ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಎರಡು ಬೆಕ್ಕುಗಳ ಪ್ರೇಮ ಪ್ರಕರಣವು ಅವುಗಳ ಮಾಲೀಕರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಈ ಗಲಾಟೆಯು ಆ್ಯಸಿಡ್ ದಾಳಿಯ ಹಂತಕ್ಕೆ ತಲುಪಿ, ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ತಾಯಿ ಬೆಕ್ಕಿನಿಂದ ಮರಿಗಳನ್ನು ಬೇರ್ಪಡಿಸುವಲ್ಲಿ ಅಂತ್ಯಗೊಂಡಿದೆ.

ಲವ್​ ಸ್ಟೋರಿ ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿತು ಎಂದಾಕ್ಷಣ ಎಲ್ಲರಿಗೂ ಕಣ್ಣಮುಂದೆ ಬರೋದು ಒಬ್ಬ ಹುಡುಗ, ಒಬ್ಬ ಹುಡುಗಿ ದೃಶ್ಯ ಅಲ್ವಾ? ಆದರೆ ಬೆಂಗಳೂರಿನಲ್ಲಿ ನಡೆದದ್ದೇ ಬೇರೆ. ಇಲ್ಲಿನ ಶೇಷಾದ್ರಿಪುರದ ಪೊಲೀಸ್​ ಸ್ಟೇಷನ್​ ಬಾಗಿಲಿಗೆ ಹೋಗಿದ್ದು ಜನರ ಲವ್​ಸ್ಟೋರಿ ಅಲ್ಲ, ಬದಲಿಗೆ ಬೆಕ್ಕುಗಳ ಪ್ರೇಮದ ವಿಚಾರ. ಇದು ಕಲಿಯುಗ ನೋಡಿ, ಏನು ಬೇಕಾದ್ರೂ ಆಗತ್ತೆ ಅಂದುಕೊಂಡ್ರೆ ಅದು ಒಂದರ್ಥದಲ್ಲಿ ನಿಜನೆ, ಹಾಗಿದ್ರೆ ಆಗಿದ್ದೇನು? ಏನಿದು ಬೆಕ್ಕುಗಳ ಲವ್ ಸ್ಟೋರಿ ಎನ್ನುವ ಕುತೂಹಲ ಇರಬೇಕಲ್ವಾ? ಇಲ್ಲಿದೆ ನೋಡಿ ಅದರ ಇಂಟರೆಸ್ಟಿಂಗ್​ ಸ್ಟೋರಿ.

ಆ್ಯಸಿಡ್​ ದಾಳಿವರೆಗೆ ಗಲಾಟೆ

ಮನುಷ್ಯರಾದ್ರೇನು, ಪ್ರಾಣಿಯಾದರೇನು, ಗಂಡು-ಹೆಣ್ಣುಗಳ ನಡುವೆ ಆಕರ್ಷಣೆ ಸಹಜವೇ ಅಲ್ವಾ? ಅದೇ ರೀತಿ ಈ ಸ್ಟೋರಿಯಲ್ಲೂ ಆಗಿದೆ. ಒಬ್ಬರ ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಮೊಳಾ (ಅಂದ್ರೆ ಗಂಡು ಬೆಕ್ಕು) ನಡುವೆ ಲವ್​ ಶುರುವಾಗಿ ಎಲ್ಲಾ ಮುಗಿಸಿಬಿಟ್ಟಿವೆ. ಇನ್ನೇನು? ಹೆಣ್ಣು ಬೆಕ್ಕು ಗರ್ಭಿಣಿಯಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದೆ. ಇದು ಬೆಕ್ಕು ಇರುವ ಮನೆಗಳಲ್ಲಿ ಸಹಜವೇ. ಏಕೆಂದ್ರೆ ಸಾಕು ನಾಯಿಗಳನ್ನಾದ್ರೆ ಕಟ್ಟಿಹಾಕ್ತಾರೆ, ಬೆಕ್ಕುಗಳು ಹಾಗಲ್ಲವಲ್ಲ, ಅವು ಸ್ವತಂತ್ರವಾಗಿ ಯಾರ ಮನೆಯ ಬೇಲಿ ಬೇಕಾದ್ರೂ ಹಾರಿ ಹೋಗುತ್ತೆ. ಇಲ್ಲೂ ಹಾಗೇ ಆಗಿದ್ದೇ ಎರಡು ಮನೆಗಳ ನಡುವೆ ದೊಡ್ಡ ಗಲಾಟೆ ಆಗಿಬಿಟ್ಟಿದೆ. ಅದು ಯಾವ ಪರಿಯ ಗಲಾಟೆ ಎಂದರೆ ಒಬ್ಬರ ಮೇಲೆ ಒಬ್ಬರು ಆ್ಯಸಿಡ್​ ದಾಳಿ ಮಾಡುವಷ್ಟು ದೊಡ್ಡ ಗಲಾಟೆ. ಕೊನೆಗೆ ಇದು ಪೊಲೀಸ್​ ಠಾಣೆ ಮೆಟ್ಟಿಲೂ ಏರಿಬಿಟ್ಟಿದೆ!

ನಾಲ್ಕು ಮಕ್ಕಳ ಜೊತೆ ಮನೆ ಸೇರಿತು

ಅಷ್ಟಕ್ಕೂ ಆಗಿದ್ದೇನೆಂದ್ರೆ, ಪಕ್ಕದ ಮನೆಯ ಗಂಡು ಬೆಕ್ಕಿನ ಸಹವಾಸದಿಂದ ಮರಿ ಮಾಡಿಕೊಂಡ ಈ ಹೆಣ್ಣು ಬೆಕ್ಕು ನಾಲ್ಕು ಮಕ್ಕಳನ್ನು ಕರೆದುಕೊಂಡು ತನ್ನ ಮನೆ ಸೇರಿದೆ. ಇದು ಆ ಮನೆ ಮಾಲೀಕರಿಗೆ ವಿಪರೀತ ಕೋಪ ಬರಿಸಿಬಿಟ್ಟಿದೆ. ಬಹುಶಃ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲವೇನೋ. ಆದ್ರೆ ಪಾಪ ಆ ಬೆಕ್ಕಿಗೆ ಈ ವಿಷ್ಯ ಗೊತ್ತಿರಬೇಕಲ್ಲ. ಆದ್ದರಿಂದ ಈ ಮಕ್ಕಳ ಅಪ್ಪ ನಿಮ್ಮ ಮನೆಗೆ ಸೇರಿದ್ದು ಎಂದು ಶುರುವಾದ ಗಲಾಟೆ ಅತಿರೇಕಕ್ಕೆ ಹೋಗಿ ಪೊಲೀಸರು ಎಂಟ್ರಿ ಕೊಡಬೇಕಾಯ್ತು.

ಅಮ್ಮ-ಮಕ್ಕಳು ದೂರ

ಅಷ್ಟಕ್ಕೇ ಸುಮ್ಮನಾಗದ ಮನೆ ಮಾಲೀಕರು ಅಮ್ಮನಿಂದ ಮಕ್ಕಳನ್ನು ದೂರ ಮಾಡಿಬಿಟ್ಟಿದ್ದಾರೆ. ಮರಿಗಳನ್ನು ಎಲ್ಲೆಲ್ಲೋ ಬಿಟ್ಟುಬಂದಿದ್ದಾರೆ. ಇದೀಗ ಅಮ್ಮ, ಮರಿಗಳಿಗಾಗಿ ಕಣ್ಣೀರು ಹಾಕುತ್ತಿವೆ. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಎರಡೂ ಮನೆಯವರನ್ನು ಸಮಾಧಾನವೇನೋ ಮಾಡಿದ್ರು. ಆದರೆ ಇವರ ಜಗಳದ ನಡುವೆ ಅಮ್ಮ-ಮಕ್ಕಳು ದೂರವಾಗಿದ್ದಾರೆ ಎನ್ನಲಾಗಿದೆ. ಎಲ್ಲದಕ್ಕೂ ಕಾರಣವಾಗಿರೋ ಗಂಡು ಬೆಕ್ಕು ಮಾತ್ರ ನೆಮ್ಮದಿಯಿಂದ ಇನ್ನೊಂದು ಹೆಣ್ಣನ್ನು ಹುಡುಕಿ ಹೊರಟಿದೆ!