ಖುಷಿಯಾಗಿ ಬದುಕೋದು ಹೇಗೆ?: ಪರಮ ಪೋಲಿ ಗುರು ಖುಷ್ವಂತ್ ಸಿಂಗ್ ಹೇಳಿದ 10 ಸೂತ್ರ
ಚಂದದ ಬರವಣಿಗೆ, ಅಷ್ಟೇ ಚಂದದ ಬದುಕು ಮತ್ತು ಅದ್ಭುತ ಸ್ಕಾಚ್ ವ್ಹಿಸ್ಕಿಯ ಜತೆಗೆ ಜೀವನ ಕಳೆದ ಖುಷ್ವಂತ್ ಸಿಂಗ್ ಬದುಕಿನ ಬಗ್ಗೆ ನೂರೆಂಟು ಬರೆದಿದ್ದಾರೆ. ಅದರಲ್ಲಿ ಮುಖ್ಯವಾದುದು ಈ ಟೆನ್ ಕಮಾಂಡ್‌ಮೆಂಟ್ಸ್ ಅಥವಾ ಹತ್ತು ಸೂತ್ರಗಳು. ನೀವೇ ಓದಿ.
ಸದಾ ಸುತ್ತಮುತ್ತಲಿನವರನ್ನು ಪ್ರೀತಿಸುತ್ತಾ, ಕೆಲವರ ಜತೆ ಮುಲಾಜಿಲ್ಲದೆ ಜಗಳವಾಡುತ್ತಾ, ಸುತ್ತ ಸುಂದರಿಯರನ್ನು ಇಟ್ಟುಕೊಂಡು, ಬೇಕಾದಂತೆ ಸ್ಕಾಚ್ ಹೀರುತ್ತಾ, ಬದುಕನ್ನು ಉತ್ಸವದಂತೆ ಬದುಕಿ ಎದ್ದು ಹೋದ ವ್ಯಕ್ತಿ ಖುಷ್ವಂತ್ ಸಂಗ್. ಅವರು ಬದುಕಿದ್ದೂ ಹಾಗೇ, ಬರೆದದ್ದೂ ಹಾಗೇ. ಸುಖವಾಗಿ, ಆನಂದವಾಗಿ ಬದುಕೋಕೆ ಮತ್ತು ಯಾವುದೇ ಬೇಜಾರಿಲ್ದೇ ಸಾಯೋಕೆ ಏನು ಬೇಕು? ಖುಷ್ವಂತಜ್ಜ ಹೇಳಿದಂತೆ ಅದಕ್ಕಿರೋ ಸೂತ್ರಗಳು ಹತ್ತು. ಅವು ಇಲ್ಲಿವೆ.
1. ಒಳ್ಳೆಯ ಆರೋಗ್ಯ
ಚೆನ್ನಾಗಿ ಬದುಕೋಕೆ ಮೊದಲ ಮತ್ತು ಅಗ್ರಗಣ್ಯ ಅಂಶವೆಂದರೆ ಸರಿಯಾದ ಆರೋಗ್ಯ. ಉತ್ತಮ ಆರೋಗ್ಯವನ್ನು ಹೊಂದಿಲ್ಲದಿದ್ದರೆ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಒಳ್ಳೆಯ ತಿಂಡಿಯಾಗಲೀ, ಪಾನೀಯವಾಗಲೀ, ಬಟ್ಟೆಯಾಗಲೀ, ಎಲ್ಲವನ್ನು ಅನುಭವಿಸೋಕೆ ಸರಿಯಾದ ಆರೋಗ್ಯ ಬೇಕೇ ಬೇಕು. ಯಾವುದೇ ಕಾಯಿಲೆ, ಅದು ಎಷ್ಟೇ ಕ್ಷುಲ್ಲಕವಾಗಿದ್ದರೂ, ನಿಮ್ಮ ಸಂತೋಷವನ್ನು ಕಡಿತಗೊಳಿಸುತ್ತದೆ.
2. ಒಳ್ಳೇ ಬ್ಯಾಂಕ್ ಬ್ಯಾಲೆನ್ಸ್ (Bank Balance)
ಎರಡನೆಯದು ಆರೋಗ್ಯಕರ ಬ್ಯಾಂಕ್ ಬ್ಯಾಲೆನ್ಸ್. ಇದು ಕೋಟಿಗಳಲ್ಲಿರುವ ಅಗತ್ಯವಿಲ್ಲ. ಆದರೆ ನಿಮ್ಮ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಕಾಗುವಷ್ಟಿರಬೇಕು. ಮತ್ತು ಮನರಂಜನೆಗಾಗಿಯೂ ಅಷ್ಟು ಉಳಿಯಬೇಕು. ಹೊರಗೆ ಓಡಾಟ, ಚಲನಚಿತ್ರಗಳಿಗೆ ಹೋಗುವುದು, ಪ್ರವಾಸ, ರಜಾದಿನಗಳ ಮಜಾ ಇತ್ಯಾದಿಗಾಗಿ. ಹಣದ ಕೊರತೆಯು ಖಿನ್ನತೆಯನ್ನು ಉಂಟುಮಾಡಬಹುದು. ಸಾಲದ ಮೇಲೆ ಬದುಕುವುದು ಕೀಳರಿಮೆ ಉಂಟುಮಾಡುತ್ತೆ. ನಿಮ್ಮನ್ನು ನಿಮ್ಮ ಹಾಗೂ ಇತರರ ದೃಷ್ಟಿಯಲ್ಲಿ ತಗ್ಗಿಸುತ್ತದೆ.
3. ಸ್ವಂತ ಮನೆ (Own House)
ಮೂರನೆಯದಾಗಿ, ನಿಮ್ಮ ಸ್ವಂತ ಮನೆ. ಬಾಡಿಗೆಗೆ ಪಡೆದ ಸ್ಥಳಗಳು ನಿಮಗೆ ಎಂದಿಗೂ ನಿಮ್ಮ ಸ್ವಂತ ಮನೆಯ ಸೌಕರ್ಯ ಅಥವಾ ಭದ್ರತೆಯನ್ನು ನೀಡುವುದಿಲ್ಲ. ಮನೆಯಲ್ಲಿ ಸಣ್ಣ ಉದ್ಯಾನ ಇದ್ದರೆ ತುಂಬಾ ಉತ್ತಮ. ನಿಮ್ಮದೇ ಸ್ವಂತ ಗಿಡಗಳನ್ನು ನೆಟ್ಟು, ಅವು ಬೆಳೆಯುವುದನ್ನು ಮತ್ತು ಹೂವು ಅರಳುವುದನ್ನು ನೋಡಿ. ಅದರೊಂದಿಗೆ ರಕ್ತಸಂಬಂಧದ ಭಾವನೆಯನ್ನು ಬೆಳೆಸಿಕೊಳ್ಳಿ.
ಕಚ್ಚೆ ಸೀರೆಯುಟ್ಟು ಅಜ್ಜಿಯ ಜಬರ್ದಸ್ತ್ ಡಾನ್ಸ್: ವೈರಲ್ ವೀಡಿಯೋ
4. ಅರ್ಥ ಮಾಡಿಕೊಳ್ಳುವ ಒಡನಾಡಿ (Companion)
ನಾಲ್ಕನೆಯದು ನಿಮ್ಮ ಬಗ್ಗೆ ತಿಳುವಳಿಕೆ ಇರುವ ಒಡನಾಡಿ. ಅದು ನಿಮ್ಮ ಸಂಗಾತಿಯಾಗಿರಬಹುದು ಅಥವಾ ಸ್ನೇಹಿತರಾಗಿರಬಹುದು. ಜತೆಯಲ್ಲಿರುವವರ ಜತೆ ತುಂಬಾ ತಗಾದೆ ಹೊಂದಿದ್ದರೆ ಅದು ನಿಮ್ಮ ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳುತ್ತದೆ. ಸದಾ ಜಗಳವಾಡುವುದಕ್ಕಿಂತ ವಿಚ್ಛೇದನ (Divorce) ಪಡೆಯುವುದು ಉತ್ತಮ.
5. ಅಸೂಯೆ ಇಲ್ಲದಿರುವಿಕೆ
ಐದನೆಯದಾಗಿ, ಜೀವನದಲ್ಲಿ ನಿಮಗಿಂತ ಉತ್ತಮ ಸ್ಥಿತಿಗೆ ಹೋದವರ ಬಗ್ಗೆ ಅಸೂಯೆಪಡುವುದನ್ನು ನಿಲ್ಲಿಸಿ. ನಿಮಗಿಂತ ಅಧಿಕಾರ ಅಥವಾ ಶ್ರೀಮಂತಿಕೆಯಲ್ಲಿ ಅಥವಾ ಖ್ಯಾತಿಯಲ್ಲಿ ಹೆಚ್ಚು ಎತ್ತರಕ್ಕೆ ಏರಿದವರನ್ನು ನೋಡುತ್ತಾ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ ನೆಮ್ಮದಿ ನಾಶವಾಗುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ತಪ್ಪಿಸಿ.
6. ಗಾಸಿಪ್ ಮಾಡಬೇಡಿ
ಆರನೆಯದಾಗಿ, ಜನರು ನಿಮ್ಮ ಬಗ್ಗೆಯಾಗಲೀ, ನಿಮ್ಮ ಹತ್ತಿರ ಬಂದು ಇತರರ ಬಗ್ಗೆಯಾಗಲೀ ಗಾಸಿಪ್(Gossip) ಮಾಡಲು ಬಿಡಬೇಡಿ. ನಿಮ್ಮ ನಡೆನುಡಿ ಸ್ಪಷ್ಟವಾಗಿದ್ದರೆ ನೀವು ಗಾಸಿಪ್‌ಗೆ ಒಳಗಾಗುವುದಿಲ್ಲ. ಹಾಗೇ ಇತರರ ಬಗೆಗಿನ ಗಾಸಿಪ್‌ನಿಂದ ನಿಮ್ಮ ಸಮಯ ಹಾಳು. ಇದರಿಂದ ನಿಮ್ಮ ಮನಸ್ಸು ಕಹಿಯಾಗುತ್ತದೆ.
7. ಚಂದದ ಹವ್ಯಾಸ
ಏಳನೆಯದಾಗಿ ಚಂದದ ಹವ್ಯಾಸವೊಂದು ನಿಮ್ಮದಾಗಿರಲಿ. ತೋಟಗಾರಿಕೆ, ಓದುವಿಕೆ, ಬರವಣಿಗೆ, ಚಿತ್ರಕಲೆ, ವಾದ್ಯ ನುಡಿಸುವುದು ಅಥವಾ ಸಂಗೀತವನ್ನು ಕೇಳುವುದು ಇತ್ಯಾದಿ. ಬಿಟ್ಟಿ ಡ್ರಿಂಕ್ಸ್‌ಗಾಗಿ ಅಥವಾ ಸೆಲೆಬ್ರಿಟಿಗಳನ್ನು ಭೇಟಿ ಮಾಡಲು ಕ್ಲಬ್‌ಗಳು ಅಥವಾ ಪಾರ್ಟಿಗಳಿಗೆ ಹೋಗುವುದು ಸಮಯ ವ್ಯರ್ಥ ಮಾಡುತ್ತದೆ. ನಿಮ್ಮನ್ನು ಅರ್ಥಪೂರ್ಣವಾಗಿ ಆವರಿಸುವ ಯಾವುದನ್ನಾದರೂ ಕೇಂದ್ರೀಕರಿಸಿ.
8. ಆತ್ಮಾವಲೋಕನ (Self Introspection)
ಎಂಟನೆಯದಾಗಿ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 15 ನಿಮಿಷಗಳನ್ನು ಆತ್ಮಾವಲೋಕನಕ್ಕೆ ಮೀಸಲಿಡಿ. ಬೆಳಿಗ್ಗೆ 10 ನಿಮಿಷಗಳು ಮನಸ್ಸನ್ನು ಸಂಪೂರ್ಣವಾಗಿ ನಿಶ್ಚಲವಾಗಿರಿಸಲು ಮತ್ತು ಐದು ನಿಮಿಷಗಳನ್ನು ನೀವು ಆ ದಿನ ಮಾಡಬೇಕಾದ ಕೆಲಸಗಳನ್ನು ಪಟ್ಟಿ(Work list) ಮಾಡಬೇಕು. ಸಂಜೆಯ ಸಮಯದಲ್ಲಿ, ಮನಸ್ಸನ್ನು ನಿಶ್ಚಲವಾಗಿರಿಸಲು ಐದು ನಿಮಿಷಗಳನ್ನು ಮೀಸಲಿಡಬೇಕು ಮತ್ತು ಮಾಡಿದ ಕೆಲಸಗಳ ಪರಿಶೀಲನೆಗೆ 10 ನಿಮಿಷ ಮೀಸಲಿಡಬೇಕು.
ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!
9. ಕೋಪಕ್ಕೆ ಬಲಿಯಾಗಬೇಡಿ
ಒಂಬತ್ತನೆಯದ ಅಂಶವೆಂದರೆ, ಕೋಪಕ್ಕೆ(Anger) ನಿಮ್ಮತನವನ್ನು ಕಳೆದುಕೊಳ್ಳಬೇಡಿ. ಕೋಪಗೊಳ್ಳದಿರಲು ಪ್ರಯತ್ನಿಸಿ. ಸೇಡು ತೀರಿಸಿಕೊಳ್ಳುವುದು ಅಗತ್ಯವೇ ಎಂದು ಯೋಚಿಸಿ. ನಿಮ್ಮ ಪ್ರೀತಿಗೆ(Love) ಅರ್ಹರಲ್ಲದವರು ನಿಮ್ಮ ಕೋಪಕ್ಕೆ ಅರ್ಹರಲ್ಲ. ಪ್ರೀತಿಗೆ ಅರ್ಹರಾದವರೂ ಕೋಪಕ್ಕೆ ಅರ್ಹರಲ್ಲ!
10. ವಿಷಾದವಿಲ್ಲದ ನಿರ್ಗಮನ
ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಅಂತಿಮ ಸಮಯ ಬಂದಾಗ, ಯಾರ ವಿರುದ್ಧವೂ(against) ಅಥವಾ ಬದುಕಿನ ವಿರುದ್ಧವೂ ಯಾವುದೇ ವಿಷಾದ ಅಥವಾ ಅಸಮಾಧಾನವಿಲ್ಲದೆ ಉಸಿರು ಚೆಲ್ಲಬೇಕು. ನಿಮ್ಮನ್ನು ಕಳೆದುಕೊಂಡವರು ನಿಮ್ಮ ನಿರ್ಗಮನಕ್ಕಾಗಿ ದುಃಖಿಸಬೇಕೇ ಹೊರತು, ನೀವಲ್ಲ.