Asianet Suvarna News Asianet Suvarna News

ಈ ಕಾರಣಗಳಿಂದ ಬ್ರೇಕ್ ಅಪ್ ಆದರೆ, ಸರಿ ಮಾಡಿಕೊಳ್ಳಿ...!

ಯಾವ ಸಂಬಂಧವೂ ಪರ್ಫೆಕ್ಟ್ ಅಲ್ಲ. ನಿಮ್ಮ ಪ್ರೀತಿಯ ಬ್ರೇಕಪ್‌ಗೆ ಕಾರಣ ಇವೊಗಳಲ್ಲೊಂದಾಗಿದ್ದರೆ, ನೀವು ಮತ್ತೆ ಒಂದಾಗುವತ್ತ ಗಮನ ಹರಿಸಬಹುದು. 

If reason of break up was this consider get back together
Author
Bangalore, First Published May 15, 2020, 6:40 PM IST

ಸಂಬಂಧಗಳು 24/7 ರೊಮ್ಯಾಂಟಿಕ್ ಆಗಿ, ಎಕ್ಸೈಟಿಂಗ್ ಆಗಿ, ಪರ್ಫೆಕ್ಟ್ ಆಗಿರುವುದು ಸಾಧ್ಯವಿಲ್ಲ. ಸಂಬಂಧಗಳ ಮೂಡ್ ಆಗಾಗ ಬದಲಾಗುತ್ತಿರುತ್ತದೆ. ಹಾಗಂಥ ಸಂಬಂಧವನ್ನೇ ಬದಲಾಯಿಸುವ ಯೋಚನೆ ಮಾಡಬಾರದು. ಸಂಬಂಧ ಎಂದ ಮೇಲೆ ಅಲ್ಲಿ ಎಷ್ಟು ಸಂವೇದನೆಗಳಿವೆಯೋ ಅಷ್ಟೇ ಸಂಕೀರ್ಣತೆಯೂ ಇರುತ್ತದೆ. ಒಬ್ಬರ ಮೇಲೆ ಪ್ರೀತಿಯಾಯಿತು ಎಂದರೆ ಮುಂದೇನೇ ಆಗಲಿ, ಆ ಪ್ರೀತಿಯನ್ನೇ ಉಳಿಸಿಕೊಳ್ಳುವತ್ತ ಗಮನ ಹರಿಸುವುದು ಒಳಿತು. ಏಕೆಂದರೆ ಜೀವನದಲ್ಲಿ ತಾನಾಗಿಯೇ ಪ್ರೀತಿಯಾಗುವುದು ಕೇವಲ ಒಂದೇ ಬಾರಿ. 

ಆದರೆ, ಇಂದು ಪ್ರೀತಿಪ್ರೇಮ ಎಲ್ಲ ಇನ್ಸ್‌ಟೆಂಟ್ ಆಗಿಬಿಟ್ಟಿವೆ. ಅವು ಅರಳುವುದು ಎಷ್ಟು ಬೇಗವೋ, ಮುದುಡುವುದೂ ಅಷ್ಟೇ ಬೇಗ. ಗಂಭೀರವಾಗಿ ಪ್ರೀತಿಸುವವರು ಅಪರೂಪ, ಹೆಚ್ಚಿನವರು ಆ ಕ್ಷಣದ ಆಕರ್ಷಣೆಯನ್ನು ಪ್ರೀತಿಯೆಂದುಕೊಂಡು ಕಡೆಗೆ ಸಣ್ಣಪುಟ್ಟ ವಿಷಯಕ್ಕೆ ಅದರಿಂದ ಹೊರಬರುತ್ತಾರೆ. ಆದರೆ, ನೀವು ನಿಜವಾಗಿ ಪ್ರೀತಿಸಿ ಈ ಕೆಳಗಿನ ಕಾರಣಗಳಿಗಾಗಿ ಅದನ್ನು ಮುರಿದುಕೊಂಡಿದ್ದರೆ, ಅದನ್ನು ಪ್ಯಾಚಪ್ ಮಾಡಿಕೊಳ್ಳಲು ನೋಡಿಕೊಳ್ಳುವುದು ಉತ್ತಮ. ಏಕೆಂದರೆ ಸಂಬಂಧವೆಂಬುದು ನಿಜವಾಗಿಯೂ ಬಹಳ ಅಮೂಲ್ಯವಾದುದು. 

ಎಕ್ಸ್‌ ಜೊತೆ ಹೇಗಿರ್ಬೇಕು..? ನಟಿ ಮಂಜು ವಾರಿಯರ್ ಕೊಡ್ತಾರೆ ಯೂಸ್‌ಫುಲ ...

ನಿಮಗೆ ಸಮಯ ಬೇಕಿತ್ತು
ಸಮಯ ಎಲ್ಲರಿಗೂ ಬೇಕಾದುದೇ. ಹಾಗಂಥ ಅದು ಬ್ರೇಕಪ್‌ಗೆ ಕಾರಣವಾಗಬೇಕಿಲ್ಲ. ಇಡೀ ದಿನ ಒಟ್ಟಿಗೇ ಇರುವುದು, ಒಬ್ಬರಿಗೊಬ್ಬರು ಚಾಟ್ ಮಾಡಿಕೊಂಡೇ ಇರುವುದು, ಮಾತನಾಡುತ್ತಲೇ ಇರಬೇಕೆನ್ನುವುದು ಎಲ್ಲ ಸಂಬಂಧಗಳಿಗೂ ಒಂದು ಹಂತದಲ್ಲಿ ಸಾಕಪ್ಪಾ ಸಾಕು ಎನಿಸುತ್ತದೆ. ಸ್ವಂತ ಸಮಯವೇ ಇಲ್ಲವಲ್ಲ ಎನಿಸುತ್ತದೆ, ಕಡೆಗೆ ಏಕತಾನತೆಯಾಗಿ ಬಿಡುತ್ತದೆ. ಆದರೆ ಇಷ್ಟಕ್ಕೆಲ್ಲ ಬ್ರೇಕಪ್ ಮಾಡಿಕೊಂಡರೆ ಅದು ಕಾರಣವಲ್ಲ, ಎಕ್ಸ್‌ಕ್ಯೂಸ್ ಆಗಿರುತ್ತದೆ ಅಷ್ಟೇ. 

ಎಕ್ಸ್‌ನ ಗುಂಗು ಬಿಟ್ಟಿಲ್ಲ
ಕೆಲವೊಮ್ಮೆ ಟಾಕ್ಸಿಕ್ ಎಕ್ಸ್‌ನ ಗುಂಗು ಬಿಡದ ಕಾರಣ ಒಳ್ಳೆಯ ಸಂಬಂಧವೊಂದು ಮುರಿದು ಬೀಳುತ್ತದೆ. ನಿಮ್ಮ ಹಳೆಯ ಪಾರ್ಟ್ನರ್‌ನ ನೆನಪುಗಳು ನಿಮ್ಮ ಈಗಿನ ಪ್ರೇಮಿ ತೋರಿಸುವ ಪ್ರೀತಿಯನ್ನೆಲ್ಲ ಕಾಣಿಸದಂತೆ ಅಥವಾ ಒಪ್ಪಿಕೊಳ್ಳದಂತೆ ಮಾಡುತ್ತದೆ. ಆದರೆ, ಹಳೆಯ ಸಂಬಂಧದ ವಿಷ ವರ್ತುಲವನ್ನು ಈಗಿನ ಸಂಬಂಧಕ್ಕೂ ಹಬ್ಬಿಸುವ ನಿಮ್ಮ ಪ್ರಯತ್ನಗಳು ಸರಿಯೇ ಎಂದು ಯೋಚಿಸಿ. ಹಿಂದಿನ ಸಂಬಂಧ ಸರಿಯಿರಲಿಲ್ಲವೆಂಬುದು ಚೆನ್ನಾಗಿ ಗೊತ್ತಿದ್ದ ಮೇಲೆ ಅದರ ಕರಿನೆರಳಿನಿಂದ ಇಂದಿನ ಸಂಬಂಧಕ್ಕೂ ಬ್ರೇಕಪ್ ಲೇಬಲ್ ಅಂಟಿಸಬೇಡಿ. 

ಕಮಿಟ್ ಆಗುವ ಭಯ
ಪ್ರೀತಿ ಕೆಲವೊಮ್ಮೆ ಹೆದರಿಸುತ್ತದೆ. ಅದು ಕೆಲವೊಮ್ಮೆ ನಿಮ್ಮಿಂದ ಸಿಕ್ಕಾಪಟ್ಟೆ ಬಯಸುತ್ತದೆ. ಆದರೆ, ನಿಮಗೆ ಏನನ್ನೂ ಕೊಡದೆ ಹೋಗಬಹುದು. ಅಲ್ಲಿ ಯಾವಾಗಲೂ ಬಹಳಷ್ಟು ಕಳೆದುಕೊಳ್ಳುವ, ಹೆಚ್ಚೇನೂ ಸಿಗದ ಭಯ ಇದ್ದೇ ಇರುತ್ತದೆ. ಆದರೂ ಕೆಲವೊಮ್ಮೆ ನೀವು ಸರಿಯಾದ ವ್ಯಕ್ತಿಯನ್ನೇ ಆರಿಸಿದ್ದೀರಿ ಎಂದು ಗೊತ್ತಿದ್ದಾಗಲೂ, ಆತ ಅಥವಾ ಆಕೆ ನಿಮಗೆ ಎಲ್ಲ ಸಂತೋಷವನ್ನೂ ಮೊಗೆಮೊಗೆದು ಕೊಡಲು ಸಿದ್ಧರಿದ್ದಾಗಲೂ ಕಮಿಟ್‌ ಆಗುವ ಭಯ ನಿಮ್ಮನ್ನು ಆವರಿಸಿ ಬ್ರೇಕಪ್ ನಿರ್ಧಾರಕ್ಕೆ ತಳ್ಳಿರಬಹುದು. ಇಂಥ  ಸಂದರ್ಭದಲ್ಲಿ ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಿ. 

ಬಹಳಷ್ಟನ್ನು ಮಿಸ್ ಮಾಡಿಕೊಳ್ಳುವ ಯೋಚನೆ
ಸಂಬಂಧವೊಂದರಲ್ಲಿದ್ದಾಗ ಜೀವನದ ಹಲವಷ್ಟು ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನಿಮಗನಿಸಿರಬಹುದು. ಗೆಳೆಯರ ಸೋಷ್ಯಲ್ ಮೀಡಿಯಾ ಫೋಟೋಗಳು, ಜನ ಪ್ರಪಂಚ ಸುತ್ತುತ್ತಿರುವ ವಿಷಯಗಳು ನಿಮ್ಮನ್ನು ಕಂಗೆಡಿಸಿ ಅವೆಲ್ಲವನ್ನೂ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎನಿಸಬಹುದು. ಆದರೆ, ಬ್ರೇಕಪ್ ಆದ ಕೂಡಲೇ ಇವೆಲ್ಲ ನಿಮಗೆ ಇವೆಲ್ಲ ಸಿಕ್ಕುಬಿಡುತ್ತದೆ ಎಂಬುದು ಸುಳ್ಳು. ಅಷ್ಟೇ ಅಲ್ಲ, ಸಂಬಂಧವೊಂದಕ್ಕೆ ಕಮಿಟ್ ಆದ ಮೇಲೆ ಜೀವನದಲ್ಲಿ ಎಲ್ಲವನ್ನೂ ಜಂಟಿಯಾಗಿ ಅನುಭವಿಸುವ, ಕನಸುಗಳನ್ನು ಸಾಕಾರ ಮಾಡಿಕೊಳ್ಳುವತ್ತ ಯೋಚಿಸಬೇಕು. ಅಥವಾ ಸಂಬಂಧದಲ್ಲಿ ನಿಮ್ಮ ಸ್ವಾತಂತ್ರ್ಯವನ್ನು ನೀವು ಅನುಭವಿಸುತ್ತಾ ಕನಸು ಈಡೇರಿಸಿಕೊಳ್ಳಬೇಕು. ಅದು ಬಿಟ್ಟು ಈ ಕಾರಣಕ್ಕಾಗಿ ಬ್ರೇಕಪ್ ಮಾಡಿಕೊಂಡಿದ್ದರೆ ಮತ್ತೆ ಪ್ಯಾಚಪ್ ಮಾಡಿಕೊಳ್ಳಿ. 

ಈ ತಾಯಿ ಮುಟ್ಟಾದಾಗ ಬ್ರಹ್ಮಪುತ್ರ ಕೆಂಪಾಗುತ್ತದೆ!
 
ನಿಮ್ಮ ಕರಿಯರ್ ಯಶಸ್ಸಿನ ಉತ್ತುಂಗದಲ್ಲಿತ್ತು
ಉದ್ಯೋಗದಲ್ಲಿ ನೀವು ಯಶಸ್ಸಿನ ಉತ್ತುಂಗಕ್ಕೇರಿದಾಗ ಪ್ರೀತಿ ಹಾಗೂ ಉದ್ಯೋಗವೆರಡನ್ನೂ ಬ್ಯಾಲೆನ್ಸ್ ಮಾಡುವುದು ಕಷ್ಟವೆನಿಸಬಹುದು. ಆದರೆ, ಇದಕ್ಕಾಗಿ ಸಂಬಂಧಕ್ಕೆ ತಿಲಾಂಜಲಿ ಹಾಡುವುದು ಕೆಟ್ಟ ನಿರ್ಧಾರವಾಗುತ್ತದೆ. ಎರಡನ್ನೂ ಬ್ಯಾಲೆನ್ಸ್ ಮಾಡುವ ಕಲೆ ಕಲಿಯಬೇಕು. ನಿಮ್ಮ ಆತಂಕವನ್ನು ಸಂಗಾತಿಯೊಂದಿಗೆ ಹಂಚಿಕೊಂಡರೆ ಅವರದನ್ನು ಅರ್ಥ ಮಾಡಿಕೊಳ್ಳುತ್ತಾರೆ. ನೀವು ಎರಡನ್ನೂ ನಿಭಾಯಿಸುವ ಕಲೆ ಕಲಿತಾಗ ಉದ್ಯೋಗದಲ್ಲಿ ಯಶಸ್ಸಾಗುವುದಷ್ಟೇ ಅಲ್ಲ, ಅದನ್ನು ಸೆಲೆಬ್ರೇಟ್ ಮಾಡಲು ನಿಮ್ಮೊಂದಿಗೊಬ್ಬರಿರುತ್ತಾರೆ. 

ಹನಿಮೂನ್ ಫೇಸ್ ಮುಗಿದಿತ್ತು
ಎಲ್ಲ ಸಂಬಂಧಗಳೂ ಆರಂಭದಲ್ಲಿ ಬಹಳ ಸಂತೋಷ ನೀಡುತ್ತವೆ. ಮೊದಮೊದಲ ಮಾತುಮುತ್ತುಗಳೆಲ್ಲವೂ ಬಹಳ ಮಧುರವೇ. ಆದರೆ, ಅವೆಲ್ಲವೂ ಕೆಲ ಕಾಲದ ಬಳಿಕ ಹಳತಾಗುತ್ತವೆ. ಆರಂಭದ ಖುಷಿ ನೀಡುವುದಿಲ್ಲ. ಆ ಬಳಿಕ ಒಬ್ಬರಿಗೊಬ್ಬರ ಕೊರತೆಗಳು, ತಪ್ಪುಗಳು ಎದ್ದು ಕಾಣತೊಡಗುತ್ತವೆ. ಆದರೆ, ಇದಕ್ಕೆಲ್ಲ ಬ್ರೇಕಪ್ ಮಾಡಿಕೊಳ್ಳುವುದಾದರೆ ಜಗತ್ತಿನಲ್ಲಿ ಯಾವೊಂದು ಸಂಬಂಧವೂ ಹೆಚ್ಚು ಕಾಲ ನಿಲ್ಲುತ್ತಿರಲಿಲ್ಲ. ಬದುಕು  ಇರುವುದೇ ಹಾಗೆ. ಹನಿಮೂನ್ ಫೇಸ್ ಜೀವನವಿಡೀ ಇರಲಾರದು. ಆದರೆ, ಜೀವನದ ಒಂದೊಂದು ಹಂತಗಳಲ್ಲೂ ನಮ್ಮ ಪ್ರಿಯಾರಿಟಿ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಸಂಬಂಧಗಳೂ ಸುಂದರವಾಗುತ್ತಾ ಸಾಗುತ್ತವೆ. ಇದನ್ನು ಅರ್ಥ ಮಾಡಿಕೊಂಡರೆ ಬ್ರೇಕಪ್ ನಿರ್ಧಾರ ತಪ್ಪು ಎಂಬುದು ಗೊತ್ತಾಗುತ್ತದೆ. 

Follow Us:
Download App:
  • android
  • ios