ್ತದ ಕಲೆಗಳು, ಬಟ್ಟೆಯ ಬಳಕೆ, ಅದು ಜಾರಿ ಬೀಳುವ ಭಯ... ಒಟ್ಟಿನಲ್ಲಿ ಮುಟ್ಟಿನ ದಿನಗಳ ಗೋಳಿನ ಕತೆಗಳು ಹತ್ತು ಹಲವಾರು ಸಿಗುತ್ತವೆ. 

ಇಂದು ಮೆನೆಸ್ಟ್ರುವಲ್ ಹೈಜಿನ್ ಡೇ; ಮುಜುಗರ ಬಿಟ್ಟು ಶುಚಿತ್ವಕ್ಕೆ ಒತ್ತು ನೀಡೋಣ

ಇಂಥ ಆತಂಕ, ಅವಮಾನಗಳು, ಅಜ್ಞಾನ ಎಲ್ಲವೂ ಇಂದಿಗಾದರೂ ಬದಲಾಗಿರುತ್ತದೆ ಎಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಏಕೆಂದರೆ ನಾವು ಬೆಳೆದಿದ್ದೇವೆ, ನಮಗೀಗ ಅರಿವಾಗಿದೆ. ಆದರೆ, ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ಇವೆಲ್ಲ ಹೊಸತೇ. ಭಾರತದ ಶಾಲೆಗಳಲ್ಲಿ ಇಂದಿಗೂ ಪೀರಿಯಡ್ಸ್ ಕುರಿತು ಹೆಣ್ಣುಮಕ್ಕಳಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ, ಅಲ್ಲಿ ಪೀರಿಯಡ್ಸ್ ಸಂಬಂಧಿ ಅಗತ್ಯ ಮೂಲಸೌಕರ್ಯಗಳಿಗೂ ಕೊರತೆ ಇದೆ ಎಂಬುದು ಹಳಬರಲ್ಲ, ಇಂದಿನ ತಾಯಂದಿರು ಹಾಗೂ ವಿದ್ಯಾರ್ಥಿನಿಯರ ದೂರು. 

ಶಾಲೆಗಳಲ್ಲಿ ವ್ಯವಸ್ಥೆ ಸರಿಯಿಲ್ಲ
ವಿಶ್ವ ಮೆನ್ಸ್‌ಟ್ರುಯಲ್ ಹೈಜೀನ್ ದಿನದ ಪ್ರಯುಕ್ತವಾಗಿ ಎವರ್‌ಟೀನ್ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಭಾಗವಹಿಸಿದ್ದ ಶೇ.51ಕ್ಕೂ ಹೆಚ್ಚು ಮಹಿಳೆಯರು ಶಾಲೆಗಳು ಹದಿಹರೆಯದ ಹುಡುಗಿಯರಿಗೆ ಪೀರಿಯಡ್ಸ್ ಕುರಿತು ಸರಿಯಾದ ಮಾಹಿತಿ ನೀಡುವುದಿಲ್ಲ ಎಂದಿದ್ದರೆ, ಶೇ.60ರಷ್ಟು ಮಹಿಳೆಯರು ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ಯಾಡ್ ಬದಲಿಸಲು ಹಾಗೂ ಅವನ್ನು ಸರಿಯಾಗಿ ಡಿಸ್ಪೋಸ್ ಮಾಡಲು ವ್ಯವಸ್ಥೆ ಇಲ್ಲ ಎಂದು ದೂರಿದ್ದಾರೆ.

ಈ ಸರ್ವೆಗೆ ಸಂಸ್ಥೆಯು ದಿಲ್ಲಿ, ಮುಂಬೈ, ಬೆಂಗಳೂರು, ಚಂಡೀಗಢ, ಹೈದರಾಬಾದ್, ಅಹಮದಾಬಾದ್ ಹಾಗೂ ಕೋಲ್ಕತ್ತಾದ 7000 ಮಹಿಳೆಯರನ್ನು ಪ್ರಶ್ನಿಸಿತ್ತು. 

ಅನನ್ಯಾ ಪಾಂಡೆ ಆನ್‌ಲೈನ್‌ ವರ್ಕೌಟ್‌; ಯಾರಾದ್ರೂ ಪುಶ್‌ ಮಾಡೋರು ಬೇಕಂತ ...

ವಿದ್ಯಾರ್ಥಿನಿಯರಿಗೆ ಮಾಹಿತಿ ಇಲ್ಲ
ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪೀರಿಯಡ್ಸ್ ಕುರಿತು ಕೆಲ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಶೇ.95ರಷ್ಟು ಮಹಿಳೆಯರ  ಅಭಿಪ್ರಾಯ. ಇನ್ನೂ ಆಘಾತದ ಮಾಹಿತಿ ಎಂದರೆ ಶೇ.60ರಷ್ಟು ಹುಡುಗಿಯರಿಗೆ ಹದಿಹರೆಯ ಆರಂಭಿಕ ವರ್ಷಗಳಲ್ಲಿ ಪೀರಿಯಡ್ಸ್ ಬಗ್ಗೆ ಸರಿಯಾದ ಜ್ಞಾನ ಇರುವುದಿಲ್ಲ ಹಾಗೂ ಶೇ.38ರಷ್ಟು ಹುಡುಗಿಯರು ಮೊದಲ ಬಾರಿಯ ಮುಟ್ಟನ್ನು ಗಾಯ ಅಥವಾ ಕಾಯಿಲೆ ಎಂದು ಭಾವಿಸಿ ಹೆದರುತ್ತಾರಂತೆ. 

ಕಚೇರಿಗಳಲ್ಲೂ ಇದೇ ಹಣೆಬರಹ
ಶಾಲೆಗಳಲ್ಲಿ ಟಾಯ್ಲೆಟ್ ಸ್ವಚ್ಛತೆ ಸಾಲುವುದಿಲ್ಲ, ಪ್ಯಾಡ್ಸ್ ಡಿಸ್ಪೋಸ್ ಮಾಡಲು ವ್ಯವಸ್ಥೆ ಸರಿ ಇರುವುದಿಲ್ಲ ಎಂಬುದು ಬಹುತೇಕ ಮಹಿಳೆಯರ ಕಂಪ್ಲೆಂಟ್. ಕಚೇರಿಗಳಲ್ಲಿ ಕೂಡಾ ಇದೇ ಸಮಸ್ಯೆ. ಟಾಯ್ಲೆಟ್ ಸ್ವಚ್ಛತೆ ಸಾಕಾಗಲ್ಲ, ಪ್ಯಾಡ್ಸ್ ಬದಲಿಸಲು ಹಾಗೂ ಎಸೆಯಲು ವ್ಯವಸ್ಥೆ ಸರಿ ಇರುವುದಿಲ್ಲ ಎಂದು ಶೇ.41ರಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. 

ವೈದ್ಯರನ್ನು ಕಾಣಲು ಹಿಂಜರಿತ
ಬಹಳಷ್ಟು ಹುಡುಗಿಯರು ಹಾಗೂ ಮಹಿಳೆಯರಲ್ಲಿ ಮುಟ್ಟಿನ ಸಂದರ್ಭ ಹಾಗೂ ಆನಂತರದ ದಿನಗಳಲ್ಲಿ ಮೂತ್ರ ನಾಳ ಸೋಂಕು, ತುರಿಕೆ, ವಾಸನೆ, ಕೆಂಪಾಗುವುದು ಮುಂತಾದವನ್ನು ಅನುಭವಿಸುತ್ತಾರೆ. ಆದರೆ ಇವರಲ್ಲಿ ಹೆಚ್ಚಿನವರು ಸ್ತ್ರೀರೋಗ ತಜ್ಞರ ಬಳಿ ಹೋಗುವುದು ಅವಮಾನವೆಂದು ಭಾವಿಸಿ ಈ ಸಮಸ್ಯೆಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಮತ್ತೆ ಶೇ.63ರಷ್ಟು ಮಹಿಳೆಯರ  ಮುಟ್ಟು ನಿಯಮಿತವಾಗಿರುವುದಿಲ್ಲ. ಇವರಲ್ಲಿ  ಶೇ.37ರಷ್ಟು ಮಹಿಳೆಯರು ಮಾತ್ರ ಗೈನಕಾಲಜಿಸ್ಟ್ ಬಳಿ ಹೋಗುವುದದಾಗಿ ಹೇಳಿದ್ದಾರೆ. ಶೇ.54ಕ್ಕೂ ಅಧಿಕ ಮಹಿಳೆಯರಲ್ಲಿ ವೈಟ್ ಡಿಸ್ಚಾರ್ಜ್ ಇರುತ್ತದೆ. ಇವರಲ್ಲಿ ಶೇ.25ರಷ್ಟು ಮಹಿಳೆಯರು ಮಾತ್ರ ಸ್ತ್ರೀ ರೋಗ ತಜ್ಞರ ಬಳಿ ಇದನ್ನು ಚರ್ಚಿಸಲು ಸಿದ್ಧರಿರುತ್ತಾರೆ. 

ಸರ್ವೆಯಲ್ಲಿ ಭಾಗವಹಿಸಿದ ಶೇ.42ರಷ್ಟು ಮಹಿಳೆಯರು ತಮಗೆ ಔಷಧದಂಗಡಿಯಲ್ಲಿ ಬೇರೆ ಜನರಿರುವಾಗ ಪ್ಯಾಡ್ಸ್ ಕೊಳ್ಳಲು ನಾಚಿಕೆ ಎನಿಸುತ್ತದೆ ಎಂದಿದ್ದರೆ, ನಾಲ್ಕರಲ್ಲಿ ಮೂರು ಭಾಗದಷ್ಟು ಮಹಿಳೆಯರು ಪುರುಷರಿಗೂ ಮುಟ್ಟು ಇದ್ದಿದ್ದರೆ ಇದು ಸಮಾಜದಲ್ಲಿ ಅಂಥ ಮುಚ್ಚಿಡುವ ವಿಷಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.