ನೀವು ಎಂದಾದರೂ ಅನುಮಾನದ ಕಣ್ಣಿನಿಂದ ನಿಮ್ಮ ಪತಿಯ ಮೊಬೈಲ್ ಚೆಕ್ ಮಾಡಿದ್ರಾ? ಎಂಬ ಪ್ರಶ್ನೆಯನ್ನು ಒಮ್ಮೆ ಸಂದರ್ಶನವೊಂದರಲ್ಲಿ ಐಶ್ವರ್ಯ ರೈಗೆ ಕೇಳಲಾಗಿತ್ತು.ಇದಕ್ಕೆ ಆಕೆ ಪ್ರಬುದ್ಧವಾದ ಉತ್ತರ ನೀಡಿದ್ದರು. ಅದೇನೆಂದ್ರೆ ‘ನಾನು ಇಲ್ಲಿಯ ತನಕ ಇಂಥ ಕೆಲ್ಸ ಮಾಡಿಲ್ಲ, ಮುಂದೆಯೂ ಮಾಡೋದಿಲ್ಲ.’ ದಾಂಪತ್ಯಕ್ಕೆ ಪ್ರೀತಿ,ಗೌರವ, ನಂಬಿಕೆ ಹಾಗೂ ವಿಶ್ವಾಸವೇ ಅಡಿಪಾಯ. ಈ ಅಡಿಪಾಯ ಗಟ್ಟಿಯಾಗಿದ್ರೆ ಅದೆಂಥದ್ದೇ ಪರಿಸ್ಥಿತಿ ಎದುರಾದ್ರೂ ಪತಿ-ಪತ್ನಿ ಸಂಬಂಧದಲ್ಲಿ ಬಿರುಕು ಮೂಡೋದಿಲ್ಲ. ಮದುವೆಯಾದ ಮೊದಲ ದಿನದಿಂದಲೇ ಇಬ್ಬರು ಸಂಬಂಧದಲ್ಲಿ ಪರಸ್ಪರ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಲು ಪ್ರಾರಂಭಿಸೋದು ಅಗತ್ಯ.ಹಾಗಂತ ಪರ್ಸನಲ್ ಸ್ಪೇಸ್ ಕಳೆದುಕೊಳ್ಳಬೇಕು ಎಂದಲ್ಲ. ವೈಯಕ್ತಿಕ ಹಾಗೂ ವೃತ್ತಿ ಬದುಕು, ಕನಸುಗಳು, ಗುರಿಗಳ ಬಗ್ಗೆ ದಂಪತಿಗಳು ಪರಸ್ಪರ ಮಾಹಿತಿ ಹಂಚಿಕೊಳ್ಳಬೇಕು. ಹೀಗೆ ಮಾಡೋದ್ರಿಂದ ಒಬ್ಬರನ್ನೊಬ್ಬರು ಅರಿಯಲು, ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ. ಅಷ್ಟೇ ಅಲ್ಲ, ಸಮಸ್ಯೆಗಳು ಎದುರಾದಾಗ ಒಟ್ಟಿಗೆ ಅದನ್ನು ನಿಭಾಯಿಸಲು ಕೂಡ ಸಾಧ್ಯವಾಗುತ್ತೆ. 

ದಾಂಪತ್ಯಕ್ಕೆ ಧಮ್ ನೀಡೋ ಅಭ್ಯಾಸಗಳು ಯಾವುವು ಗೊತ್ತಾ?

ಅಪನಂಬಿಕೆಯೇ ಅನುಮಾನಕ್ಕೆ ಮೂಲ
ಜಗತ್ತು ನಿಂತಿರೋದೆ ನಂಬಿಕೆ ಮೇಲೆ. ಸಂಬಂಧ ಕೂಡ ಇದಕ್ಕೆ ಹೊರತಲ್ಲ. ಸಂಬಂಧದಲ್ಲಿ ನಾವು ಯಾವಾಗ ನಂಬಿಕೆ ಕಳೆದುಕೊಳ್ಳುತ್ತೇವೆ ಅಂದ್ರೆ ಕಮ್ಯೂನಿಕೇಷನ್ ಗ್ಯಾಪ್ ಆದಾಗ. ಹೌದು,ಇಬ್ಬರ ನಡುವೆ ಸಂವಹನದ ಕೊರತೆ ಎದುರಾದಾಗ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸುತ್ತವೆ. ಕೆಲವು ವಿಷಯಗಳನ್ನು ಪತಿ ಹಾಗೂ ಪತ್ನಿ ಪರಸ್ಪರ ಹಂಚಿಕೊಳ್ಳಲು ಹಿಂದೇಟು ಹಾಕಿದಾಗ ಸಂಬಂಧದಲ್ಲಿ ಅನುಮಾನ ಮೂಡುತ್ತೆ. ಪತಿ ಅಥವಾ ಪತ್ನಿ ಮೊಬೈಲ್ ಕದ್ದುಮುಚ್ಚಿ ಚೆಕ್ ಮಾಡೋ ಅಭ್ಯಾಸಕ್ಕೆ ಇಂಥ ಅನುಮಾನಗಳೇ ಕಾರಣ. 

ಬೆತ್ತಲೆಯಾಗಿ ಬಾಗಿಲು ಬಡೀತಾರೆ! ಜಾಹೀರಾತು‌ ಆಯ್ತು ವೈರಲ್

ಕದ್ದುಮುಚ್ಚಿ ಸಂಗಾತಿ ಮೊಬೈಲ್ ನೋಡೋದು ಸರಿಯಾ?
ಇಬ್ಬರು ಜೊತೆಯಾಗಿ ಬಾಳ್ವೆ ನಡೆಸಬೇಕು ಎಂದಾಗ ಅಲ್ಲೊಂದಿಷ್ಟು ಹೊಂದಾಣಿಕೆಗಳು ಅಗತ್ಯ.ಇಬ್ಬರಲ್ಲೂ ಕೆಲವೊಂದು ನೆಗೆಟೀವ್ ಅಂಶಗಳಿರುತ್ತವೆ,ಅಭ್ಯಾಸಗಳಿರುತ್ತವೆ. ಅವುಗಳನ್ನು ಒಪ್ಪಿಕೊಂಡು, ಹೊಂದಿಕೊಂಡು ಹೋಗೋದು ಕೆಲವು ಸಂದರ್ಭಗಳಲ್ಲಿ ಅನಿವಾರ್ಯ. ನಾನು ಬಯಸಿದಂತೆಯೇ ಇನ್ನೊಬ್ಬರು ಇರಬೇಕು ಎಂಬ ಹಟಕ್ಕೆ ಬಿದ್ದರೆ, ಅಥವಾ ತನಗೆ ಬೇಕಾದಂತೆ ಬದಲಾಯಿಸಲು ಹೊರಟರೆ ತೊಂದ್ರೆ ಖಚಿತ. ಇಂಥ ವರ್ತನೆಗಳಿಂದ ಸಂಬಂಧ ಹದಗೆಡೋದು ಪಕ್ಕಾ. ಆಗದ ಸ್ವಭಾವ, ವರ್ತನೆಗಳ ಬಗ್ಗೆ ಇಬ್ಬರು ಒಟ್ಟಿಗೆ ಕೂತು ಮುಕ್ತವಾಗಿ ಚರ್ಚಿಸಿ,ಬಗೆಹರಿಸಿಕೊಳ್ಳೋದು ಉತ್ತಮ.ಅನುಮಾನ ಮೂಡಿದಾಗಲೂ ಅಷ್ಟೇ, ಆ ಬಗ್ಗೆ ನೇರವಾಗಿ ಮಾತನಾಡಿ. ಅದನ್ನು ಬಿಟ್ಟು ಮನಸ್ಸಿನಲ್ಲಿಯೇ ಅನುಮಾನದ ಹುತ್ತ ಬೆಳೆಸಿಕೊಂಡು ಒಬ್ಬರ ಮೊಬೈಲ್ ಅನ್ನು ಇನ್ನೊಬ್ಬರು ಕದ್ದುಮುಚ್ಚಿ ಚೆಕ್ ಮಾಡೋದು ಸಂಬಂಧದ ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಎನ್ನುತ್ತಾರೆ ಮನೋವೈದ್ಯರು.  ಇಂಥ ವರ್ತನೆಗಳಿಂದ ಇಬ್ಬರ ನಡುವಿನ ನಂಬಿಕೆ, ವಿಶ್ವಾಸಕ್ಕೆ ಪೆಟ್ಟು ಬೀಳುತ್ತೆ. ಪರಿಸ್ಥಿತಿ ಇನ್ನಷ್ಟು ಹದಗೆಡುತ್ತೆ.

ಪುರಾಣ ಕಾಲದಲ್ಲೂ ಕನ್ಯತ್ವ ಸರ್ಜರಿ ಇತ್ತಾ?

ಗುಟ್ಟು ಹೆಚ್ಚಲು ಅನುಮಾನವೇ ಕಾರಣ
ಪತ್ನಿ ಕದ್ದುಮುಚ್ಚಿ ತನ್ನ ಮೊಬೈಲ್ ನೋಡುತ್ತಾಳೆ ಎಂಬುದು ಗಮನಕ್ಕೆ ಬರುತ್ತಿದ್ದಂತೆ ಪತಿ ಆ ಬಗ್ಗೆ ಅಲರ್ಟ್ ಆಗುತ್ತಾನೆ. ವಾಟ್ಸ್ಆಪ್‍ನಲ್ಲಿ ಆತ ಸ್ನೇಹಿತರು ಅಥವಾ ಸಂಬಂಧಿಗಳೊಂದಿಗೆ ನಡೆಸಿದ ಚಾಟ್ ಪತ್ನಿಗೆ ಇಷ್ಟವಾಗದಿರಬಹುದು. ಅದನ್ನೇ ಮುಂದಿಟ್ಟುಕೊಂಡು ಆಕೆ ಪತಿಯೊಂದಿಗೆ ಪದೇಪದೆ ಜಗಳ ತೆಗೆದ್ರೆ ಪತಿ ತನ್ನ ಮೊಬೈಲ್‍ಗೆ ಸೀಕ್ರೇಟ್ ಲಾಕ್ ಸಿಸ್ಟ್‍ಂ ಅಳವಡಿಸಿಕೊಳ್ಳುತ್ತಾನೆ. ಆ ಪಾಸ್‍ವರ್ಡ್ ಅನ್ನು ಪತ್ನಿಯಿಂದ ಮುಚ್ಚಿಡಬಹುದು! ಕ್ರಮೇಣ ಇಂಥ ಗುಟ್ಟು ಮಾಡುವ ಅಭ್ಯಾಸ ಒಂದೊಂದಾಗಿ ಹೆಚ್ಚುತ್ತ ಹೋಗುತ್ತದೆ. ಸಂಬಂಧದಲ್ಲಿ ಗುಟ್ಟು ಹೆಚ್ಚಾದಷ್ಟೂ ಅಪಾಯವೂ ಹೆಚ್ಚು. ಇನ್ನೂ ಕೆಲವರು ಸುಖಾಸುಮ್ಮನೆ ತಮ್ಮ ಮೊಬೈಲ್ ಪಾಸ್‍ವರ್ಡ್ ಅನ್ನು ಪತಿ ಅಥವಾ ಪತ್ನಿಗೆ ಹೇಳದೆ ಮುಚ್ಚಿಡುತ್ತಾರೆ. ಇಂಥ ಅಭ್ಯಾಸ ಖಂಡಿತವಾಗಲೂ ಒಳ್ಳೆಯದ್ದಲ್ಲ. ಇದೊಂಥರ ಮೈ ಮೇಲೆ ಇರುವೆ ಬಿಟ್ಟುಕೊಂಡಂತೆ. ಸುಮ್ಮನೆ ನೀವೇ ಅನುಮಾನದ ಬೀಜ ಬಿತ್ತಿದಂತೆ. ಇಂಥ ಅಭ್ಯಾಸ ಸಂಗಾತಿ ಮನಸ್ಸಿನಲ್ಲಿ ಕುತೂಹಲ ಹುಟ್ಟು ಹಾಕುತ್ತದೆ. ಹೇಗಾದ್ರೂ ಮಾಡಿ ನಿಮ್ಮ ಪಾಸ್‍ವರ್ಡ್ ಅರಿತು ಕದ್ದುಮುಚ್ಚಿ ಮೊಬೈಲ್ ಚೆಕ್ ಮಾಡಲು ಪ್ರೇರೇಪಿಸಬಹುದು. ಇವೆಲ್ಲ ಸಿಲ್ಲಿ ವಿಷಯಗಳು ಅನ್ನಿಸಿದ್ರೂ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುವ ವರ್ತನೆಗಳೇ ಆಗಿವೆ.