ಹರಿಯಾಣ ಕೇಡರ್ನ ಐಎಎಸ್ ಅಧಿಕಾರಿ ವಿವೇಕ್ ಆರ್ಯ ಮತ್ತು ಐಪಿಎಸ್ ಅಧಿಕಾರಿ ಅದಿತಿ ಸಿಂಗ್ ಅವರು ನವೆಂಬರ್ 15ರಂದು ಪಂಚಕುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ನವದೆಹಲಿ (ನ.15): ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಯುವ ಐಎಎಸ್ ಮತ್ತು ಐಪಿಎಸ್ ಜೋಡಿಯೊಂದರ ವಿವಾಹ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹರಿಯಾಣ ಕೇಡರ್ನ ಐಎಎಸ್ ಅಧಿಕಾರಿ ವಿವೇಕ್ ಆರ್ಯ (IAS Vivek Arya) ಮತ್ತು ಉತ್ತರ ಪ್ರದೇಶ ಮೂಲದ ಐಪಿಎಸ್ ಅಧಿಕಾರಿ ಅದಿತಿ ಸಿಂಗ್ (IPS Aditi Singh) ಪರಸ್ಪರ ಪ್ರೀತಿಸಿ, ಇದೀಗ ನವೆಂಬರ್ 15 ರಂದು ಭಾನುವಾರ ಹರಿಯಾಣದ ಪಂಚಕುಲದಲ್ಲಿ (Panchkula) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಪ್ರಸ್ತುತ ವಿವೇಕ್ ಆರ್ಯ ಅವರು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ (Additional Deputy Commissioner / ಹೆಚ್ಚುವರಿ ಪೊಲೀಸ್ ಉಪ ಆಯುಕ್ತ) ಹಾಗೂ ಅದಿತಿ ಸಿಂಗ್ ಅವರು ಪೊಲೀಸ್ ಉಪ ವರಿಷ್ಠಾಧಿಕಾರಿಯಾಗಿ (DCP) ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ, ವಿವಾಹದ ಹಿನ್ನೆಲೆಯಲ್ಲಿ ಇಬ್ಬರಿಗೂ ಒಂದೇ ಕೇಡರ್ (ಹರಿಯಾಣ) ಲಭ್ಯವಾಗಿದೆ. ಇಬ್ಬರು ದಕ್ಷ ಅಧಿಕಾರಿಗಳು ಹೇಗೆ ಪ್ರೀತಿಯಲ್ಲಿ ಬಿದ್ದರು ಮತ್ತು ಮದುವೆಯ ನಿರ್ಧಾರದವರೆಗೆ ಹೇಗೆ ಸಾಗಿಬಂದರು ಎಂಬ ಕಥೆ ಇಲ್ಲಿದೆ.
ಸರ್ಕಾರಿ ಶಾಲೆಯಿಂದ ಯುಪಿಎಸ್ಸಿ ಅಧಿಕಾರಿಯವರೆಗೆ ವಿವೇಕ್ ಆರ್ಯ ಪಯಣ
ವಿವೇಕ್ ಆರ್ಯ ಅವರು ಐಎಎಸ್ ಅಧಿಕಾರಿಯಾದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅವರು, ಬಳಿಕ 12ನೇ ತರಗತಿಯವರೆಗೆ ಕುಂಜ್ಪುರದ ಸೈನಿಕ ಶಾಲೆಯಲ್ಲಿ (Sainik School, Kunjpura) ಶಿಕ್ಷಣ ಪಡೆದರು. ಚಂಡೀಗಢದಲ್ಲಿ ಉನ್ನತ ವ್ಯಾಸಂಗ ಪೂರೈಸಿದ ವಿವೇಕ್, ಯುಪಿಎಸ್ಸಿ (UPSC) ನಾಗರಿಕ ಸೇವಾ ಪರೀಕ್ಷೆಯಲ್ಲಿ 131ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಮಸ್ಸೂರಿಯಲ್ಲಿ ಮೊದಲ ಭೇಟಿ, ಅಲ್ಲೇ ಚಿಗುರಿದ ಪ್ರೇಮ!
ವಿವೇಕ್ ಮತ್ತು ಅದಿತಿ ಅವರ ಮೊದಲ ಭೇಟಿ ನಡೆದಿದ್ದು ಉತ್ತರಾಖಂಡದ ಮಸ್ಸೂರಿಯಲ್ಲಿರುವ ಪ್ರತಿಷ್ಠಿತ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ (LBSNAA). ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆಯಿತು. ಆ ಸ್ನೇಹ ಕ್ರಮೇಣ ಗಾಢ ಪ್ರೀತಿಗೆ ತಿರುಗಿತು.
ಮೊದಲು ಎಸ್ಡಿಎಂ, ನಂತರ ಐಪಿಎಸ್ ಆಯ್ಕೆ ಮಾಡಿಕೊಂಡ ಅದಿತಿ ಸಿಂಗ್
ಅದಿತಿ ಸಿಂಗ್ ಅವರು ಮೂಲತಃ ಉತ್ತರ ಪ್ರದೇಶದ ಮೀರತ್ನವರು. 2020ರ ಯುಪಿಎಸ್ಸಿ ಪರೀಕ್ಷೆಯಲ್ಲಿ 54ನೇ ರ್ಯಾಂಕ್ ಪಡೆದಿದ್ದ ಅವರು, ಆರಂಭದಲ್ಲಿ ಎಸ್ಡಿಎಂ (SDM) ಆಗಿ ನೇಮಕಗೊಂಡಿದ್ದರು. ಆದರೆ ನಂತರ ಭಾರತೀಯ ಪೊಲೀಸ್ ಸೇವೆಗೆ (IPS) ಸೇರುವ ಮಹತ್ವದ ನಿರ್ಧಾರ ಕೈಗೊಂಡರು. ಅವರಿಗೆ ಆರಂಭದಲ್ಲಿ ಹಿಮಾಚಲ ಪ್ರದೇಶ ಕೇಡರ್ ಹಂಚಿಕೆಯಾಗಿತ್ತು. ಆದರೆ, ವಿವೇಕ್ ಆರ್ಯ ಅವರೊಂದಿಗೆ ವಿವಾಹವಾಗುವ ನಿರ್ಧಾರ ತೆಗೆದುಕೊಂಡ ಬಳಿಕ, ನಿಯಮಾವಳಿಗಳ ಪ್ರಕಾರ ಅವರಿಗೆ ಹರಿಯಾಣ ಕೇಡರ್ ನೀಡಲಾಗಿದೆ.
ಭದ್ರಾದಲ್ಲಿ ಅದ್ದೂರಿ ಆರತಕ್ಷತೆ – ನಾಳೆ ಶುಭ ವಿವಾಹ
ಪ್ರಸ್ತುತ ಇಬ್ಬರೂ ಪಂಚಕುಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾಳೆ (ನವೆಂಬರ್ 15) ಸಪ್ತಪದಿ ತುಳಿಯಲಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಸಂಜೆ ಭದ್ರಾದಲ್ಲಿ (Bhadra) ಭವ್ಯ ಆರತಕ್ಷತೆ ಸಮಾರಂಭ (Reception) ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ರಾಜಕೀಯ ನಾಯಕರು, ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಎಚ್ಸಿಎಸ್ (HCS) ಅಧಿಕಾರಿಗಳು ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ. ನಾಳೆ ಪಂಚಕುಲದಲ್ಲಿ ನಡೆಯಲಿರುವ ಈ ವಿವಾಹಕ್ಕೆ ಯಾವೆಲ್ಲಾ ಗಣ್ಯರು ಆಗಮಿಸಲಿದ್ದಾರೆ ಎಂಬ ಕುತೂಹಲ ಸದ್ಯ ಎಲ್ಲೆಡೆ ಮನೆಮಾಡಿದೆ.














