Asianet Suvarna News Asianet Suvarna News

ಕಾಂತಾರದ ಮೊದಲ ದೃಶ್ಯ: ಅಮ್ಮ ತಬ್ಬಿಕೊಂಡ ಹಾಗೆ, ಮಾವನ ಪ್ರೀತಿ ಬೇಕೆಂದು ಹೇಳುವುದ್ಯಾಕೆ?

ವಿಶ್ವಾದ್ಯಂತ ಸದ್ಯ 'ಕಾಂತಾರ'ದ್ದೇ ಸುದ್ದಿ. ಕರಾವಳಿಯ ದೈವಕೋಲದ ಸುಂದರ ಸ್ಟೋರಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ ನೆರೆ ರಾಜ್ಯಗಳಲ್ಲೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ವಿದೇಶಗಳಲ್ಲೂ ನೆಟ್ಟಿಗರು ಸಿನಿಮಾವನ್ನು ಬಹಳಷ್ಟು ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಆರಂಭದಲ್ಲಿ ಸಂಬಂಧವನ್ನು ಸುಂದರವಾಗಿ ಬಿಡಿಸಲಾಗಿದೆ. ಆ ಬಗ್ಗೆ ಹೆಚ್ಚು ತಿಳಿಯೋಣ..
 

Kanthara movie Scene: Why Its That Mothers Hug And Uncles Hug Vin
Author
First Published Oct 21, 2022, 2:54 PM IST

ಬರಹ: ಸುಧೀರ್ ಸಾಗರ್‌

ರಿಷಬ್‌ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಕಾಂತಾರ ಚಿತ್ರ ಸದ್ಯ ರಾಜ್ಯದ ಮನ ಗೆದ್ದಿದೆ.  ವಿವಿಧ ಭಾಷೆಯ ನಟ-ನಟಿಯರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ, ದೇಶ ವಿದೇಶಗಳಲ್ಲೂ ಚಿತ್ರ ಸಖತ್ ಫೇಮಸ್ ಆಗಿದೆ. ಸಿನಿಮಾದ ಪ್ರತಿಯೊಂದು ಪಾತ್ರಗಳು, ಸಂಭಾಷಣೆಯನ್ನು ಜನರು ಮತ್ತೆ ಮತ್ತೆ ಹೇಳಿ ಖುಷಿ ಪಡುತ್ತಿದ್ದಾರೆ. ಹಾಗೆ ವೈರಲ್ ಆಗಿರುವ ಒಂದು ವಿಚಾರವೆಂದರೆ ಕಾಂತಾರ ಸಿನಿಮಾದ ಆರಂಭದಲ್ಲಿ ಬರುವ ಸೀನ್‌. 'ಅಮ್ಮ ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ' ಎಂಬ ವಿಚಾರ ಬಹಳಷ್ಟು ಜನರಲ್ಲಿ ಗೊಂದಲ ಮೂಡಿಸಿದೆ. ಅಮ್ಮ ಅಂದ್ಮೇಲೆ ಅಲ್ಲಿ ಅಪ್ಪ ಅಂತ ಹೇಳದೆ, ಮಾವ ಅಂತ ಯಾಕೆ ಹೇಳಿದರು ಎಂಬ ಪ್ರಶ್ನೆ ಎದುರಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ. 

ಕಾಂತಾರಾ ಚಿತ್ರದ (Kanthara Movie) ಮೊದಲ‌ ದೃಶ್ಯ..ಕಾಡಿನ ಮಧ್ಯದಿಂದ ಇದ್ದಕ್ಕಿದ್ದಂತೆ ಗಗ್ಗರದ ಶಬ್ಧ ಕೇಳಿ ಬರೋಕೆ ಶುರುವಾಗುತ್ತೆ. ರಾಜನಿಗೆ ಆ ಶಬ್ಧ ಕೇಳಿ ಹೆದರಿಕೆ (Fear) ಆಗೋದಿಲ್ಲ, ಅಮ್ಮ (Mother) ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ ಭಾಸವಾಗುತ್ತದೆ. ಒಂದು ಕಲ್ಲಿನ ಮುಂದೆ ಬಂದು ನಿಲ್ತಾನೆ. ಅದನ್ನು ನೋಡ್ತಿದ್ದಂತೆಯೇ ರಾಜನಿಗೆ ಕಣ್ಣಲ್ಲಿ ನೀರು ಇನ್ನಿಲ್ಲದ ನೆಮ್ಮದಿ ನಿರಾಳತೆ. ಅಮ್ಮ ತಬ್ಬಿಕೊಂಡ ಹಾಗೆ, ಮಾವ (Uncle) ತಲೆ ಸವರಿದ ಹಾಗೆ..ಈ ಸೀನಲ್ಲಿ ಈ ಡೈಲಾಗ್, ಅದೂ ಒಟ್ಟೊಟ್ಟಿಗೇ ಎರಡೆರಡು ಸಲ ರಿಪೀಟ್ ಮೋಡಲ್ಲಿ ಬರೋದ್ ಕೇಳಿ ಇದೇನಿದು? ಅಮ್ಮ ಅಂದವ್ನು ನಂತರ ಅಪ್ಪ ಅನ್ನದೆ ಮಾವ ಅಂತಿದಾನಲ್ಲ ಏನ್ ವಿಷ್ಯ ಅಂತ ನಿಮ್ಗೂ ಅನ್ನಿಸಿರಬಹುದು.

Kantara ನೋ ಕಾಮೆಂಟ್ಸ್‌ ಅಂದರೆ.....ನೋ ಕಾಮೆಂಟ್ಸ್‌; ವಿವಾದದ ಬಗ್ಗೆ ರಿಷಬ್ ಶೆಟ್ಟಿ ಮಾತು

ಇಲ್ಲಿ ಮಾವ ಅಂದರೆ ಸೋದರ ಮಾವ.(ತಾಯಿಯ ಅಣ್ಣ ಅಥವಾ ತಮ್ಮ). ನಮ್ಮದು ಅಂದರೆ ಕರಾವಳಿಯವರದ್ದು(ಶೆಟ್ಟರು ಮಾತ್ರವಲ್ಲ ಬಹುಪಾಲು ಜನರದ್ದು) ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ಅಂದರೆ ಮನೆಯ ಮುಖ್ಯಸ್ಥೆ ಹಾಗೂ ಸಂಪೂರ್ಣ ಉಸ್ತುವಾರಿ ತಾಯಿಯದ್ದಾದರೆ, ಕುಟುಂಬದ ಯಜಮಾನ ಹಾಗೂ ಮುಖಂಡತ್ವ ತಾಯಿಯ ಅಣ್ಣ (Mothers brother) ಅಥವಾ ತಮ್ಮನಾದ ಸೋದರಮಾವನದ್ದಾಗಿರುತ್ತೆ. ಹಾಗಾಗಿ ಕುಟುಂಬದ (Family) ಯಾವುದೇ ಕಾರ್ಯಕ್ರಮವಿರಲಿ ಅದರ ಮೇಲ್ವಿಚಾರಣೆ ಹಾಗೂ ಕುಟುಂಬದಲ್ಲಿನ ಯಾವುದೇ ಕಿತ್ತಾಟ ಅಥವಾ ವ್ಯಾಜ್ಯಗಳ ಅಂತಿಮತೀರ್ಪು ಎಂದಿಗೂ ಸೋದರಮಾವನದ್ದು.ಇದನ್ನು ಅಳಿಯ ಸಂತಾನ ಅಥವಾ ಅಳಿಯಕಟ್ಟು ಅಂತಾನೂ ಕರೀತಾರೆ. ಆತ ತನ್ನ ಮಕ್ಕಳಿಗಿಂತಲೂ ಹೆಚ್ಚು ಕಾಳಜಿ (Care) ಹಾಗೂ ಆರೈಕೆ ತನ್ನ ಅಕ್ಕ ಹಾಗೂ ತಂಗಿಯ ಮಕ್ಕಳಲ್ಲಿ ತೋರುತ್ತಾನೆ. ಒಂದರ್ಥದಲ್ಲಿ ಅವರು ಹುಟ್ಟಿದಾಗಿಂದ ಸಾಯೋ ಕ್ಷಣದವರೆಗೂ ಅವರ ಸಂಪೂರ್ಣ ಜವಾಬ್ದಾರಿಯೂ ಆತನದ್ದೇ..

ಮನೆಯ ಹೆಣ್ಮಕ್ಕಳಿಗೆ ಮಗು ಹುಟ್ಟಿದಾಗ ಅದರ ಚೌಲ, ಕಿವಿ ಚುಚ್ಚಿಸೋದು, ಮಗುವಿಗೆ ಮೊದಲ ಬಾರಿ ಅನ್ನಪ್ರಾಶನ ಕೂಡಾ ಸೋದರ ಮಾವನೇ ಮಾಡಬೇಕು. ಮದುವೆಯ ಸಂದರ್ಭದಲ್ಲೂ, ಲಗ್ನಪತ್ರಿಕೆಯಲ್ಲಿ ಹೆತ್ತವರಿಗಿಂತಲೂ ಮೊದಲು ಇಂತವರ ಅಳಿಯ ಅಥವಾ ಸೊಸೆ ಅಂತ ಬರೆದೇ ನಂತರದಲ್ಲಿ ಇಂತವರ ಮಗ/ಮಗಳು ಅಂತ ಬರೆಯಲಾಗುತ್ತೆ. ಮದುಮಗಳನ್ನು ಮದುವೆ ಮಂಟಪಕ್ಕೆ ಕರೆದು ತರೋದೂ ಹಾಗೂ ಮದುಮಗಳನ್ನು ಧಾರೆ ಎರೆಯೋದು ಕೂಡಾ ಸೋದರಮಾವನೇ. ಇವೆಲ್ಲಾ ಕಾರಣಗಳಿಗಾಗಿ ಇಡೀ ಕುಟುಂಬದಲ್ಲಿ ಮನೆಮಂದಿಯಾದಿಯಾಗಿ ಮಕ್ಕಳಿಗೆಲ್ಲಾ ಮಾವನೆಂದರೆ ಅತೀವ ಭಯ ಭಕ್ತಿ... ಹಾಗಾಗಿಯೇ ಕರಾವಳಿಯಾದ್ಯಂತ ಒಂದು ಮಾತು ವಾಡಿಕೆಯಲ್ಲಿದೆ. ನಮ್ಮ ಮಕ್ಕಳು ತಗ್ಗಿಬಗ್ಗಿ ನಡೆಯೋದು ಇಬ್ಬರಿಗೆ ಮಾತ್ರ. ಒಂದು ದೈವ, ಮತ್ತೊಂದು ಸೋದರಮಾವ ಅಂತ..ಇದು ಅಲ್ಲಿನ ಕುಟುಂಬದಲ್ಲಿ ಸೋದರಮಾವನ ಸ್ಥಾನಕ್ಕಿರೋ ತೂಕಕ್ಕೊಂದು ನಿದರ್ಶನ.

ಕಾಂತಾರ ಬಗ್ಗೆ ಕಿರಿಕ್ ಬೆಡಗಿ ಮೌನ: ಅವರು ತುಂಬಾ ಬ್ಯುಸಿ ಅಂದ್ರು ಪ್ರಮೋದ್ ಶೆಟ್ಟಿ!

ಈ ಕಾರಣಗಳಿಗಾಗಿಯೇ, ಹೆತ್ತವರನ್ನು (Parents) ಕಳೆದುಕೊಂಡವನಲ್ಲ, ಸೋದರ ಮಾವನನ್ನು ಕಳೆದುಕೊಂಡವನು ನಿಜವಾದ ಅನಾಥ ಎಂಬ ಮಾತೇ ಇದೆ ಇಲ್ಲಿ. ಹಾಗಂತ ಇದೇನೂ ನಮ್ಮಿಷ್ಟದಂತೆ ಆಯ್ದುಕೊಳ್ಳೋ ಅಥವಾ ಇಷ್ಟವಿಲ್ಲ ಎಂದೆನಿಸಿದಾಗ ಜವಾಬ್ದಾರಿಯಿಂದ ಕೈತೊಳೆದುಕೊಂಡು ಬಿಡಬಹುದಾದ ವಿಷಯವಲ್ಲ. ಪ್ರತೀಬಾರಿ ಪೂಜೆ (Pooja) ಸಂದರ್ಭದಲ್ಲಿಯೂ ದೈವ ಮನವರಿಕೆ ಮಾಡೋ, ನೆನಪಿಸೋ ಕಾರ್ಯ ಮಾಡೋ, ಅದೆಂತಾ ಪರಿಸ್ಥಿತಿಯಲ್ಲೂ ಪಾಲಿಸಲೇಬೇಕಾದ ಕಟ್ಟಳೆ, ತಲತಲಾಂತರಗಳಿಂದ ನಡೆದುಕೊಂಡು ಬರುತ್ತಿರೋ ದೈವ ನಿರ್ಣಯ. 

ಇಲ್ಲಿ ತಂದೆಯ ಸ್ಥಾನ ನಾಮಕಾವಸ್ತೆಗಷ್ಟೇ..ಆತ ಹೋದ ಮನೆಗೆ ಕೊನೆಯವರೆಗೂ ನೆಂಟನಾಗಿಯೇ ಉಳಿದುಬಿಡುತ್ತಾನೆ, ಏಕೆಂದರೆ ತಂದೆಗಿಂತಲೂ (Father) ಸೋದರಮಾವನಾಗಿಯೇ ಆತನ ಅಸ್ತಿತ್ತ್ವ. ಹಾಗಾಗಿಯೇ ಬದುಕಿದ್ದಷ್ಟೂ ದಿನ ಆತ ಸೋದರಮಾವನಾಗಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಸಾಗುವ ಕಾರಣ, ಸತ್ತ ನಂತರದಲ್ಲಿ ವಿಧಿವಿಧಾನಗಳ ಸಂಪೂರ್ಣ ಹೊಣೆಗಾರಿಕೆಯೆಲ್ಲವೂ ಆತನ ಸಹೋದರಿಯರ ಹೆಗಲಿಗೆ ಹೋಗುತ್ತದೆ. ಸತ್ತಾಗ ಆತನ ಹೆಣವೂ ಮಡದಿ ಮಕ್ಕಳಿರುವಲ್ಲಿಗಲ್ಲ, ಆತನ ಸಹೋದರಿಯರಿರೋ ತವರುಮನೆಗೆ ಹೋಗುತ್ತದೆ. ಆತನ ಅಂತಿಮ ಸಂಸ್ಕಾರ, ಅಸ್ಥಿ ವಿಸರ್ಜನೆಯಂತಹ ವಿಧಿ ವಿಧಾನಗಳೆಲ್ಲವೂ ಆತನ ತವರಿನ ಮನೆಯಲ್ಲಿಯೇ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ನಂತರದಲ್ಲಿ ಹಬ್ಬ ಹರಿದಿನಗಳಾದಾಗ ಆತನಿಗೆ ಮೀಸಲು ಇಡೋ (ಆತನ ಹೆಸರಿನಲ್ಲಿ ಅಡುಗೆ ಬಡಿಸಿ ಇಡೋ), ಪ್ರತೀವರ್ಷ ಆತನ ಶ್ರಾದ್ಧ ಕಾರ್ಯ ಮಾಡೋದೆಲ್ಲವೂ ಸಹೋದರಿಯರ ಜವಾಬ್ದಾರಿ.

ಅದ್ಭುತ, ಮಾಸ್ಟರ್ ಪೀಸ್; 'ಕಾಂತಾರ' ನೋಡಿ ಹಾಡಿಹೊಗಳಿದ ಸುದೀಪ್ ಪುತ್ರಿ ಸಾನ್ವಿ

ಎಷ್ಟು ಎಂದರೆ ಆತ ಸತ್ತಾಗ (Death) ಸೂತಕವೂ ಆತನ ಅಕ್ಕ/ತಂಗಿ ಹಾಗೂ ಅವರ ಮಕ್ಕಳಿಗೆ ಇರುತ್ತದೆಯೇ ಹೊರತು ಸತ್ತಾಗ ಆತನ ಮಡದಿ ಮಕ್ಕಳಿಗೆ ಆತನ ಸೂತಕ ಕೂಡಾ ಇರೋದಿಲ್ಲ. ಹಾಗಾಗಿ ಕರಾವಳಿಯ ಮಕ್ಕಳಿಗೆ ತೋಳು ಅಮ್ಮನದ್ದಾದರೆ, ಹೆಗಲು ಯಾವತ್ತಿಗೂ ಸೋದರ ಮಾವನದ್ದೇ...ಆತನೇ ಪಿತೃಸಮಾನ. ಹಾಗಾಗಿಯೇ ಕರಾವಳಿ ಭಾಗದ ಜನಗಳಿಗೆ, ಕರ್ನಾಟಕದ ಇತರೆ ಭಾಗಗಳಲ್ಲಿ ವಾಡಿಕೆಯಲ್ಲಿರೋ ಸೋದರ ಮಾವನನ್ನೇ ಅಕ್ಕ/ತಂಗಿಯ ಮಕ್ಕಳಿಗೆ ಮದುವೆ ಮಾಡಿಸೋ ಪದ್ದತಿ, ಮುಸ್ಲಿಮರಲ್ಲಿನ ಸ್ವಂತ ಅಕ್ಕ ತಂಗಿಯ ಮಕ್ಕಳಲ್ಲೇ ಮದುವೆ ಮಾಡಿಸುವ ಆಚರಣೆಯಂತೆಯೇ ಜೀರ್ಣಿಸಿಕೊಳ್ಳೋದು ಕಷ್ಟ ಕಷ್ಟ. ಎಷ್ಟು ಚಂದವಾಗಿ ಒಂದೇ ಲೈನಲ್ಲಿ ಇಂತಹದ್ದೊಂದು ಆಚರಣೆ ಹಾಗೂ ಮಾವ ಅಳಿಯನ ಸಂಬಂಧದ ಅಗಾಧತೆಯೆಂತದ್ದು ಎಂಬುದನ್ನು ಕಟ್ಟಿಕೊಟ್ಟಿದಾರಲ್ವಾ ರಿಶಭ್ ಶೆಟ್ರು.

Follow Us:
Download App:
  • android
  • ios