ಬೆಂಗಳೂರಿನ ಮಹಿಳೆಯೊಬ್ಬರು ಪತಿಯ ಅನುಮತಿಯಿಲ್ಲದೆ ಆತನ ಫ್ರೋಜನ್ ಸ್ಪರ್ಮ್ ಬಳಸಿ ಗರ್ಭಧರಿಸಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಪತಿಯ ಲಿಖಿತ ಸಮ್ಮತಿಯಿಲ್ಲದೆ ಐವಿಎಫ್ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ART ಕಾಯ್ದೆ ಸ್ಪಷ್ಟಪಡಿಸಿದೆ.
ಬೆಂಗಳೂರು (ಆ.14): ಪತಿಯ ಅನುಮತಿಯಿಲ್ಲದೆ ಆತನ ಫ್ರೋಜನ್ ಸ್ಪರ್ಮ್ ಬಳಸಲು ಅಥವಾ ದಾನಿಗಳ ವೀರ್ಯದ ಮೂಲಕ ಗರ್ಭಧರಿಸಲು ಪತ್ನಿಗೆ ಕಾನೂನಿನಲ್ಲಿ ಅವಕಾಶವಿದೆಯೇ? ಎಂಬ ಪ್ರಮುಖ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ. ಐವಿಎಫ್ (IVF) ಪ್ರಕ್ರಿಯೆ ಮತ್ತು ಸ್ಪರ್ಮ್ ಬಳಕೆ ಕುರಿತು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART) ನಿಯಮಗಳನ್ನು ಕೇಂದ್ರ ಸರ್ಕಾರವು ಕೋರ್ಟ್‌ಗೆ ವಿವರಿಸಿದೆ. ತನ್ನ ಪತಿಯ ಫ್ರೋಜನ್ ಸ್ಪರ್ಮ್ ಬಳಸಿಕೊಂಡು ಐವಿಎಫ್ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕೆಂದು ಕೋರಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ನಿಯಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದೆ..
ಬೆಂಗಳೂರು ಮೂಲದ ಮಹಿಳೆಯೊಬ್ಬರು ತಮ್ಮ ಪತಿಯ ಫ್ರೋಜನ್ ಸ್ಪರ್ಮ್ ಬಳಸಿಕೊಂಡು ಐವಿಎಫ್ ಚಿಕಿತ್ಸೆ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಕ್ಲಿನಿಕ್‌ನಿಂದ ಅನುಮತಿ ಕೋರಿದ್ದರೂ, ಪತಿಯ ಲಿಖಿತ ಸಮ್ಮತಿ ಇಲ್ಲದ ಕಾರಣ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಕ್ಲಿನಿಕ್ ತಿಳಿಸಿತ್ತು. ವಿವಾಹವಾದ ಎರಡು ವರ್ಷಗಳಲ್ಲೇ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅಲ್ಲದೆ, ಪತಿಯು ಕ್ರೂರತೆಯ ಆಧಾರದ ಮೇಲೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಕೂಡ ಸಲ್ಲಿಸಲಾಗಿದೆ.
ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?
ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು ಹೈಕೋರ್ಟ್‌ಗೆ ಮಾಹಿತಿ ನೀಡಿ, ವಿವಾಹ ಬಂಧನ ಜಾರಿಯಲ್ಲಿರುವವರೆಗೆ, ಪತಿಯ ಲಿಖಿತ ಸಮ್ಮತಿಯಿಲ್ಲದೆ ಆತನ ಸ್ಪರ್ಮ್ ಅನ್ನು ಬಳಸಲು ಪತ್ನಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೆಯೇ ಆತನ ಅನುಮತಿಯಿಲ್ಲದೆ ಡೋನರ್ (ದಾನಿ) ಸ್ಪರ್ಮ್ ತೆಗೆದುಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಮಹಿಳೆ ತಾಯಿಯಾಗಲು ಬಯಸಿದರೆ, ಆಕೆಗೆ ಇರುವ ಏಕೈಕ ಆಯ್ಕೆಯೆಂದರೆ 'ಸಿಂಗಲ್ ವುಮನ್' (ಏಕಾಂಗಿ ಮಹಿಳೆ) ಆಗಿ ಡೋನರ್ ಸ್ಪರ್ಮ್ ಬಳಸುವುದು. ಆದರೆ ಇಲ್ಲೂ ಒಂದು ತಾಂತ್ರಿಕ ತೊಡಕಿದೆ. ಪತಿಯು 'ಇನ್‌ಫರ್ಟೈಲ್' (ಸಂತಾನೋತ್ಪತ್ತಿ ಸಾಮರ್ಥ್ಯವಿಲ್ಲದವನು) ಎಂದು ಸಾಬೀತಾದರೆ ಮಾತ್ರ ಡೋನರ್ ಸ್ಪರ್ಮ್ ಬಳಸಲು ಅವಕಾಶವಿರುತ್ತದೆ. ಅಂದರೆ, ಪತಿಯ ವೀರ್ಯದಿಂದ ಮಗು ಪಡೆಯಲು ಸಾಧ್ಯವಿಲ್ಲ ಎಂಬುದು ವೈದ್ಯಕೀಯವಾಗಿ ದೃಢಪಡಬೇಕು.
ಕಾನೂನು ಏನು ಹೇಳುತ್ತದೆ?
'ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ರೆಗ್ಯುಲೇಶನ್) ಕಾಯ್ದೆ, 2021' ರ (ART Act) ಸೆಕ್ಷನ್ 22 ರ ಪ್ರಕಾರ, ಸಂಬಂಧಪಟ್ಟ ಎಲ್ಲಾ ಕಕ್ಷಿದಾರರ ಲಿಖಿತ ಮತ್ತು ಸ್ಪಷ್ಟ ಸಮ್ಮತಿಯಿಲ್ಲದೆ ಯಾವುದೇ ಕ್ಲಿನಿಕ್ ಐವಿಎಫ್ ಅಥವಾ ಯಾವುದೇ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ನಡೆಸುವಂತಿಲ್ಲ. ಹೈಕೋರ್ಟ್ ಕೂಡ ಈ ಕಾನೂನು ಚೌಕಟ್ಟನ್ನು ಬೆಟ್ಟುಮಾಡಿ ತೋರಿಸಿದ್ದು, ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿದೆ.
ಉಭಯ ಪಕ್ಷಗಳ ವಾದವೇನು?
ಪತಿಯ ವಕೀಲರ ಪ್ರಕಾರ, ಈ ಪರಿಸ್ಥಿತಿಯಲ್ಲಿ ಮೂರನೇ ವ್ಯಕ್ತಿಯ ಸ್ಪರ್ಮ್ (ಅಥವಾ ಅನುಮತಿಯಿಲ್ಲದ ಸ್ಪರ್ಮ್) ಮೂಲಕ ಮಗು ಜನಿಸಿದರೆ, ಅದನ್ನು 'ವಿವಾಹಬಾಹಿರ' ಎಂದು ಪರಿಗಣಿಸಬೇಕಾಗುತ್ತದೆ. ಇದು ಭವಿಷ್ಯದಲ್ಲಿ ಪತಿಯ ಆಸ್ತಿ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವಾದಿಸಿದರು. ಮಹಿಳೆಯ ವಕೀಲರು, ಈ ಮಗುವಿಗೆ ಪತಿಯ ಆಸ್ತಿಯಲ್ಲಿ ಯಾವುದೇ ಹಕ್ಕಿರುವುದಿಲ್ಲ ಎಂದು ಲಿಖಿತ ಬಾಂಡ್ (Under-taking) ನೀಡಲು ಮಹಿಳೆ ಸಿದ್ಧರಿದ್ದಾರೆ. ಪ್ರಸ್ತುತ ಫ್ಯಾಮಿಲಿ ಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮಹಿಳೆಗೆ ಈಗಲೇ ವಿಚ್ಛೇದನ ಪಡೆಯಲು ಇಷ್ಟವಿಲ್ಲ ಎಂದು ವಾದ ಮಂಡಿಸಿದರು.
ಹೈಕೋರ್ಟ್ ಕಳವಳ ಮತ್ತು ಆದೇಶ
ಈ ಪರಿಸ್ಥಿತಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು 'ಕ್ಯಾಚ್-22' (ಸಲಹೆ ಅಥವಾ ಪರಿಹಾರ ಕಂಡುಕೊಳ್ಳಲು ಕಷ್ಟವಿರುವ ಕ್ಲಿಷ್ಟಕರ ಸ್ಥಿತಿ) ಎಂದು ಬಣ್ಣಿಸಿದ್ದಾರೆ. "ಹುಟ್ಟಲಿರುವ ಮಗುವಿನ ಆಸ್ತಿ ಹಕ್ಕನ್ನು ತಡೆಹಿಡಿಯುವ ಹಕ್ಕು ಅಥವಾ ಅಂಡರ್‌ಟೇಕಿಂಗ್ ನೀಡುವ ಅಧಿಕಾರ ತಾಯಿಗೆ ಇದೆಯೇ?" ಎಂದು ಪ್ರಶ್ನಿಸಿದರು. ಕಾನೂನನ್ನು ಅತ್ಯಂತ ಆಳವಾಗಿ ಯೋಚಿಸಿ ರೂಪಿಸಲಾಗಿದ್ದು, ಅದನ್ನು ಇದ್ದಂತೆಯೇ ಜಾರಿಗೆ ತರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಸದ್ಯ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಕೀಲರಿಗೆ ಕಾನೂನಿನ ಇತರೆ ನಿಯಮಗಳು ಅಥವಾ ವ್ಯಾಖ್ಯಾನಗಳಿದ್ದರೆ ಅದನ್ನು ಕೋರ್ಟ್‌ಗೆ ಸಲ್ಲಿಸುವಂತೆ ಸೂಚನೆ ನೀಡಿದೆ.


