ಪ್ರಾಡಕ್ಟಿವ್ ಆಗಿರಕ್ಕಾಗ್ತಿಲ್ಲ ಎಂದು ಪಶ್ಚಾತ್ತಾಪ ಪಡೋದ್ ನಿಲ್ಸಿ
ನಿಮ್ಮ ಪರಿಚಯದವರು, ಗೆಳೆಯರು ಏನೋ ಪ್ರಾಡಕ್ಟಿವ್ ಆದುದನ್ನು ಮಾಡಿ ಸೋಷ್ಯಲ್ ಮೀಡಿಯಾಕ್ಕೆ ಹಾಕಿದರೆಂದ ಮಾತ್ರಕ್ಕೆ ನೀವೂ ಯುದ್ಧರಂಗಕ್ಕೆ ಇಳಿಯಬೇಕೆಂದಿಲ್ಲ.
ಲಾಕ್‌ಡೌನ್ ಆರಂಭವಾದಾಗಿನಿಂದ ಸ್ಟೇಟಸ್‌ಗಳ ಸಂಖ್ಯೆ ಹೆಚ್ಚಿದೆ. ಕೆಲವರು ಹೊಸ ಹೊಸ ಅಡುಗೆ ಮಾಡಿ ಫೋಟೋ ಹಾಕುತ್ತಿದ್ದರೆ, ಮತ್ತೆ ಕೆಲವರು ಆರ್ಟ್, ಕ್ರಾಫ್ಟ್ ಎಂದು ತೊಡಗಿಸಿಕೊಂಡಿದ್ದಾರೆ. ಮಗದೊಬ್ಬರು ವರ್ಕೌಟ್, ಟಿಕ್‌ಟಾಕ್ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಕೆಲವರು ಬುಕ್ಸ್, ಮೂವೀಸ್ ನೋಡುವ ಜೊತೆಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಬಹುತೇಕರು ಮನೆಯೊಳಗಿರುವ ಬೋರ್‌ಡಂ ಓಡಿಸಲು ಒಂದಿಲ್ಲೊಂದು ಮಾರ್ಗ ಕಂಡುಕೊಂಡಿದ್ದಾರೆ. ಇನ್ನೂ ಕೆಲವರು ಸ್ನೇಹಿತರು ಮಾಡುತ್ತಿದ್ದಾರಲ್ಲಾ ಎಂದು ತಮಗೆ ಆಸಕ್ತಿ ಇಲ್ಲದಿದ್ದರೂ ಅನುಕರಿಸುತ್ತಿದ್ದಾರೆ. ಇದರಿಂದ ಕೇವಲ ಕೆಲಸದಲ್ಲಿ ಮುಳುಗಿ, ಇಂಥ ಯಾವುದೇ ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದವರು, ಆಸಕ್ತಿ, ಹವ್ಯಾಸಗಳಿಗೆ ಸಮಯ ಇಲ್ಲದವರು ವೃಥಾ ಪಶ್ಚಾತ್ತಾಪ ಪಡುವಂತಾಗಿದೆ. ತಾನು ಮಾತ್ರ ಪಾಡಕ್ಟಿವ್ ಆಗಿಲ್ಲ ಎಂದು ಕೊರಗುವಂತಾಗಿದೆ. ಹೀಗೆ ವೃಥಾ ಪಶ್ಚಾತ್ತಾಪ ಪಡದೆ ಉಳಿದು, ಮನಸ್ಸಿನ ನೆಮ್ಮದಿ ಕಾಯ್ದುಕೊಳ್ಳಲು ಇಲ್ಲಿವೆ ಕೆಲ ಸಲಹೆಗಳು.
- ಇತರರೊಂದಿಗೆ ಹೋಲಿಸಿಕೊಳ್ಳುವುದು ಬಿಡಿ
ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಡುವುದು. ನಿಮ್ಮ ಪರಿಚಯದವರು, ಗೆಳೆಯರು ಏನೋ ಪ್ರಾಡಕ್ಟಿವ್ ಆದುದನ್ನು ಮಾಡಿ ಸೋಷ್ಯಲ್ ಮೀಡಿಯಾಕ್ಕೆ ಹಾಕಿದರೆಂದ ಮಾತ್ರಕ್ಕೆ ನೀವೂ ಯುದ್ಧರಂಗಕ್ಕೆ ಇಳಿಯಬೇಕೆಂದಿಲ್ಲ. ಅವರು ಅಂಥ ಆಹ್ವಾನವನ್ನೂ ನಿಮಗೆ ನೀಡಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಸಾಮರ್ಥ್ಯ, ಆಸಕ್ತಿಗಳು ಇರುತ್ತವೆ. ನಿಮ್ಮ ಆಸಕ್ತಿಯಲ್ಲದ ಕ್ಷೇತ್ರದಲ್ಲಿ ಏನೋ ಮಾಡಲು ಧುಮುಕಬೇಕಾಗಿಲ್ಲ. ಇದರಿಂದ ಕೀಳರಿಮೆಯಷ್ಟೇ ನಿಮಗೆ ಉಳಿಯುವುದು.
ಕೊರೋನಾ ಸೃಷ್ಟಿಸಿದ ಪ್ರಶ್ನಾರ್ಥಕ ಚಿಹ್ನೆ; ಗೊಂದಲದ ಗೂಡಾಗಿದೆ ಬದುಕು!
- ಸೋಷ್ಯಲ್ ಮೀಡಿಯಾದಿಂದ ದೂರವಿರಿ
ಈ ಲಾಕ್ಡೌನ್ ಸಂದರ್ಭದಲ್ಲಿ ನಮ್ಮ ಟೈಂಪಾಸ್ ಮಾಡಿಸಿದ್ದು, ಜನರ ಜೊತೆ ಕನೆಕ್ಟೆಡ್ ಭಾವ ನೀಡಿದ್ದು, ಸುದ್ದಿಗಳನ್ನು ಮುಟ್ಟಿಸಿದ್ದು ಸೇರಿದಂತೆ ಸೋಷ್ಯಲ್ ಮೀಡಿಯಾದಿಂದ ಹಲವಾರು ಪ್ರಯೋಜನಗಳಾಗಿವೆ. ಆದರೆ, ಇದೇ ಸೋಷ್ಯಲ್ ಮೀಡಿಯಾ ನಿಮ್ಮಲ್ಲಿ ಕೀಳರಿಮೆ, ಅನುಪಯೋಗಿ ಭಾವ ಹುಟ್ಟಿಸುತ್ತಿದೆ ಎಂದರೆ ಅದರಿಂದ ದೂರವಿರುವುದು ಎಲ್ಲಕ್ಕಿಂತ ಹೆಚ್ಚು ಲಾಭಕಾರಿ. ಜನರೆಲ್ಲರೂ ಪ್ರಾಡಕ್ಟಿವ್ ಆಗಿದ್ದಾರೆ, ನನ್ನನ್ನು ಹೊರತುಪಡಿಸಿ ಎಂಬಂಥ ಯೋಚನೆಗಳನ್ನು ಸೋಷ್ಯಲ್ ಮೀಡಿಯಾ ಹುಟ್ಟು ಹಾಕುತ್ತದೆ. ಆದರೆ, ಅದೇ ನಿಜವಲ್ಲ. ಎಲ್ಲಕ್ಕಿಂತ ಮೊದಲು ಸಾಮಾಜಿಕ ಜಾಲತಾಣಗಳಿಂದ ಸೋಷ್ಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳಿ. ಯಾವುದು ನಿಮ್ಮಲ್ಲಿ ಪಾಸಿಟಿವಿಟಿ ಹುಟ್ಟುಹಾಕುತ್ತದೆಯೋ ಅದಕ್ಕೆ ಪ್ರಾಮುಖ್ಯತೆ ನೀಡಿ.
- ಸಮಯವಿಲ್ಲದಿದ್ದರೆ ಪರವಾಗಿಲ್ಲ
ಕಚೇರಿ ಕೆಲಸದ ಕಾರಣ ಉಳಿದ ಹವ್ಯಾಸಗಳತ್ತ ಗಮನ ಹರಿಸಲು ಸಮಯ ಸಿಗುತ್ತಿಲ್ಲ ಎಂಬ ಕಾರಣಕ್ಕೂ ನೀವು ವೃಥಾ ಪಶ್ಚಾತ್ತಾಪ ಪಡುತ್ತಿರಬಹುದು. ಆದರೆ, ಉಳಿದೆಲ್ಲಕ್ಕಿಂತ ಉದ್ಯೋಗ ಫಸ್ಟ್ ಎಂಬುದನ್ನು ನೆನಪಿಡಿ. ಅದರಲ್ಲೂ ಈಗ ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವಾಗ ನೀವು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೀರಾದರೆ, ಅದಕ್ಕೆ ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಿ. ಎಲ್ಲರೂ ಎಲ್ಲವನ್ನೂ ಒಂದೇ ಸಮಯಕ್ಕೆ ಮಾಡಲಾಗದು ಎಂಬುದನ್ನು ನೆನಪಿಡಿ.
- ಉತ್ಪಾದಕತೆ ಅರ್ಥ ಕಂಡುಕೊಳ್ಳಿ
ಪ್ರಾಡಕ್ಟಿವಿಟಿ ಎಂಬುದಕ್ಕೆ ಒಬ್ಬೊಬ್ಬರಲ್ಲಿ ಒಂದೊಂದು ಅರ್ಥವಿರುತ್ತದೆ. ಪ್ರಾಡಕ್ಟಿವಿಟಿ ಎಂಬುದನ್ನು ದೊಡ್ಡ ದೊಡ್ಡ ವಿಷಯಗಳಿಗೆ ಕನೆಕ್ಟ್ ಮಾಡಿಕೊಳ್ಳಬೇಕಿಲ್ಲ, ಸಣ್ಣ ಸಣ್ಣ ಸಂಗತಿಗಳಲ್ಲೂ ಅದನ್ನು ಕಾಣಬಹುದು. ಯಾವುದು ನಿಮಗೆ ಖುಷಿ ನೀಡುತ್ತದೆಯೋ ಅದನ್ನೇ ಮಾಡಿ. ಮೂವಿ ನೋಡುವುದು, ಹಾಡು ಕೇಳುವುದು ಕೂಡಾ ಇದಕ್ಕೆ ನಿಮ್ಮ ವ್ಯಾಖ್ಯಾನವಾಗಬಹುದು. ಕಚೇರಿಯ ಉದ್ಯೋಗವನ್ನು ಚೆನ್ನಾಗಿ ನಿಭಾಯಿಸುವುದು ಕೂಡಾ ಪ್ರಾಡಕ್ಟಿವಿಟಿಯೇ.
- ಪ್ರಾಡಕ್ಟಿವ್ ಆಗಿರುವುದಕ್ಕಿಂತ ಪಾಸಿಟಿವ್ ಆಗಿರಿ
ಸದಾ ಕಾಲ ಪಾಸಿಟಿವ್ ಆಗಿರುವುದು ಎಲ್ಲಕ್ಕಿಂತ ಮುಖ್ಯ, ಸಧ್ಯ ಆತಂಕದ ವಾತಾವರಣದಲ್ಲಿ ಪಾಸಿಟಿವ್ ಆಗಿರುವುದೇ ದೊಡ್ಡ ಶಕ್ತಿ. ಸದಾ ಪಾಸಿಟಿವ್ ಆಗಿದ್ದರೆ, ಪ್ರಾಡಕ್ಟಿವಿಟಿ ಅದನ್ನು ಬೆನ್ನತ್ತಿ ಬರುತ್ತದೆ.
ಸಂದರ್ಶನ ಸಖತ್ತಾಗಿ ಮಾಡಿದೀರಿ ಅನ್ನೋ ಸೂಚನೆಗಳಿವು...
- ಇನ್ನೂ ತಡವಾಗಿಲ್ಲ
ಇಷ್ಟೆಲ್ಲ ಹೇಳಿದ ಮೇಲೂ ಪ್ರಾಡಕ್ಟಿವ್ ಆಗಿಲ್ಲ ಎಂಬ ನಿಮ್ಮ ಕೊರಗು ಹೋಗದಿದ್ದರೆ, ಈಗೇನು ಸಮಯ ಮುಗಿದಿಲ್ಲ ಎಂಬುದು ನೆನಪಿರಲಿ. ಮಾಡಬೇಕೆಂದೆಣಿಸುವ ಯಾವ ಕೆಲಸಕ್ಕೂ ತಡವಾಗುವುದಿಲ್ಲ. ಇನ್ನೂ ಕೂಡಾ ಸಾಕಷ್ಟು ಸಮಯವಿದೆ. ಈಗಷ್ಟೇ ಅಲ್ಲ, ಜೀವನಪೂರ್ತಿ ನಿಮ್ಮ ಮುಂದಿದೆ.