ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮನೆಯಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಕುರಿತಂತೆ ಆಪ್‌ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (39) ಗಂಭೀರ ಆರೋಪ ಮಾಡಿದ್ದಾರೆ

ನವದೆಹಲಿ (ಮೇ.17): ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮನೆಯಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಕುರಿತಂತೆ ಆಪ್‌ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (39) ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಘಟನೆ ನಡೆದು 4 ದಿನಗಳಾದರೂ ಈ ಕುರಿತು ಸ್ವಾತಿ ಅಧಿಕೃತ ದೂರು ನೀಡಿರಲಿಲ್ಲ. ಈ ನಡುವೆ ಗುರುವಾರ ಪೊಲೀಸರು ಸ್ವಾತಿ ಮನೆಗೆ ಆಗಮಿಸಿ ಹೇಳಿಕೆ ದಾಖಲಿಸಿಕೊಂಡರು.

ವಿಶೇಷ ಸೌಲಭ್ಯ ನೀಡಿದಂತೆ ಕೇಜ್ರಿಗೆ ಸುಪ್ರೀಂ ಜಾಮೀನು: ಅಮಿತ್ ಶಾ ಅತೃಪ್ತಿ

ತೀವ್ರ ಹಲ್ಲೆ:

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ‘ನಾನು ಮುಖ್ಯಮಂತ್ರಿ ಅವರ ಭೇಟಿಗೆ ಹೋಗಿದ್ದಾಗ ಬಿಭವ್‌ ಅವಕಾಶ ನಿರಾಕರಿಸಿದರು. ಜೊತೆಗೆ ಏಕಪಕ್ಷೀಯವಾಗಿ ನನ್ನ ಮುಖ, ಹೊಟ್ಟೆ, ಎದೆ ಮತ್ತು ದೇಹದ ಸೂಕ್ಷ್ಮ ಭಾಗಗಳ ಮೇಲೂ ಹಲವು ಬಾರಿ ತೀವ್ರ ಹಲ್ಲೆ ನಡೆಸಿದರು. ಈ ವೇಳೆ ಅವರ ಬಳಿ ನಾನು ಗೋಗರೆದು ತಪ್ಪಿಸಿಕೊಂಡು ಬಂದು ಪೊಲೀಸ್‌ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದೆ’ ಎಂದು ಸ್ವಾತಿ ಹೇಳಿದ್ದಾರೆ.

ಈ ಆಧಾರದ ಮೇಲೆ ಪೊಲೀಸರು ಬಿಭವ್‌ ಮೇಲೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ, ಕ್ರಿಮಿನಲ್‌ ಉದ್ದೇಶ, ಉದ್ದೇಶಪೂರ್ವಕ ಹಲ್ಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. 

ಸ್ವಾತಿ ಮನೆಗೆ ದಿಲ್ಲಿ ಪೊಲೀಸರ ಭೇಟಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಹಲ್ಲೆಯಾಗಿರುವ ಕುರಿತು ಪೊಲೀಸರಿಗೆ ಕರೆ ಮಾಡುವ ಜೊತೆಗೆ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಿದ್ದ ಆಪ್ ಸಂಸದೆ ಸ್ವಾತಿ ಮಲಿವಾಲ್‌ ನಿವಾಸಕ್ಕೆ ದೆಹಲಿ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. 

ಕೇಜ್ರಿವಾಲ್‌ ಒಬ್ಬ ಗೂಂಡಾ: ಬಿಜೆಪಿ

ನವದೆಹಲಿ: ಸ್ವಾತಿ ಮಲಿವಾಲ್‌ ಹಲ್ಲೆ ವಿಚಾರದಲ್ಲಿ ಮೌನ ವಹಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಒಬ್ಬ ಗೂಂಡಾ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಟಿಯಾ, ‘ಕೇಜ್ರಿವಾಲ್‌ಗೆ ಜಾಮೀನು ದೊರೆತು ಬಿಡುಗಡೆಯಾದ ಮೇಲೆ ಮುಖ್ಯಮಂತ್ರಿಯ ರೀತಿ ಬದಲಿಗೆ ಗೂಂಡಾ ರೀತಿ ವರ್ತಿಸುತ್ತಿದ್ದಾರೆ. ತಮ್ಮ ಆಪ್ತ ಭಿಭವ್‌ ಕುಮಾರ್‌ ಮೇಲೆ ಕ್ರಮಕ್ಕೆ ಆದೇಶಿಸುವ ಬದಲು ಅವಳಿ ಸೋದರನಂತೆ ಅವರನ್ನು ಬೆಂಬಲಿಸುವ ನಡೆ ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟೀಕರಣ ನೀಡಬೇಕು ಇಲ್ಲವೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.