Married Life: ಮದುವೆ ಆಗೋದ್ರಿಂದ್ಲೇ ಜೀವನದಲ್ಲಿ ಸಮಸ್ಯೆ ಹೆಚ್ಚಾಗುತ್ತಾ?
ಮದುವೆಯ ಬಗ್ಗೆ ಪ್ರಶ್ನೆಗಳಿರುವುದು ಇಂದಿನ ಸಮಸ್ಯೆಯಲ್ಲ. ಎಲ್ಲ ಕಾಲಕ್ಕೂ ಇದ್ದವು, ಇರುತ್ತವೆ. ಮದುವೆಯೇ ಜೀವನದ ಒತ್ತಡಕ್ಕೆ ಮೂಲವೇ ಎಂದು ಕೇಳಲಾಗುತ್ತದೆ. ಮದುವೆಯ ಬದಲಿಗೆ ಆತ್ಮಸಾಂಗತ್ಯದ ಪರಿಕಲ್ಪನೆ ಇಂದಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಆದರೆ, ಓಶೋ ಪ್ರಕಾರ, ಅದಕ್ಕೂ ಇದಕ್ಕೂ ಭಿನ್ನತೆಯಿಲ್ಲ.
ಮದುವೆ ಎಂದರೆ ಒತ್ತಡದಿಂದ ಕೂಡಿರುವ ಜೀವನ, ವೈವಾಹಿಕ ಜೀವನದ ಬಲೆಯಲ್ಲಿ ಸಿಲುಕಿಕೊಳ್ಳಬಾರದು ಎನ್ನುವ ಯುವಜನರಿದ್ದಾರೆ. ಬಹಳಷ್ಟು ಜನ ಇಬ್ಬರು ಜತೆಯಾಗಿ ದೀರ್ಘಕಾಲ ಬಾಳುವ ವೈವಾಹಿಕ ಸಂಬಂಧಕ್ಕೆ ಗೌರವ ನೀಡುವುದಿಲ್ಲ, ಬದಲಿಗೆ ಇದೊಂದು ನಿರಾಶಾದಾಯಕ ಘಟನೆ ಎಂಬಂತೆ ಪರಿಗಣಿಸುತ್ತಾರೆ. ಮದುವೆಯ ಕುರಿತಾಗಿ ಅನೇಕ ಕೋಟ್ ಗಳನ್ನು ನೋಡಿರುತ್ತೇವೆ. ಹಲವು ಕೋಟ್ ಗಳು ಮದುವೆಯನ್ನು ಮೋಜಿನಂತೆ ನೋಡಿದ್ದರೆ, ಹಲವು ಕಟು ಸತ್ಯವನ್ನು ಮೋಜಿನಂತೆ ಅನಾವರಣಗೊಳಿಸುತ್ತವೆ. ಈ ದೇಶ ಕಂಡ ಮಹಾನ್ ದಾರ್ಶನಿಕರ ಪೈಕಿ ಓಶೋ ರಜನೀಶ್ ಕೂಡ ಒಬ್ಬರು. ಅವರು ಸಹ ಮದುವೆ ವ್ಯವಸ್ಥೆಯನ್ನು ಅಲ್ಲಗಳೆದಿದ್ದರು, ವಿವಾಹದಿಂದಲೇ ಜೀವನದ ಸಮಸ್ಯೆ ಹೆಚ್ಚುತ್ತದೆ ಎಂದೂ ಹೇಳಿದ್ದರು! “ಮದುವೆ ಇಡೀ ವಿಶ್ವವನ್ನು ಮಿನಿಯೇಚರ್ ಸ್ವರೂಪದಲ್ಲಿ ಪ್ರತಿನಿಧಿಸುತ್ತದೆ. ಹಲವು ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತದೆ. ನಿಮಗೆ ಪ್ರೀತಿ ಎಂದರೆ ಗೊತ್ತಿಲ್ಲ ಎನ್ನುವುದನ್ನು, ಸಂಬಂಧಗಳ ಬಗ್ಗೆ ಅರಿವಿಲ್ಲ ಎನ್ನುವುದನ್ನು, ಹೇಗೆ ಸಂವಹನ ಮಾಡಬೇಕು ಎಂದು ಗೊತ್ತಿಲ್ಲದಿರುವುದನ್ನು, ಮತ್ತೊಬ್ಬರೊಂದಿಗೆ ಹೇಗೆ ಬಾಳಬೇಕು ಎಂದು ತಿಳಿದಿಲ್ಲದಿರುವುದನ್ನು ತಿಳಿಸಿಕೊಡುತ್ತದೆ’ ಎಂದು ಓಶೋ ಹೇಳಿದ್ದರು.
ವೈವಾಹಿಕ ವ್ಯವಸ್ಥೆಯ ಬಗ್ಗೆ ತಲೆಮಾರುಗಳಿಂದಲೂ ಅಭಿಪ್ರಾಯಗಳು (Opinions) ಬದಲಾಗುತ್ತಲೇ ಇವೆ, ಮುಂದೆಯೂ ಬದಲಾಗುತ್ತವೆ. ಆದರೆ, ಜನಜೀವನ ಹೇಗಿದೆ ಎಂದರೆ, ಯಾರೋ ಒಬ್ಬರು ಮದುವೆಯಾಗುತ್ತಾರೆ ಎಂದರೆ, ಮತ್ತೊಬ್ಬರೂ ಮದುವೆಯಾಗಬೇಕು, ಅವರಿಗೆ ಇಷ್ಟವಿದೆಯೋ ಇಲ್ಲವೋ ಒಟ್ಟಿನಲ್ಲಿ ಮದುವೆಯಾಗಬೇಕು, ಅನಿವಾರ್ಯವೆಂದಾದರೂ ಮದುವೆಯಾಗಬೇಕು.
ಗಂಡಂಗೆ ಪಾರ್ಟಿ ಮಾಡ್ಬೇಕು, ಹೆಂಡ್ತಿಗೆ ಮನೇಲಿರಬೇಕು, ಇವರಿಬ್ಬರಿಗೆ ಡಿವೋರ್ಸ್ ಬಿಟ್ರೆ ಬೇರೆ ದಾರಿ ಉಂಟಾ?
ಅಲ್ಲದೇ, ಸಾಕಷ್ಟು ಜನರಲ್ಲಿ ವೈವಾಹಿಕ ಜೀವನಕ್ಕೆ (Life) ಬೇಕಾದ ಪ್ರಬುದ್ಧತೆಯೇ (Maturity) ಇರುವುದಿಲ್ಲ. ಸಣ್ಣಪುಟ್ಟದಕ್ಕೂ ಕಿತ್ತಾಡಿಕೊಳ್ಳುವುದಕ್ಕೋಸ್ಕರವೇ ಜತೆಗಿದ್ದಾರೇನೋ ಎನಿಸುವಂತೆ ವರ್ತಿಸುತ್ತಾರೆ. ಅವರನ್ನು ನೋಡಿದ ಬೇರೊಬ್ಬರು ಅಥವಾ ಅವರದ್ದೇ ಮನೆಯ ಮಕ್ಕಳು ಮದುವೆ ಎಂದರೆ ರೇಜಿಗೆ ಪಡುವಂತಾಗುತ್ತದೆ. ಹೀಗಾಗಿಯೇ ಬಹಳಷ್ಟು ಮದುವೆಗಳು ಈ ದೃಷ್ಟಿಕೋನದಿಂದ ವಿಫಲವಾಗುತ್ತದೆ. ಈ ಕುರಿತಾಗಿಯೂ ಸಹ ಓಶೋ ಬಹಳ ಚೆನ್ನಾಗಿ ವಿವರಿಸಿದ್ದಾರೆ.
ವಿವಾಹ ಯಾಕೆ ವಿಫಲವಾಗುತ್ತದೆ?: ಓಶೋ ಪ್ರಕಾರ, ಮದುವೆ ವಿಫಲವಾಗಲು (Fail) ಅನೇಕ ಕಾರಣಗಳಿವೆ. ಮೊದಲ ಕಾರಣವೆಂದರೆ, ನಾವು ವಿವಾಹಕ್ಕೆ ಅತ್ಯಂತ ಅನೈಸರ್ಗಿಕ ಗುಣಮಟ್ಟವನ್ನು ನೀಡಿದ್ದೇವೆ. ಅಂದರೆ, ಅದನ್ನೊಂದು ಮಹೋನ್ನತ ಆದರ್ಶದ ಪರಿಕಲ್ಪನೆಯಾಗಿ ಮಾಡಿಬಿಟ್ಟಿದ್ದೇವೆ. ಆದರೆ, ವಾಸ್ತವದಲ್ಲಿ ಹಾಗಿರುವುದಿಲ್ಲ. ಮದುವೆಯನ್ನು ಶಾಶ್ವತ, ತ್ಯಾಗಭರಿತ (Sacrifice) ಕಲ್ಪನೆಯಲ್ಲಿ ನೋಡುತ್ತೇವೆ. ತ್ಯಾಗದ ಎಬಿಸಿ ಗೊತ್ತಿಲ್ಲದಿದ್ದರೂ, ದೈವಿಕವಾದುದರ ಬಗ್ಗೆ ಏನೆಂದರೆ ಏನೂ ತಿಳಿಯದಿದ್ದರೂ ಮದುವೆಗೆ ಅವುಗಳೆಲ್ಲವನ್ನೂ ಆವಾಹಿಸಿಬಿಟ್ಟಿದೇವೆ. ಇಲ್ಲಿ ನಮ್ಮ ಉದ್ದೇಶಗಳು ಒಳ್ಳೆಯವೇ ಆಗಿದ್ದರೂ ಅರ್ಥ ಮಾಡಿಕೊಳ್ಳುವುದು ಏನೂ ಸಾಲದು. ನಮ್ಮ ಅರಿವಿಗೆ (Knowledge) ದೊರೆತಿರುವುದು ಅತ್ಯಲ್ಪ. ಹೀಗಾಗಿ, ಮದುವೆ ಸ್ವರ್ಗವಾಗುವ ಬದಲಿಗೆ ನರಕವನ್ನಾಗಿ ಮಾಡಿಕೊಳ್ಳುತ್ತೇವೆ. ತ್ಯಾಗದ ಬದಲಿಗೆ ಕೆಟ್ಟ ಲೌಕಿಕವಾಗಿಬಿಡುತ್ತದೆ.
ದಶಕವಾದರೂ ರೊಮ್ಯಾಂಟಿಕ್ ಲೈಫ್ ಚೆನ್ನಾಗಿರ್ಬೇಕಂದ್ರೆ ಏನು ಮಾಡಬೇಕು?
ಹಾಗಿದ್ರೆ ಸೋಲ್ ಮೇಟ್ (Soul Mate) ಅಂದ್ರೇನು?: ಓಶೋ ರಜನೀಶ್ ಇದರ ಕುರಿತಾಗಿ ಆಡಿರುವ ಮಾತುಗಳು ಎಲ್ಲರ ಕಣ್ತೆರೆಸುವಂಥವು. “ಇದು ವ್ಯಕ್ತಿಯ ಮೂರ್ಖತೆ (Stupidity). ಆತ್ಮಸಂಗಾತಿ ಅಥವಾ ಆತ್ಮಸಾಂಗತ್ಯ ಎನ್ನುವುದು ಬೇರೆಯಲ್ಲ, ಹಳೆ ಸ್ವರೂಪದ ಹೊಸ ಭಾಷೆ. ಮನುಷ್ಯನಿಗೆ ತಾನೇನು ಬದಲಿಸಲು (Change) ಸಾಧ್ಯವಿಲ್ಲವೋ ಅದಕ್ಕೆ ಹೊಸ ಹೆಸರು ನೀಡುವುದು ಸುಲಭ. ಇದೂ ಸಹ ಅದೇ. ಆದರೆ, ಸಮಸ್ಯೆ ನಿನ್ನಲ್ಲಿದೆ. ಶಬ್ದದಲ್ಲಿಲ್ಲ. ಗುಲಾಬಿ ಹೂವು ಅದೇ ಆಗಿರುತ್ತದೆ. ಅದನ್ನು ಯಾವುದೇ ಶಬ್ದದಲ್ಲಿ ಕರೆದರೂ ಸಹ ಬದಲಾಗುವುದಿಲ್ಲ. ಹಾಗೆಯೇ, ಕಾನ್ಸೆಪ್ಟ್ ಬದಲಾವಣೆ ಮಾಡಿದ ಮಾತ್ರಕ್ಕೆ ಏನೂ ಬದಲಾವಣೆಯಾಗುವುದಿಲ್ಲ. ನಿನ್ನನ್ನು ನೀನು ಬದಲಿಸಿಕೊಳ್ಳಬೇಕು. ಇಲ್ಲವಾದರೆ ಸೋಲ್ ಮೇಟ್, ಮದುವೆ ಎರಡೂ ಒಂದೇ’ ಎಂದು ಹೇಳುತ್ತಾರೆ.
“ನೀವು ಕನ್ನಡಿ ನೋಡಿದರೆ ಅದು ವಿಭಿನ್ನ ಆಯಾಮಗಳಲ್ಲಿ ನಿಮ್ಮನ್ನು ತೋರಿಸುತ್ತದೆ. ಹಾಗೆಯೇ, ಎಲ್ಲ ಆಯಾಮಗಳಲ್ಲಿ ಪ್ರಬುದ್ಧತೆ ಅಗತ್ಯ. ಆದರೆ, ಅಪ್ರಬುದ್ಧ ಮನುಷ್ಯ (Person) ಅದಕ್ಕೇ ಅಂಟಿಕೊಂಡು ಕೂರುತ್ತಾರೆ. ಆದರೆ, ಅದರಾಚೆಗೂ ಹೋಗಬೇಕು’ ಎಂದು ವೈವಾಹಿಕ ಜೀವನದ ಬಗ್ಗೆ ಹೇಳಿದ್ದಾರೆ.